ADVERTISEMENT

ಸ್ಪೂಫ್‌, ಪೆರಡಿ,ಮಾಕ್‌

ಮೆಚ್ಚುಗೆ ಪಡೆದ ಪತ್ರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST
ಸ್ಪೂಫ್‌, ಪೆರಡಿ,ಮಾಕ್‌
ಸ್ಪೂಫ್‌, ಪೆರಡಿ,ಮಾಕ್‌   

ನನ್ನ ಇಷ್ಟದ ಹುಡುಗಾ,
ಅದೆಷ್ಟೋ ವರ್ಷಗಳ ಹಿಂದೆ ನೀನು ಕೇಳಿದ ಪ್ರಶ್ನೆಗೆ ಉತ್ತರಿಸಲು ನಾನಿಂದು ಲೇಖನಿ ಕೈಗೆತ್ತಿಕೊಂಡಿದ್ದೇನೆ. ಇಲ್ಲ ಕಣೋ, ಈ ದೀರ್ಘಯಾನದಲ್ಲಿ ನಿನ್ನನ್ನು ಮರೆತಿರಬಹುದಾದ ಒಂದೇ ಒಂದು ಗಳಿಗೆಯೂ ನನ್ನಲಿಲ್ಲವೆಂದರೆ ನೀನು ನಂಬುವೆಯಾ?

ಹೃದಯ ಕುಹರದಿಂದೆದ್ದು ದೇಶದುದ್ದಕ್ಕೂ ಹರಡಿ ಸವೆದು ಸೋತು ಬಳಲಿದ ನರಗೆಂಪಿನಲ್ಲಿ, ಮಂಜುಮಂಜಾಗುತ್ತಿರುವ ಕಣ್ಣಬೆಳಕಿನಲ್ಲಿ, ಲಜ್ಜೆಯಿಲ್ಲದೆ ಪುಟಿಯುತ್ತಿರುವ ಹುಚ್ಚು ಮನಸ್ಸಿನಲ್ಲಿ, ಅಂದಿನ ನಿನ್ನ ಆ ರೂಪ ಅಚ್ಚೊತ್ತಿ ಉಳಿದು ಮೇಲೂ ಕೆಳಗೂ ಸ್ವತಂತ್ರವಾಗಿ ಓಡಾಡುತ್ತ, ಮರೆತೆನೆಂದರೂ ಮರೆಯದ ಸಂಯುಕ್ತ ವೇದನೆಗಳು ನೀ ಇಂದು ತಂದ ನಿರ್ಧರಿತ ಭೇಟಿಯಿಂದ ಒಮ್ಮೆಲೇ ಉಜ್ಜಿಕೊಂಡು ಹೊಳಪು ತಂದುದನ್ನು ನೀನು ಗಮನಿಸಿದೆಯಾ? ನನ್ನಲ್ಲಿನ ಸಹಜತೆಗೆ ನೀನೂ ನಿನ್ನದೇ ರೀತಿಯಲ್ಲಿ ಈ ಪ್ರೇಮಿಯನ್ನು ಅವ್ಯಾಹತವಾಗಿ ಅವಧಾರಿಸಿಕೊಂಡು ವರ್ಷಗಳನ್ನು ಕಳೆದಿರಬಹುದೆಂಬ ಆಶಾಪೂರ್ಣ ನಂಬಿಕೆ ನನಗೆ.

ಒಟ್ಟಾಗಿ ಬಾಳಿದೆವೋ ಇಲ್ಲವೋ, ಕೊನೆಯವರೆಗೂ ಬೆಚ್ಚಗಿನ ಭಾವ, ಮೆತ್ತನೆಯ ಆತ್ಮಾನುಬಂಧ ಒಟ್ಟಾಗಿ ಉಳಿಸಿಕೊಂಡೆವಲ್ಲ. ಧರ್ಮ ಕರ್ತವ್ಯ, ಶಿಸ್ತು ಸಂಸ್ಕಾರ... ಇತ್ಯಾದಿ ಇತ್ಯಾದಿ ದೇಹಕ್ಕೆ ಸಂಬಂಧಿಸಿದ ಪದರುಗಳೊಳಗೆ ಸುಂದರ ಮನಸ್ಸಿದೆ... ಈ ಮನಸ್ಸಿನ ಮೃದುತಲ್ಪದ ತುಂಬ ನೀನಿರುವಿ... ನಿನ್ನನ್ನು ಮನ್ನಿಸುವ ಬಯಕೆಯಿದೆ... ಸಾಕಲ್ಲವೇ?

ಜನ್ಮಕೊಟ್ಟು ಸಾಕಿ ಬೆಳೆಸಿದ ಹಿರಿಯರಿಗೆ ಕೊಟ್ಟ ಮಾತು– ‘ನೀವಿಟ್ಟ ಗಡಿ ದಾಟುವುದಿಲ್ಲ’ ಎಂಬ ಗಟ್ಟಿನುಡಿ ಮನಸ್ಸಿನಲ್ಲಿನ ಪ್ರೀತಿ–ಪ್ರೇಮ, ಮೋಹ–ಶೃಂಗಾರ, ಸೆಳೆತ–ಆಕರ್ಷಣೆ ಎಲ್ಲವನ್ನೂ ಒಟ್ಟಾಗಿಯೇ ನುಂಗಿ ಆಪೋಷಣೆ ಗೈದಿತು; ಸುಪ್ತ ಪ್ರಜ್ಞೆಯಲ್ಲಿ ಋಣಗಳನ್ನು ಜ್ಞಾಪಿಸುತ್ತ ಬದುಕು ಬೇರೆ ಬೇರೆ ಥರದಲ್ಲಿ ವಂಚಿಸಿತು.

ಮಾತು ತಪ್ಪಲಿಲ್ಲ; ಇಟ್ಟ ಗೆರೆ ದಾಟಲಿಲ್ಲ! ವ್ಯಕ್ತಿಗತ ಭಾವುಕತೆಗಿಂತ ವ್ಯವಸ್ಥೆಯ ಆವರಣದ ಬೇಲಿಗೆ ಅಪಾರ ಬೆಲೆ ತೆತ್ತಾಯ್ತು. ವರ್ಷಗಳು ಉರುಳಿ ಹೋದುವು. ಆ ಮಣ್ಣಿನ ಮೇಲೆಯೇ ಬೆಳೆದೆದ್ದ ಮರ, ಭೂಮಿ ಕೊರೆದು ಬೇರಿಳಿಸಿದರೂ, ಮೇಲೆ ಹೂ ಬಿಟ್ಟು ಕಾಯಿಯೊಳಗೆ ಬೀಜೋತ್ಪಾದನೆ ಮಾಡಿದರೂ, ಒತ್ತಿಟ್ಟ ಭಾರ ಪಳಿಯುಳಿಕೆಯ ಪಾಷಾಣವಾದದ್ದು ಬರೇ ಕನಸುಗಳು ಮಾತ್ರವಲ್ಲ ಗೆಳೆಯಾ, ನನ್ನಾತ್ಮದ ಬಿಕ್ಕಳಿಕೆಗಳು ಕೂಡ!

ಖಾಲಿ ಅವಕಾಶದಡಿ ನಿಂತು ಬರೆದ ಸತ್ಯಕಥೆ, ನನ್ನ ಮೌನಗಾಥೆ, ಸಂಸಾರ, ಮನೆ, ಮಕ್ಕಳು ಅವರ ನಗು ನಲಿವು, ವಿದ್ಯಾಭ್ಯಾಸ ಮದುವೆ ಭವಿಷ್ಯ ಎಂದೆಲ್ಲ ಸೊಗಯಿಸಿಕೊಂಡು ಎಂದೋ ಕಳೆದುಕೊಂಡ ಸ್ವರ್ಣ ಮರೀಚಿಕೆ, ನನ್ನೊಂದಿಗೇ ಮುಪ್ಪುರಿಗೊಂಡದ್ದು ನಿಜವಾದರೂ ತೋಳಿನಿಂದ ತಳ್ಳಿಕೊಂಡೇ ಮುನ್ನಡೆಸಿದ್ದಂತೂ ಸುಳ್ಳಲ್ಲ!

ಪ್ರೀತಿ ಪ್ರೇಮದ ಉಪಚಾರ, ಸ್ನೇಹ ಸಲುಗೆಯ ಕ್ಷೀರಾಭಿಷೇಕ, ಕನಸು ಕಲ್ಪನೆಗಳ ಸಂಪೂರ್ಣ ರೂಪ– ಆವೊಂದು ಗತದಲ್ಲಿ ಏನೇನು ಭಾವವಿರೇಚಕಗಳು ತಾಂಡವವಾಡುತ್ತಿದ್ದುವೋ ಎಲ್ಲವನ್ನೂ ಅಭಿಮಂತ್ರಿಸಿ ಹೃತ್ಪೂರ್ವಕ ಅಭಿವ್ಯಕ್ತಿಸುವ ಚಿಕ್ಕದೊಂದು ಇರಾದೆ– ಕೂಡಿ ಕಳೆಯಲು ಉಳಿದಿರುವ ಈ ದಿನಗಣನೆಯನ್ನು ನಿನಗಾಗಿ ಕಾದಿರಿಸಿ ಕಾಯುತ್ತೇನೆ, ಓಗೊಟ್ಟು ಬರುವೆಯಾ ಗೆಳೆಯಾ?

ಕಳೆದುಕೊಂಡುದೆಲ್ಲವನ್ನೂ ಅಲ್ಪಾವಧಿಯಲ್ಲಿ ಪುನರನುಭವಿಸುವುದು ಸಾಧ್ಯವೇ ಎಂದು ಸಂಶಯಿಸಿಕೊಳ್ಳಬೇಡ. ಅಂಗಾಂಗ ತುಂಡಾದಾಗಲೂ ಪ್ರತ್ಯೇಕ ಕಸಿಕಟ್ಟಿಕೊಂಡು ಮರುಜೋಡಣೆ ಮಾಡುವಂಥ ಸಿದ್ಧಿಯನ್ನು ಈಗಿನ ಜೀವ ವಿಜ್ಞಾನಿಗಳಿಗೆ ಆವಿಷ್ಕರಿಸಿಕೊಡುವಂಥ ಪ್ರಗಲ್ಪನೆ ಎಲ್ಲಿಂದ ಬಂತು, ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಪರಿಪ್ರೇಕ್ಷ್ವದಿಂದಲ್ಲವೇ!

ADVERTISEMENT

ಒಂದು ದಿನ, ಬರೇ ಒಂದೇ ಒಂದು ದಿನ, ಉಷಃಕಾಲದಿಂದ ಸಂಧ್ಯಾ ಸಮಯದ ತನಕ ಜನನಿಬಿಡ ರಸ್ತೆಗಳಲ್ಲಿ, ಪ್ರೇಮಿಗಳ ಪಾರ್ಕಿನಲ್ಲಿ, ಬಿರು ಬಿಸಿಲಲ್ಲಾದರೂ ಸರಿ, ಕೊರೆಯುವ ಚಳಿ ಇದ್ದರೂ ಸರಿ ಜತೆಯಾಗಿ ಓಡಾಡುತ್ತ ಕಳೆಯೋಣವೇ!

ಬಣ್ಣ ಬಣ್ಣದ ದೊಗಳೆ ದಿರಿಸಿನಲ್ಲಿ, ಕೆಟ್ಟ ಮೋರೆಯ ಉಬ್ಬಿನಲ್ಲಿ ವಿದೂಷಕನ ವಿಚಿತ್ರ ಬಿನ್ನಾಣದಲ್ಲಿ ಕಾರ್ಕೋಟಕ ವಿಧಿಯು ವಕ್ರನಗೆ ಕೊಂಕಿಸಿದರೂ ಆ ನಗೆಯೇ ದೂರ ನಕ್ಷತ್ರದ ಸುವರ್ಣ ಮಿನುಗಾಗಿ ಸದ್ದಿಲ್ಲದೆ ಸಾಕರಿಸಿದೆ ನೀನು ಈ ಮುಪ್ಪಿಲ್ಲದೆ ಅರಳಿನಿಂತ ಅಮರ್ತ್ಯ ಪ್ರೀತಿಗೆ ಕಾಣಿಕೆಯಾಗಿ! ಇನ್ನಾದರೂ ತೀರಿಹೋದ ಸಮಯವನ್ನು ಹಿಂತಿರುಗಿಸಿ ರಾಗರಸಭಾವದಿಂದ ತಡಮಾಡದೆ ಬೊಗಸೆಗಿಳಿಸು! ನಿನ್ನ ಇಂದಿನ ಭೇಟಿ, ಅಂದು ಕಿತ್ತೆಸೆದ ಸುಂದರ ಅವಕಾಶವನ್ನು ಮರಳಿ ಕೊಡುತ್ತಾ ಇದೆ ಎಂಬೊಂದು ಸಂಭ್ರಮ ನನಗೆ!

ಗಾಬರಿಯಾಯಿತೇ... ಓಹ್‌! ಇದೆಲ್ಲಾ ಸ್ಪೂಫ್‌... ಡಮ್ಮಿಯಾಟ... ಜಸ್ಟ್‌ ಪೆರಡಿ... ಕಳೆದುಕೊಂಡದ್ದೆಲ್ಲವನ್ನೂ ಈ ಕೆಲ ಗಂಟೆಗಳಲ್ಲಿ ಭ್ರಮೆಯಲ್ಲಾದರೂ ಪಡೆಯುವಾಸೆ ನನ್ನದು..
ಇತೀ ನಿನ್ನ...
ಮಾಧುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.