ADVERTISEMENT

ಇಂಡಿಯಾ ಓಪನ್ ಸೂಪರ್ ಸರಣಿ : ಪ್ರಶಸ್ತಿಯ ವಿಶ್ವಾಸದಲ್ಲಿ ಸೈನಾ, ಸಿಂಧು

ಪಿಟಿಐ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಪಿ.ವಿ.ಸಿಂಧು, ಕರೋಲಿನಾ ಮರಿನ್‌ ಸೋಮವಾರ ಚರ್ಚೆಯಲ್ಲಿ ತೊಡಗಿದ್ದ ಕ್ಷಣ
ಪಿ.ವಿ.ಸಿಂಧು, ಕರೋಲಿನಾ ಮರಿನ್‌ ಸೋಮವಾರ ಚರ್ಚೆಯಲ್ಲಿ ತೊಡಗಿದ್ದ ಕ್ಷಣ   

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಮಂಗಳವಾರದಿಂದ ಇಲ್ಲಿ ಆರಂಭವಾಗಲಿರುವ ಏಳನೇ ಇಂಡಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಎರಡು ವರ್ಷದ ಹಿಂದೆ ಇಲ್ಲಿ ಚಾಂಪಿಯನ್ ಆಗುವ ಮೂಲಕ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದ್ದ ಸೈನಾ ಈ ಬಾರಿ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಸೈನಾ ಹಾಗೂ ಐದನೇ ರ‍್ಯಾಂಕಿಂಗ್‌ ಸ್ಥಾನ ಹೊಂದಿರುವ ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತದಲ್ಲೇ ಹೊರಬಿದ್ದಿದ್ದರು.

ADVERTISEMENT

ಟೂರ್ನಿಯ ಮೊದಲ ಎರಡು ಸುತ್ತುಗಳನ್ನು ಗೆದ್ದುಕೊಂಡರೆ ಕ್ವಾರ್ಟರ್‌ ಫೈನಲ್‌ನಲ್ಲಿ  ಸೈನಾ ಹಾಗೂ ಸಿಂಧು ಮುಖಾಮುಖಿಯಾಗುವ ಸಾಧ್ಯತೆ ಇದೆ.

ಸಿಂಧು ಮೊದಲ ಪಂದ್ಯದಲ್ಲಿ ಸಿಂಗಪುರದ ಕ್ಸಿಯಾವೊ ಲಿಯಾಂಗ್ ವಿರುದ್ಧ ಆಡಲಿದ್ದರೆ, ಸೈನಾ ಚೀನಾ ತೈಪೆಯ ಚಿಯಾ ಸಿನ್ ಲೀ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಹಾಗೂ ಥಾಯ್ಲೆಂಡ್‌ನ ಹಾಲಿ ಚಾಂಪಿಯನ್ ರಾಚನಕ್ ಇಂಟನಾನ್ ಕೂಡ ಇಲ್ಲಿ ಕಣಕ್ಕಿಳಿಯಲಿದ್ದಾರೆ.

ಮಂಗಳವಾರ ಮೊದಲು ನಡೆಯುವ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತದ ಸೌರಭ್ ವರ್ಮಾ, ಸಿರಿಲ್ ವರ್ಮಾ, ಆದಿತ್ಯಾ ಜೋಷಿ ಹಾಗೂ ಮಹಿಳೆಯರ ವಿಭಾಗದಲ್ಲಿ ಅರುಂದತಿ ಪಂತವಾನೆ, ಪಿ.ಸಿ ತುಳಸಿ ಆಡಲಿದ್ದಾರೆ.

ಸವಿ ನೆನಪು: ‘ದೆಹಲಿಯಲ್ಲಿ ಆಡುವುದು ಯಾವಾಗಲೂ ನನಗೆ ವಿಶೇಷವಾಗಿರುತ್ತದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇಲ್ಲಿ ಪದಕ ಗೆದ್ದಿರುವುದು ಹಾಗೂ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದ ನೆನಪುಗಳು ಇನ್ನೂ ಹಸಿರಾಗಿವೆ’ ಎಂದು ಸೈನಾ ನೆಹ್ವಾಲ್‌ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.