ADVERTISEMENT

ಕೆಪಿಎಲ್‌ನಲ್ಲಿ ಎರಡು ಹ್ಯಾಟ್ರಿಕ್‌

ಯಾದಗಿರಿಯ ಅವಿನಾಶ್‌, ಕಲಬುರ್ಗಿಯ ಆನಂದ್‌ ಸಾಧನೆ

ಪ್ರಮೋದ ಜಿ.ಕೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಆನಂದ ದೊಡ್ಡಮನಿ ಮತ್ತು ಅವಿನಾಶ್‌
ಆನಂದ ದೊಡ್ಡಮನಿ ಮತ್ತು ಅವಿನಾಶ್‌   

ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿ ಆರಂಭವಾಗಿ ಆರು ವರ್ಷಗಳಾಗಿವೆ. ಆದರೆ ಇಲ್ಲಿಯವರೆಗೆ ಯಾರೂ ಹ್ಯಾಟ್ರಿಕ್‌ ವಿಕೆಟ್‌ಗಳ ಸಾಧನೆ ಮಾಡಿರಲಿಲ್ಲ. ಕಲಬುರ್ಗಿ ಜಿಲ್ಲೆಯ ಶಹಬಾದ್‌ನ ಆನಂದ ದೊಡ್ಡಮನಿ ಮತ್ತು ಯಾದಗಿರಿಯ ಡಿ. ಅವಿನಾಶ್‌ ಈ ಕೊರತೆ ನೀಗಿಸಿದರು.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಆಟಗಾರರು ಈ ಸಾಧನೆ ಮಾಡಿದರು. ಆನಂದ್‌ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದ 13ನೇ ಓವರ್‌ನಲ್ಲಿ ಪ್ರವೀಣ್‌ ದುಬೆ, ರೋಹಿತ್‌ ಗೌಡ ಮತ್ತು ಎಂ. ಕ್ರಾಂತಿಕುಮಾರ್‌ ಅವರನ್ನು ಔಟ್‌ ಮಾಡಿದರು.

15ನೇ ಓವರ್‌ನಲ್ಲಿ ಅವಿನಾಶ್‌ ಅವರು ವಿನಯಕುಮಾರ್‌, ಅಭಿಷೇಕ್‌ ಸಕುಜಾ ಹಾಗೂ ಅಮನ್‌ ಖಾನ್‌ ವಿಕೆಟ್‌ ಕಬಳಿಸಿ ಡಬಲ್‌ ಹ್ಯಾಟ್ರಿಕ್‌ ಸಾಧನೆಗೆ ಕಾರಣರಾಗಿದ್ದರು. ಇದರಿಂದ ಪ್ಯಾಂಥರ್ಸ್ ತಂಡ ಟೈಗರ್ಸ್‌ ವಿರುದ್ಧ 14 ರನ್‌ಗಳಿಂದ ಗೆದ್ದ ಫೈನಲ್‌ ಪ್ರವೇಶಿಸಿದೆ.

ADVERTISEMENT

‘ಲಭ್ಯವಿರುವ ಅಂಕಿ ಅಂಶಗಳ ಮಾಹಿತಿ ಪ್ರಕಾರ ಒಂದೇ ಪಂದ್ಯದಲ್ಲಿ, ಒಂದೇ ಇನಿಂಗ್ಸ್‌ನಲ್ಲಿ ಎರಡು ಹ್ಯಾಟ್ರಿಕ್‌ ವಿಕೆಟ್‌ಗಳ ಸಾಧನೆ ಮೂಡಿಬಂದಿದ್ದು ಇದೇ ಮೊದಲು. ಕೆಪಿಎಲ್‌ನಲ್ಲಿ ದಾಖಲಾದ ಚೊಚ್ಚಲ ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯಿದು. ಹಿಂದೆ ವಿಶ್ವದ ಯಾವ ಮಾದರಿಯ ಕ್ರಿಕೆಟ್‌ ಟೂರ್ನಿಯಲ್ಲಿಯೂ ಈ ರೀತಿಯ ಸಾಧನೆ ಆಗಿಲ್ಲ.’ ಎಂದು ಟೂರ್ನಿಯ ಅಂಕಿಅಂಶ ತಜ್ಞ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ ಒಂದೇ ಇನಿಂಗ್ಸ್‌ನಲ್ಲಿ ಇಬ್ಬರು ಹ್ಯಾಟ್ರಿಕ್‌ ಸಾಧನೆ ಮಾಡಿದ್ದು  ಇದು ಮೊದಲ ಬಾರಿ’ ಎಂದು  ಅಂಕಿಅಂಶ ತಜ್ಞ ಎಚ್‌.ಆರ್‌. ಗೋಪಾಲಕೃಷ್ಣ ಹೇಳಿದರು.

ಗ್ರಾಮೀಣ ಪ್ರತಿಭೆಗಳು: ಹಿಂದಿನ ಎರಡು ಆವೃತ್ತಿಗಳಲ್ಲಿ ಆನಂದ್‌ ಮೈಸೂರು ವಾರಿಯರ್ಸ್‌ ತಂಡದಲ್ಲಿದ್ದರು. ಈ ಬಾರಿಯ ಆಟಗಾರರ ಹರಾಜಿನಲ್ಲಿ ಪ್ಯಾಂಥರ್ಸ್‌ ತಂಡ ₹ 65 ಸಾವಿರಕ್ಕೆ ಖರೀದಿಸಿತ್ತು. 19 ಮತ್ತು 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಮತ್ತು ಕೂಚ್‌ ಬೆಹರ್‌ ಟೂರ್ನಿಯಲ್ಲಿ ಆನಂದ್‌ ಕರ್ನಾಟಕ ತಂಡದಲ್ಲಿ ಆಡಿದ್ದರು. ಕಲಬುರ್ಗಿಯಲ್ಲಿ ರಶ್ಮಿ ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿದ್ದಾರೆ. ಇವರ ತಾಯಿ ಸಾಬಮ್ಮ ಶಹಬಾದ್‌ನಲ್ಲಿ ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಹಿಂದಿನ ಕೆಪಿಎಲ್‌ ಟೂರ್ನಿಯಲ್ಲಿ ಆಡಿದ್ದರಿಂದ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ತಿಳಿದುಕೊಂಡಿದ್ದೆ. ಇಲ್ಲಿ ವೈಯಕ್ತಿಕ ಸಾಧನೆಗಿಂತ ಹೆಚ್ಚಾಗಿ ನನ್ನ  ಬೌಲಿಂಗ್‌ನಿಂದ ತಂಡಕ್ಕೆ ಅನುಕೂಲವಾಗಿದ್ದಕ್ಕೆ ಖುಷಿಯಿದೆ. ಕಠಿಣ ಪರಿಶ್ರಮಪಟ್ಟಿದ್ದರಿಂದ ಇದೆಲ್ಲಾ ಸಾಧ್ಯವಾಗಿದೆ. ಮುಂದೆ ಇನ್ನೂ ಚೆನ್ನಾಗಿ ಬೌಲಿಂಗ್ ಮಾಡುತ್ತೇನೆ’ ಎಂದು ಆನಂದ್‌ ಹೇಳಿದರು.

ಅವಿನಾಶ್‌ ಸದ್ಯಕ್ಕೆ ಬೆಂಗಳೂರಿನಲ್ಲಿ ಜಸ್ಟ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದಕ್ಕೂ ಮೊದಲು ಕಲಬುರ್ಗಿಯಲ್ಲಿ ಎನ್‌.ವಿ. ಜಿಮ್ಖಾನಾ ಕ್ಲಬ್‌ನಲ್ಲಿ ಮಾಧವ ಜೋಶಿ ಅವರ ಬಳಿ ಆರಂಭಿಕ ತರಬೇತಿ ಪಡೆದುಕೊಂಡಿದ್ದರು.

19 ವರ್ಷದೊಳಗಿನವರ ವಿಭಾಗದ ವಿನೂ ಮಂಕಡ್‌ ಮತ್ತು ಕೂಚ್‌ ಬೆಹಾರಿ ಟೂರ್ನಿಗಳಲ್ಲಿ ಅವರು ಕರ್ನಾಟಕ ತಂಡ ಪ್ರತಿನಿಧಿಸಿದ್ದರು. ಅವಿನಾಶ್‌ ತಂದೆ ಶರಣಪ್ಪ ಅವರು ಯಾದಗಿರಿ ಜಿಲ್ಲೆಯ ಯಡ್ನಳ್ಳಿಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ.

‘ವೃತ್ತಿಪರ ಕ್ರಿಕೆಟಿಗನಾಗಿ ಬೆಳೆಯಲು ಅಗತ್ಯವಿರುವ ಸೌಲಭ್ಯಗಳು ಯಾದಗಿರಿಯಲ್ಲಿ ಇಲ್ಲ. ಆದ್ದರಿಂದ ಕಲಬುರ್ಗಿಗೆ ಹೋಗಿ ತರಬೇತಿ ಪಡೆಯುತ್ತಿದ್ದೆ. ಮೊದಲ ಸಲ ಕೆಪಿಎಲ್‌ ಟೂರ್ನಿಯಲ್ಲಿ ಆಡುತ್ತಿದ್ದೇನೆ. ಹ್ಯಾಟ್ರಿಕ್‌ ಸಾಧನೆ ಮಾಡಿದ್ದಕ್ಕೆ   ಸಂತೋಷವಾಗಿದೆ. ಇನ್ನಷ್ಟು ದೊಡ್ಡ ಸಾಧನೆ ಮಾಡಲು ಪ್ರೇರಣೆ ಲಭಿಸಿದೆ’ ಎಂದು ಅವಿನಾಶ್‌ ಹೇಳಿದರು.

*
ಅವಿನಾಶ್‌ ಪ್ರತಿಭಾವಂತ ಆಟಗಾರ. ಇಷ್ಟು ವರ್ಷ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದ. ಈಗ ಸಿಕ್ಕ ಅವಕಾಶದಲ್ಲಿ ಅವನು  ಸಾಮರ್ಥ್ಯ ಸಾಬೀತು ಮಾಡಿದ್ದಾನೆ. ಖುಷಿಯಾಗಿದೆ.
–ಮಾಧವ ಜೋಶಿ,
ಎನ್‌.ವಿ. ಜಿಮ್ಖಾನಾ ಕ್ಲಬ್‌ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.