ADVERTISEMENT

ಟೆನಿಸ್‌: ಮೂರನೇ ಸುತ್ತಿಗೆ ಜೊಕೊವಿಚ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಆಟದ ವೈಖರಿ  ಎಎಫ್‌ಪಿ ಚಿತ್ರ
ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಆಟದ ವೈಖರಿ ಎಎಫ್‌ಪಿ ಚಿತ್ರ   

ಲಂಡನ್‌ (ಎಎಫ್‌ಪಿ): ವಿಂಬಲ್ಡನ್‌ ಅಂಗಳದಲ್ಲಿ ನಾಲ್ಕನೇ ಪ್ರಶಸ್ತಿ ಗೆಲ್ಲುವ ಆಸೆ ಹೊಂದಿರುವ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಹಾಲಿ ಚಾಂಪಿಯನ್‌ ಕೂಡ ಆಗಿರುವ ಜೊಕೊವಿಚ್‌ ಇಲ್ಲಿ 2011 ಮತ್ತು 2014ರ ಟೂರ್ನಿಗಳಲ್ಲಿ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದರು. ಈ ಬಾರಿಯೂ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್‌ ಸಂಪಾದಿಸುವ ಗುರಿ ಹೊಂದಿದ್ದಾರೆ.

ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್‌  6-4, 6-3, 7-6ರಲ್ಲಿ ಫ್ರಾನ್ಸ್‌ನ ಆಡ್ರಿಯಾನ್‌ ಮನೊರಿನೊ ವಿರುದ್ಧ ಗೆಲುವು ಪಡೆದರು.
ಇಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಜೊಕೊವಿಚ್ ಗ್ರ್ಯಾಂಡ್‌ ಸ್ಲಾಮ್ ಟೂರ್ನಿಯಲ್ಲಿ ಪಡೆದ ಸತತ 30ನೇ ಗೆಲುವು ಇದಾಗಿದೆ.

‘ಸೆಂಟರ್‌ ಕೋರ್ಟ್‌ನಲ್ಲಿ  ಅನಿರೀಕ್ಷಿತವಾಗಿ ಪಂದ್ಯವಾಡಬೇಕಾಯಿತು. ಈ ಅಂಕಣದಲ್ಲಿ ಹಲವು ಬಾರಿ ಆಡಿದ ಅನುಭವವಿದೆ. ಜೊತೆಗೆ ಸ್ಥಿರ ಪ್ರದರ್ಶನ ನೀಡುತ್ತಿರುವ ಕಾರಣ ಇಲ್ಲಿ ಗೆಲುವು ಪಡೆಯಲು ಸಾಧ್ಯವಾಯಿತು. ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಸತತ 30 ಪಂದ್ಯಗಳಲ್ಲಿ ಗೆಲುವು ಪಡೆದ ಹೆಮ್ಮೆಯೂ ಇದೆ’ ಎಂದು ಪಂದ್ಯದ ಬಳಿಕ ಅವರು ಸಂತೋಷ ಹಂಚಿಕೊಂಡರು.

64ರ ಘಟ್ಟಕ್ಕೆ ರಾಡ್ವಾಸ್ಕ: ಮೂರನೇ ಶ್ರೇಯಾಂಕ ಹೊಂದಿರುವ ಅಗ್ನಿಸ್ಕಾ ರಾಡ್ವಾಸ್ಕ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ 64ರ ಘಟ್ಟ ತಲುಪಿದ್ದಾರೆ.
ಮೊದಲ ಸುತ್ತಿನ ಹಣಾಹಣಿಯಲ್ಲಿ ಈ ಆಟಗಾರ್ತಿ 6–2, 6–1ರಲ್ಲಿ ಉಕ್ರೇನ್‌ನ  ಕ್ಯಾಟರೆನಾ ಕುಜ್ಲೊವಾ ವಿರುದ್ಧ ಜಯಭೇರಿ ಮೊಳಗಿಸಿದರು.

ಪೋಲೆಂಡ್‌ನ 34 ವರ್ಷದ ಆಟಗಾರ್ತಿ ರಾಡ್ವಾಸ್ಕ  ಒಮ್ಮೆಯೂ ಗ್ರ್ಯಾಂಡ್ ಸ್ಲಾಮ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿಲ್ಲ. ಅಮೆರಿಕ ಓಪನ್‌ ಟೂರ್ನಿಯಲ್ಲಿ ನಾಲ್ಕು ಸಲ ನಾಲ್ಕರ ಘಟ್ಟದಲ್ಲಿ ನಿರಾಸೆ ಅನುಭವಿಸಿದ್ದಾರೆ. ಈ ವರ್ಷದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದರು.  2012ರಲ್ಲಿ ವಿಂಬಲ್ಡನ್‌ ಅಂಗಳದಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದೇ ರಾಡ್ವಾಸ್ಕ ಅವರ ಉತ್ತಮ ಸಾಧನೆ ಎನಿಸಿದೆ.

‘ನಮ್ಮ ದೇಶದ ಸಾಕಷ್ಟು ಜನ ಇಲ್ಲಿ ವಾಸವಾಗಿದ್ದಾರೆ. ಅವರು ನನ್ನ ಆಟವನ್ನು ನೋಡಿ ಖುಷಿಪಡುತ್ತಾರೆ. ಆದ್ದರಿಂದ ಪ್ರತಿ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡುತ್ತೇನೆ’ ಎಂದು ರಾಡ್ವಾಸ್ಕ ಹೇಳಿದ್ದಾರೆ.

ಆರು ವರ್ಷಗಳ ಹಿಂದೆ ಈ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದ ಜೆಕ್‌ ಗಣರಾಜ್ಯದ ಥಾಮಸ್ ಬೆರ್ಡಿಕ್‌ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಬೆರ್ಡಿಕ್‌ 7–6, 5–7, 6–1, 7–6ರಲ್ಲಿ ಕ್ರೊವೇಷ್ಯಾದ ಇವಾನ್‌ ದೊಡಿಗ್ ಅವರನ್ನು ಮಣಿಸಿದರು. ವಿಂಬಲ್ಡನ್‌ ಟೂರ್ನಿಯ ಬುಧವಾರದ ಕೆಲ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿತು. ಇದರಿಂದ ಆಟಗಾರರು ಮತ್ತು ಅಭಿಮಾನಿಗಳು ನಿರಾಸೆಗೆ ಒಳಗಾಗಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.