ADVERTISEMENT

ಬುಲ್ಸ್‌ ಜಯದಲ್ಲಿ ಇಮ್ಮಡಿಸಿದ ಸಂಭ್ರಮ

ಕಬಡ್ಡಿ ಲೀಗ್‌: ಚಿಲಾರಾ, ಅಜಯ್‌ ಅಪೂರ್ವ ಆಟ; ಟೈಟಾನ್ಸ್‌ಗೆ ನಿರಾಸೆ

ಪ್ರಮೋದ ಜಿ.ಕೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಬೆಂಗಳೂರು: ಉಸಿರು ಬಿಗಿಹಿಡಿದು ಫಲಿತಾಂಶ ಏನಾಗಲಿದೆಯೋ ಎನ್ನುವ ಕುತೂಹಲದಲ್ಲಿದ್ದ ಅಭಿಮಾನಿಗಳಿಗೆ ಬೆಂಗಳೂರು ಬುಲ್ಸ್‌ ಗೆಲುವಿನ ಉಡುಗೊರೆ ನೀಡಿತು. ಇದರಿಂದ ಆತಿಥೇಯ ತಂಡ ವೃತ್ತಿಪರ ಆಟಗಾರರ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಸೆಮಿಫೈನಲ್ ಪ್ರವೇಶಿಸಲು ಬುಲ್ಸ್‌ ಮತ್ತು ತೆಲುಗು ಟೈಟಾನ್ಸ್‌ ತಂಡಗಳಿಗೆ ಈ ಪಂದ್ಯ ‘ಕ್ವಾರ್ಟರ್‌ ಫೈನಲ್‌’ ಎನಿಸಿತ್ತು. ಆದ್ದರಿಂದ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು.

ಕಬಡ್ಡಿ ಪ್ರೇಮಿಗಳ ಹರ್ಷೋದ್ಗಾರದ ಸಂಭ್ರಮದಲ್ಲಿ ಮಿಂದೆದ್ದ ಬುಲ್ಸ್‌ ಆಟಗಾರರು ಕೊನೆಯವರೆಗೂ ಅಪೂ ರ್ವ ಹೋರಾಟ ತೋರಿ ಜಯ ಭೇರಿ ಮೊಳಗಿಸಿದರು. ಇದರಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳ ವಾರ ಸಂಭ್ರಮವೇ ಉಕ್ಕಿ ಹರಿಯಿತು.

ಅಂತರರಾಷ್ಟ್ರೀಯ ಆಟಗಾರ ಮನ್‌ಜಿತ್‌ ಚಿಲಾರಾ ಸಾರಥ್ಯದ ಬುಲ್ಸ್‌ ತಂಡ ಕೇವಲ ಒಂದು ಪಾಯಿಂಟ್‌ ಅಂತರದಿಂದ ರೋಚಕ

ಇಂದು ಸೆಮಿಫೈನಲ್‌ ನಿರ್ಧಾರ
ಬುಧವಾರ ನಡೆಯಲಿರುವ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧದ ಪಂದ್ಯದ ನಂತರ ಬೆಂಗಳೂರು ಬುಲ್ಸ್‌ ತಂಡದ ಸೆಮಿಫೈನಲ್‌ ಪ್ರವೇಶದ ಹಾದಿ ಗೊತ್ತಾಗುತ್ತದೆ. ಟೈಟಾನ್ಸ್‌ ಮತ್ತು ಬುಲ್ಸ್‌ ತಲಾ 42 ಪಾಯಿಂಟ್ಸ್‌ಗಳನ್ನು ಹೊಂದಿವೆ.
ಜೈಪುರ ಎದುರು ಬುಲ್ಸ್ ಗೆಲುವು ಪಡೆದರೆ ಸುಲಭವಾಗಿ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ಒಂದು ವೇಳೆ ಸೋಲು ಕಂಡರೂ, ಸೋಲಿನ ಅಂತರ 9 ಪಾಯಿಂಟ್ಸ್‌ಗಿಂತ ಹೆಚ್ಚಿರಬಾರದು. ಆಗ ಬುಲ್ಸ್ ತಂಡಕ್ಕೆ ಒಂದು ಬೋನಸ್‌ ಪಾಯಿಂಟ್‌ ಲಭಿಸುತ್ತದೆ. ಪಂದ್ಯ ಡ್ರಾ ಆದರೂ ಆತಿಥೇಯರು ಸೆಮಿಫೈನಲ್‌ ಪ್ರವೇಶಿಸುತ್ತಾರೆ.

ಗೆಲುವು ತನ್ನದಾಗಿಸಿಕೊಂಡಿತು. ಬುಲ್ಸ್ ತಂಡ 27 ಪಾಯಿಂಟ್ಸ್‌ ಗಳಿಸಿದರೆ, ಟೈಟಾನ್ಸ್‌ 26 ಪಾಯಿಂಟ್ಸ್ ಕಲೆ ಹಾಕಿತು. ಮೊದಲು ರೈಡ್‌ ಆರಂಭಿಸಿದ ಟೈಟಾನ್ಸ್‌ ತಂಡದಲ್ಲಿರುವ ಕರ್ನಾಟಕದ ಸುಖೇಶ್‌ ಹೆಗಡೆ ಪಾಯಿಂಟ್‌ ಖಾತೆ ತೆರೆದರು.

ಆರಂಭದಲ್ಲಿ ಟೈಟಾನ್ಸ್‌ ಮುನ್ನಡೆ ಹೊಂದಿತ್ತು. ಬುಲ್ಸ್ ತಂಡದ ಬಲಿಷ್ಠ ರೈಡರ್‌ ಅಜಯ್‌ ಠಾಕೂರ್‌ ಎದು ರಾಳಿ ಅಂಕಣದಲ್ಲಿ ನುಗ್ಗಿ ಎರಡು ಸಲ ಸತತವಾಗಿ ತಲಾ ಎರಡು ಪಾಯಿಂಟ್ ಗಳಿಸುವಲ್ಲಿ ಯಶಸ್ವಿಯಾದರು. ಇದರಿಂದ ಉಭಯ ತಂಡಗಳೂ 4-4ರಲ್ಲಿ ಸಮಬಲ ಸಾಧಿಸಿದವು. ಅಜಯ್‌ ಮತ್ತು ದೀಪಕ್ ಸುರೇಶ್‌ ಮೇಲಿಂದ ಮೇಲೆ ಪಾಯಿಂಟ್ಸ್‌ ಗಳಿಸಿ ಅಂತರವನ್ನು 12-5ಕ್ಕೆ ಹೆಚ್ಚಿಸಿದರು.

ಮೊದಲಾರ್ಧದ ಆಟದ ಹತ್ತೇ ನಿಮಿಷದಲ್ಲಿ ಬುಲ್ಸ್‌ ತಂಡಕ್ಕೆ ‘ಲೋನಾ’ ಪಾಯಿಂಟ್ಸ್‌ ಲಭಿಸಿತು. ಆದ್ದರಿಂದ ಆತಿಥೇಯರು ಮೊದಲಾರ್ಧ ಮುಗಿದಾಗ 17-10ರಲ್ಲಿ ಮುನ್ನಡೆ ಹೊಂದಿದ್ದರು. ಆದರೆ, ಬುಲ್ಸ್‌ ತಂಡದ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಏಕೆಂದರೆ, ಟೈಟಾನ್ಸ್‌ ಅಂತರವನ್ನು ಕಡಿಮೆ ಮಾಡಿಕೊಂಡಿತು. 17-17, 18-18, 20-20 ಹೀಗೆ ಸಮಬಲದ ಪೈಪೋಟಿ ಕಂಡು ಬಂದಿತು. ದ್ವಿತೀಯಾರ್ಧದಲ್ಲಿ ಬುಲ್ಸ್‌ ಆಟಗಾ ರರು ಅನಗತ್ಯ ಎಡವಟ್ಟು ಮಾಡಿಕೊಂ ಡಿದ್ದು ಟೈಟಾನ್ಸ್‌ಗೆ ಲಾಭವಾಯಿತು.

ರೋಚಕತೆ, ಕುತೂಹಲ: ಕೊನೆಯವರೆಗೂ ಪ್ರಬಲ ಪೈಪೋಟಿ ಕಂಡು ಬಂದ ಕಾರಣ ಪಂದ್ಯ ಕುತೂಹಲದ ಗಣಿಯಾಗಿತ್ತು. ಎರಡು ತಂಡಗಳ ನಡುವೆ ಒಂದು ಹಾಗೂ ಎರಡು ಪಾಯಿಂಟ್‌ಗಳಷ್ಟೇ ಅಂತರವಿತ್ತು. 24-25, 26-26ರ ಅಂತರದಲ್ಲಿ ಪಂದ್ಯ ಸಾಗಿದ್ದ ಕಾರಣ ಜಯದ ಚಿತ್ತ ಅತ್ತ ಇತ್ತ ಆಗಿತ್ತು.

ಪಂದ್ಯ ಕೊನೆಗೊಳ್ಳಲು ಒಂದು ನಿಮಿಷವಷ್ಟೇ ಬಾಕಿ ಇದ್ದಾಗ ದೀಪಕ್‌ ಟೈಟಾನ್ಸ್‌ ಅಂಕಣದಲ್ಲಿ ‘ಟೈಂಪಾಸ್‌’ ಮಾಡಿ ಹೋದರು. ಪಂದ್ಯದ ಕೊನೆಯ ರೈಡಿಂಗ್‌ನಲ್ಲಿ ಟೈಟಾನ್ಸ್‌ ತಂಡದ ದೀಪಕ್‌ ನಿವಾಸ್‌ ಹೂಡಾ ಪಾಯಿಂಟ್‌ ಪಡೆದು ಬರಲೇಬೇಕೆಂದು ನಿರ್ಧರಿ ಸಿದ್ದರು. ಆದರೆ, 2010ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡದಲ್ಲಿದ್ದ ಚಿಲಾರಾ ಅಮೋಘವಾಗಿ ದೀಪಕ್‌ ಅವರನ್ನು ಹಿಡಿದು ಪಾಯಿಂಟ್ಸ್ ಒದಗಿಸಿ ಸಂಭ್ರಮಕ್ಕೆ ಕಾರಣರಾದರು.

ಬುಲ್ಸ್‌ ಒಟ್ಟು ಮೂರು ಬೋನಸ್ ಪಾಯಿಂಟ್ಸ್ ಪಡೆದರೆ, ಟೈಟಾನ್ಸ್‌ ಒಂದು ಪಾಯಿಂಟ್‌ ಗಳಿಸಿತು. ಪಂದ್ಯ ಮುಗಿಯುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಹೊಳೆಯಾಗಿ ಹರಿಯಿತು. ಸೋಮವಾರ ಎರಡು ಪಾಯಿಂಟ್ಸ್‌ ಅಂತರದಿಂದಷ್ಟೇ ಸೋಲು ಕಂಡಿದ್ದ ಆತಿಥೇಯರು ಆ ಎಲ್ಲಾ ನಿರಾಸೆ ಮರೆತು ಹೋಗುವಂತೆ ಅಭಿಮಾನಿ ಗಳನ್ನು ರಂಜಿಸಿದರು. ಸುಖೇಶ್‌ ಹೆಗಡೆ ಅತ್ಯುತ್ತಮ ರೈಡರ್ ಮತ್ತು ಮನ್‌ಜಿತ್‌ ಚಿಲಾರಾ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಪಡೆದರು.

ತಾರೆಯರ ದಂಡು: ಮಹತ್ವದ ಪಂದ್ಯವಾಗಿದ್ದ ಕಾರಣ ಕೆಲ ತಾರೆಯರು ಕ್ರೀಡಾಂಗಣಕ್ಕೆ ಬಂದಿದ್ದರು. ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ, ಮಾಜಿ ಅಥ್ಲೀಟ್‌ಗಳಾದ ರೀತ್‌ ಅಬ್ರಾಹಂ, ಅಶ್ವಿನಿ ನಾಚಪ್ಪ, ಸಚಿವ  ಅಂಬರೀಶ್‌ ಬಂದಿದ್ದರು.

ಪಂದ್ಯದ ನಂತರ ಮಾತನಾಡಿದ ಕುಂಬ್ಳೆ, ‘ಕಬಡ್ಡಿಗೆ ಇಷ್ಟೊಂದು ಪ್ರತಿಕ್ರಿಯೆ ಸಿಗುತ್ತಿರುವುದು ನೋಡಿ ತುಂಬಾ ಖುಷಿಯಾಯಿತು. ಕ್ರೀಡೆಯ ಬೆಳವಣಿಗೆಗೆ ಅಭಿಮಾನಿಗಳ ಬೆಂಬಲ ಬೇಕೆ ಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.