ADVERTISEMENT

ಭಾರತ ತಂಡದ ಶುಭಾರಂಭ

ಪಿಟಿಐ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ಸ್ಮೃತಿ ಮಂದನಾ ಆಟದ ಶೈಲಿ
ಸ್ಮೃತಿ ಮಂದನಾ ಆಟದ ಶೈಲಿ   

ಡರ್ಬಿ: ಆರಂಭಿಕ ಜೋಡಿಯ ಅಮೋಘ ಜೊತೆಯಾಟ ಮತ್ತು ನಿಖರವಾದ ಬೌಲಿಂಗ್‌ನಿಂದ ಭಾರತ ವನಿತೆಯರು ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಕಂಡಿದ್ದಾರೆ.

ಇಲ್ಲಿನ  ಕೌಂಟಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್‌ ಬಳಗ ಇಂಗ್ಲೆಂಡ್‌ ತಂಡವನ್ನು 35 ರನ್‌ಗಳಿಂದ ಮಣಿಸಿದರು. 282 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯರು 47.3 ಓವರ್‌ಗಳಲ್ಲಿ ಪತನ ಕಂಡರು.

ಪಂದ್ಯದ ಯಾವುದೇ ಹಂತದಲ್ಲೂ ಇಂಗ್ಲೆಂಡ್‌ ತಂಡದವರು ಭಾರತಕ್ಕೆ ಸವಾಲಾಗಲಿಲ್ಲ. ಎದುರಾಳಿಗಳ ಬೌಲಿಂಗ್‌ ದಾಳಿಯನ್ನು ನಿರಾತಂಕವಾಗಿ ಎದುರಿಸಿದ ಭಾರತ ವನಿತೆಯರು ನಂತರ ಕರಾರುವಾಕ್ ಬೌಲಿಂಗ್ ನಡೆಸಿದರು.

ADVERTISEMENT

ಶಿಖಾ ಪಾಂಡೆ, ಪೂನಮ್ ಯಾದವ್‌ ಮತ್ತು ದೀಪ್ತಿ ಶರ್ಮಾ ದಾಳಿಗೆ ನಲುಗಿದ ಇಂಗ್ಲೆಂಡ್‌ ಇನಿಂಗ್ಸ್‌ನಲ್ಲಿ ಉತ್ತಮ ಜೊತೆಯಾಟವೇ ಕಂಡುಬರಲಿಲ್ಲ. ಒಂಬತ್ತನೇ ಓವರ್‌ನಲ್ಲಿ ಬೋಮೌಂಟ್ ಅವರನ್ನು ವಾಪಸ್ ಕಳುಹಿಸಿ ಮೊದಲ ಆಘಾತ ನೀಡಿದ ಶಿಖಾ ಪಾಂಡೆ 11ನೇ ಓವರ್‌ನಲ್ಲಿ ವಿಕೆಟ್‌ ಕೀಪರ್‌ ಸಾರಾ ಟೇಲರ್ ಅವರ ವಿಕೆಟ್ ಕೂಡ ಕಬಳಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕಿ ಹೆದರ್ ನೈಟ್‌ (46; 69ಎ, 2 ಸಿ, 1 ಬೌಂ) ಮತ್ತು ಐದನೇ ಕ್ರಮಾಂಕದ ಫ್ರಾನ್ ವಿಲ್ಸನ್‌ (81; 75 ಎ, 6 ಬೌಂ) ಸ್ವಲ್ಪ ಪ್ರತಿರೋಧ ತೋರಿದರು.

ಆದರೆ ತಂಡಕ್ಕೆ ಜಯ ತಂದುಕೊಡಲು ಅವರಿಗೆ ಸಾಧ್ಯವಾಗಲಿಲ್ಲ. ಇವರಿಬ್ಬರೂ ರನೌಟ್ ಆಗಿ ಮರಳಿದ್ದು ಇಂಗ್ಲೆಂಡ್‌ಗೆ ಭಾರಿ ಪೆಟ್ಟು ನೀಡಿತು. ತಂಡದ ಕೊನೆಯ ಐದು ವಿಕೆಟ್‌ಗಳು ಕೇವಲ 30 ರನ್‌ಗಳಿಗೆ ಉರುಳಿದವು.

ಭಾರತದ ಭರ್ಜರಿ ಆರಂಭ
ಟಾಸ್ ಗೆದ್ದ ಆತಿಥೇಯರು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯ ಮುಂದೆ ಬೌಲರ್‌ಗಳ ಆಟ ನಡೆಯಲಿಲ್ಲ.

ಪೂನಮ್ ರಾವುತ್ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ತಂಡದ ಇನಿಂಗ್ಸ್‌ಗೆ ಭದ್ರ ಬುನಾದಿ ಹಾಕಿದರು. 27ನೇ ಓವರ್‌ನಲ್ಲಿ ಮಂಧಾನ (90; 72ಎ, 2 ಸಿ, 11 ಬೌಂ) ಔಟಾದಾಗ ತಂಡದ ಖಾತೆಯಲ್ಲಿ 144 ರನ್ ಸೇರಿತ್ತು.

ರಾವುತ್‌ ಜೊತೆಗೂಡಿದ ನಾಯಕಿ ಮಿಥಾಲಿ ರಾಜ್‌ ಎರಡನೇ ವಿಕೆಟ್‌ಗೆ 78 ರನ್‌ ಸೇರಿಸಿ ತಂಡದ ಮೊತ್ತವನ್ನು 200 ರನ್ ದಾಟಿಸಿದರು. ಇನಿಂಗ್ಸ್ ಮುಕ್ತಾಯಕ್ಕೆ ಏಳು ಓವರ್ ಬಾಕಿ ಇದ್ದಾಗ ರಾವುತ್ ಔಟಾದರು. 134 ಎಸೆತಗಳಲ್ಲಿ 86 ರನ್‌ ಗಳಿಸಿದ ಅವರು ಒಂದು ಸಿಕ್ಸರ್‌ ಮತ್ತು ಏಳು ಬೌಂಡರಿ ಬಾರಿಸಿದ್ದರು.

ಔಟಾಗದೇ 71 ರನ್‌ ಗಳಿಸಿದ ಮಿಥಾಲಿ ರಾಜ್‌ 73 ಎಸೆತ ಎದುರಿಸಿ ಎಂಟು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದರು. ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 59 ರನ್‌ ಜೋಡಿಸಿದ ಹರ್ಮನ್‌ಪ್ರೀತ್ ಕೌರ್‌ 22 ಎಸೆತಗಳಲ್ಲಿ 24 ರನ್‌ ಗಳಿಸಿ ಮಿಂಚಿದರು. ಅವರ ಇನಿಂಗ್ಸ್‌ನಲ್ಲಿ ತಲಾ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.