ADVERTISEMENT

ಮೊದಲ ದಿನ ಆಸ್ಟ್ರೇಲಿಯಾಕ್ಕೆ ಮೇಲುಗೈ

ಕ್ರಿಕೆಟ್‌: 100ನೇ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮೆಕ್ಲಮ್‌, ಮಿಂಚಿದ ವೇಗಿಗಳು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಬಾಸಿನ್‌ ರಿಸರ್ವ್‌ ಅಂಗಳದಲ್ಲಿ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಆಲೌಟ್‌ ಮಾಡಿದ ಬಳಿಕ ಆಸ್ಟ್ರೇಲಿಯಾದ ಆಟಗಾರರು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು  ಎಎಫ್‌ಪಿ ಚಿತ್ರ
ಬಾಸಿನ್‌ ರಿಸರ್ವ್‌ ಅಂಗಳದಲ್ಲಿ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಆಲೌಟ್‌ ಮಾಡಿದ ಬಳಿಕ ಆಸ್ಟ್ರೇಲಿಯಾದ ಆಟಗಾರರು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು ಎಎಫ್‌ಪಿ ಚಿತ್ರ   

ವೆಲ್ಲಿಂಗ್ಟನ್‌ (ಎಎಫ್‌ಪಿ): ಜೋಶ್‌ ಹ್ಯಾಜಲ್‌ವುಡ್‌ ಮತ್ತು ಪೀಟರ್‌ ಸಿಡ್ಲ್‌ ಅವರ ವೇಗದ ದಾಳಿ ಎದುರಿಸಲು ಪರದಾಡಿದ ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ  ಅಲ್ಪ ಮೊತ್ತಕ್ಕೆ ಔಟಾಗಿದೆ. ನೂರನೇ ಟೆಸ್ಟ್‌ ಆಡಿದ ಕಿವೀಸ್ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ರನ್‌ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ ಸೇರಿದರು.

ಬಾಸಿನ್‌ ರಿಸರ್ವ್‌ ಅಂಗಳದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಜಯಿಸಿದ ಪ್ರವಾಸಿ ಆಸ್ಟ್ರೇಲಿಯಾ  ಫೀಲ್ಡಿಂಗ್‌ ಮಾಡಲು ಮುಂದಾಯಿತು. ಆತಿಥೇಯರು 48 ಓವರ್‌ಗಳಲ್ಲಿ 183 ರನ್‌ ಕಲೆ ಹಾಕಿ ಆಲೌಟ್‌ ಆದರು. ಏಳು ವಿಕೆಟ್‌ಗಳು ವೇಗಿಗಳ ಪಾಲಾದರೆ ಇನ್ನುಳಿದ ಮೂರು ವಿಕೆಟ್‌ಗಳನ್ನು ಸ್ಪಿನ್ನರ್‌ ನಥಾನ್‌ ಲಿಯೊನ್‌ ಕಬಳಿಸಿದರು.

ಇನಿಂಗ್ಸ್‌ ಆರಂಭಿಸಿರುವ ಕಾಂಗರೂಗಳ ನಾಡಿನ ತಂಡ ಮೊದಲ ದಿನದಾಟದ ಅಂತ್ಯಕ್ಕೆ 40 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 147 ರನ್‌ ಗಳಿಸಿದೆ. ಇನಿಂಗ್ಸ್‌ ಮುನ್ನಡೆಗೆ 36 ರನ್‌ ಬೇಕಿದೆ.

ಹೋದ ವಾರ ಮುಗಿದ ಏಕದಿನ ಸರಣಿಯಲ್ಲಿ ಗೆಲುವು ಪಡೆದಿರುವ ನ್ಯೂಜಿಲೆಂಡ್ ತಂಡ ಟೆಸ್ಟ್‌ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್‌ ಗುಪ್ಟಿಲ್‌ (18), ಟಾಮ್‌ ಲಥಾನ್‌ (6), ಹೆನ್ರಿ ನಿಕೊಲ್ಸ್‌ (8) ಮತ್ತು ಮೆಕ್ಲಮ್‌ ಬೇಗನೆ ಔಟಾದರು. 97 ರನ್‌ ಗಳಿಸುವಷ್ಟರಲ್ಲಿಯೇ ಪ್ರಮುಖ ಏಳು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಇದಕ್ಕೆ ಸಾಕ್ಷಿ.

ಕೊನೆಯಲ್ಲಿ ಬಾಲಂಗೋಚಿ ಮಾರ್ಕ್‌ ಕ್ರೆಗ್‌ (ಔಟಾಗದೆ 41, 80 ನಿಮಿಷ, 57ಎಸೆತ, 5 ಬೌಂಡರಿ)  ಮತ್ತು ಟ್ರೆಂಟ್ ಬೌಲ್ಟ್‌ (24, 25ನಿ., 22ಎ., 3 ಬೌಂ.,) ಆಸೆರಯಾದರು. ಈ ಜೋಡಿ ಹತ್ತನೇ ವಿಕೆಟ್‌ಗೆ 46 ರನ್‌ ಕಲೆ ಹಾಕಿತು.

ಬೌಲಿಂಗ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಸ್ಟೀವನ್‌ ಸ್ಮಿತ್‌ ನಾಯಕತ್ವದ ಆಸ್ಟ್ರೇಲಿಯಾ ತಂಡಕ್ಕೂ ಆರಂಭಿಕ ಆಘಾತ ಕಾಡಿತು. ಜೋ ಬರ್ನ್ಸ್‌್ (0) ಮತ್ತು ಡೇವಿಡ್‌ ವಾರ್ನರ್‌ (5) ಮೊದಲ ಮೂರು ಓವರ್‌ಗಳು ಮುಗಿಯುವುದರ ಒಳಗೆ ಪೆವಿಲಿಯನ್‌ ಸೇರಿದ್ದರು. ಉಸ್ಮಾನ್ ಕವಾಜಾ (ಬ್ಯಾಟಿಂಗ್‌ 57) ಮತ್ತು ಸ್ಪಿನ್‌ (71, 133 ನಿ., 112ಎ., 10 ಬೌಂ., 1 ಸಿ.,) ನೆರವಾದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌ 48 ಓವರ್‌ಗಳಲ್ಲಿ 183 (ಮಾರ್ಟಿನ್ ಗುಪ್ಟಿಲ್‌ 18, ಕೇನ್‌ ವಿಲಿಯಮ್ಸನ್ 16, ಕೋರಿ ಆ್ಯಂಡರ್‌ಸನ್‌ 38, ಬಿ.ಜೆ. ವಾಟ್ಲಿಂಗ್‌ 17, ಮಾರ್ಕ್‌ ಕ್ರೆಗ್‌ ಔಟಾಗದೆ 41, ಟ್ರೆಂಟ್ ಬೌಲ್ಟ್‌ 24; ಜೋಶ್‌ ಹ್ಯಾಜಲ್‌ವುಡ್‌ 42ಕ್ಕೆ4, ಪೀಟರ್‌ ಸಿಡ್ಲ್‌ 37ಕ್ಕೆ3, ನಥಾನ್‌ ಲಿಯೊನ್‌ 32ಕ್ಕೆ3).

ಆಸ್ಟ್ರೇಲಿಯಾ 40 ಓವರ್‌ಗಳಲ್ಲಿ 3 ವಿಕೆಟ್‌ಗೆ 147 (ಉಸ್ಮಾನ್‌ ಕವಾಜ ಬ್ಯಾಟಿಂಗ್‌ 57, ಸ್ಟೀವನ್‌ ಸ್ಮಿತ್‌ 71; ಟಿಮ್ ಸೌಥಿ 22ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.