ADVERTISEMENT

ರಿಯೊ ಒಲಿಂಪಿಕ್ಸ್‌ಗೆ ಸಜ್ಜಾಗಲು ಅವಕಾಶ

ಇಂಡೊನೇಷ್ಯಾ ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ: ಸೈನಾ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ರಿಯೊ ಒಲಿಂಪಿಕ್ಸ್‌ಗೆ ಸಜ್ಜಾಗಲು ಅವಕಾಶ
ರಿಯೊ ಒಲಿಂಪಿಕ್ಸ್‌ಗೆ ಸಜ್ಜಾಗಲು ಅವಕಾಶ   

ಜಕಾರ್ತ (ಪಿಟಿಐ): ಮುಂಬರುವ ರಿಯೊ ಒಲಿಂಪಿಕ್ಸ್‌ಗೆ ಸಜ್ಜಾಗಲು ಉತ್ತಮ ವೇದಿಕೆ ಎನಿಸಿರುವ  ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಸೂಪರ್‌ ಸರಣಿ ಸೋಮವಾರ ಆರಂಭವಾಗಲಿದ್ದು, ಸೈನಾ ನೆಹ್ವಾಲ್‌ ಆಕರ್ಷಣೆ ಎನಿಸಿದ್ದಾರೆ.

ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಸೈನಾ ಈ ವರ್ಷದಲ್ಲಿ ಒಂದೂ ಪ್ರಶಸ್ತಿ ಜಯಿಸಿಲ್ಲ. ಒಲಿಂಪಿಕ್ಸ್ ಆರಂಭವಾಗಲು ಎರಡೂವರೆ ತಿಂಗಳು ಬಾಕಿ ಇರುವ ಕಾರಣ ಅವರು ಇಲ್ಲಿ ಪ್ರಶಸ್ತಿ ಜಯಿಸಿ ವಿಶ್ವಾಸ ಹೆಚ್ಚಿಸಿಕೊಳ್ಳುವ ಆಸೆ ಹೊಂದಿದ್ದಾರೆ.

ಹಿಮ್ಮಡಿಯ ಗಂಟು ನೋವಿನಿಂದ ಬಳಲಿದ್ದ ಕಾರಣ ಸೈನಾ ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಿರಲಿಲ್ಲ. ಪಾಲ್ಗೊಂಡಿದ್ದ ಇಂಡಿಯಾ ಓಪನ್‌, ಮಲೇಷ್ಯಾ ಓಪನ್ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು ಈ ವರ್ಷದ ಉತ್ತಮ ಸಾಧನೆ ಎನಿಸಿದೆ.

ಇತ್ತೀಚಿಗೆ ಚೀನಾದಲ್ಲಿ ನಡೆದ ಊಬರ್‌ ಕಪ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಕಂಚಿನ ಪದಕ ಜಯಿಸಿತ್ತು. ಆ ತಂಡದಲ್ಲಿ ಸೈನಾ ಇದ್ದರು.  
ಇಂಡೊನೇಷ್ಯಾ ಓಪನ್‌ ಟೂರ್ನಿ ಯಲ್ಲಿ ಸೈನಾ 2009, 2010 ಮತ್ತು 2012ರಲ್ಲಿ ಚಾಂಪಿಯನ್‌ ಆಗಿದ್ದಾರೆ. ವಿಶ್ವದ ಶ್ರೇಷ್ಠ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾರಣ ಅವರಿಗೆ ಇಲ್ಲಿ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಹೋದ ತಿಂಗಳು ಸತತವಾಗಿ ಪಂದ್ಯಗಳನ್ನು ಆಡಿದ್ದ ಪಿ.ವಿ. ಸಿಂಧು ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಮುಖ ಸವಾಲು ಎನಿಸಿದ್ದ ಕೆ. ಶ್ರೀಕಾಂತ್‌ ಹಾಗೂ ಅಜಯ್‌ ಜಯರಾಮ್‌ ಕೂಡ ಆಡುತ್ತಿಲ್ಲ.  ಗಾಯಗೊಂಡಿದ್ದ ಪರುಪಳ್ಳಿ ಕಶ್ಯಪ್‌ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಆಟಗಾರ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಆಡಬೇಕಿದ್ದ ಬಿ. ಸಾಯಿಪ್ರಣೀತ್‌ ಹಾಗೂ  ಆರ್‌ಎಂವಿ ಗುರುಸಾಯಿದತ್ ಅಲಭ್ಯರಾಗಿದ್ದಾರೆ. ಪ್ರಮುಖ ಆಟಗಾರರ  ಅನುಪಸ್ಥಿತಿಯ ನಡುವೆ ರಾಷ್ಟ್ರೀಯ ಚಾಂಪಿಯನ್‌ ಸಮೀರ್‌ ವರ್ಮಾ ಪುರುಷರ ವಿಭಾಗದಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಅವರು ಮೊದಲ ಸುತ್ತಿನಲ್ಲಿ ಆತಿಥೇಯ ರಾಷ್ಟ್ರದ ಆಟಗಾರ್ತಿಯರ ಎದುರು ಪೈಪೋಟಿ ನಡೆಸಲಿದ್ದಾರೆ. ಇನ್ನೊಂದು ಡಬಲ್ಸ್‌ನಲ್ಲಿ ಮನು ಅತ್ರಿ–ಬಿ. ಸುಮಿತ್‌ ರೆಡ್ಡಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.