ADVERTISEMENT

‘ಪ್ರಶಸ್ತಿ ಉಳಿಸಿಕೊಳ್ಳುತ್ತೇವೆ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಬೆಂಗಳೂರು: ‘ಈ ಸಲದ ರಣಜಿ ಟೂರ್ನಿಯ ಲೀಗ್‌ ಹಂತದಿಂದಲೂ ಉತ್ತಮ ಆಟವನ್ನೇ ಆಡಿದ್ದೇವೆ. ರಣಜಿ ಟ್ರೋಫಿಯನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಎನ್ನುವುದು ತಂಡದ ಪ್ರತಿಯೊಬ್ಬ ಆಟಗಾರನ ಗುರಿ’ ಎಂದು ಕರ್ನಾಟಕ ತಂಡದ ವೇಗಿ ಅಭಿಮನ್ಯು ಮಿಥುನ್‌ ಹೇಳಿದ್ದಾರೆ.

‘ಟೂರ್ನಿ ಆರಂಭಕ್ಕೂ ಮುನ್ನ ನಾವು ರೂಪಿಸಿದ್ದ ಯೋಜನೆಯಂತೆಯೇ ಆಡಿದೆವು. ಆದ್ದರಿಂದಲೇ ನಿರೀಕ್ಷಿತ ಫಲಿತಾಂಶ ಬಂದಿದೆ. ಮೂರ್ನಾಲ್ಕು ತಿಂಗಳಿನಿಂದಲೇ ಅಭ್ಯಾಸ ಆರಂಭಿಸಿದ್ದೆ. ಆದ್ದರಿಂದ ಚುರುಕಿನ ಬೌಲಿಂಗ್‌ ನಡೆಸಲು ಸಾಧ್ಯವಾಯಿತು’ ಎಂದೂ ಮಿಥುನ್‌ ತಿಳಿಸಿದ್ದಾರೆ.

‘ಪೀಣ್ಯ ಎಕ್ಸ್‌ಪ್ರೆಸ್‌’ ಎಂದೇ ಹೆಸರಾದ ಮಿಥುನ್‌ ಈ ಸಲದ ರಣಜಿ ಟೂರ್ನಿಯಲ್ಲಿ ಉತ್ತಮ ದಾಳಿ ನಡೆಸಿದ್ದರು. ಆಡಿದ ಒಂಬತ್ತು ಪಂದ್ಯಗಳಿಂದ 36 ವಿಕೆಟ್‌ ಪಡೆದಿದ್ದಾರೆ. ಈ ಸಲದ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದ್ದಾರೆ. ವಿನಯ್‌ ಕುಮಾರ್‌ (41) ಮತ್ತು ಎಸ್‌. ಅರವಿಂದ್‌ (39) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

‘ನಮ್ಮ ತಂಡದ ಪ್ರತಿ ಆಟಗಾರನಿಗೂ ರಾಷ್ಟ್ರೀಯ ತಂಡದಲ್ಲಿ ಆಡಬೇಕೆನ್ನುವ ಕನಸಿದೆ. ಆದ್ದರಿಂದ ಆರೋಗ್ಯಕರ ಪೈಪೋಟಿಯಿದೆ. ಈ ಸಲದ ಟೂರ್ನಿಯಲ್ಲಿ ಪಡೆದ ಪ್ರತಿ ಗೆಲುವುಗಳು ಸದಾ ಸ್ಮರಣೀಯ. ಅದರಲ್ಲೂ ದೆಹಲಿಯಲ್ಲಿ ರೈಲ್ವೇಸ್ ಎದುರು ಪಡೆದ ಗೆಲುವಂತೂ ಮರೆಯಲು ಸಾಧ್ಯವಿಲ್ಲ. ಕೊರೆಯುವ ಚಳಿಯ ನಡುವೆಯೂ ಗೆದ್ದಿದ್ದು ಯಾವತ್ತಿಗೂ ಮರೆಯಲಾಗದು’ ಎಂದು 25 ವರ್ಷದ ಮಿಥುನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.