ADVERTISEMENT

ಐಸಿಸಿ ರ‍್ಯಾಂಕಿಂಗ್‌: ಅಗ್ರಸ್ಥಾನಕ್ಕೆ ಮರಳಿದ ವಿರಾಟ್‌ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 18:35 IST
Last Updated 23 ಆಗಸ್ಟ್ 2018, 18:35 IST
   

ಬೆಂಗಳೂರು: ಟ‌್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ ಮೂರು ರನ್‌ಗಳಿಂದ ಶತಕ ತಪ್ಪಿಸಿಕೊಂಡಿದ್ದ ಕೊಹ್ಲಿ ಎರಡನೇ ಇನಿಂಗ್ಸ್‌ನಲ್ಲಿ 103 ರನ್‌ಗಳಿಸಿ ಒಟ್ಟು 200 ರನ್‌ ಕಲೆ ಹಾಕಿದ್ದರು. ಇದು ಅಗ್ರ ಸ್ಥಾನಕ್ಕೆ ಮರಳಲು ನೆರವಾಯಿತು.

ಸದ್ಯ ತಮ್ಮ ಖಾತೆಯಲ್ಲಿ ಒಟ್ಟು 937 ರೇಟಿಂಗ್‌ ಪಾಯಿಂಟ್‌ಗಳನ್ನು ಹೊಂದಿರುವ ಅವರು ಒಟ್ಟಾರೆ ಅತಿಹೆಚ್ಚು ಪಾಯಿಂಟ್ಸ್‌ ಕಲೆಹಾಕಿದವರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಸರಣಿಗೂ ಮುನ್ನ ಕೊಹ್ಲಿ ಖಾತೆಯಲ್ಲಿ 903 ಪಾಯಿಂಟ್ಸ್‌ಗಳಿದ್ದವು.

ADVERTISEMENT

ಮೊದಲ ಪಂದ್ಯದಲ್ಲೂ 200 (151, 49)ರನ್‌ ಕಲೆ ಹಾಕಿದ್ದ ಕೊಹ್ಲಿ, ಬರೋಬ್ಬರಿ 31 ಪಾಯಿಂಟ್ಸ್‌ ಜೇಬಿಗಿಳಿಸಿ ಅಗ್ರಸ್ಥಾನದಲ್ಲಿದ್ದ ಸ್ಟೀವ್‌ ಸ್ಮಿತ್‌ ಅವರನ್ನು ಹಿಂದಿಕ್ಕಿದ್ದರು. ಎರಡನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಕಾರಣ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದಿದ್ದರು.

ಸದ್ಯ 12 ತಿಂಗಳ ನಿಷೇಧ ಶಿಕ್ಷೆ ಅನುಭವಿಸುತ್ತಿರುವ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌(929), ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌(847) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಉಳಿದಂತೆ ರ‍್ಯಾಂಕಿಂಗ್‌ ಪಟ್ಟಿಯಲ್ಲಿಅಗ್ರ ಹತ್ತರೊಳಗೆ ಕಾಣಿಸಿಕೊಂಡಿರುವ ಭಾರತದ ಆಟಗಾರ ಚೇತೇಶ್ವರ ಪೂಜಾರ ಮಾತ್ರ. 763 ಪಾಯಿಂಟ್ಸ್‌ ಹೊಂದಿರುವ ಅವರು ಆರನೇ ಸ್ಥಾನದಲ್ಲಿದ್ದಾರೆ. ಅಜಿಂಕ್ಯಾ ರಹಾನೆ ಹಾಗೂ ಶಿಖರ್‌ ಧವನ್‌ ಕ್ರಮವಾಗಿ 19 ಮತ್ತು 22ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ ವೇಗಿಜೇಮ್ಸ್‌ ಆ್ಯಂಡರ್ಸನ್‌(899) ಹಾಗೂ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ(882) ಹಾಗೂ ಭಾರತದ ರವೀಂದ್ರ ಜಡೇಜಾ(840) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.

ಏಕದಿನ ಕ್ರಿಕೆಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ಪಟ್ಟಿಯಲ್ಲಿಯೂ ಕೊಹ್ಲಿ ಆಗ್ರ ಸ್ಥಾನದಲ್ಲಿದ್ದಾರೆ. ಈ ಮಾದರಿಯಲ್ಲಿ 911 ಪಾಯಿಂಟ್ಸ್‌ ಹೊಂದಿರುವ ಅವರು ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್‌ ಅಜಂ(825) ಅವರಿಗಿಂತ 86 ಪಾಯಿಂಟ್ಸ್‌ಗಳಿಂದ ಮುಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.