ADVERTISEMENT

ಡೈಮಂಡ್‌ ಲೀಗ್ | ಪೋಲ್‌ವಾಲ್ಟ್‌: ಡುಪ್ಲಾಂಟಿಸ್‌ ವಿಶ್ವದಾಖಲೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 16:15 IST
Last Updated 20 ಏಪ್ರಿಲ್ 2024, 16:15 IST
<div class="paragraphs"><p>ಡುಪ್ಲಾಂಟಿಸ್‌</p></div>

ಡುಪ್ಲಾಂಟಿಸ್‌

   

ರಾಯಿಟರ್ಸ್‌ ಚಿತ್ರ

ಷೀಮೆನ್‌ (ಚೀನಾ): ಸ್ವೀಡನ್‌ನ ಅರ್ಮಾಂಡ್‌ ಡುಪ್ಲಾಂಟಿಸ್‌, ಈ ವರ್ಷದ ಡೈಮಂಡ್‌ ಲೀಗ್ ಕೂಟದ ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ನೂತನ ವಿಶ್ವ ದಾಖಲೆ ಸ್ಥಾಪಿಸಿದರು. ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 6.24 ಮೀ. ಎತ್ತರಕ್ಕೆ ಜಿಗಿದು ತಮ್ಮದೇ ದಾಖಲೆಯನ್ನು ಸುಧಾರಿಸಿದರು.

ADVERTISEMENT

ಅವರು ವಿಶ್ವ ದಾಖಲೆ ಸ್ಥಾಪಿಸುತ್ತಿರುವುದು ಎಂಟನೇ ಬಾರಿ. ಕೂಟಕ್ಕೆ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ 24 ವರ್ಷದ ಡುಪ್ಲಾಂಟಿಸ್‌, ‘ನಾನು ನನ್ನ ಮೇಲೆ ಯಾವುದೇ ಮಿತಿ ಹೇರಿಲ್ಲ. ಯಾವುದೇ ಸಂದರ್ಭದಲ್ಲೂ ದಾಖಲೆಗೆ ಸಮರ್ಥನಿದ್ದೇನೆ’ ಎಂದು ಹೇಳಿದ್ದರು.

ಒಲಿಂಪಿಕ್ ಚಾಂಪಿಯನ್‌ ಮತ್ತು ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಡುಪ್ಲಾಂಟಿಸ್‌ ಈ ಹಿಂದಿನ (6.23 ಮೀ.) ದಾಖಲೆಯನ್ನು  ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಯುಜೆನ್‌ನಲ್ಲಿ ಸ್ಥಾಪಿಸಿದ್ದರು.

ಅಮೆರಿಕದ ಸ್ಯಾಮ್‌ ಕೆಂಡ್ರಿಕ್ಸ್‌ 5.82 ಮೀ. ಜಿಗಿದು ಎರಡನೇ ಸ್ಥಾನ ಪಡೆದರೆ, ಚೀನಾದ ಹುವಾಂಗ್‌ ಬೊಕಾಯ್ 5.72 ಮೀ. ನೊಡನೆ ಮೂರನೇ ಸ್ಥಾನ ಗಳಿಸಿದರು.

ಕ್ರಿಸ್ಟಿಯನ್‌ ಕೋಲ್ಮನ್‌ ಅವರು ಪುರುಷರ 100 ಮೀ. ಓಟವನ್ನು 10.13 ಸೆ.ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು.

5,000 ಮೀ. ಓಟದಲ್ಲಿ ವಿಶ್ವದಾಖಲೆ ಹೊಂದಿರುವ ಇಥಿಯೋಪಿಯಾದ ಗುದಾಫ್‌ ಸೆಗೈ ಅವರು ಮಹಿಳೆಯರ 1,500 ಮೀ. ಓಟದಲ್ಲಿ ಮೂರನೇ ಶ್ರೇಷ್ಠ ಕಾಲಾವಧಿಯೊಡನೆ (3ನಿ.50.30ಸೆ.) ಚಿನ್ನ ಗೆದ್ದರು. ಅದೇ ದೇಶದ ಬಿರ್ಕೆ ಹೇಲೊಮ್ ಮತ್ತು ವರ್ಕ್ನೇಶ್ ಮೆಸೆಲೆ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ತೀವ್ರ ಹೋರಾಟದಿಂದ ಕೂಡಿದ್ದ ಮಹಿಳೆಯರ 200 ಮೀ. ಓಟದಲ್ಲಿ ಆಸ್ಟ್ರೇಲಿಯಾದ 19 ವರ್ಷದ ಓಟಗಾರ್ತಿ ಟೋರಿ ಲೂಯಿಸ್‌ ಅಚ್ಚರಿಯೆಂಬಂತೆ ಚಿನ್ನ ಗೆದ್ದರು. 100 ಮೀ. ವಿಶ್ವ ಚಾಂಪಿಯನ್‌ ಶಾ‘ಕಾರಿ ರಿಚರ್ಡ್ಸನ್ ಎರಡನೇ ಸ್ಥಾನಕ್ಕೆ ಸರಿದರು. ಟೋರಿ 22.96 ಸೆ. ತೆಗೆದುಕೊಂಡರೆ, ಶಾ‘ಕಾರಿ 22.99 ಸೆ. ಬಳಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.