ADVERTISEMENT

ಸೈನಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ

ವಿದ್ಯಾ ಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST
ಸೈನಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ
ಸೈನಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ   

ಭಾರತ ಸರ್ಕಾರವು ಮಾಜಿ ಸೈನಿಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆ’ (ಪಿಎಂಎಂಎಸ್‌)ಯನ್ನು ಆರಂಭಿಸಿದೆ.

2006–07ನೇ ಸಾಲಿನಿಂದ ಈ ಸ್ಕಾಲರ್‌ಶಿಪ್‌ ನೀಡಲಾಗುತ್ತಿದೆ. ವಾರ್ಷಿಕ 24 ಸಾವಿರ ರೂಪಾಯಿ ಶಿಷ್ಯವೇತನವನ್ನು ನೀಡಲಾಗುವುದು. ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ಮಾಜಿಸೈನಿಕರು, ಮಾಜಿ ಕರಾವಳಿಪಡೆ ಯೋಧರು ಮತ್ತು ವಿಧವೆಯರ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.

ಅರ್ಹತೆಗಳು: ಅಭ್ಯರ್ಥಿಗಳು ಪಿಯುಸಿ, ಡಿಪ್ಲೊಮಾ ಮತ್ತು ಪದವಿಯಲ್ಲಿ ಶೇ 60 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪ್ರಸಕ್ತ ಸಾಲಿನಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಹಾಗೂ ಮ್ಯಾನೆಜ್‌ಮೆಂಟ್‌ ಕೋರ್ಸ್‌ಗಳಲ್ಲಿ ಓದುತ್ತಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. (ಎಂಸಿಎ, ಎಂಬಿಎ ಸಂಯೋಜಿತ ಕೋರ್ಸ್‌ಗಳನ್ನು ಹೊರತುಪಡಿಸಿ)

ಬಿಇ, ಬಿಟೆಕ್‌, ಬಿಆರ್ಕ್‌, ಎಂಬಿಬಿಎಸ್‌, ಬಿಡಿಎಸ್‌, ಬಿಎಎಂಎಸ್‌, ಬಿಎಚ್‌ಎಂಎಸ್‌, ಬಿಎಸ್‌ಎಂಎಸ್‌, ಬಿಯುಎಂಎಸ್‌, ಬಿಎಸ್ಸಿ ಬಿಪಿಟಿ, ಬಿಫಾರ್ಮಾ, ಬಿಎಸ್ಸಿ ನರ್ಸಿಂಗ್‌, ಜಿಎನ್‌ಎಂ, ಬಿಎನ್‌ವೈಎಸ್‌, ಫಾರ್ಮಾ ಡಿ, ಎಂಬಿಎ, ಬಿಬಿಎಂ, ಬಿಸಿಎ, ಎಂಸಿಎ, ಬಿಪ್ಲಾನ್‌, ಬಿಎಸ್ಸಿ ಬಯೋಟೆಕ್ನಾಲಜಿ, ಬಿಇಡಿ, ಎಲ್‌ಎಲ್‌ಬಿ, ಬಿಎಂಸಿ, ಎಚ್‌ಎಂ, ಬಿಪಿಇಡಿ, ಬಿಎಫ್‌ಎಸ್ಸಿ, ಬಿಎಫ್‌ಎ, ಬಿಎಸ್ಸಿ ಅಗ್ರಿ, ಬಿಎಫ್‌ಟಿ, ಬಿಎಸ್ಸಿ ಮೈಕ್ರೋ ಬಯೋಲಾಜಿ ಈ ಕೋರ್ಸ್‌ಗಳಿಗೆ ದಾಖಲಾದವರು ಮಾತ್ರ ಅರ್ಜಿ ಸಲ್ಲಿಸಬೇಕು.

ಅವಧಿ/ ವೇತನ: ವಿದ್ಯಾರ್ಥಿಗಳ ಕೋರ್ಸ್‌ ಮುಕ್ತಾಯವಾಗುವವರೆಗೂ ಸ್ಕಾಲರ್‌ಶಿಪ್‌ ನೀಡಲಾಗುವುದು. ಆದಾಗ್ಯೂ ಪ್ರತಿವರ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಮಾಸಿಕ 2250 ರೂಪಾಯಿಗಳು ಹಾಗೂ ವಿದ್ಯಾರ್ಥಿಗಳಿಗೆ 2000 ರೂಪಾಯಿ ನೀಡಲಾಗುವುದು.  ಆಯ್ಕೆ ವಿಧಾನ/ಸ್ಕಾಲರ್‌ಶಿಪ್‌ಗಳ ಸಂಖ್ಯೆ ಒಟ್ಟು 4000 ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುವುದು. ಇದರಲ್ಲಿ ಮಾಜಿ ಸೈನಿಕರ ಶ್ರೇಣಿ (ಕೆಟಗರಿ) ಮೀಸಲಾತಿ ಅನ್ವಯ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲಾಗುವುದಿಲ್ಲ. 4000 ಸ್ಕಾಲರ್‌ಶಿಪ್‌ಗಳಿಗೆ (ಮೀಸಲಾತಿ ಸೇರಿ) ನಾಲ್ಕು ಸಾವಿರ ವಿದ್ಯಾರ್ಥಿಗಳ ರ್‌್ಯಾಂಕ್‌ ಪಟ್ಟಿಯನ್ನು ತಯಾರಿಸಲಾಗುತ್ತದೆ. ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಯನ್ನು ನಿಗದಿತ ನಮೂನೆ ಮುಖಾಂತರವೇ ಸಲ್ಲಿಸಬೇಕು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ನಿಗದಿತ ನಮೂನೆಯ ಅರ್ಜಿಗಳನ್ನು www.desw.gov.in ಈ ವೆಬ್‌ವಿಳಾಸದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ನಿಖರವಾಗಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿ ಪತ್ರಗಳನ್ನು ದೃಡೀಕರಿಸಿ (ಅಟಸ್ಟೆಡ್‌) ಲಗತ್ತಿಸಬೇಕು.

ಮಾಜಿ ಯೋಧರ ಪ್ರಮಾಣ ಪತ್ರ (ಕೆಟಗರಿ ಸಹಿತ), ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಪ್ರಾಂಶುಪಾಲರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ, ಡಿಪ್ಲೊಮಾ, ಪದವಿಯ ಅಂಕಪಟ್ಟಿಗಳು, ಬ್ಯಾಂಕ್‌ ಪಾಸ್‌ ಬುಕ್‌ನ ಜೆರಾಕ್ಸ್‌ ಪ್ರತಿ ಮತ್ತು ಒಂದು ಚೆಕ್‌ ಹಾಳೆ. ಇವುಗಳನ್ನು  ಅರ್ಜಿಯೊಂದಿಗೆ ಲಗತ್ತಿಸಬೇಕು.

ಭರ್ತಿ ಮಾಡಿದ ಅರ್ಜಿಗಳನ್ನು ಸ್ಥಳೀಯ ಆರ್‌ಎಸ್‌ಬಿ ಅಥವಾ ಕೋಸ್ಟ್‌ಗಾರ್ಡ್‌ ಕಚೇರಿಯಲ್ಲಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯುವುದು ಕಡ್ಡಾಯ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಗೆಜೆಟೆಡ್‌ ಅಧಿಕಾರಿಗಳಿಂದ ದಾಖಲಾತಿ ಪತ್ರಗಳನ್ನು ದೃಡೀಕರಿಸಬೇಕು. ದೃಡೀಕರಿಸಿರದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಆಯ್ಕೆಯಾಗುವ ವಿದ್ಯಾರ್ಥಿಗಳ ಬ್ಯಾಂಕ್‌ ಆಕೌಂಟ್‌ಗೆ ಹಣ ಸಂದಾಯವಾಗುವುದು. ಸ್ಕಾಲರ್‌ಶಿಪ್‌ ಪಡೆದ ವಿದ್ಯಾರ್ಥಿಗಳು ಪ್ರತಿವರ್ಷ ಶೇ 50ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಅದಕ್ಕಿಂತ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ಅನ್ನು ನಿಲ್ಲಿಸಲಾಗುವುದು.

ಅಕೌಂಟ್‌ ಮಾಹಿತಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಥವಾ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬೇಕು. ಇಸಿಎಸ್‌ (electronic clearance system) ಅಥವಾ ಕೋರ್‌ ಬ್ಯಾಂಕಿಂಗ್‌ ಸೌಲಭ್ಯವಿರಬೇಕು. ಇದರಿಂದ ಆನ್‌ಲೈನ್‌ ಮುಖಾಂತರ ಹಣ ಸಂದಾಯ ಮಾಡಲು ಸುಲಭವಾಗುತ್ತದೆ. ಮೈನರ್‌ ಆಕೌಂಟ್‌ ಹೊಂದಿರುವವರು ಮೇಜರ್‌ ಅಕೌಂಟ್‌ಗೆ ಖಾತೆ ವರ್ಗಾವಣೆ ಮಾಡುವುದು ಕಡ್ಡಾಯ.

ಸ್ಥಳೀಯ ಸೇನಾ ಕಚೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್‌ 30 ಆಗಿರುತ್ತದೆ.
ಅರ್ಜಿ ಹಾಗೂ ದಾಖಲಾತಿ ಪತ್ರಗಳನ್ನು ಇಟ್ಟಿರುವ ಎನ್‌ವಲಪ್‌ ಕವರ್‌ ಮೇಲೆ “Prime Minister’s Scholarship Scheme for the Academic Year 2014–15 ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗೆ 011–26715250 ಈ ದೂರವಾಣಿ ಸಂಖ್ಯೆ  ಅಥವಾ jdpmscholarshipksb@gmail.com. ಇಮೇಲ್‌ ಮೂಲಕ ಸಂಪರ್ಕಿಸಬಹುದು. ವೆಬ್‌ಸೈಟ್‌: www.desw.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.