ADVERTISEMENT

ಅಶ್ಲೀಲ ಜಾಲತಾಣಕ್ಕೆ ಶಿಮ್ಯಾಟಿಕ್ಸ್‌ ಕಡಿವಾಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2015, 19:30 IST
Last Updated 7 ಏಪ್ರಿಲ್ 2015, 19:30 IST

ಅಶ್ಲೀಲ ಚಿತ್ರಗಳನ್ನು, ವಿಡಿಯೊಗಳನ್ನು, ಸಿನಿಮಾಗಳ ತುಣುಕುಗಳನ್ನು ಪ್ರಸಾರ ಮಾಡುವ ಮೂಲಕ ತನ್ನದೇ ಆದ ಗ್ರಾಹಕ/ವೀಕ್ಷಕ ವಲಯವನ್ನು ಸೃಷ್ಟಿಸಿಕೊಂಡಿರುವ ಅಶ್ಲೀಲ ಜಾಲತಾಣಗಳ ಪಾಲಿಗೆ ಕಹಿ ಸುದ್ದಿಯೊಂದು ಇಲ್ಲಿದೆ.

ರಾಷ್ಟ್ರೀಯ ಸೈಬರ್‌ ಸುರಕ್ಷೆ ಮತ್ತು ಭದ್ರತಾ ಮಾನದಂಡ ಸಂಸ್ಥೆಯು ‘ಶಿಮ್ಯಾಟಿಕ್ಸ್‌’ ಎಂಬ ತಂತ್ರಜ್ಞಾನದ ನೆರವಿನಿಂದ ಸರ್ಕಾರ ಅಶ್ಲೀಲ ಜಾಲತಾಣಗಳನ್ನು ನಿರ್ಬಂಧಿಸುವ ಎಲ್ಲಾ ಸಾಧ್ಯತೆಗಳು ಈಗ ನಿಚ್ಚಳವಾಗಿವೆ.  ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಅಶ್ಲೀಲ ಜಾಲತಾಣಗಳ ವೀಕ್ಷಣೆಯ ಚಟವೂ ಕಾರಣ ಎಂದು ಈಗಾಗಲೇ ಭಾರಿ ವಿರೋಧ ವ್ಯಕ್ತವಾಗಿದೆ.

ಇದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ, ಒಟ್ಟು ಮೂರು ಕೋಟಿ ಅಶ್ಲೀಲ ಜಾಲತಾಣಗಳಿವೆ ಎಂಬುದು. ಇವುಗಳ ‍ಕಾರ್ಯಾಚರಣೆಯನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಲು ಸಾಧ್ಯವೇ? ಎಂದು ಸುಪ್ರೀಂ ಕೋರ್ಟ್‌ ಕೂಡಾ ಇತ್ತೀಚೆಗೆ ಪ್ರಶ್ನಿಸಿತ್ತು. ಇಂತಹ ಜಾಲತಾಣಗಳನ್ನು ನಿರ್ಬಂಧಿಸಲು ಅಗತ್ಯವಿದ್ದ ‘ಶಿಮ್ಯಾಟಿಕ್ಸ್‌’ ಈಗ ಸಿದ್ಧವಾಗಿದೆ. ಇವುಗಳನ್ನು ಸರ್ಕಾರಕ್ಕೆ ಒಪ್ಪಿಸುವುದೊಂದೇ ಬಾಕಿ. ಈ ಜಾಲತಾಣಗಳನ್ನು ಬ್ಲಾಕ್‌ ಮಾಡಲು ಮೂರು ತಿಂಗಳು ಬೇಕಾಗುತ್ತದೆ  ಎನ್ನುತ್ತಾರೆ ಎನ್‌ಸಿಎಸ್ಎಸ್ಎಸ್‌ನ ಹೆಚ್ಚುವರಿ ಪ್ರಧಾನ ನಿರ್ದೇಶಕ ಡಾ.ಎಸ್. ಅಮರಪ್ರಸಾದ್‌ ರೆಡ್ಡಿ.

ತಮಿಳುನಾಡಿನ ಕೃಷ್ಣಗಿರಿ ಬಳಿಯ ಕಲಾಸಲಿಂಗಂ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಪ್ರಥಮ ರಾಷ್ಟ್ರೀಯ ಸೈಬರ್‌ ರಕ್ಷಣೆ ಸಂಶೋಧನಾ ಕೇಂದ್ರದ ಉದ್ಘಾಟನೆ ವೇಳೆ ಶಿಮ್ಯಾಟಿಕ್‌ ಕುರಿತು ಚರ್ಚೆ ನಡೆಯಿತು. ಅಶ್ಲೀಲ ವಿಡಿಯೊ/ಚಿತ್ರ ವೀಕ್ಷಣೆಯ ಚಟದಿಂದಾಗಿ ಮಕ್ಕಳ ಮೇಲಿನ ಎಷ್ಟೋ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಕಾರಣ ಎಂಬುದು ತನಿಖೆಯಿಂದ ಪತ್ತೆಯಾಗಿತ್ತು.

ಪ್ರತಿವರ್ಷ ಸುಮಾರು 7200 ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತದೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಬಹುತೇಕ ಬಹಿರಂಗವಾಗದೇ ಉಳಿಯುವ ಸಾಧ್ಯತೆಯೇ ಹೆಚ್ಚು ಎಂಬ ಅಂಶವನ್ನೂ ರೆಡ್ಡಿ ಅವರು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.