ADVERTISEMENT

ಗಣಿತ ಸಮಸ್ಯೆ ಬಿಡಿಸಲು ಆ್ಯಪ್‌ ನೆರವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 19:30 IST
Last Updated 31 ಜನವರಿ 2017, 19:30 IST
ಗಣಿತ ಸಮಸ್ಯೆ ಬಿಡಿಸಲು ಆ್ಯಪ್‌ ನೆರವು
ಗಣಿತ ಸಮಸ್ಯೆ ಬಿಡಿಸಲು ಆ್ಯಪ್‌ ನೆರವು   

ಬಹುತೇಕ ಶಾಲಾ ಮಕ್ಕಳಿಗೆ ಗಣಿತ ಎಂದರೆ ದೊಡ್ಡ ತಲೆನೋವು. ಗಣಿತದ ಸೂತ್ರಗಳನ್ನು ಬಿಡಿಸುತ್ತ ಉತ್ತರ ಕಂಡುಕೊಳ್ಳುವುದು ಅನೇಕರ ಪಾಲಿಗೆ ಒಗಟಾಗಿಯೇ ಕಾಡುತ್ತದೆ. ಗಣಿತದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಹೊಸ ಕೃತಕ ಬುದ್ಧಿಮತ್ತೆಯು ವಿದ್ಯಾರ್ಥಿಗಳ  ನೆರವಿಗೆ ಬಂದಿದೆ.  ಹೋಂ ವರ್ಕ್‌ಗೆ ನೆರವಾಗುವ ಪಾಲಕರಿಗೂ ಇದು ಉಪಯುಕ್ತವಾಗಿದೆ.

ಗಣಿತ ಸಮಸ್ಯೆಗಳನ್ನು ಬಗೆಹರಿಸುವ ಹೋಂ ವರ್ಕ್‌ ತಲೆನೋವನ್ನು  ಸುಲಭವಾಗಿ ಬಗೆಹರಿಸಲು ಮೊಬೈಲ್‌ನ ಹೊಸ ಆ್ಯಪ್‌ ನೆರವಾಗಲಿದೆ. ಬೀಜಗಣಿತದ ಸಮೀಕರಣಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಇದು ವಿದ್ಯಾರ್ಥಿಗಳ ಉಪಯೋಗಕ್ಕೆ ಬರಲಿದೆ.

ಅಮೆರಿಕದ ಸ್ಟಾರ್ಟ್‌ಅಪ್‌  ಸಾಕ್ರೆಟಿಸ್‌, ಈ ಆ್ಯಪ್‌ (Socratic)  ಅಭಿವೃದ್ಧಿಪಡಿಸಿದೆ. ಈ ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸುವ ತಂಡದ  ಸದಸ್ಯರಲ್ಲಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾಗಿರುವ ಭಾರತದ ಸಂಜಾತ  ಶ್ರೇಯಾಂಶ ಬನ್ಸಾಲಿ  ಅವರೂ ಒಬ್ಬರಾಗಿದ್ದಾರೆ. ಸ್ಮಾರ್ಟ್‌ಫೋನ್‌ ಮೂಲಕ ಗಣಿತದ ಸಮಸ್ಯೆಯ ಛಾಯಾಚಿತ್ರ  ತೆಗೆಯುತ್ತಿದ್ದಂತೆ , ಅದಕ್ಕೆ ಯಾವ ರೀತಿ ಉತ್ತರ ಕಂಡುಕೊಳ್ಳಬೇಕು ಎಂಬುದನ್ನು ಈ ಆ್ಯಪ್‌ ಹಂತ ಹಂತವಾಗಿ ತಿಳಿಸಲಿದೆ.  ಗಣಿತದ ಸಮಸ್ಯೆ ಹಿಂದಿರುವ ಪರಿಕಲ್ಪನೆ ಅರ್ಥೈಸಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಈಗ ಸಾಧ್ಯವಾಗಿದೆ.

ಬರವಣಿಗೆಯ ರೂಪದಲ್ಲಿ ಇರುವುದೂ ಸೇರಿದಂತೆ ಗಣಿತದ ಪ್ರಶ್ನೆಗಳನ್ನು ಈ ಆ್ಯಪ್‌ ಸರಾಗವಾಗಿ ಓದುತ್ತದೆ. ಆನಂತರ ಅದಕ್ಕೆ ಹಂತ ಹಂತವಾಗಿ ಪರಿಹಾರ ಒದಗಿಸುತ್ತ ವಿವರಣೆ ನೀಡಲಿದೆ. ಈ ಮೂಲಕ ಎಲ್ಲ ಬಗೆಯ ಗಣಿತದ ಪ್ರಶ್ನೆಗಳಿಗೆ ಉತ್ತರ ಒದಗಿಸಲಿದೆ.

ಈ ಆ್ಯಪ್‌ ಅಭಿವೃದ್ಧಿಪಡಿಸಲು ತಂತ್ರಜ್ಞರು  ಗಣಿತಕ್ಕೆ ಸಂಬಂಧಿಸಿದ ಅಗಣಿತ ಪ್ರಶ್ನೆಗಳನ್ನು ಪರಿಗಣಿಸಿ, ಅವುಗಳಿಗೆ ಉತ್ತರ ಕಂಡುಕೊಂಡಿದ್ದಾರೆ. ಈ ಉತ್ತರಗಳನ್ನು ಆಮೂಲಾಗ್ರವಾಗಿ ಪರಾಮರ್ಶಿಸಲಾಗಿದೆ. ಈ ಉತ್ತರಗಳನ್ನು ಆಧರಿಸಿ ಸಮಸ್ಯೆಗಳನ್ನು ವರ್ಗೀಕರಣ ಮಾಡಲಾಗಿದೆ. ಈ ಪರಿಹಾರ ಸೂತ್ರಗಳಿಗೆ ಸೂಕ್ತ ವಿವರಣೆಯೂ ಇದೆ.

ಗಣಿತದ ಸಮಸ್ಯೆಗಳ ಪರಿಹಾರ ಕುರಿತು ತಂತ್ರಜ್ಞರ ತಂಡವು ಕ್ರಮಾವಳಿಯನ್ನೂ ಸಿದ್ಧಪಡಿಸಿದೆ. ಇದರಿಂದ ಆ್ಯಪ್‌ನಲ್ಲಿ ಗಣಿತದ ಸಮಸ್ಯೆಗೆ ಹಂತ ಹಂತವಾಗಿ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿದೆ.  ಗಣಿತದ ಸೂತ್ರಗಳನ್ನು ಬಿಡಿಸುವ ಕ್ರಮಾವಳಿಯು ಶಿಕ್ಷಕರು ವಿದ್ಯಾರ್ಥಿಗಳಿಗೆ ಅರ್ಥವಾಗುವ ಬಗೆಯಲ್ಲಿ ಬೋಧಿಸುವ ರೀತಿಯಲ್ಲಿಯೇ ಇರಲಿದೆ. ಇದರಿಂದ ವಿದ್ಯಾರ್ಥಿಗಳು ಸುಲಭವಾಗಿ ಗಣಿತ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಾಗಲಿದೆ.

ಗಣಿತದ ಸಮಸ್ಯೆಗಳ ಕುರಿತು ಗ್ರಾಫ್‌, ವಿಡಿಯೊ ಮತ್ತು ವ್ಯಾಖ್ಯಾನಗಳೂ ಇರುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಆಳವಾಗಿ ತಿಳಿದುಕೊಳ್ಳಲು ನೆರವಾಗಲಿದೆ.ಗಣಿತದ ಸಮಸ್ಯೆಗಳನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ ಉತ್ತರ ಕಂಡುಕೊಳ್ಳಲು ಮತ್ತು ಇದೇ ಬಗೆಯ ಇತರ ಪ್ರಶ್ನೆಗಳನ್ನೂ ತಮ್ಮ ಸ್ವಂತ ಬಲದಿಂದ ಸುಲಭವಾಗಿ ಬಗೆಹರಿಸಿಕೊಳ್ಳಲು ಈ ಆ್ಯಪ್‌ ನೆರವಾಗಲಿದೆ. ಗಣಿತದ ಸಮಸ್ಯೆಗಳಿಗೆ ಸ್ಮಾರ್ಟ್‌ಫೋನ್‌ನಲ್ಲಿ ಉಚಿತವಾಗಿ  ಉತ್ತರ ಕಂಡುಕೊಳ್ಳಲು ಈಗ ಸಾಧ್ಯವಾಗಿದೆ ಎಂದು ಬನ್ಸಾಲಿ ಹೇಳುತ್ತಾರೆ.

ವಿಜ್ಞಾನ, ಇತಿಹಾಸ ಮತ್ತಿತರ ವಿಷಯಗಳಲ್ಲಿ  ಶಾಲಾ ಮಕ್ಕಳಲ್ಲಿ ಉದ್ಭವವಾಗುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ರೀತಿಯಲ್ಲಿ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದರೂ, ಗಣಿತ ವಿಷಯವನ್ನು ಹೆಚ್ಚು ಜಾಣ್ಮೆಯಿಂದ ಸಿದ್ಧಪಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.