ADVERTISEMENT

ಲಿಂಕ್‌ ತೆರೆಯಲು ಆ್ಯಪ್‌ ನೆರವು

ದಯಾನಂದ ಎಚ್‌.ಎಚ್‌.
Published 1 ಮಾರ್ಚ್ 2017, 19:30 IST
Last Updated 1 ಮಾರ್ಚ್ 2017, 19:30 IST

ಸಾಮಾಜಿಕ ಜಾಲತಾಣಗಳ ಪ್ರಭಾವ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ಏನೇ ಮಾಡಿದರೂ ಅದು ಮೊದಲು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಆಗಬೇಕು, ಟ್ವಿಟರ್‌ನಲ್ಲಿ ಟ್ವೀಟ್‌ ಆಗಬೇಕು, ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಆಗಬೇಕೆಂದು ಎಲ್ಲರ ಮನಸ್ಸು ಬಯಸುತ್ತದೆ.

ವೈಯಕ್ತಿಕ ಪೋಸ್ಟ್‌ಗಳು ಮಾತ್ರವಲ್ಲ ಪತ್ರಿಕೆಗಳ ಸುದ್ದಿ, ಫೋಟೊ, ವಿಡಿಯೊಗಳೂ ಈಗ ಸಾಮಾಜಿಕ ಜಾಲತಾಣಗಳ ಮೂಲಕವೇ ಹರಿದಾಡುತ್ತಿರುವುದು. ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಓದುವುದು, ವಿಡಿಯೊ ನೋಡುವುದು ಕೂಡಾ ಹೆಚ್ಚಾಗಿದೆ. ಕೇವಲ ಸುದ್ದಿಯ ಅಥವಾ ಯೂಟ್ಯೂಬ್‌ ವಿಡಿಯೊದ ಒಂದು ಲಿಂಕ್‌ ಅನ್ನು ಫೇಸ್‌ಬುಕ್‌ ಇಲ್ಲವೇ ಟ್ವಿಟರ್‌ಗೆ ಶೇರ್ ಮಾಡಿದರೆ ಕ್ಷಣಮಾತ್ರದಲ್ಲಿ ನೂರಾರು ಮಂದಿ ಅದನ್ನು ವೀಕ್ಷಿಸುವ ಕಾಲ ಇದು. ಅಲ್ಲದೆ ಈ ಲಿಂಕ್‌ಗಳನ್ನು ಸ್ಮಾರ್ಟ್‌ಫೋನ್‌ಗಳ ಮೂಲಕ ತೆರೆಯುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವ ಲಿಂಕ್‌ ತೆರೆಯುವಲ್ಲಿ ಕೆಲವರಿಗೆ ಸಣ್ಣಪುಟ್ಟ ತೊಂದರೆಯಾಗುತ್ತದೆ, ಅದು ಬ್ರೌಸರ್‌ ಸಮಸ್ಯೆ.

ಸ್ಮಾರ್ಟ್‌ಫೋನ್‌ ಮೂಲಕ ಸಾಮಾಜಿಕ ಜಾಲತಾಣಗಳ ಲಿಂಕ್‌ ತೆರೆದಾಗ ಸಾಮಾನ್ಯವಾಗಿ ಆ ಜಾಲತಾಣದ ಡಿಫಾಲ್ಟ್‌ ಬ್ರೌಸರ್‌ನಿಂದ ಆ ಲಿಂಕ್‌ ತೆರೆದುಕೊಳ್ಳುತ್ತದೆ. ಆದರೆ, ಹೀಗೆ ಲಿಂಕ್‌ ತೆರೆದುಕೊಳ್ಳಲು ಹಲವರ ಮೊಬೈಲ್‌ನಲ್ಲಿ ತುಸು ಹೆಚ್ಚೇ ಸಮಯ ಹಿಡಿಯುತ್ತದೆ. ಉದಾಹರಣೆಗೆ, ಫೇಸ್‌ಬುಕ್‌ಗೆ ಶೇರ್‌ ಆಗಿರುವ ಯೂಟ್ಯೂಬ್‌ ವಿಡಿಯೊ ಒಂದನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ತೆರೆಯಲು ಬಯಸಿದರೆ ಲಿಂಕ್‌ ಕ್ಲಿಕ್‌ ಮಾಡಿದ ತಕ್ಷಣ ಅದು ಫೇಸ್‌ಬುಕ್‌ ಡಿಫಾಲ್ಟ್‌ ಬ್ರೌಸರ್‌ ಮೂಲಕ ತೆರೆದುಕೊಳ್ಳಲು ಆರಂಭಿಸುತ್ತದೆ. ಆ ಬ್ರೌಸರ್‌ ಯೂಟ್ಯೂಬ್‌ಗೆ ಸಂಪರ್ಕ ಪಡೆದು ಬಳಿಕ ನೀವು ಕ್ಲಿಕ್‌ ಮಾಡಿದ ವಿಡಿಯೊ ತೆರೆದುಕೊಳ್ಳುತ್ತದೆ.

ಹೀಗೆ ಲಿಂಕ್‌ ತೆರೆದುಕೊಳ್ಳಲು ತುಸು ಹೆಚ್ಚೇ ಎನಿಸುವಷ್ಟು ಸಮಯ ತೆಗೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಆ್ಯಪ್‌ಗಳು ನಿಮ್ಮ ನೆರವಿಗೆ ಬರಬಲ್ಲವು. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿರುವ ಲಿಂಕ್‌ ತೆರೆಯಬೇಕಾದರೆ ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಆ್ಯಪ್‌ಗಳ ಮೂಲಕ ತೆರೆಯಿರಿ. ಇದರಿಂದ ಆ ಲಿಂಕ್‌ ಬೇಗನೆ ತೆರೆದುಕೊಳ್ಳುತ್ತದೆ.

ಉದಾಹರಣೆಗೆ, ಫೇಸ್‌ಬುಕ್‌ನಲ್ಲಿ ಶೇರ್‌ ಆಗಿರುವ ಯೂಟ್ಯೂಬ್‌ ವಿಡಿಯೊ ಲಿಂಕ್‌ ಅನ್ನು ನೀವು ತೆರೆಯಬೇಕೆಂದರೆ ಆ ಲಿಂಕ್‌ ಕ್ಲಿಕ್ಕಿಸಿ. ಅದು ಡಿಫಾಲ್ಟ್‌ ಬ್ರೌಸರ್‌ನಿಂದ ತೆರೆದುಕೊಳ್ಳಲು ಮುಂದಾದಾಗ ಬಲಭಾಗದಲ್ಲಿ ಕಾಣುವ ಆಯ್ಕೆಗಳಿಗೆ ಹೋಗಿ ಅಲ್ಲಿ Open in YouTube ಎಂಬಲ್ಲಿ ಕ್ಲಿಕ್ ಮಾಡಿ. ಈಗ ಆ ಲಿಂಕ್‌ ಯೂಟ್ಯೂಬ್‌ ಮೂಲಕ ಬೇಗನೆ ತೆರೆದುಕೊಳ್ಳುತ್ತದೆ. ಇದರಿಂದ ನಿಮ್ಮ ಸಮಯ ಉಳಿಸಬಹುದು. ಅಲ್ಲದೆ ಆ್ಯಪ್‌ ಮೂಲಕ ನೀವು ಲಿಂಕ್‌ ತೆರೆಯುವುದರಿಂದ ನೀವು ಆ್ಯಪ್‌ನಲ್ಲಿ ಮಾಡಿರುವ ಸೆಟ್ಟಿಂಗ್ಸ್‌ಗೆ ಅನುಗುಣವಾದ ಗುಣಮಟ್ಟದಲ್ಲಿ ವಿಡಿಯೊ ವೀಕ್ಷಿಸಬಹುದು.

ಯೂಟ್ಯೂಬ್‌ನ ಲಿಂಕ್‌ ಮಾತ್ರವಲ್ಲ, ನೀವು ಯಾವ ಲಿಂಕ್‌ ತೆರೆಯುತ್ತಿದ್ದೀರೋ ಆ ಆ್ಯಪ್‌ ನಿಮ್ಮಲ್ಲಿದ್ದರೆ ಆಯಾ ಆ್ಯಪ್‌ ಮೂಲಕವೇ ಲಿಂಕ್‌ ತೆರೆಯಿರಿ. ಇದರಿಂದ ಲಿಂಕ್‌ ಬೇಗನೆ ತೆರೆಯುತ್ತದೆ, ಸಮಯವೂ ಉಳಿಯುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.