ADVERTISEMENT

ಸುರಕ್ಷಿತವಾಗಿರಲಿ ಡೇಟಾ

ದಯಾನಂದ ಎಚ್‌.ಎಚ್‌.
Published 17 ಮೇ 2017, 19:30 IST
Last Updated 17 ಮೇ 2017, 19:30 IST
‘ವನ್ನಾಕ್ರೈ’ ಎಂಬ ಕುತಂತ್ರಾಂಶ ಬಳಸಿಕೊಂಡು ಹ್ಯಾಕರ್‌ಗಳು ದೊಡ್ಡ ಪ್ರಮಾಣದಲ್ಲಿ ಸೈಬರ್‌ ದಾಳಿ ನಡೆಸುತ್ತಿರುವುದರಿಂದ ಡೇಟಾ ಸುರಕ್ಷತೆ ವಿಷಯ ಸದ್ಯ ಹೆಚ್ಚು ಚರ್ಚೆಯಾಗುತ್ತಿದೆ.

ವನ್ನಾಕ್ರೈ ಮೂಲಕ ಕಂಪ್ಯೂಟರ್‌ಗಳಿಗೆ ಕನ್ನ ಹಾಕುವ ಹ್ಯಾಕರ್‌ಗಳು ಆ ಕಂಪ್ಯೂಟರ್‌ನ ಎಲ್ಲಾ ಫೈಲ್‌ಗಳನ್ನೂ ಲಾಕ್‌ ಮಾಡಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಈ ಫೈಲ್‌ಗಳನ್ನು ಅವರಿಂದ ಬಿಡಿಸಿಕೊಳ್ಳಲು ಬಿಟ್‌ಕಾಯಿನ್‌ ಎಂಬ ಅಂತರ್ಜಾಲ ಕರೆನ್ಸಿಯ ಮೂಲಕ ಹ್ಯಾಕರ್‌ಗಳು ಬೇಡಿಕೆ ಇಟ್ಟಷ್ಟು ಹಣ ತೆರಬೇಕಾಗುತ್ತದೆ. ಈ ಸೈಬರ್‌ ದಾಳಿ ಬಳಿಕ, ಡೇಟಾ ಸುರಕ್ಷತೆಗೆ ಎಷ್ಟು ಗಮನ ಕೊಟ್ಟರೂ ಸಾಲದು ಎಂಬುದು ಮತ್ತೆ ಸಾಬೀತಾಗಿದೆ.
 
ಕಂಪ್ಯೂಟರ್‌ನಲ್ಲಿರುವ ಡೇಟಾ ವೈಯಕ್ತಿಕವಾಗಿರಲಿ ಅಥವಾ ಕಚೇರಿಗೆ ಸಂಬಂಧಿಸಿದ್ದಾಗಿರಲಿ ಅದರ ಸುರಕ್ಷತೆಗೆ ಗಮನ ಕೊಡಬೇಕಾದ್ದು ಅನಿವಾರ್ಯ. ಹೀಗಾಗಿ ಕಂಪ್ಯೂಟರ್‌ ಬಳಸುವವರೆಲ್ಲ ಇದರ ಬಗ್ಗೆ ಹಾಗೂ ಸೈಬರ್‌ ದಾಳಿ ಬಗ್ಗೆ ಜಾಗರೂಕರಾಗಿರಬೇಕು.
 
ಕಚೇರಿಗಳಲ್ಲಿ ಡೇಟಾ ಸುರಕ್ಷತೆಗೆ ಕಂಪೆನಿಗಳು ಸಾಕಷ್ಟು ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಂಡಿರುತ್ತವೆ. ಆದರೆ, ಎಂಥ ಸುರಕ್ಷತೆಯ ಗೋಡೆಯನ್ನೂ ಕೊರೆಯುವಂಥ ಕುತಂತ್ರವನ್ನು ಹ್ಯಾಕರ್‌ಗಳು ಕಲಿತಿರುತ್ತಾರೆ. ಹೀಗಾಗಿ ಕಚೇರಿಗಳ ಕಂಪ್ಯೂಟರ್‌ಗಳಲ್ಲಿ ವೈಯಕ್ತಿಕ ಮಾಹಿತಿಯ ಫೈಲ್‌ ಇಡುವುದು, ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಕಚೇರಿ ಮಾಹಿತಿಯ ಫೈಲ್‌ಗಳನ್ನು ಇಡುವುದು ಒಳ್ಳೆ ಅಭ್ಯಾಸವಲ್ಲ.
 
ವೈಯಕ್ತಿಕ ಹಾಗೂ ಕಚೇರಿಯ ಡೇಟಾ ನಿರ್ವಹಣೆಯ ಶಿಸ್ತು ಇಲ್ಲವಾದರೆ ಎರಡೂ ಕಂಪ್ಯೂಟರ್‌ಗಳು ಹ್ಯಾಕರ್‌ಗಳ ಬಲೆಗೆ ಸುಲಭವಾಗಿ ಸಿಲುಕುವ ಸಾಧ್ಯತೆ ಇರುತ್ತದೆ. ಹ್ಯಾಕರ್‌ಗಳು ಕುತಂತ್ರಾಂಶಗಳ ಮೂಲಕ ನಿಮ್ಮ ಕಂಪ್ಯೂಟರ್‌ಗಳ ಮೇಲೆ ನಿಗಾ ಇಟ್ಟಿರುವ ಸಾಧ್ಯತೆ ಇದ್ದೇ ಇರುತ್ತದೆ. ಸೈಬರ್‌ ದಾಳಿಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಹ್ಯಾಕರ್‌ಗಳ ಬಗ್ಗೆ ಎಷ್ಟು ಎಚ್ಚರದಿಂದಿದ್ದರೂ ಅದು ಕಡಿಮೆಯೇ.
 
ಕ್ಲೌಡ್‌ನಲ್ಲಿರಲಿ ಡೇಟಾ: ಡೇಟಾ ಸುರಕ್ಷತೆಯ ವಿಷಯ ಬಂದಾಗಲೆಲ್ಲಾ ಮೊದಲು ನೆನಪಾಗುವುದು ಕ್ಲೌಡ್‌ ಕಂಪ್ಯೂಟಿಂಗ್‌. ನಿಮ್ಮ ಡೇಟಾ ನಿಮ್ಮ ಕಂಪ್ಯೂಟರ್‌ನ ಹಾರ್ಡ್‌ಡಿಸ್ಕ್‌ನಲ್ಲಿರುವುದು ಈಗ ಅಷ್ಟು ಸುರಕ್ಷಿತವಲ್ಲ. ಹೀಗಾಗಿ ನಿಮ್ಮ ಡೇಟಾ ಕ್ಲೌಡ್‌ನಲ್ಲಿದ್ದರೆ ಹೆಚ್ಚು ಸುರಕ್ಷಿತ.
 
ಗೂಗಲ್‌ ಹಾಗೂ ಯಾಹೂ ಅಕೌಂಟ್‌ಗಳ ಮೂಲಕ ಡೇಟಾ ಅನ್ನು ಕ್ಲೌಡ್‌ನಲ್ಲಿಡಬಹುದು. ಗೂಗಲ್‌ 15 ಜಿಬಿ ಹಾಗೂ ಯಾಹೂ 1 ಟಿಬಿ ಕ್ಲೌಡ್‌ ಸ್ಪೇಸ್‌ ಅನ್ನು ಉಚಿತವಾಗಿ ಕೊಡುತ್ತಿದೆ. ಕಂಪ್ಯೂಟರ್‌ ಅಥವಾ ಅಂತರ್ಜಾಲ ಸಂಪರ್ಕದ ಕಾರ್ಯನಿರ್ವಹಿಸುವ ಇನ್ಯಾವುದೇ ಡಿವೈಸ್‌ ಬಳಸುವವರು ಇದರ ಪ್ರಯೋಜನ ಪಡೆಯಬಹುದು. ನಿಮ್ಮ ಡೇಟಾ ಕ್ಲೌಡ್‌ನ ಡ್ರೈವ್‌ಗೆ ಅಪ್‌ಲೋಡ್‌ ಮಾಡಿದರೆ ಅದು ಸಾಕಷ್ಟು ಸುರಕ್ಷಿತವಾಗಿರುತ್ತದೆ.
 
ಆದರೆ, ನೀವು ನಿಮ್ಮ ಗೂಗಲ್‌ ಹಾಗೂ ಯಾಹೂ ಅಕೌಂಟ್‌ಗಳನ್ನು ಎಷ್ಟು ಸುರಕ್ಷಿತವಾಗಿ ನಿರ್ವಹಿಸಿದ್ದೀರಿ ಎಂಬುದರ ಮೇಲೆ ಕ್ಲೌಡ್‌ ಡ್ರೈವ್‌ನ ಸುರಕ್ಷತೆ ನಿರ್ಧಾರವಾಗುತ್ತದೆ.
 
ಕ್ಲೌಡ್‌ನಲ್ಲಿ ಮಾತ್ರವಲ್ಲದೆ ಹೆಚ್ಚುವರಿ ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್‌, ಡಿವಿಡಿಗಳಲ್ಲೂ ನೀವು ಡೇಟಾ ಸಂಗ್ರಹಿಸಿ ಇಡಬಹುದು. ಇದರಿಂದ ಕಂಪ್ಯೂಟರ್‌ ಹ್ಯಾಕ್‌ ಆದರೂ ನಿಮ್ಮಲ್ಲಿರುವ ಈ ಹೆಚ್ಚುವರಿ ಫೈಲ್‌ಗಳ ಮೂಲಕ ಡೇಟಾ ಉಳಿಸಿಕೊಳ್ಳಲು ಸಾಧ್ಯ.
 
ಆದರೆ, ಡೇಟಾ ಉಳಿಸಿಕೊಳ್ಳುವ ಸಲುವಾಗಿ ಇರುವ ಫೈಲ್‌ಗಳನ್ನೇ ಹೆಚ್ಚೆಚ್ಚು ಕಡೆ ಉಳಿಸಿಕೊಳ್ಳುವುದು ಒಳ್ಳೆ ಅಭ್ಯಾಸವಲ್ಲ. ಡೇಟಾ ನಿರ್ವಹಣೆಯ ಶಿಸ್ತನ್ನು ಬೆಳೆಸಿಕೊಳ್ಳದೇ ಹೋದರೆ ನಿಮ್ಮ ಡೇಟಾ ಅಸುರಕ್ಷಿತ ಎಂಬ ಎಚ್ಚರವಂತೂ ಇರಲಿ. ಕಂಪ್ಯೂಟರ್‌ ಅನ್ನು ಆಗಾಗ್ಗೆ ಅಪ್‌ಡೇಟ್‌ ಮಾಡುತ್ತಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.