ADVERTISEMENT

‘ಅಮ್ಮ’ ಹಾಗೂ ಕಾನೂನು

ಸುಚೇತನಾ ನಾಯ್ಕ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
‘ಅಮ್ಮ’ ಹಾಗೂ ಕಾನೂನು
‘ಅಮ್ಮ’ ಹಾಗೂ ಕಾನೂನು   

ಮುಂಬೈನ ಒಂಬತ್ತು ವರ್ಷದ ಬಾಲಕಿ ಗಾಯತ್ರಿ, ಪುಣೆಯ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಅಪ್ಪ ಯಾರೋ ತಿಳಿಯದು. ಲೈಂಗಿಕ ಕಾರ್ಯಕರ್ತೆಯಾದ ಹೆತ್ತಮ್ಮನಿಗೆ ಮಗಳನ್ನು ವೈದ್ಯೆಯಾಗಿಸುವ ಕನಸು. ಮಗಳಿಗೆ?

***
ಶಾಲೆಗೆ ರಜೆ ಬಂದಿದೆ. ಸಾಕಮ್ಮನನ್ನು ನೋಡಲು ಹಾತೊರೆಯುತ್ತಿದೆ ಆ ಪುಟಾಣಿ ಹೃದಯ. ರಜೆ ಬಂದೊಡನೆ ಮನೆಗೆ ಓಡೋಡಿ ಬರುತ್ತಾಳೆ ಗಾಯತ್ರಿ. ರಜೆ ಇದ್ದಾಗಲಷ್ಟೇ ಮಗಳನ್ನು ಕಾಣುವ ಸಾಕಮ್ಮನಿಗೆ ಅಂದು ಹರ್ಷವೋ ಹರ್ಷ. ಮಗಳು ಬರುತ್ತಿದ್ದಂತೆಯೇ ಈ ಅಮ್ಮ–ಮಗಳು ಬೇರೆಯದ್ದೇ ಲೋಕಕ್ಕೆ ತೇಲಿಹೋಗುತ್ತಾರೆ. ತನ್ನೊಂದಿಗೆ ಇದ್ದಷ್ಟೂ ದಿನ ಈ ಅಮ್ಮನಿಂದ ಅದೆಷ್ಟೋ ಉಪಚಾರ, ಊರೂರು ಸುತ್ತಾಟ.

ಕಂಬನಿ ಮಿಡಿಯುವ ಆ ದಿನ ಬಂದೇ ಬಿಡುತ್ತದೆ. ಹೌದು. ಅದೇ ಮಗಳನ್ನು ಪುನಃ ಬೀಳ್ಕೊಡುವ ದಿನ. ಸಾಕಮ್ಮ ಗೌರಿಯ ಹೃದಯ ಭಾರವಾಗುತ್ತದೆ, ಮುದ್ದುಕಂದನನ್ನು ಮತ್ತೆ ಕಾಣಲು ಇನ್ನೊಂದು ರಜೆಯವರೆಗೆ ಕಾಯಬೇಕಲ್ಲ ಎಂದು ಭಾವುಕಳಾಗುತ್ತಾಳೆ. ಈ ಪುಟಾಣಿಗೂ ಅದೇನೋ ಸಂಕಟ, ಕಣ್ಣಂಚಿನಲ್ಲಿ ಒತ್ತರಿಸುತ್ತಿರುವ ನೀರನ್ನು ಒರೆಸಿಕೊಳ್ಳುತ್ತಲೇ ಅಮ್ಮನಿಗೆ ಟಾಟಾ ಹೇಳುತ್ತಾ ಸಾಗುತ್ತಾಳೆ. ಮುಂದಕ್ಕೆ ಹೋಗಿ ಹಿಂದಕ್ಕೆ ನೋಡಿ... ‘ನಾನು ವೈದ್ಯೆ ಆಗುವುದಿಲ್ಲ. ನನಗೆ ಅದು ಇಷ್ಟವಿಲ್ಲ, ನಾನು ವಕೀಲೆ ಆಗಬೇಕು, ನಿನ್ನಂಥವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನದಾಳದಲ್ಲೇ ನುಡಿಯುತ್ತಾಳೆ.

ADVERTISEMENT

ಅಮ್ಮ–ಮಗಳ ಈ ಭಾವುಕ ಕ್ಷಣಗಳನ್ನು ಸೆರೆ ಹಿಡಿದಿರುವುದು ‘ವಿಕ್ಸ್‌’ ಕಂಪೆನಿ... ‘ಟಚ್‌ ಫಾರ್‌ ಕೇರ್‌’ ಎಂಬ ಹೆಸರಿನಲ್ಲಿ ಕಂಪೆನಿ ಸೆರೆ ಹಿಡಿದಿರುವ ಮೂರೂವರೆ ನಿಮಿಷಗಳ ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಲಕ್ಷಲಕ್ಷ ಜನರು ಇದನ್ನು ಶೇರ್‌ ಮಾಡಿದ್ದಾರೆ.

ಈ ಜಾಹೀರಾತು ಲಕ್ಷಾಂತರ ಜನರ ಹೃದಯವನ್ನು ತಟ್ಟಲು ಕಾರಣವೂ ಇದೆ. ಅದೇನೆಂದರೆ ಇದು ಗೌರಿ ಸಾವಂತ್‌ ಹಾಗೂ ಗಾಯತ್ರಿಯ ನಿಜ ಜೀವನದ ಕಥೆ ಕೂಡ. ಇಲ್ಲಿರುವ ಸಾಕಮ್ಮ ಗೌರಿ ತೃತೀಯ ಲಿಂಗಿ. ಗಾಯತ್ರಿ ಆಕೆಯ ದತ್ತುಪುತ್ರಿ (ಕಾನೂನುಬದ್ಧವಾಗಿ ಅಲ್ಲ). ಮಾರಾಟಕ್ಕೆ ಸಿದ್ಧಳಾಗಿ ನಿಂತಿದ್ದ ಗಾಯತ್ರಿಯನ್ನು ಮಗಳಾಗಿ ಸ್ವೀಕರಿಸಿ ಆಕೆಯ ರಕ್ಷಣೆ ಮಾಡುತ್ತಿದ್ದಾಳೆ ಗೌರಿ ಸಾವಂತ್‌.

ಲೈಂಗಿಕ ಕಾರ್ಯಕರ್ತೆಯಾಗಿದ್ದ ಗಾಯತ್ರಿಯ ಅಮ್ಮ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಳು. ಮಗಳನ್ನು ವೈದ್ಯೆ ಮಾಡುವ ಹಂಬಲ ಆಕೆಗಿತ್ತು. ಆದರೆ ತಾನು ಸಾಯುತ್ತೇನೆ ಎಂದು ತಿಳಿದಾಗ ಮಗಳನ್ನು ಮಾರಲು ಮುಂದಾದಳು. ಆಗ ಅವಳನ್ನು ಕಾಪಾಡಿದ್ದು ಗೌರಿ ಸಾವಂತ್‌. ಗಾಯತ್ರಿಯನ್ನು ರಕ್ಷಿಸಿ ತನ್ನ ಬಳಿಯೇ ಇರಿಸಿಕೊಂಡಳು. ಯಾವ ಹೆತ್ತಮ್ಮನಿಗೂ ಕಮ್ಮಿ ಇಲ್ಲದಂತೆ ಮಗಳ ಆರೈಕೆ ಮಾಡಿದಳು. ತುತ್ತು ನೀಡುವುದು, ಬಟ್ಟೆ ತೊಡಿಸುವುದು, ಸ್ನಾನ ಮಾಡಿಸುವುದು, ತಲೆಬಾಚುವುದು... ಒಂದೇ... ಎರಡೇ...

ಆದರೆ ಈ ಅಮ್ಮ–ಮಗಳ ಮೇಲೆ ‘ಸಮಾಜ’ದ ಕೆಂಗಣ್ಣು ಬಿತ್ತು. ಯಾವಾಗ ಗೌರಿ, ಗಾಯತ್ರಿಯ ಸಾಕಮ್ಮ ಆದಳೋ ಆಗ ಶುರುವಾಯಿತು ಸಂಕಟ. ಗಾಯತ್ರಿಯ ಹಲವು ಸ್ನೇಹಿತರಿಂದ ಹಿಡಿದು ‘ನಾಗರಿಕ ಸಮಾಜ’ದ ವಾಸಿಗಳೂ ಗಾಯತ್ರಿಯನ್ನು ಹೀಯಾಳಿಸತೊಡಗಿದರು. ‘ನಿನಗಿರುವುದು ಅಮ್ಮನೋ ಅಪ್ಪನೋ...’ ಎಂದು ಚುಚ್ಚು ಮಾತನಾಡಿದರು. ತನ್ನಿಂದ ಗಾಯತ್ರಿಗೆ ಆಗುತ್ತಿರುವ ಹಿಂಸೆಯನ್ನು ನೋಡಲಾಗದೇ, ಜೊತೆಗೆ ಆಕೆಯ ಹೆತ್ತಮ್ಮನ ಕನಸನ್ನು ಈಡೇರಿಸಲು, ವಸತಿ ಶಾಲೆಯಲ್ಲಿಟ್ಟು ಗೌರಿ ಕಲಿಸುತ್ತಿದ್ದಾಳೆ. ಶಾಲೆಗೆ ರಜೆ ಬಂದಾಗ ಮಾತ್ರ ಮಗಳನ್ನು ನೋಡುವ ಅವಕಾಶ ಆ ತಾಯಿಗೆ.

***
ಕಾನೂನಿನ ವಿಷಯಕ್ಕೆ ಬಂದರೆ,  ಗೌರಿ ಮತ್ತು ಗಾಯತ್ರಿ ‘ತಾಯಿ–ಮಗಳು’ ಅಲ್ಲ. ಏಕೆಂದರೆ ಗೌರಿ ಆಕೆಯನ್ನು ಕಾನೂನಿನ ಪ್ರಕಾರ ದತ್ತು ಪಡೆದಿಲ್ಲ. ಇಲ್ಲಿರುವುದು ಭಾವನಾತ್ಮಕ ಸಂಬಂಧ ಮಾತ್ರ. ಕಾನೂನುಬದ್ಧವಾಗಿ ದತ್ತು ಪಡೆಯುವ ಅದಮ್ಯ ಆಸೆಯೊಂದಿಗೆ ಗೌರಿ ನಡೆಸಿರುವ ಹೋರಾಟ ವ್ಯರ್ಥವಾಗಿದೆ. ಮುಂಬೈನಲ್ಲಿ ತೃತೀಯ ಲಿಂಗಿಯರಿಗಾಗಿ ‘ಸಖಿ ಚಾರಿಟಬಲ್‌ ಟ್ರಸ್ಟ್‌’ ನಡೆಸುತ್ತಿರುವ ಗೌರಿ ಸೇರಿದಂತೆ, ತೃತೀಯ ಲಿಂಗಿಯರ ತೀವ್ರ ಹೋರಾಟದ ನಂತರ 2014ರಲ್ಲಿ ಸುಪ್ರೀಂಕೋರ್ಟ್‌, ಹಿಜಡಾಗಳಿಗೆ ತೃತೀಯ ಲಿಂಗಿಯರ ಸ್ಥಾನಮಾನ ಕೊಟ್ಟಿದೆ. ಆದರೆ ಕಾನೂನುಬದ್ಧವಾಗಿ ಅಮ್ಮನಾಗುವ ಅವಕಾಶ ಇದುವರೆಗೆ ಅವರಿಗೆ ದಕ್ಕಿಲ್ಲ. ಯಾವ ಕಾನೂನು ಕೂಡ ಅವರ ಪರವಾಗಿ ಇಲ್ಲ. ಅದಕ್ಕಾಗಿಯೇ ಗಾಯತ್ರಿ ತನ್ನ ಹೆತ್ತಮ್ಮನ ಬಯಕೆಯಂತೆ ವೈದ್ಯೆಯಾಗುವ ಬದಲು ಸಾಕಮ್ಮನಂತಹ ತೃತೀಯ ಲಿಂಗಿಯರಿಗೆ ನ್ಯಾಯ ದೊರಕಿಸಿಕೊಡಲು ವಕೀಲೆ ಯಾಗುವ ಕನಸು ಕಾಣುತ್ತಿದ್ದಾಳೆ.
ಗಾಯತ್ರಿ ದೊಡ್ಡವಳಾದ ಮೇಲೆ ಏನಾಗುತ್ತಾಳೋ ಗೊತ್ತಿಲ್ಲ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಗೌರಿಯಂತಹ ಅದೆಷ್ಟೋ ತೃತೀಯ ಲಿಂಗಿಯರಿಗೆ ಮಾತ್ರ ಇದುವರೆಗೆ ದತ್ತು ಪಡೆಯುವ, ಅಮ್ಮನಾಗುವ ಕನಸು ಕನಸಾಗಿಯೇ ಉಳಿದಿದೆ. ಮತ್ತೆ ಅವರು ಈ ಸಂಬಂಧ ಕಾನೂನಿನ ಹೋರಾಟ ಮುಂದುವರಿಸಿದ್ದಾರೆ.

ಸುಪ್ರೀಂಕೋರ್ಟ್‌ನ ನಿಲುವಿನ ಹಿನ್ನೆಲೆಯಲ್ಲಿ, ಕಳೆದ ವರ್ಷ ಕೇಂದ್ರ ಸಚಿವ ಸಂಪುಟ ‘ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ–2016’ಕ್ಕೆ ಅನುಮೋದನೆ ನೀಡಿದೆ. ಭಾರತದಲ್ಲಿ ಇರುವ ಸುಮಾರು 18 ಲಕ್ಷ ತೃತೀಯ ಲಿಂಗಿಯರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಾನತೆ ಮತ್ತು ಸಬಲೀಕರಣದ ಉದ್ದೇಶ ಈ ಮಸೂದೆಯದ್ದು.

ಈ ಕಾನೂನು ಜಾರಿಗೆ ಬಂದರೂ ಇದುವರೆಗೆ ದತ್ತುಪಡೆಯಲು ತೃತೀಯ ಲಿಂಗಿಯರು ಪರದಾಡುವ ಪರಿಸ್ಥಿತಿ ಇದೆ. ‘ತೃತೀಯ ಲಿಂಗಿಯರ ವ್ಯಾಖ್ಯಾನದಲ್ಲಿ ಗೇ, ಸಲಿಂಗಕಾಮಿಗಳು, ದ್ವಿಲಿಂಗಿಗಳು ಸೇರುವುದಿಲ್ಲ’ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿರುವುದು ಈ ಸಮುದಾಯದವರ ಆತಂಕಕ್ಕೆ ಕಾರಣವಾಗಿದೆ. ‘ಸಾಮಾನ್ಯ ಜನರು ಮಕ್ಕಳನ್ನು ದತ್ತು ಪಡೆಯುವಾಗಲೇ ಅದರ ಪ್ರಕ್ರಿಯೆ ಹೆಚ್ಚಿಗೆ ಇದೆ ಎನ್ನುವುದು ನಮಗೂ ಗೊತ್ತು. ಆದರೆ ನಾನು ಮಗುವನ್ನು ದತ್ತುಪಡೆಯಲು ಹೋದಾಗ, ನನ್ನನ್ನು ಗಂಡೋ, ಹೆಣ್ಣೋ ಎಂದು ಪ್ರಶ್ನಿಸುತ್ತಾರೆ. ನಾನು ‘ತೃತೀಯ ಲಿಂಗಿ’ ಎಂದು ಹೇಳಿಕೊಂಡ ಕಾರಣಕ್ಕೇ ನನ್ನನ್ನು ಹೊರಗಟ್ಟಿದರು’ ಎಂದು ಮುಂಬೈನ ಸೌಮ್ಯಾ ಮಾಧ್ಯಮಗಳ ಎದುರು ದುಃಖ ತೋಡಿಕೊಂಡಿದ್ದಾರೆ.

ಕಾನೂನಿನಿಗಿಂತ ಮಾನವೀಯ ನೆಲೆಗಟ್ಟಿನ ಆಧಾರದ ಮೇಲೆ ನ್ಯಾಯಾಧೀಶರು ಆದೇಶಗಳನ್ನು ಹೊರಡಿಸುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಅದೇ ರೀತಿ, ಆಯಾ ಪ್ರಕರಣಗಳ ಸಾಧಕ ಬಾಧಕಗಳನ್ನು ಯೋಚಿಸಿದ ನಂತರ ತೃತೀಯ ಲಿಂಗಿಯರು ಕೂಡ ದತ್ತು ಪಡೆಯಲು ಅನುಮತಿ ನೀಡುವ ಅಧಿಕಾರವನ್ನು ಮಾನವೀಯ ನೆಲೆಗಟ್ಟಿನ ಆಧಾರದ ಮೇಲೆ ಜಿಲ್ಲಾ ನ್ಯಾಯಾಧೀಶರಿಗೆ ನೀಡಬೇಕಿದೆ. ಅಥವಾ ಅಮ್ಮನಾಗಬಯಸುವ ಈ ಸಮುದಾಯದವರು ದತ್ತು ಪಡೆಯುವ ಪ್ರಕ್ರಿಯೆಯನ್ನು ಸ್ವಲ್ಪ ಸರಳೀಕರಣಗೊಳಿಸಬೇಕಿದೆ.

ಗಾಯತ್ರಿ, ಪ್ರೌಢಾವಸ್ಥೆಗೆ ಬಂದು ವೈದ್ಯೆಯಾಗಿ ಹೆತ್ತಮ್ಮನ ಆಸೆ ಈಡೇರಿಸುತ್ತಾಳೋ, ವಕೀಲೆ ಆಗಿ ಸಾಕಮ್ಮನಿಗೆ ನ್ಯಾಯ ಒದಗಿಸುತ್ತಾಳೋ ಮುಂದಿನ ಮಾತು. ಆದರೆ ಗೌರಿಯಂತಹ ಮಾತೃಹೃದಯಿಗಳ ಅಮ್ಮನಾಗುವ ಕನಸು ಈಡೇರುತ್ತದೆಯೇ ಎಂಬುದು ಈಗಿರುವ ಪ್ರಶ್ನೆ. ಮಗಳನ್ನು ಮಾರಲು ಹೊರಟ ಗಾಯತ್ರಿಯ ಹೆತ್ತಮ್ಮ ಒಂದೆಡೆ, ಕಾನೂನು ಅಡ್ಡಿಬಂದರೂ ಆಕೆಯನ್ನು ಸಾಕಿ ಸಲಹಿ ವಿದ್ಯಾಭ್ಯಾಸ ನೀಡುತ್ತಿರುವ ಗೌರಿಯಂಥ ಸಾಕಮ್ಮ ಇನ್ನೊಂದೆಡೆ... ಯಾರು ಹಿತವರು ಈ ಇಬ್ಬರು ಅಮ್ಮಂದಿರ ನಡುವೆ? ಮಾತೃಹೃದಯಕ್ಕೆ ಕಾನೂನಿನ ಬಂಧ ಇಲ್ಲ ಅಲ್ಲವೇ? ಆದರೂ ಬದುಕಲು ಬೇಕಿದೆ ಕಾನೂನು. ಎಂಥ ವಿಪರ್ಯಾಸ!

‘ಇವರಿಗೂ ಸಿಗಲಿ ಸ್ಥಾನಮಾನ’

‘ಸುಪ್ರೀಂಕೋರ್ಟ್‌ ಲೈಂಗಿಕ ಅಲ್ಪಸಂಖ್ಯಾತರಿಗೆ ತೃತೀಯ ಲಿಂಗಿಯರು ಎಂಬ ಸ್ಥಾನಮಾನ ನೀಡಿದ್ದರೂ, ದತ್ತು ಪಡೆಯುವುದು ಸೇರಿದಂತೆ ಇತರ ವಿಷಯಗಳ ಬಗ್ಗೆ ಇನ್ನೂ ಸಮಾನ ಅಧಿಕಾರ ಸಿಕ್ಕಿಲ್ಲ. ಈ ಸಮುದಾಯದವರ ಹಕ್ಕು ಬಾಧ್ಯತೆಗಳು, ಶಿಕ್ಷಣ, ಆರೋಗ್ಯ, ಸರ್ಕಾರಿ ನೌಕರಿಯಲ್ಲಿ ಸಿಗಬೇಕಾದ ಸೂಕ್ತ ಸ್ಥಾನಮಾನ, ಇವರ ವಿರುದ್ಧ ಅಪರಾಧ ಎಸಗಿದವರಿಗೆ ನೀಡಬೇಕಾದ ಶಿಕ್ಷೆ, ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಧನಸಹಾಯ ಹಾಗೂ ಆಗಾಗ್ಗೆ ಇವರಿಗಾಗಿಯೇ ರೂಪಿಸಬೇಕಾದ ನಿಯಮಾವಳಿಗಳು ಇತ್ಯಾದಿ ಬಗ್ಗೆ ಅತ್ಯಂತ ಸ್ಪಷ್ಟ ಮತ್ತು ನಿಖರವಾದ ವಿವರ ಬೇಕಿದೆ.  ಈಗಿರುವ ಕಾನೂನಿನಲ್ಲಿ ಎಲ್ಲವೂ ಅಸ್ಪಷ್ಟವಾಗಿದೆ. ಮೇಲಾಗಿ ಯಾವುದೇ ಅಳುಕಿಲ್ಲದೇ ಮಕ್ಕಳ ಪಾಲನೆಯ ಅಧಿಕಾರ ನೀಡಬೇಕಿದೆ’ ಎನ್ನುತ್ತಾರೆ ಕಾನೂನು ತಜ್ಞರು.

* ನಾನು ಹೆಣ್ಣು ಅಲ್ಲದಿದ್ದರೂ ಮಾತೃಹೃದಯ ನನ್ನಲ್ಲಿದೆ. ಸುಪ್ರೀಂಕೋರ್ಟ್‌ ತೀರ್ಪಿನ ಹೊರತಾಗಿಯೂ ತೃತೀಯ ಲಿಂಗಿಯರಿಗೆ ದತ್ತು ಸ್ವೀಕಾರದ ಹಕ್ಕು ಸಿಕ್ಕಿಲ್ಲ. ಅದಕ್ಕಾಗಿ ನಾನು ಹೋರಾಟ ನಡೆಸಿದ್ದೇನೆ. 

–ಗೌರಿ ಸಾವಂತ್‌
ಸಖಿ ಚಾರಿಟಬಲ್‌ ಟ್ರಸ್ಟ್‌

* ತೃತೀಯ ಲಿಂಗಿಯಳು ಕೂಡ ಅಮ್ಮನಾಗಬಹುದು ಎಂಬುದನ್ನು ವೀಕ್ಷಿಸಲು ‘ವಿಕ್ಸ್‌’ ಕಂಪೆನಿಯ ಈ ಕೊಂಡಿ ಟೈಪಿಸಿ:  goo.gl/Th4V8m

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.