ADVERTISEMENT

ಇಂದಿರಾ–ವಾಣಿ: ನೂರರ ನೆನಪು

ಅನಿತಾ ಎಚ್.
Published 5 ಮೇ 2017, 19:30 IST
Last Updated 5 ಮೇ 2017, 19:30 IST
ಎಂ.ಕೆ. ಇಂದಿರಾ
ಎಂ.ಕೆ. ಇಂದಿರಾ   

ಮನದಲ್ಲಿ ಮರೆಯಾಗದ ಇಂದಿರಮ್ಮ
ಅಮ್ಮ ಜನಿಸಿದ್ದು ಮಲೆನಾಡಿನ ತೀರ್ಥಹಳ್ಳಿಯಲ್ಲಿ (ಜ. 5, 1917). ತಂದೆ ತರೀಕೆರೆ ಸೂರ್ಯನಾರಾಯಣರಾವ್‌, ತಾಯಿ ಬನಶಂಕರಮ್ಮ. ಬಾಲ್ಯದಲ್ಲಿ ಅಮ್ಮನನ್ನು – ಮಂದಾಕಿನಿ, ಶಾಕಾಂಬರಿ, ಜಾಹ್ನವಿ ಎನ್ನುವ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿತ್ತು. ಕೊನೆಗೆ ಉಳಿದುದು ಇಂದಿರಾ ಎನ್ನುವ ಹೆಸರು. ಅಮ್ಮನಿಗೆ ಒಬ್ಬ ಅಕ್ಕ ಮತ್ತು ಇಬ್ಬರು ತಮ್ಮಂದಿರು. ಒಬ್ಬ ತಮ್ಮ, ಟಿ.ಎಸ್‌. ರಾಮಚಂದ್ರರಾವ್‌ ‘ಪ್ರಜಾವಾಣಿ’ಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಎರಡನೇ ತರಗತಿವರೆಗೆ ಮಾತ್ರವೇ ಅಮ್ಮನ ವಿದ್ಯಾಭ್ಯಾಸ. ಓದು ಮುಂದುವರಿಸಲು ತಾತ ಅನುಮತಿ ನೀಡಿರಲಿಲ್ಲ. ಆದರೆ, ಗ್ರಂಥಾಲಯದಿಂದ ಕಥೆ–ಕಾದಂಬರಿಗಳನ್ನು ತಂದುಕೊಟ್ಟು ಅಮ್ಮನಲ್ಲಿ ಸಾಹಿತ್ಯದ ಅಭಿರುಚಿ ಬೆಳಿಸಿದ್ದರು ತಾತ.

ಹನ್ನೆರಡನೇ ವಯಸ್ಸಿಗೇ ಅಮ್ಮನ ವಿವಾಹವಾಯಿತು. ಅಪ್ಪ ಶಿವಮೊಗ್ಗ–ತೀರ್ಥಹಳ್ಳಿ ನಡುವೆ ಮೋಟಾರ್‌ ಸರ್ವೀಸ್‌ ನಡೆಸುತ್ತಿದ್ದರು. ಮಂಡ್ಯ, ಮೈಸೂರಿನಲ್ಲಿ ಕೆಲಕಾಲ ಸೇವೆ ಸಲ್ಲಿಸಿದ ನಂತರ ಆಗಿನ ‘ಬೆಂಗಳೂರು ಸಾರಿಗೆ ಸಂಸ್ಥೆ’ಯಲ್ಲಿ (ಬಿಟಿಸಿ) ಕಾಯಂ ನೌಕರರಾಗಿ ಸೇರಿದರು. ಅಮ್ಮನ ಬರವಣಿಗೆಗೆ ಅಪ್ಪ ಉತ್ತೇಜನ ನೀಡಿದರು ಅಪ್ಪ. ಅಮ್ಮನಿಗೆ ಸಾಕಷ್ಟು ಹೆಸರು ಬಂದಾಗ, ಕೊಂಚವೂ ಅಸೂಯೆ ತೋರಲಿಲ್ಲ. ಆ ಕಾಲದಲ್ಲಿಯೇ ಅಮ್ಮನಿಗೆ ಕಾರು ಓಡಿಸುವುದನ್ನು ಹೇಳಿಕೊಟ್ಟಿದ್ದರು.

ADVERTISEMENT

ನಾವು ಒಟ್ಟು ಐದು ಮಂದಿ ಮಕ್ಕಳು. ನಾಲ್ವರು ಗಂಡುಮಕ್ಕಳು, ಒಬ್ಬಳು ಹೆಣ್ಣುಮಗಳು. ಗಂಡುಮಕ್ಕಳ ಮದುವೆಯಲ್ಲಿ ಅಮ್ಮ ‘ವರದಕ್ಷಿಣೆ’ ಎಂಬ ಮಾತಿಗೆ ಆಸ್ಪದವೇ ನೀಡಲಿಲ್ಲ. ದೊಡ್ಡ ಮಗನ ಮದುವೆಯನ್ನು ನಾಯರ್‌ ಕುಟುಂಬದ ಮಲಯಾಳಿ ಹುಡುಗಿ ಜೊತೆ ಮಾಡುವ ಮೂಲಕ, ಕೃತಿಗಳಲ್ಲಿ ಅಲ್ಲದೇ ನಿಜ ಜೀವನದಲ್ಲೂ ಜಾತಿಮತಗಳನ್ನು ಮೀರುವ ಮನೋಭಾವ ಮೆರೆದರು.

(ಎಂ.ಕೆ. ಇಂದಿರಾ)

ಅಮ್ಮ ರಚಿಸಿದ ಮೊಟ್ಟಮೊದಲ ಕಾದಂಬರಿ ‘ತುಂಗಭದ್ರ’. ಅದಾಗಲೇ ಮೊಮ್ಮಗಳು ಹುಟ್ಟಿದ್ದಳು. ಪ್ರಕಾಶಕರ ಅಚಾತುರ್ಯದಿಂದಾಗಿ ಅದರ ಹಸ್ತಪ್ರತಿ ಕಳೆದುಹೋಗಿತ್ತು. ವಿಷಯ ತಿಳಿದ ಅಮ್ಮ ಹತಾಶರಾಗಿದ್ದರು. ಪ್ರಕಾಶಕರು ಕ್ಷಮೆ ಕೋರಿ, ಮತ್ತೆ ಕಾದಂಬರಿ ಬರೆದು ಕೊಡುವಂತೆ ಕೇಳಿದ್ದರು. ಅಪ್ಪ, ಮನೆ–ಮಕ್ಕಳ ಜವಾಬ್ದಾರಿ ವಹಿಸಿಕೊಂಡು ಮತ್ತೆ ಕೃತಿ ರಚಿಸಲು ಅಮ್ಮನಿಗೆ ಸಹಕಾರ ನೀಡಿದರು. ನಂತರ ‘ಸದಾನಂದ’, ‘ಗೆಜ್ಜೆಪೂಜೆ’ ಕಾದಂಬರಿಗಳು ಪ್ರಕಟವಾದವು.

ಅಮ್ಮ ರಚಿಸಿದ 50 ಕಾದಂಬರಿಗಳಲ್ಲಿ ಎಂಟು ಚಲನಚಿತ್ರಗಳಾಗಿವೆ. ‘ಗೆಜ್ಜೆಪೂಜೆ’, ‘ಫಣಿಯಮ್ಮ’, ‘ಮುಸುಕು’, ‘ಗಿರಿಬಾಲೆ’, ‘ಪೂರ್ವಾಪರ’ ಯಶಸ್ವೀ ಚಿತ್ರಗಳು. ‘ಗೆಜ್ಜೆಪೂಜೆ’ ಚಿತ್ರವನ್ನು ತೆರೆಯಮೇಲೆ ನೋಡಬೇಕೆನ್ನುವ ಅಪ್ಪನ ಆಸೆ ಕೈಗೂಡಲಿಲ್ಲ. ಚಿತ್ರ ಬಿಡುಗಡೆಯಾದ ದಿನ ಅಪ್ಪನನ್ನು ನೆನೆದು ಅಮ್ಮ ಬಿಕ್ಕಿ ಬಿಕ್ಕಿ ಅತ್ತಿದ್ದರು.

ಅಮ್ಮ ತುಂಬಾ ಸ್ವಾಭಿಮಾನಿ. ಅವರ ‘ಹೆತ್ತೊಡಲು’ ಕಥೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಆಗ ಸಂಪಾದಕರಾಗಿದ್ದ ನಮ್ಮ ಸೋದರಮಾವ ರಾಮಚಂದ್ರರಾವ್‌, ಬೇರೆ ಕಥೆ ಆಯ್ಕೆ ಮಾಡುವಂತೆ ಸೂಚಿಸಿದ್ದರು. ವಿಷಯ ತಿಳಿದ ಅಮ್ಮ ‘ಹೀಗೇಕೆ ಮಾಡಿದೆ’ ಎಂದು ಸೋದರನನ್ನು ಕೇಳಲಿಲ್ಲ.

ತಂದೆಯ ನಿವೃತ್ತಿ ನಂತರ ಮನೆಯ ಆರ್ಥಿಕ ಪರಿಸ್ಥಿತಿ ಕಠಿಣವಾಗಿತ್ತು. ಆಗ ಪತ್ರಿಕೆಯವರು, ಪ್ರಕಾಶಕರು ನಮ್ಮ ನೆರವಿಗೆ ಬಂದಿದ್ದರು. ಅವರನ್ನು ‘ಅನ್ನದಾತರು’ ಎಂದು ಅಮ್ಮ ಹೇಳುತ್ತಿದ್ದರು. ಸಿರಿ ಬಂದಾಗ ಹಿಗ್ಗದೆ, ಕಡಿಮೆಯಾದಾಗ ಕುಗ್ಗದೆ ಅತ್ಯಂತ ಸರಳವಾಗಿ ಜೀವಿಸಿದರು.

ಮಂಡ್ಯದಲ್ಲಿದ್ದಾಗ ಅಮ್ಮನಿಗೆ ತ್ರಿವೇಣಿ ಅವರೊಂದಿಗೆ ಹೆಚ್ಚು ಒಡನಾಟವಿತ್ತು. ಒಂದು ದಿನ ತ್ರಿವೇಣಿಯವರು ಎರಡು ಜಡೆ ಹಾಕಿಕೊಂಡು ಬಂದು – ‘ಹೇಗಿದೆ ನನ್ನ ಜಡೆ? ಎರಡು ಜಡೆ ಹಾಕಿಕೊಂಡು ಟುವೇಣಿಯಾಗಿದ್ದೀನಲ್ಲ’ ಎಂದರಂತೆ. ಅದಕ್ಕೆ ಅಮ್ಮ ‘ಮೂರು ಜಡೆ ಹಾಕಿಕೊಂಡು ತ್ರಿವೇಣಿಯಾಗಿ ಬಿಡಿ’ ಎಂದರಂತೆ. ಮುಂದೆ ಅದನ್ನೇ ತಮ್ಮ ಕಾವ್ಯನಾಮವಾಗಿ ಉಳಿಸಿಕೊಂಡಿದ್ದು ಈಗ ನೆನಪು.

ಸಾಹಿತ್ಯದ ಜೊತೆ ಪದಬಂಧ ತುಂಬುವುದರಲ್ಲಿ ಅಮ್ಮನಿಗೆ ಅತೀವ ಆಸಕ್ತಿಯಿತ್ತು. ಸಂಗೀತಪ್ರೇಮಿಯೂ ಆಗಿದ್ದ ಅವರು ಹಾರ್ಮೋನಿಯಂ, ಬುಲ್‌ ಬುಲ್‌ ತರಂಗ್‌ ನುಡಿಸುತ್ತಿದ್ದರು. ಅಪ್ಪ, ಚಿಕ್ಕ ತಮ್ಮ, ಸೋದರಮಾವ ರಾಮಚಂದ್ರರಾವ್‌ ಅವರ ಅಕಾಲಿಕ ಮರಣದಿಂದಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದ ಅಮ್ಮನ ಆರೋಗ್ಯ ಹದಗೆಟ್ಟಿತು. ಮಾರ್ಚ್‌ 15, 1994ರಲ್ಲಿ ಕಾಲವಾದರು.

‘ಸಿಂಧುವಿನಲ್ಲಿ ಬಿಂದು ನಾನು’ ಆತ್ಮಕಥೆ ಮತ್ತು ರಾಮಾಯಣದ ಸೀತೆ ಕುರಿತು ಬರೆಯಬೇಕೆನ್ನುವ ಅವರ ಮಹಾದಾಸೆ ಹಾಗೆಯೇ ಉಳಿಯಿತು. ಕುಟುಂಬ ಸದಸ್ಯರು, ಬಂಧು–ಬಳಗ, ಸ್ನೇಹಿತರು ಮತ್ತು ಸಾಹಿತ್ಯಾಭಿಮಾನಿಗಳಿಗೆ ಪ್ರೀತಿಯ ಇಂದಿರಮ್ಮನಾಗಿ ದಾರಿ ತೋರಿದರು ಅಮ್ಮ.

ನೆನಪಿನಂಗಳಲ್ಲಿ ‘ಮೈಸೂರು ಅಮ್ಮ’
ಮೇ 12, 1917ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದ ಅಜ್ಜಿ ವಾಣಿ ಅವರ ನಿಜ ಹೆಸರು ಸುಬ್ಬಮ್ಮ. ತಂದೆ ನರಸಿಂಗರಾಯ ಮತ್ತು ತಾಯಿ ಹಿರಿಯಕ್ಕಮ್ಮ. ಅಣ್ಣ ಮತ್ತು ಅಕ್ಕನೊಂದಿಗೆ ಬೆಳೆದ ಅಜ್ಜಿಗೆ ಚಿಕ್ಕಂದಿನಿಂದಲೂ ಓದಿನ ಗೀಳು. ತಿಂಡಿ ತಿನ್ನುವಾಗಲೂ ಓದುವುದನ್ನು ಬಿಡುತ್ತಿರಲಿಲ್ಲವಂತೆ. ಎಷ್ಟರಮಟ್ಟಿಗೆ ಎಂದರೆ – ತಿಂಡಿ ತಿಂದ ಮೇಲೆ ‘ಏನು ತಿಂಡಿ ತಿಂದೆ’ ಎಂದು ಕೇಳಿದರೆ ನೆನಪೇ ಇರುತ್ತಿರಲಿಲ್ಲ.

ಎಸ್ಸೆಸ್ಸೆಲ್ಸಿವರೆಗೆ ಮಾತ್ರ ವಿದ್ಯಾಭ್ಯಾಸ. ಮನೆಯಲ್ಲಿಯೇ ಕುಳಿತು ಪುಸ್ತಕಗಳನ್ನು  ಓದುತ್ತಿದ್ದರು. ಇಂಗ್ಲಿಷ್‌ನಲ್ಲೂ ಉತ್ತಮ ಪಾಂಡಿತ್ಯ ಪಡೆದಿದ್ದರು. ಹದಿಮೂರನೇ ವಯಸ್ಸಿನಲ್ಲಿಯೇ ತಮ್ಮ ತಂದೆಯವರ ಬಳಿ ವಕೀಲ ವೃತ್ತಿ ಅಭ್ಯಾಸ ಮಾಡುತ್ತಿದ್ದ ಮೈಸೂರಿನ ಎಂ.ಎನ್‌. ನಂಜುಂಡಯ್ಯ ಅವರೊಂದಿಗೆ ವಿವಾಹವಾಯಿತು. ಮದುವೆಗೂ ಮುಂಚೆ ತಾತ, ಮನೆಗೇ ಬಂದು ಅಜ್ಜಿಗೆ ಗಣಿತಪಾಠ ಹೇಳಿಕೊಡುತ್ತಿದ್ದರು. ಅಜ್ಜಿ ತಾತನಿಗೆ ‘ಮಾಸ್ಟರ್‌ಜೀ’ ಎಂತಲೂ, ತಮ್ಮ ಬಾಸ್‌ ಮಗಳು ಎನ್ನುವ ಕಾರಣಕ್ಕೆ ತಾತ ಅಜ್ಜಿಯನ್ನು ‘ಮೇಡಂ’ ಎಂದೂ ಕರೆಯುತ್ತಿದ್ದರು. ತಾತ ಮತ್ತು ಅಜ್ಜಿ ತಮ್ಮ ಜೀವನದ ಕೊನೆಯರೆಗೂ ಪರಸ್ಪರ ಹೀಗೇ ಸಂಬೋಧಿಸಿಕೊಂಡಿದ್ದರು.

ನಲವತ್ತು–ಐವತ್ತು ಜನರಿದ್ದ ಕೂಡು ಕುಟುಂಬದ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಸಮಯ ಹೊಂದಿಸಿಕೊಂಡು ಬರವಣಿಗೆ ಮಾಡುತ್ತಿದ್ದರು. ನಾವು ಚಿಕ್ಕವರಿದ್ದಾಗ ನಮ್ಮನ್ನು ಅಂಗಳದಲ್ಲಿ ಆಟವಾಡಲು ಬಿಟ್ಟು, ಏನಾದರೂ ಬರೆಯುತ್ತಾ ಕುಳಿತಿರುತ್ತಿದ್ದರು. ಏನೇ ಬರೆಯಲಿ ಮೊದಲ ಪ್ರತಿಯೇ ಅಂತಿಮ. ಮಾರ್ಪಾಡು ಮಾಡುವ ಜಾಯಮಾನ ಅವರಲ್ಲಿರಲಿಲ್ಲ. ಕಾದಂಬರಿ ಬರೆಯಲು ಆರಂಭಿಸಿದ ದಿನಾಂಕ ಮತ್ತು ಮುಗಿಸಿದ ದಿನಾಂಕ, ಪ್ರಕಟವಾದ ದಿನ, ಅದಕ್ಕೆ ನೀಡಿದ ಸಂಭಾವನೆ, ನೀಡಿದ ಪ್ರತಿಗಳು ಇತ್ಯಾದಿ ವಿವರಗಳನ್ನು ಡೈರಿಯಲ್ಲಿ ತಪ್ಪದೇ ದಾಖಲಿಸುತ್ತಿದ್ದರು. ಕಾದಂಬರಿಯೊಂದಕ್ಕೆ ₹10 ರಿಂದ ₹700 ರವರೆಗೆ ಸಂಭಾವನೆ ಪಡೆದ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ.

(ವಾಣಿ)

ಸುಬ್ಬಮ್ಮ ‘ವಾಣಿ’ಯಾದ ಕಥೆ ಸ್ವಾರಸ್ಯಕರ. ‘ಕಥಾಂಜಲಿ’ ಎನ್ನುವ ಮಾಸಪತ್ರಿಕೆಗೆ ‘ತಾರಾ’ ಎನ್ನುವ ಕಥೆಯನ್ನು ಕಳುಹಿಸಿಕೊಟ್ಟಿದ್ದರು. ಮಹಿಳೆಯರಿಗೆ ಮಾನ್ಯತೆ ನೀಡುತ್ತಾರೋ ಇಲ್ಲವೋ ಎಂದು ‘ಶ್ರೀನಾಥ’ ಎಂಬ ಪುರುಷನ ಹೆಸರಿನಲ್ಲಿ ಪ್ರಕಟಿಸುವಂತೆ ಸಂಪಾದಕರಿಗೆ ಕೇಳಿಕೊಂಡಿದ್ದರು. ಅದಕ್ಕೆ ಒಪ್ಪದ ಸಂಪಾದಕರು ಕಾವ್ಯನಾಮ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದರು. ಅಂದಿನಿಂದ ‘ವಾಣಿ’ ಕಾವ್ಯನಾಮದಡಿ ಕೃತಿಗಳನ್ನು ಪ್ರಕಟಿಸಿದರು. ನಂತರ ಬರೆದ ‘ಮಿಂಚು’ ಕಥೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಎ.ಇ. ಭಾಸ್ಕರರಾವ್‌ ಸ್ಮಾರಕ ಸ್ಪರ್ಧೆ’ಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ಅವರ ಏಳು ಸಣ್ಣ ಕಥೆಗಳ ಕಥಾಸಂಕಲನ ‘ಕಸ್ತೂರಿ’ 1944ರಲ್ಲಿ ಪ್ರಕಟವಾಯಿತು. ಮಾಸ್ತಿ ಅದಕ್ಕೆ ಮುನ್ನುಡಿ ಬರೆದಿದ್ದಾರೆ. ಪ್ರೀತಿ, ಪ್ರೀತಿ ಇಲ್ಲದ ದಾಂಪತ್ಯ, ಅಂಗವಿಕಲ ಮಕ್ಕಳ ಮತ್ತು ಪಾಲಕರ ನೋವು, ಮಾತ್ಸರ್ಯ, ಪರಿಸರ ವಿಕೋಪದ ಪರಿಣಾಮಗಳು, ವಿಧವಾ ವಿವಾಹ ಕಥಾವಸ್ತು ಆಧಾರಿತ ಕೃತಿಗಳ ಕಾರಣಕ್ಕೆ ಹಾ.ಮಾ. ನಾಯಕ ಅವರು ಅಜ್ಜಿಯನ್ನು ‘ಕೌಟುಂಬಿಕ ಕಥನಗಾತಿ’ ಎಂದು ಬಣ್ಣಿಸಿದ್ದಾರೆ.

ಅಜ್ಜಿ ಒಟ್ಟು 19 ಕಾದಂಬರಿಗಳನ್ನು ರಚಿಸಿದ್ದಾರೆ. ‘ಎರಡು ಕನಸು’, ‘ಶುಭಮಂಗಳ’, ‘ಹೊಸ ಬೆಳಕು’ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದಿವೆ. ಕೆಲವು ಕೃತಿಗಳು ತೆಲುಗು ಮತ್ತು ಮಲಯಾಳ ಭಾಷೆಗಳಿಗೆ ಅನುವಾದಗೊಂಡಿವೆ.

ಅಜ್ಜಿ ತುಂಬಾ ನಿಃಸ್ವಾರ್ಥಿ. ಯಾರನ್ನೂ ತಾರತಮ್ಯದಿಂದ ಕಂಡವರಲ್ಲ. ತಮ್ಮ ಮೂವರು ಗಂಡುಮಕ್ಕಳಲ್ಲಿ ಒಬ್ಬರು ಕೆನಡಾ ಹುಡುಗಿಯನ್ನು ಮೆಚ್ಚಿ ಮದುವೆಯಾದಾಗ ವಿರೋಧಿಸಲಿಲ್ಲ. ಮುಂದೆ ಆ ಮಗ ತೀರಿಕೊಂಡಾಗಲೂ ಸೊಸೆಗೆ ಕೊಡಬೇಕಾದ್ದನ್ನು ನ್ಯಾಯಯುತವಾಗಿ ಕೊಡಿಸಿದ್ದರು. ಒಮ್ಮೆ ಇಲ್ಲಿದ್ದ ಇಬ್ಬರು ಸೊಸೆಯರಿಗೆ ಮೈಸೂರು ಸಿಲ್ಕ್‌ ಸೀರೆ ಕೊಡಿಸಿದರೆ, ಕೆನಡಾ ಸೊಸೆಗೆ ಸಿಲ್ಕ್‌ ಬಟ್ಟೆಯ ಫ್ರಾಕ್‌ ಹೊಲಿಸಿ ಕಳುಹಿಸಿದ್ದರು. ಒಮ್ಮೆ ನನ್ನನ್ನು ಮನೆಗೆ ಸಮೀಪದ ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ ₹4 ಕೊಟ್ಟು ಸದಸ್ಯತ್ವ ಮಾಡಿಸಿದ್ದು ಇನ್ನೂ ನೆನಪಿದೆ. ಮಕ್ಕಳು–ಮೊಮ್ಮಕ್ಕಳಲ್ಲಿ ಓದುವ ಅಭ್ಯಾಸವನ್ನು ರೂಢಿಸಿದರು ಅಜ್ಜಿ.

ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಅಜ್ಜಿ ‘ಕರ್ನಾಟಕ ಲೇಖಕಿಯರ ಸಂಘ’, ಮೈಸೂರು ‘ಮಕ್ಕಳ ಕೂಟ’ ಸೇರಿದಂತೆ ಹತ್ತು ಹಲವು ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಹೊಸ ಲೇಖಕಿಯರು ಮನೆಗೆ ಬಂದರೆ ಬೆನ್ನು ತಟ್ಟಿ ಬರೆಯಲು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಅಕ್ಕನ ಮಗಳು ತ್ರಿವೇಣಿ ಅವರಿಗೆ ಜೀವಿತಾವಧಿಯಲ್ಲಿ ಸಿಗಬೇಕಾದ ಮನ್ನಣೆ ಸಿಗದೇ ಹೋಗಿದ್ದಕ್ಕೆ ಅವರಿಗೆ ಬೇಸರವಿತ್ತು.

ಸಾಹಿತ್ಯ ಸಮಾಜದ ಪ್ರತಿಬಿಂಬವಾಗಬೇಕು. ಸಮಸ್ಯೆಗಳನ್ನು ಪರಿಹರಿಸುವಂತಿರಬೇಕು ಎಂಬುದು ಅಜ್ಜಿಯ ಆಶಯವಾಗಿತ್ತು. ತಾತ ಮತ್ತು ದೊಡ್ಡಪ್ಪನ ಸಾವು, ಅತ್ತೆಯೊಬ್ಬರು ಮದುವೆಯಾಗದೇ ಉಳಿದ ದುಃಖ ಅವರನ್ನು ಅತೀವವಾಗಿ ಕಾಡಿತು. ಅದೇ ಕೊರಗಿನಲ್ಲಿ ಅನಾರೋಗ್ಯಕ್ಕೆ ತುತ್ತಾದ ಅವರು ಫೆಬ್ರುವರಿ 14, 1988ರಲ್ಲಿ ನಿಧನರಾದರು. ನಾವೆಲ್ಲ ಪ್ರೀತಿಯಿಂದ ‘ಮೈಸೂರು ಅಮ್ಮ’ ಎಂದೇ ಕರೆಯುತ್ತಿದ್ದ ಅಜ್ಜಿಯ ನೆನಪು ಇನ್ನೂ ಹಚ್ಚ ಹಸಿರಾಗಿಯೇ ಇದೆ.

**

ಶತಮಾನೋತ್ಸವ ಸ್ಮರಣೆ
ಎಂ.ಕೆ. ಇಂದಿರಾ ಮತ್ತು ವಾಣಿ ಅವರ ಸ್ಮರಣಾರ್ಥ ‘ಕರ್ನಾಟಕ ಲೇಖಕಿಯರ ಸಂಘ’ ಮತ್ತು ‘ಕನ್ನಡ ಸಾಹಿತ್ಯ ಪರಿಷತ್ತು’ ಮೇ 13ರಂದು ವಿಚಾರಸಂಕಿರಣ ಹಮ್ಮಿಕೊಂಡಿವೆ.

ಸಮಯ: ಬೆಳಿಗ್ಗೆ 10.30 ರಿಂದ ಸಂಜೆ 4ರವರೆಗೆ
ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಉದ್ಘಾಟನೆ: ಡಾ.ವೀಣಾ ಶಾಂತೇಶ್ವರ
ಮಾಹಿತಿಗೆ: 9986840477, 9448484195

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.