ADVERTISEMENT

ನಿನ್ನಂಥ ಅಪ್ಪ ಇಲ್ಲ...

ಪ್ರಜಾವಾಣಿ ವಿಶೇಷ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ನಿನ್ನಂಥ ಅಪ್ಪ ಇಲ್ಲ...
ನಿನ್ನಂಥ ಅಪ್ಪ ಇಲ್ಲ...   

ಹದಿನೇಳು ವರುಷ ನನಗೆ. ಮೆಕ್ಸಿಕೋದಲ್ಲಿ ‘ಲಿಂಗ ಸಮಾನತೆ’ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಸಮಾವೇಶವಿತ್ತು. ಅಪ್ಪನ ಪರಿಚಿತರೇ ಸಂಘಟಿಸಿದ್ದರು. ನನ್ನ ಅಲ್ಲಿಗೆ ಕಳುಹಿಸಬೇಕು ಎನ್ನುವುದು ಅವರ ಆಸೆ. ಆದರೆ ಇಷ್ಟು ಚಿಕ್ಕವಳನ್ನು ಕಳುಹಿಸುವುದು ಬೇಡ ಎನ್ನುವುದು ಕೆಲವರ ವಾದ. ನಡುರಾತ್ರಿ ಎರಡು ಗಂಟೆ. ಅಪ್ಪ–ಅಮ್ಮ ಚರ್ಚಿಸುತ್ತಿದ್ದರು. ‘ಅವಳು ಅಷ್ಟು ದೂರ ಹೋಗಬೇಕಾ’ ಅಮ್ಮನ ದನಿಯಲ್ಲಿ ಆತಂಕ. ‘ಅವರಿವರ ಮಾತು ಕೇಳುವ ನಿನಗೆ ಬುದ್ಧಿ ಇಲ್ಲ. ಪ್ರವಾಸದಿಂದ ತುಂಬಾ ಕಲಿಯಬಹುದು. ಹೋಗಿ ಬರಲಿ’ ಎಂದರು ಅಪ್ಪ.

ಯುರೋಪ್‌ವರೆಗೂ ಜತೆಯಲ್ಲಿ ಬಂದರು. ಅಲ್ಲಿಂದ ಮೆಕ್ಸಿಕೋಗೆ ನಾನೊಬ್ಬಳೇ. ಬಾಂಬೆಯಲ್ಲಿ ವಿದ್ಯಾರ್ಥಿ ವೀಸಾ ಸಂಬಂಧಿಸಿದಂತೆ ಸ್ವಲ್ಪ ಸಮಸ್ಯೆ ಆಯಿತು. ‘ಇದನ್ನೆಲ್ಲ ಧೈರ್ಯವಾಗಿ ಎದುರಿಸಬೇಕು. ಒಬ್ಬಳೇ ಇದ್ದಾಗಲೇ ಧೈರ್ಯ ಬರುವುದು’ ಎಂದು ವಿಶ್ವಾಸ ತುಂಬಿದರು.  

ಇವೊತ್ತು ಅಪ್ಪನ 80ನೇ ಹುಟ್ಟಹಬ್ಬ. ಅವರು ನೆನಪು ಎಷ್ಟೆಲ್ಲ...
ನನಗೆ 12–13 ವರುಷ. ನಾನು, ನನ್ನ ತಮ್ಮ ಪಚ್ಚೆ, ಅಮ್ಮ, ಅಪ್ಪ ರಾತ್ರಿ ತುಂಬಾ ಹೊತ್ತು ಮಾತನಾಡುತ್ತಿದ್ದೆವು. ಇದು ನಿತ್ಯದ ಅಭ್ಯಾಸ. ಬೆಳಿಗ್ಗೆ ಜನರು ಅವರ ಭೇಟಿಗೆ ಬರುತ್ತಿದ್ದರು. ಪ್ರವಾಸಕ್ಕೆ ಹೋಗುತ್ತಿದ್ದ ಕಾರಣ ಹೆಚ್ಚು ಸಿಕ್ಕುತ್ತಿರಲಿಲ್ಲ. ನಮ್ಮ ಖಾಸಗಿ ಸಮಯ ರಾತ್ರಿ. ಆಗ ತಾತ, ಮುತ್ತಾತನ ಕಥೆ ಹೇಳುತ್ತಿದ್ದರು. ಕುಟುಂಬದ ಬೇರುಗಳನ್ನು ಪರಿಚಯಿಸುತ್ತಿದ್ದರು. ಅದು ಬರಿ ಮಾತುಕಥೆಯಲ್ಲ. ಅನ್ನಿಸಿದ್ದನ್ನು ನೇರವಾಗಿ ಕೇಳಬಹುದಿತ್ತು, ಚರ್ಚಿಸಬಹುದಿತ್ತು. 

ಒಂದು ರಾತ್ರಿ ನನ್ನ ತಮ್ಮ ‘ಅಪ್ಪ ಉಗಿಯುವ ಚಳವಳಿ ಮಾಡಬಹುದಲ್ಲ’ ಎಂದ.  ಬಂಗಾರಪ್ಪ  ಮುಖ್ಯಮಂತ್ರಿಯಾಗಿದ್ದರು. ‘ಒಳ್ಳೆಯ ಪರಿಕಲ್ಪನೆ’ ಎಂದು ಅದನ್ನು ಸುಂದರೇಶ್ ಮಾಮನಿಗೆ ಹೇಳಿದರು. ‘ಪ್ರೊಫೆಸರ್ ಉಗಿಯುವ ಚಳವಳಿ ತುಂಬಾ ರಾ ಆಗುತ್ತದೆ. ನಗುವ ಚಳವಳಿ ಮಾಡೋಣ’ ಎಂದು ಬದಲಿಸಿಕೊಂಡರು. ವಿಧಾನಸೌಧದ ಎದುರು ನಗುವ ಚಳವಳಿ! ಪಪ್ಪಾ ನೀವು ತುಂಬಾ ಓದಿಕೊಂಡಿದ್ದೀರಂತೆ. ಏನು ಓದಿರುವಿರಿ ಎಂದರೆ ‘ಇಲ್ಲ ಮಗಳೇ, ಇನ್ನೂ ಕಲೀತಿದ್ದೇನೆ. ನಂಗೂ ಸ್ಕೂಲ್ ಇದೆ’ ಎನ್ನುತ್ತಿದ್ದರು.

  ಮೇಧಾ ಪಾಟ್ಕರ್, ವಂದನಾ ಶಿವ ಸೇರಿದಂತೆ ಹಲವರು ಮನೆಗೆ ಬರುತ್ತಿದ್ದರು.  ನನಗೆ ಸ್ಫೂರ್ತಿಯಾಗಿ ಕಾಣುತ್ತಿದ್ದರು. ಅವರ ಬಗ್ಗೆ ಅಪ್ಪನಲ್ಲಿ ಕೇಳುತ್ತಿದ್ದೆ. ‘ನೀನು ಹಾಗೆ ಓದಬೇಕು ಕಣಮ್ಮಿ’ ಎಂದು ಮೈಸೂರು ಭಾಷೆಯಲ್ಲಿ ಹೇಳುತ್ತಿದ್ದರು. ನಾನು ಓದಿದ ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದರು. ಹೊಸ ವಿಷಯಗಳನ್ನು ಹೇಳಿದರೆ ‘ಹೋ..ಹೌದಾ. ಆ ರೀತಿ ಇದೆಯಾ’ ಕುತೂಹಲದಿಂದ ಕೇಳುತ್ತಿದ್ದರು.  

ಮನೆಗೆ ಹೋಗುವುದು ತಡವಾದರೆ ಫೋನ್ ಮಾಡಿ ತಿಳಿಸಬೇಕಿತ್ತು. ‘ಎಲ್ಲಿ ಹೋಗಿದ್ದೆ,  ಏಕೆ ಹೋದೆ’ ಯಾವ ಒತ್ತಡವೂ ಇರಲಿಲ್ಲ. ಪೂರ್ಣ ಸ್ವಾತಂತ್ರ್ಯ ಕೊಟ್ಟು ನಂಬಿಕೆ ಇಟ್ಟಿದ್ದರು. ಅಮ್ಮನಿಗಿಂತ ಅಪ್ಪ 20 ವರುಷ ದೊಡ್ಡವರು.  ಜಾತಿ ವಿನಾಶ ಚಳವಳಿಯಲ್ಲಿದ್ದ ಕಾರಣ   ತಮಗಿಂತ ತಳ ಸಮುದಾಯದ ಹುಡುಗಿಯನ್ನೇ ಮದುವೆ­ಯಾಗಬೇಕು ಎನ್ನುವ ಹಟ.  ಜಾತಿಯ ಕಾರಣದಿಂದ ಸವಾಲುಗಳನ್ನು ಎದುರಿಸಿ ಮದುವೆಯಾದರು.

ಅಮ್ಮನ ಮನೆ ಕಡೆಯಿಂದ ನಿರಾಕರಣೆ.  ನಾನು ಗರ್ಭದಲ್ಲಿದ್ದಾಗ  ಅಮ್ಮನಿಗೆ ಅಪ್ಪ ಕೈತುತ್ತು ನೀಡುತ್ತಿದ್ದರಂತೆ. ಬಸುರಿಗೆ ತವರಿನ ನೆನಪಾದರೆ ನೋವಾಗುತ್ತದೆ ಎಂದು ತಾಯಿ ಪ್ರೀತಿ ಕೊಟ್ಟಿದ್ದರಂತೆ. ಅಮ್ಮನಿಗೆ ಕಿಮೋಥೆರಪಿ ಮಾಡುತ್ತಿದ್ದರು. ಹಿಮೋಗ್ಲೋಬಿನ್ ಕಡಿಮೆ ಆಗುತ್ತಿದ್ದರಿಂದ ದಾಳಿಂಬೆ–ಸಪೋಟ ತಿನ್ನಬೇಕಿತ್ತು. ಹಾಪ್‌ ಕಾಮ್ಸ್‌ನಿಂದ ದಾಳಿಂಬೆ ತಂದು ಸುಲಿದು ಅವರ ಜತೆ ಮಾತನಾಡಿಕೊಂಡು ಆ ಕಾಳುಗಳನ್ನು ಅಮ್ಮನ ಕೈಗಿಡುತ್ತಿದ್ದರು. 

ಮೊದಲ ಕಣ್ಣೀರು ಮತ್ತು ಜೇಬಿನ ದುಡ್ಡು
ಲಂಕೇಶರ ಜತೆ ಭಿನ್ನಾಭಿಪ್ರಾಯ ಇದ್ದಾಗ ನಾವು ಚಿಕ್ಕವರು. 1999ರ ರೈತ ಸಂಘದ ಒಡಕು. ರೈತ ಸಂಘ ಒಡೆದ ಕೆಲವರು ‘ನಂಜುಂಡ ಸ್ವಾಮಿ ಭ್ರಷ್ಟರು, ಕುಟುಂಬ ಸದಸ್ಯರ ಹೆಸರಲ್ಲಿ ಟ್ರಸ್ಟ್ ಮಾಡಿ ಕೊಂಡಿದ್ದಾರೆ’ ಎಂದು ಆರೋಪಿಸಿದ್ದರು. ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಿತ್ತು. ನೆಲದ ಮೇಲೆ ಪತ್ರಿಕೆಗಳನ್ನು ಹರಡಿ ಓದುವುದು ಅವರ ಅಭ್ಯಾಸ.  ಪೇಪರ್ ಓದುತ್ತಿದ್ದರು. ‘ಏನು ಪಪ್ಪಾ ಇದು’ ಎಂದೆ. ‘ನನ್ನ ಪ್ರಾಮಾಣಿಕತೆ ಪ್ರಶ್ನೆ ಮಾಡಿದ್ದಾರೆ’ ಎಂದಾಗ ಕಣ್ತುಂಬಾ ನೀರು. ಅದೇ ಮೊದಲು ಅವರನ್ನು ಆ ರೀತಿ ನೋಡಿದ್ದು.  

ರೈತ ಸಂಘ ಒಡದಿತ್ತು. ಪುನಃ ಸಂಘಟನೆ ಮಾಡುವೆ ಎಂದು ಹೊರಟರು. ಆದರೆ ಯಾರನ್ನು ನಂಬಬೇಕು ಎನ್ನುವುದೇ ಸಮಸ್ಯೆ. ಸುಂದರೇಶ್ ಮಾಮ ತೀರಿದ ಮೇಲೆ ಒಂಟಿತನ ಕಾಡಿತು.

ರಾತ್ರಿ ಮಲಗುವಾಗ ಜುಬ್ಬಾ ತೆಗೆಯುತ್ತಿದ್ದರು. ಜೇಬಲ್ಲಿನಲ್ಲಿದ್ದ ಹಣ ಎಣಿಸಿ ಮಲಗುತ್ತಿದ್ದರು. ಬೆಳಿಗ್ಗೆ ಪುನಃ ಎಣಿಸುತ್ತಿದ್ದರು. ಒಂದು ದಿನ ‘ಇದರಲ್ಲಿ ನೂರು ರೂಪಾಯಿ ಕಡಿಮೆ ಇದೆಯಲ್ಲಾ’ ಎಂದರು. ತೆಗೆದುಕೊಂಡಿದ್ದಾಗಿ ಹೇಳಿದೆ. ‘ನೀನು ದುಡ್ಡು ತೆಗೆದುಕೊಳ್ಳುವುದಿದ್ದರೆ ಎಡಗಡೆ ಜೇಬಲ್ಲಿ ತಗೊ. ಅದು ವೈಯಕ್ತಿಕ. ಬಲಗಡೆಯದ್ದು ಸಂಘಟನೆ ಹಣ. ಮುಟ್ಟಬೇಡ ಅದನ್ನು’ ಎಂದರು.

ಕ್ಯಾನ್ಸರ್‌ ತಗುಲಿ ಆಸ್ಪತ್ರೆಗೆ ದಾಖಲಾದಾಗ ‘ಡಾಕ್ಟರೇ ನೀವು ನನಗೆ ಕ್ಯಾನ್ಸರ್ ಎನ್ನುತ್ತೀರಿ. ನನಗೆ ಏನು ಆಗಿಲ್ಲ’ ಎನ್ನುತ್ತಿದ್ದರು. ಕಾಲು ನಿಶ್ಯಕ್ತವಾದಾಗ ನನ್ನ ಬಲಗಾಲಿಗೆ ಹೀಗೆ ಆಗಿದೆ. ನಾಳೆ ನನ್ನ ಆರೋಗ್ಯ ಹೀಗೆ ಆಗುತ್ತದೆ’ ಎಂದು ಹೇಳುತ್ತಿದ್ದರು. ಕೊನೆ ಕೊನೆಗೆ ‘ಹೇಗಿದ್ದೀರಿ’ ವೈದ್ಯರು ಕೇಳಿದಾಗ ‘ಸಾವಿನ ಮಂಚದಲ್ಲೇ ಇದ್ದೇನೆ’ ಎಂದು  ವಿಶ್ವಾಸದ ಮಾತನಾಡುತ್ತಿದ್ದರು. 

ಮನೆಯಲ್ಲಿ ಕಸ ಗುಡಿಸುತ್ತಿದ್ದರು. ಯಾರಾದರೂ ಮನೆಗೆ ಅತಿಥಿಗಳು ಬಂದರೆ ಅಡುಗೆ ಮಾಡಲು ಅಮ್ಮನಿಗೆ ಕಷ್ಟವಾಗುತ್ತಿದೆ ಎಂದಾಗ ನೆರವಾಗುತ್ತಿದ್ದರು. ಚಿಕ್ಕವಯಸ್ಸಿನಲ್ಲಿ ತನ್ನ ಅಕ್ಕ ಲೀಲಾ ಅವರ ಗಂಡ ಚನ್ನಯ್ಯ ತೀರಿಕೊಂಡಾಗ ಕಾಲುಂಗುರ, ತಾಳಿ ತೆಗೆಯಬೇಕಾದ ಸಂದರ್ಭ ಬಂದಿತು. ‘ನಮ್ಮಕ್ಕನ್ನ ಮುಟ್ಟಿ ನೋಡಿ, ಯಾರಾದರೂ’ ಎಂದು ಪ್ರತಿಭಟಿಸಿದ್ದರಂತೆ. ಅತ್ತೆ ರಾಜಕೀಯಕ್ಕೂ ಬಂದರು.

ಮೈಸೂರಿನ ಉಪಮೇಯರ್ ಸಹ ಆದರು. ಅತ್ತೆಯಲ್ಲಿ ಆ ವಿಶ್ವಾಸ ತುಂಬಿದ್ದು ಅಪ್ಪ. ಅಪ್ಪ, ಹಪ್ಪಳ ಮಾಡುತ್ತಿದ್ದರು. ಅಜ್ಜಿಯಿಂದ ಅದನ್ನು ಕಲಿತ್ತಿದ್ದರು. ಕ್ರೋಶ ಹಾಕುತ್ತಿದ್ದರು. ಕ್ರೋಶದ ಎಣಿಕೆಯಲ್ಲಿ ಅಮ್ಮನದ್ದು ತಪ್ಪಾದರೆ ಸರಿ ಮಾಡುತ್ತಿದ್ದರು. ಬಟ್ಟೆ ಹೊಲಿಯುತ್ತಿದ್ದರು, ಕಾರ್ಪೆಂಟರಿ ಮಾಡುತ್ತಿದ್ದರು.  ಸಣ್ಣ ಪುಟ್ಟ ರಿಪೇರಿಗಳಿಗೆ ಅವರದ್ದೇ ಕೈ ಚಳಕ.

ಹೆಂಗರುಳಿನ ಅಪ್ಪ...
ಅಮ್ಮ ದೇವರಲ್ಲಿ  ನಂಬಿಕೆ ಇದ್ದವಳು. ಅಪ್ಪ ನಾಸ್ತಿಕ. ಅಮ್ಮನಿಗೆ ಸಾಯಿ ಬಾಬಾ, ರಾಘವೇಂದ್ರ ಸ್ವಾಮಿಗಳ ಮೇಲೆ ನಂಬಿಕೆ. ಮದುವೆಗೂ ಮುನ್ನ ಒಂದು ದಿನ ಎಂ.ಜಿ. ರಸ್ತೆಯ ಯುಟಿಲಿಟಿ ಬಿಲ್ಡಿಂಗ್‌ನಲ್ಲಿರುವ ರೆಸ್ಟೋರೆಂಟ್‌ಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರಂತೆ. ಅಮ್ಮನ ಬೆರಳುಗಳಲ್ಲಿದ್ದ ಉಂಗುರಗಳಲ್ಲಿ ದೇವರ ಚಿತ್ರಗಳು. ಎಲ್ಲ ಉಂಗುರಗಳನ್ನು ತೆಗೆದುಕೊಂಡು ಕಿಟಕಿಯಿಂದ ಆಚೆ ಎಸೆದರಂತೆ. ಅಮ್ಮನಿಗೆ ಅದು ದೊಡ್ಡ ಶಾಕ್‌. ‘ನೋಡು ನಿಮ್ಮ ಅಪ್ಪ ಹೀಗೆ ಮಾಡಿದ್ದರು’ ಎಂದು ಹೇಳುತ್ತಿದ್ದರು. ‘ಪಪ್ಪಾ, ನೀವು ಮಾಡಿದ್ದು ಸರಿನಾ. ಏಕೆ ಬಿಸಾಕಿದ್ರಿ’ ಕೇಳಿದೆ. ‘ಎಲ್ಲಿದ್ದಾನೆ ದೇವರು’ ಅಂದರು. ‘ನಿಮ್ಮ ನಿಲುವು ನಿಮಗೆ. ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕು ಅಲ್ಲವೇ’ ಎಂದಾಗ. ‘ಹೌದು ಹೌದು ಮಾಡಬಾರದಿತ್ತು ಅಲ್ಲವಾ? ನಾನು ಹಾಗೆ ಮಾಡಬಾರದಿತ್ತು’ ತಲೆ ಅಲ್ಲಾಡಿಸಿದ್ದರು.

 ಅಮ್ಮನ ನಂಬಿಕೆಯ ವಿಷಯಗಳಲ್ಲಿ ಬದಲಾದರು ಅಪ್ಪ. ಕೇರಳದಲ್ಲಿ ಒಂದು ಕಾರ್ಯಕ್ರಮ ಉದ್ಘಾಟನೆಗೆ ಹೋಗಿದ್ದರು. ವಾಪಸಾಗುವಾಗ ಮಂಗಳಾರತಿಯ ತಟ್ಟೆ, ದೀಪ, ಗಂಟೆಯನ್ನು ಅಮ್ಮನಿಗೆ ತಂದುಕೊಟ್ಟರು. ‘ನಿನಗೆ ಇಷ್ಟವಾದ ದೇವರನ್ನು  ಬೇಕಿದ್ದರೆ ತಗೊಂಡು ಬಂದು ಇಟ್ಟಕೊ’ ಎಂದು ಹೇಳಿದರು. ಮದುವೆ ಆಹ್ವಾನ ಪತ್ರಿಕೆಗಳಲ್ಲಿನ ದೇವರ ಚಿತ್ರಗಳನ್ನು ಕತ್ತರಿಸಿ ‘ದೇವರ ಮನೆಯಲ್ಲಿ ಇಟ್ಟಕೋ’ ಎಂದು ಕೊಡುತ್ತಿದ್ದರು.


ಸಂಘಟನೆಯಲ್ಲಿ ಬೇಕು ಮಹಿಳೆಗೆ ಆದ್ಯತೆ
ರೈತ ಸಂಘದ ಚಟುವಟಿಕೆಗಳಲ್ಲಿ ಮಹಿಳೆಯರು ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ನಾಯಕತ್ವದಲ್ಲಿ ಹೆಚ್ಚು ಕಾಣಿಸಲಿಲ್ಲ. ಅನಸೂಯಮ್ಮ, ಸುನಂದಾ ಜಯರಾಮ್ ಮಾತ್ರ ಅಧ್ಯಕ್ಷರಾಗಿದ್ದರು. 50 ಜನರಿದ್ದಲ್ಲಿ 25 ಮಹಿಳೆಯರು ಇರಬೇಕು.

ಅಪ್ಪ ನಮ್ಮನ್ನು ಬೆಳೆಸಿದ ರೀತಿ ಸಮಸ್ಯೆಯಾಗಿದ್ದು ಸಂಘಟನೆಯಲ್ಲಿ ತೊಡಗಿದಾಗ. ಸಂಘಟನೆಯ ಸಭೆಗೆ ನಾವು (ಹೆಣ್ಣು) ಹೋದಾಗ ‘ಒಳಗೆ ಹೋಗಿ’ ಎನ್ನುತ್ತಿದ್ದರು. ಅಂದರೆ ಮಹಿಳೆಯರು ಮನೆಯೊಳಗೆ ಇರಬೇಕು. ನಾವು ಏಕೆ ಒಳಗೆ ಹೋಗಬೇಕು ಎಂದು ಸಿಟ್ಟು ಬರುತ್ತಿತ್ತು. ಅಲ್ಲೇ ಕೂರುತ್ತಿದ್ದೆ. ಹೆಣ್ಣು–ಗಂಡು ಬೇರೆ ಎನ್ನುವ ರೀತಿ ಬೆಳೆಸಿರಲಿಲ್ಲ. ನಾನು ರೈತ ಸಂಘದ ಒಳಗೆ ಲಿಂಗ ಸಮಾನ ತತ್ವಗಳನ್ನು ಜಾರಿ ಮಾಡಿ ಎಂದು ಈಗಲೂ ಜಗಳ ಮಾಡುತ್ತಿದ್ದೇನೆ.

ಇಲ್ಲಿಯವರೆಗೂ ರೈತ ಸಂಘದ ಅಜೆಂಡಾದಲ್ಲಿ ಮಹಿಳೆಯರ ಸಮಸ್ಯೆಯನ್ನು ಅನುಕಂಪದಿಂದ ನೋಡಿದ್ದಾರೆ. ರಾಜಕೀಯ ವಿಷಯವಾಗಿ ತೆಗೆದುಕೊಂಡಿಲ್ಲ. ಸಂಘಟನೆ ಕಟ್ಟುವಲ್ಲಿ ಜತೆಗೆ ಕರೆದೊಯ್ಯುವ ಪ್ರಯತ್ನವಾಗಿಲ್ಲ. ಈ ಜವಾಬ್ದಾರಿ ಮಹಿಳೆ ಮೇಲಷ್ಟೇ ಇಲ್ಲ. ಪುರುಷ ನಾಯಕತ್ವದ ಮೇಲಿದೆ. ಎಲ್ಲಿಯವರೆಗೆ ಇದನ್ನು ಪುರುಷ ನಾಯಕತ್ವ ಗಂಭೀರವಾಗಿ ಪರಿಗಣಿಸುವುದಿಲ್ಲವೋ ಅಲ್ಲಿಯವರೆಗೂ ಸವಾಲಾಗಿಯೇ ಇರುತ್ತದೆ. ರೈತರ ಆತ್ಮಹತ್ಯೆಯಂಥ ಸಮಯದಲ್ಲಿ ನೇರ ಹೊಡೆತ ಬೀಳುತ್ತಿರುವುದು ಮಹಿಳೆಯರಿಗೇ.   ಪುರುಷರು ತಮ್ಮ ಆಲೋಚನಾ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

ಬದುಕಿನಲ್ಲಿಯೂ. ಮಹಿಳೆಯರು ಸಂಘಟನೆ– ಚಳವಳಿಗಳಲ್ಲಿ ತೊಡಗಲು ಒಬ್ಬಂಟಿಯಾಗಿ ಇರಬೇಕು. ಇಲ್ಲ ಸಂಗಾತಿಯ ಬೆಂಬಲವಿರಬೇಕು. ನನಗೆ ನನ್ನ ಸಂಗಾತಿ ಲೂಕಾ ಮಾಂತಾನರಿ ಸಂಪೂರ್ಣವಾಗಿ ಬೆಂಬಲಿಸುತ್ತಾರೆ.  ಅವರು ಚಾಮರಾಜನಗರದಲ್ಲಿ ಮಗನೊಂದಿಗೆ ಇದ್ದಾರೆ. ನಾನು ಚಳವಳಿ, ಸಂಘಟನೆಗಾಗಿ ದುಡಿಯುತ್ತಿರುವೆ. ಅವರು ಬೆಂಬಲವಾಗಿದ್ದಾರೆ. ನಮ್ಮಲ್ಲಿರುವ ಸಮಾನತೆ, ವೃತ್ತಿಗೌರವ ಉಳಿಸಿ, ಬೆಳೆಸಿಕೊಂಡು ಹೋಗಲು ಅಪ್ಪ ನೀಡಿರುವ ಮೌಲ್ಯಗಳೇ ಕಾರಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.