ADVERTISEMENT

ಆಹಹಾ... ಮಾವು... ನಾವು

​ಪ್ರಜಾವಾಣಿ ವಾರ್ತೆ
Published 2 ಮೇ 2020, 19:30 IST
Last Updated 2 ಮೇ 2020, 19:30 IST
ಮಾವಿನ ಹಣ್ಣು
ಮಾವಿನ ಹಣ್ಣು   

ಮಾವಿನ ಹಣ್ಣು ತಿನ್ನುವುದೆಂದರೆ ಕೊಂಡು ತಂದು ತಿನ್ನುವುದಲ್ಲ, ಕಾಯಿಗಳನ್ನು ಗಿಡದಿಂದಿಳಿಸಿ, ಹಣ್ಣುಮಾಡಿ ಹಂಚಿ ತಿನ್ನುವುದು, ಮಾವಿನ ಋತುಮಾನದ ಮುಖ್ಯ ಸಂಸ್ಕಾರವಾಗಿತ್ತು. ಈಗ ಈ ಸಂಸ್ಕೃತಿಯೇ ಕಡಿಮೆಯಾಗಿದೆ

ಜನಪದರ ಪ್ರಕಾರ ಈ ವೈಶಾಖ ಮಾಸದ ತದಿಗೆಯಿಂದ ಜೂನ್‌ 7ರ ಮೃಗಶಿರ ನಕ್ಷತ್ರದ ಮಳೆ ಬರುವವರೆಗೂ ಮಾವಿನ ಹಣ್ಣನ್ನು ಆಸ್ವಾದಿಸಬಹುದು. ಬಿಸಿಲುಂಡು ಬಂಗಾರ ಬಣ್ಣಕ್ಕೆ ತಿರುಗಿದ ಹಣ್ಣುಗಳನ್ನು ಹಿಂಡಿ, ಹಿಸುಕಿ, ಶೀಕರಣೆ ಮಾಡಿ, ಹೋಳಿಗೆಯೊಂದಿಗೆ ಉಣ್ಣುವುದೇ ಈ ಕಡೆಯ ಸಂಭ್ರಮ.

ಮೊದಲೆಲ್ಲ ಮಾವಿನ ಕಾಯನ್ನು ಹಣ್ಣು ಮಾಡಲು ತೋಟದ ಮನೆಗಳಲ್ಲಿ, ಮನೆಗಳ ಅಟ್ಟದಲ್ಲಿ ‘ಅಡಿ’ಗೆ ಹಾಕುತ್ತಿದ್ದರು.ಒಂದು ಕೋಣೆಯನ್ನು ಸ್ವಚ್ಛ ಕಸಗುಡಿಸಿ, ಮೊದಲು ಹುಲ್ಲು ಹಾಸು ಮಾಡಲಾಗುತ್ತಿತ್ತು. ಅದರ ಮೇಲೆ ಮಾವಿನ ಕಾಯಿಗಳನ್ನು ಹಾಕುವುದು. ಮತ್ತೆ ಅವುಗಳ ಮೇಲೆ ಇನ್ನೊಂದು ಹಾಸು.. ಅದರ ಮೇಲೆ ಮತ್ತೆ ಮಾವಿನ ಕಾಯಿ, ಒಂಚೂರು ಹಳದಿ ಬಣ್ಣಕ್ಕೆ ತಿರುಗಿದ ಕಾಯಿ.. ಹೀಗೆ ಮರಗಳಿದ್ದಷ್ಟು ಪದರಗಳಲ್ಲಿ ಕಾಯಿಗಳನ್ನು ಹಣ್ಣು ಮಾಡಲು ಹಾಕುತ್ತಿದ್ದರು. ಪ್ರತಿ ಪದರದಲ್ಲೂ ಇಂತಿಷ್ಟು ಕಾಯಿಗಳೆಂಬ ಲೆಕ್ಕ ಅಡಿ ಹಾಕಿದವರಿಗೆಲ್ಲ ಗೊತ್ತಿರುತ್ತಿತ್ತು.

ADVERTISEMENT

ಮರದಿಂದ ಕಾಯಿಗಳನ್ನಿಳಿಸುವುದೂ ಒಂದು ಸಂಭ್ರಮ. ಯಾವ ತೊಟ್ಟು ಭಾರವಾಗಿ, ಮಾವಿನಕಾಯಿಯ ದೇಟ, ಒಳ ಹೋಗಿರುತ್ತದೆಯೋ, ಕಾಯಿಯನ್ನು ಮುಟ್ಟಿದಾಗ ಬಿಸಿಯಾದ ಅನುಭವ ಆಗುವುದೋ ಅವುಗಳನ್ನು ಅಡಿಗೆ ಹಾಕಲಾಗುತ್ತಿತ್ತು.ಇಲ್ಲೆಲ್ಲ ಡಜನ್‌ಗಳ ಲೆಕ್ಕದಲ್ಲಿ ಮಾವು ಮಾರಾಟವಾಗುತ್ತಿರಲಿಲ್ಲ. 25, 50, ನೂರರ ಲೆಕ್ಕದಲ್ಲಿ ಮಾರಾಟವಾಗು
ತ್ತಿತ್ತು. 25 ಹಣ್ಣುಗಳೆಂದರೆ 25 ಮಾತ್ರ ಎಣಿಸಿಕೊಡುತ್ತಿರಲಿಲ್ಲ. 33ರಿಂದ 33ರವರೆಗೂ, ದಿಲ್ದಾರ್‌ ಅಂಗಡಿಯ
ವರಾದರೆ 35ರವರೆಗೂ ಕೊಡ್ತಿದ್ದರು.

ಆಗ ಹಣ್ಣು ತಿನ್ನುವ ಸಂಭ್ರಮವೇ ಅಂಥದ್ದು. ಒಂದು ಬಕೆಟ್‌ನ ಅರ್ಧಕ್ಕೆ ಹಣ್ಣು, ಇನ್ನರ್ಧಕ್ಕೆ ನೀರು ತುಂಬಿಸಿ, ಪ್ರತಿಯೊಬ್ಬರ ಪಕ್ಕವೂ ಒಂದೊಂದು ಬಕೆಟ್‌, ಬುಟ್ಟಿಗಳನ್ನು ಇಡಲಾಗುತ್ತಿತ್ತು. ಅವರವರ ಮುಂದೆ ಇಷ್ಟಗಲದ ಪೇಪರ್‌ ಹಾಸಿಟ್ಟರೆ ಆಯ್ತು. ಸಾಕೆನಿಸುವವರೆಗೆ ಹಣ್ಣು ತಿನ್ನುವುದೊಂದೇ ಕೆಲಸ. ದೊಡ್ಡ ಹಣ್ಣುಗಳನ್ನು ಹಿಂಡಿ, ಶೀಕರಣೆ ಮಾಡಲು ತೆಗೆದಿರಿಸುತ್ತಿದ್ದರು ಉಳಿದ ಹಣ್ಣುಗಳು ಅಡುಗೆಮನೆಯಿಂದ ರಿಜೆಕ್ಟ್‌ ಆದರೆ ಅಂಗಳಕ್ಕೆ ಬಂದವು ಎಂದೇ ಅರ್ಥ.

ಅವುಗಳನ್ನು ಭೂಮಿಯು ತನ್ನ ಅಕ್ಷೆಯಲ್ಲಿ ವಾಲಿರುವಂತೆ ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ ಹಿಡಿದು, ತಿರುತಿರುಗಿಸುತ್ತ, ಇನ್ನೊಂದು ಕೈಯಿಂದ ಮೆದುಗೊಳಿಸುತ್ತಿದ್ದರು.ಹೀಗೆ ಮಿದುವಾದ ಹಣ್ಣಿನ ತೊಟ್ಟು ತೆಗೆದು ಒಂದ್ನಾಲ್ಕು ಹನಿಯಷ್ಟು ರಸವನ್ನು ಅದೇ ಬಕೆಟ್‌ಗೆ ಹಾಕಿ ತಿನ್ನಲು ಕೊಟ್ಟರೆ... ಆಹಹಾ.. ಹಣ್ಣು ತಿನ್ನುವುದೊಂದು ಕಲೆ.

ಮೊದಲೆಲ್ಲ ಸೊರಸೊರ ಹೀರಬೇಕು. ಕಣ್ಮುಚ್ಚಿ, ಕೆನ್ನೆ ಒಳಗೆಳೆದುಕೊಂಡಾಗಲೂ ಒಂದ್ಹನಿ ರಸ ಬಾರದೇ ಇರುವಾಗ ಹಣ್ಣಿನ ಸಿಪ್ಪೆಯನ್ನು ಬಿಚ್ಚಬೇಕು. ಅದರ ಒಳಬದಿಯಲ್ಲಿರುವ ತಿರುಳು ಮುಗಿದ ನಂತರವೂ ಉಳಿದಿರುವ ಎಳೆಗಳನ್ನೆಲ್ಲ ಪ್ರೀತಿಯಿಂದ ತಿನ್ನಬೇಕು. ಇನ್ನೇನೂ ಉಳಿಯದಂತೆ ಆ ಸಿಪ್ಪೆ ಪ್ಯಾಪಿರಸ್‌ನಂತೆ ಆದಾಗ ಅದನ್ನು ಪೇಪರ್‌ಗೆ ಎಸೆದು, ವಾಟೆ ನೆಕ್ಕಲಾರಂಭಿಸಬೇಕು. ಹಿಡಿಯಲ್ಲಿ ವಾಟೆ ಹಿಡಿದು, ಹೀರುತ್ತ, ಸಿಗಿಯುತ್ತ ತಿನ್ನಬೇಕಾದರೆ ಅಂಗೈಯಿಂದಿಳಿದು ಮಾವಿನ ಹಣ್ಣಿನ ರಸದ ಹನಿ, ಮೊಣಕೈವರೆಗೂ ಬರುತ್ತದೆ. ಅತ್ತಿತ್ತ ನೋಡಿ, ಸರಕ್ಕನೆ ಆ ಹನಿಯನ್ನೂ ಬಾಯೊಳಗೆ ತೆಗೆದು ನುಂಗಿದಾಗಲೇ ಸಮಾಧಾನ.

ಇನ್ನು ವಾಟೆಯೊಳಗಿನ ಬಿಳಿಯ ಭಾಗ ಕಾಣುವವರೆಗೂ ಕೊನೆಯ ಹನಿಯನ್ನೂ ಬಿಡದಂತೆ ತಿಂದಾಗಲೇ ಹಣ್ಣು ಸವಿದ ಮಜಾ ಸಿಗುವುದು.ಪ್ರತಿ ಹಣ್ಣನ್ನೂ ಭೂಮಿಯ ಮೇಲಿರುವ ಕಟ್ಟಕಡೆಯ ಹಣ್ಣು ಇದೇ ಎಂಬಷ್ಟು ಪ್ರೀತಿಯಿಂದ ಸವಿಯುವಂತೆ ಮಾಡುವ ಹಣ್ಣಿದು. ನಂತರ ಇನ್ನೊಂದು ಹಣ್ಣಿಗೆ ಕೈ ಹಾಕಿದಾಗಲೂ ಇಡೀ ಪ್ರ್ರಕ್ರಿಯೆ ಪುನರಾವರ್ತನೆ. ಹೊಟ್ಟೆ ತುಂಬಿ, ತೇಗಿದಾಗಲೂ ಹಣ್ಣಿನ ವಾಸನೆ ಬಂದರೆ ಮಾವಿನ ಹಣ್ಣು ತಿಂದಂತಾಯ್ತು. ಇದಿಷ್ಟೂ ಮನೆಯಂಗಳದ ಬೇವಿನ ಮರದ ಕೆಳಗೆ ಕುಳಿತೋ, ಹಿತ್ತಲಿನಲ್ಲಿದ್ದ ಗಿಡಮರಗಳ ನೆರಳಿನಲ್ಲಿ ಕುಳಿತೋ ನಡೆಯುತ್ತಿದ್ದ ಮಾವಿನ ಗೋಷ್ಠಿ.

ಅರೆಬರೆಹಣ್ಣಾಗಿ ಮರದಿಂದ ಉರುಳಿದ ಹಣ್ಣುಗಳನ್ನು ಪಾಡಗಾಯಿ ಅಂತ ಕರೀತಾರೆ. ಇದು ಹುಳಿಯೊಗರ ಸಿಹಿಯ ಸವಿ. ಒಂಥರಾ ನಮ್ಮ ಜೀವನ ಇದ್ದಂಗೆ. ಪೂರ್ಣ ಕಳಿತು ಕೊಳೆತಲ್ಲ.. ಕಳಿಯುವ ಮುನ್ನವೇ ನೆಲಕ್ಕೆ ಉದುರಿರುತ್ತದೆ. ಇದರ ರುಚಿನೇ ಮಜಾ.

ಮನೆ ಬಾಗಿಲಿನವರೆಗೂ ನಸುಕಂಪಿನ ಮಾಧುರ್ಯ ಹರಡಿದೆ ಎಂದರೆ ಕಾಯಿ ಹಣ್ಣಾಗಿವೆ ಎಂದೇ ಅರ್ಥ.ಪ್ರತಿದಿನ ಬೆಳಿಗ್ಗೆ ಹಣ್ಣು ಮುಟ್ಟಿ ನೋಡುವುದು, ಬೇರ್ಪಡಿಸುವುದು, ಬೇರೆ ಪದರಗಳಲ್ಲಿ ಹಣ್ಣುಗಳಾಗಿದ್ದರೆ ಅವನ್ನು ತೆಗೆಯುವುದು. ಇವೆಲ್ಲ ಮಾಡುವಾಗಲೇ ಮನೋವ್ಯಾಪಾರವೊಂದು ನಿರತವಾಗಿರುತ್ತದೆ. ಯಾರಿಗೆ ಎಷ್ಟು ಹಣ್ಣುಗಳನ್ನು ಕಳುಹಿಸಬೇಕು ಎಂಬ ಬಜೆಟ್ಟಿಂಗ್‌ ಅತ್ಯಾಸಕ್ತಿಕರ.ನಾಲ್ಕು ಜನರಿದ್ದರೆ ಆರು ಮೂವರಿದ್ದರೆ ನಾಲ್ಕು; ಮನೆಯಲ್ಲಿ ಮಕ್ಕಳಿದ್ದರೆ ಇನ್ನೆರಡು ಹೆಚ್ಚಿಗೆ ಹಾಕುವ ಧಾರಾಳಿತನ.

ಚೀಲ ಮರಳಿಸುವವರಿಗೆ ಚಂದದ ಬಟ್ಟೆ ಚೀಲ ಕಳುಹಿಸಿಕೊಡುವುದು. ಇಲ್ಲ, ಯಾವುದೇ ನಿರೀಕ್ಷೆಗಳಿಲ್ಲವೆಂದರೆ ಪ್ಲಾಸ್ಟಿಕ್‌ ಚೀಲಗಳನ್ನು ಕೊಡುವುದು. ತಳಬುಡ ಗಟ್ಟಿ ಇರುವ, ಕೈಕಸಿಗಳು ಗಟ್ಟಿ ಇರುವ ಚೀಲಗಳನ್ನು ಹುಡುಕಿ ಇಡಬೇಕು.

ಇಷ್ಟೆಲ್ಲ ಕೆಲಸ ಮುಗಿಯುವುದರಲ್ಲಿ ಮೃಗಶಿರ ಮಳೆ ಬಂದೇಬಿಡುತ್ತದೆ. ‘ಮಿರ್ಗ’ ಕುಂತತು ಅಂದ್ರ ಹಣ್ಣು ತಿನ್ನಂಗಿಲ್ಲ. ಹಣ್ಣಿಗೆ ಹುಳಾ ಬರ್ತಾವ’ ಅಂತಾರ. ಆ ನಂತರ ಹಣ್ಣು ತಿನ್ನುವುದೆಂದರೆ ಕೇವಲ ಹರಿವಾಣದಲ್ಲಿ ಹೆಚ್ಚಿಡಲಾಗುತ್ತದೆ. ಪ್ರತಿಬಾರಿಯೂ ಹಣ್ಣು ಹೆಚ್ಚಿದಾಗ ಅದರ ವಾಟೆಗಾಗಿ ಜಗಳ ಕಾಯುವುದು, ವಾಟೆ ತಿನ್ನುವವರಿಗೆ ಸೈಡಿನ ಪೀಸುಗಳು ಮಾತ್ರ. ದೊಡ್ಡ ಪೀಸುಗಳು ವಾಟೆ ತ್ಯಾಗ ಮಾಡುವರಿಗೇ ಮೀಸಲು.

ಮನೆಯಿಂದ ಅಂಗಳ ಮಾಯವಾಯಿತು. ಮರಗಳು ಮಾಯವಾದವು. ಅಡಿ ಹಾಕುತ್ತಿದ್ದ ಅಟ್ಟಗಳು ಸ್ಟೋರ್‌ ರೂಮ್‌ಗಳಾಗಿ ಬದಲಾದವು. ಹಣ್ಣಾಗಿ ಮಾಗಬೇಕಾದ ಕಾಯಿಗಳು, ಕಾರ್ಬೈಡ್‌ ಪೌಡರ್‌ ಲೇಪಿಸಿಕೊಂಡು, ಹಣ್ಣಾಗಿ ಹೊಳೆಯತೊಡಗಿದವು. ಮನೆಯಿಂದ ಹಂಚುತ್ತಿದ್ದವರೆಲ್ಲ ಡಬ್ಬಿಗಳಲ್ಲಿ ಹಣ್ಣು ತಂದು, ಪ್ಲೇಟಿನಲ್ಲಿ ತಿನ್ನತೊಡಗಿದರು. ಬಕೆಟ್ಟುಗಳೂ ಮಾಯ, ಹಣ್ಣೂ ಮಾಯ.. ಸಿಹಿ, ಸವಿಯ ನೆನಪು ಮಾತ್ರ ಮಾವಿನಷ್ಟೇ ಅಜರಾಮರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.