ADVERTISEMENT

ಸಿಂಧು ದಡದಿಂದ ಬಂದ ಹೊಸಪೇಟೆಯ ಸೂಫಿಸಂತ ಕವಿ ಮೀರಾಲಂ..

ರಹಮತ್ ತರೀಕೆರೆ
Published 7 ಮೇ 2022, 20:30 IST
Last Updated 7 ಮೇ 2022, 20:30 IST
ಮೀರಾಲಂ ಹಾಗೂ ಮೀರ್ ಮಸ್ತೂರಲಿ ಶಾ
ಮೀರಾಲಂ ಹಾಗೂ ಮೀರ್ ಮಸ್ತೂರಲಿ ಶಾ   

ನಾನು ಶಿವಮೊಗ್ಗ ಸೀಮೆಯನ್ನು ಬಿಟ್ಟು ಹಂಪಿ ಸೀಮೆಗೆ ವಲಸೆ ಬಂದಾಗ, ‘ಮೀರಾಲಂ’ ಹೆಸರುಳ್ಳ ಟಾಕೀಸು, ಬಸ್ಸು, ಅಂಗಡಿಗಳನ್ನು ಗಮನಿಸಿದೆ. ಇದು ಈ ಭಾಗದ ಜನಪ್ರಿಯ ಸೂಫಿಸಂತನ ಹೆಸರಾಗಿತ್ತು. ಸಂತನ ಚರಿತ್ರೆಯನ್ನು ತಡಕುತ್ತ ಹೋದೆ. ಚಾರಿತ್ರಿಕ ಮಹತ್ವವುಳ್ಳ ಕವಿಯೆಂದು ತಿಳಿಯಿತು. ರಂಜಾನ್ ಮುಗಿದ ಎಂಟು ದಿನಕ್ಕೆ ಬರುವ ಉರುಸಿಗೆ ಕಾದುಕೊಂಡಿದ್ದು ಹೋದೆ. ಉರುಸಿಗೆ ಅಕ್ಕಲಕೋಟೆಯಿಂದ ಗಾಯಕರ ತಂಡ ಬಂದಿತ್ತು. ಈ ತಂಡದವರು ಕರೆದಲ್ಲಿ ಹೋಗುವ ವೃತ್ತಿಪರ ಖವಾಲಿ ಗಾಯಕರಾಗಿರಲಿಲ್ಲ. ಸೂಫಿದೀಕ್ಷೆಯನ್ನು ಪಡೆದವರಾಗಿದ್ದರು. ಕೇವಲ ಮೀರಾಲಂ ರಚನೆಗಳನ್ನು ಹಾಡುವವರಾಗಿದ್ದರು. ತಾವು ಹಾಡುತ್ತಿದ್ದ ಮೀರಾಲಂ ರಚನೆಗಳನ್ನು ‘ಭಜನ್’ ಎಂದು ಕರೆಯುತ್ತಿದ್ದರು.

ಭಜನ್‍ಗಳು ಹಿಂದಿಮಿಶ್ರಿತ ಉರ್ದುವಿನಲ್ಲಿದ್ದವು. ಹಾಡಿಕೆಯಲ್ಲಿ ಖವಾಲಿಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಹಾರ್ಮೋನಿಯಂ ಇರಲಿಲ್ಲ. ಬದಲಿಗೆ ಢೋಲಕ್ ಇತ್ತು. ತತ್ವಪದ ಹಾಡಿಕೆಯಲ್ಲಿ ಬಳಸುವ ತಾಳವಿತ್ತು. ಎಲ್ಲ ಗಾಯಕರು ತಾಳವನ್ನು ಬಾರಿಸುತ್ತ ಹಾಡುತಿದ್ದರು. ಗಾಯಕರಲ್ಲಿ ಕೆಲವರು ಮಹಾರಾಷ್ಟ್ರದ ಸ್ಥಳೀಯ ಉಡುಗೆಯಾದ ಗಾಂಧಿಟೋಪಿ-ಪೈಜಾಮ ಧರಿಸಿದ್ದರು. ಹಾಡುಗೋಷ್ಠಿಯ ಮಧ್ಯದಲ್ಲಿ ಅಕ್ಕಲಕೋಟೆಯ ಚನ್ನಬಸಪ್ಪ ಕಲಬುರ್ಗಿಯವರು ಆಸೀನರಾಗಿದ್ದರು.

ಹಾಡಿನ ಕಾರ್ಯಕ್ರಮ ಬೆಳಗಿನ ಜಾವಕ್ಕೆ ಮುಗಿಯಿತು. ಗಾಯಕರ ಜತೆ ಮಾತುಕತೆ ನಡೆಸಿದೆ. ಹೆಚ್ಚಿನ ಗಾಯಕರು ಕಿರಾಣಿ ವ್ಯಾಪಾರ, ಗಡಿಯಾರ ರಿಪೇರಿ, ಒಕ್ಕಲುತನ, ಶಾಲಾ ಮಾಸ್ತರಿಕೆ, ಟೈಲರ್, ಕುರಿ ವ್ಯಾಪಾರಿ ಮುಂತಾದ ಕಸುಬಿನವರು. ಮೀರಾಲಂ ಕಾವ್ಯವನ್ನು ಕಂಠಸ್ಥ ಮಾಡಿಕೊಂಡಿದ್ದರು; ತಮ್ಮ ಮಾತುಕತೆಯಲ್ಲಿ ಚರಣ ಚರಣಗಳನ್ನು ಉದ್ಧರಿಸುತ್ತಿದ್ದರು. ನನ್ನ ಕುತೂಹಲವನ್ನು ಕಂಡ ಅವರು, ಅಕ್ಕಲಕೋಟೆಯಲ್ಲಿ ಮೀರಾಲಂ ಅವರ ಖಲೀಫರಾದ (ಪಟ್ಟಶಿಷ್ಯ) ಮೀರ್ ಮಸ್ತೂರಲಿಶಾ ಉರುಫ್ ದಾತಾಪೀರರ ಉರುಸು ನಡೆಯುತ್ತದೆಯೆಂದೂ ಅಲ್ಲಿ ಇತರೆ ಗಾಯಕರನ್ನು ಆಲಿಸಬಹುದೆಂದೂ ಆಹ್ವಾನ ಕೊಟ್ಟರು.

ADVERTISEMENT

ಸೂಫಿ ಸಂತರಾದ ಸೈಯದ್ ಮೀರಾಲಂ ನವಾಜ್ ಶಾಖಾದ್ರಿ (1834-1932) ಮೂಲತಃ ಸಿಂಧ್ ಪ್ರಾಂತ್ಯದ ಜೆಮಸಾಬಾದ್ ಪಟ್ಟಣದವರು. ಸಿಂಧ್ ಪ್ರಾಂತ್ಯವು ‘ಧಮಾಧಂ ಮಸ್ತ ಖಲಂದರ್’ ಮುಂತಾದ ಜನಪ್ರಿಯ ತತ್ವಪದಗಳನ್ನು ಕಟ್ಟಿದ ಕವಿಯಾದ ಶಾಬಾಸ್ ಖಲಂದರ್ ಮುಂತಾದ ಸೂಫಿಗಳ ಸೀಮೆ. ಈ ಪ್ರಾಂತ್ಯದ ಡೆಪ್ಯೂಟಿ ಕಮಿಷನರ್ ಆಗಿದ್ದ ಸರ್ ಈವನ್ ಜೇಮ್ಸ್‌ನ ಕಾರಣದಿಂದ ಊರಿಗೆ ಈ ಹೆಸರು ಬಂತಂತೆ. ಮೀರಾಲಂ, 19ನೇ ಶತಮಾನದ ಕೊನೆಯಲ್ಲಿ ಶಿಷ್ಯ ಮೀರ್ ಮಸ್ತೂರಲಿ ಶಾ ದಾತಾಪೀರ್ ಅವರ ಜತೆ ಅಕ್ಕಲಕೋಟೆಗೆ ಬಂದರಂತೆ. ಅಕ್ಕಲಕೋಟೆಯ ಹಿರಿಯರಾದ ಬಾಶಾಭಾಯಿ ಶೇರಿಕಾರರ ಪ್ರಕಾರ, ಮೀರಾಲಂ 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರು; ಉರ್ದು ಕವಿಗಳಾದ ಅಮೀರ್ ಮಿನಾಯಿ, ದಾಗ್ ದೆಹಲ್ವಿ, ಅಮಿರ್ ಹಂಜಾ ಅವರ ಜತೆಗಿದ್ದವರು. ಬಹುಶಃ ಅವರು ಬ್ರಿಟಿಷರ ಕಿರುಕುಳದಿಂದಲೇ ಸಿಂಧ್ ಪ್ರಾಂತ್ಯವನ್ನು ತೊರೆದಿರುವ ಸಾಧ್ಯತೆಯಿದೆ.

ಸಂತನ ಎರಡನೇ ಪ್ರಸ್ಥಾನವು ಅಕ್ಕಲಕೋಟೆಯಿಂದ ಸಂಡೂರಿಗೆ ನಡೆಯಿತು. ಎರಡೂ ಸಂಸ್ಥಾನಿಕರ ನಡು ಬೀಗತನ ಇದ್ದುದರಿಂದ, ಸಂತರ ಈ ವಿನಿಮಯ ನಡೆದಿರಬೇಕು. ತಮಗೆ ವಿರೋಧಿಯಾಗಿರುವ ಸಂತನನ್ನು ರಾಜ್ಯದಲ್ಲಿ ಇಟ್ಟುಕೊಳ್ಳಬಾರದು ಎಂಬ ಬ್ರಿಟಿಷರು ದೊರೆಯ ಮೇಲೆ ತಂದ ಒತ್ತಡದ ಫಲವಾಗಿಯೊ, ದೊರೆಯ ಜತೆಗಿನ ಭಿನ್ನಮತದಿಂದಲೊ, ಮೀರಾಲಂ ಸಂಡೂರು ಸಂಸ್ಥಾನವನ್ನು ಬಿಟ್ಟು ಹೊರಬರಬೇಕಾಯಿತು. ಆಗವರು ಮದರಾಸು ಪ್ರಾಂತ್ಯಕ್ಕೆ ಸೇರಿದ ಹೊಸಪೇಟೆಗೆ ಬಂದು ನೆಲೆಸಿದರು. ಈ ವಲಸೆ ಮತ್ತು ನೆಲಸುವಿಕೆಗಳಿಗೆ ಇನ್ನೊಂದು ಕಾರಣ, ಸ್ವಭಾವತಃ ಸಂಚಾರಿಗಳಾದ ಸಂತರು, ತಮ್ಮ ದರ್ಶನವನ್ನು ಹರಡುತ್ತ ತಕ್ಕ ಶಿಷ್ಯರ ಹುಡುಕಾಟದಲ್ಲಿ ತಿರುಗಾಟ ಮಾಡುವುದು ಸಹ ಆಗಿರಬಹುದು. ಜೆಮಸಾಬಾದ್‍ನಿಂದ ಶುರುವಾದ ಸಂತನ ಪಯಣ, ಅಕ್ಕಲಕೋಟೆ, ಸಂಡೂರುಗಳನ್ನು ಹಾದು ಹೊಸಪೇಟೆಯಲ್ಲಿ ಮುಕ್ತಾಯ ಕಂಡಿತು. ದೇಹಬಿಡುವಾಗ ಮೀರಾಲಂ ಅವರಿಗೆ 98 ವರುಷ.

ಇವುಗಳಲ್ಲಿ ಕೊನೆಯ ನಾಲ್ಕು ಜೋಡಿಗಳು ಮೀರಾಲಂ ಅವರಿಗೆ ಸಮಕಾಲೀನವಾಗಿದ್ದವು. ಅದರಲ್ಲೂ ಗುರುಪೀರಾ ಖಾದ್ರಿ-ಮೀರಾಲಂ ಇಬ್ಬರೂ ಬಾಗ್ದಾದಿನ ಕ್ರಾಂತಿಕಾರ ದಾರ್ಶನಿಕ ಮನ್ಸೂರನ ‘ಅನಲ್‍ಹಖ್’ ಧಾರೆಗೆ ಸೇರಿದವರು. ಸಾಧಕರು ಸಾಧನೆಯಲ್ಲಿ ಹುಡುಕುವ ದೈವಿಕ ಚೈತನ್ಯವು ಅವರೊಳಗೇ ಇದೆ, ಪ್ರೇಮದ ಮೂಲಕ ಅದನ್ನು ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು ಪ್ರತಿಪಾದಿಸುವ ತತ್ವದವರು. ಈ ತತ್ವವು ಜಾತಿ, ಧರ್ಮ, ಭಾಷೆಯ ಉಪಾಧಿಗಳ ಆಚೆ ಸರ್ವ ಜೀವಿಗಳನ್ನೂ ದೈವಿಕಪ್ರೇಮದ ಪ್ರತಿರೂಪಗಳು ಎಂದು ಪರಿಭಾವಿಸುತ್ತದೆ. ನೂರು ಮೈಲಿ ಅಂತರದಲ್ಲಿ ಬದುಕಿದ್ದ ಇಬ್ಬರೂ ಸಂತರು ಪರಸ್ಪರ ಭೇಟಿ ಮಾಡಿರುವ ಸಾಧ್ಯತೆಯಿದೆ.

ಮೀರಾಲಂ ಅವರ ಭಜನ್‍ಗಳು, ಸೂಫಿ ಪ್ರೇಮತತ್ವದ ಪರಿಭಾಷೆಯಿಂದ ಕೂಡಿವೆ. ಹೆಚ್ಚಿನ ಭಜನ್‍ಗಳ ವಸ್ತು ಗುರುಮಹಿಮೆ.`ಗುರಘರ ಗಂಗಾ ಗುರುಘರ ಕಾಶಿ ಆಲಂಶಾ ಕಭಿ ಮಂದಿರ ಜಾಕರ್ ಹರದ್ವಾರೇ ವಹಿ ತಿಲಕ ಲಗಾಕರ್, ಗುರು ಹಮಾರ ರಂಗ ರಸೀಲ ಉಸಗುರುಕೆ ಹಮ ದಾಸಹುವೇ’ಎಂಬ ರಚನೆಯನ್ನು ಬಹುತೇಕ ಗಾಯಕರು ಹಾಡುವರು. ಸಂಸ್ಕೃತ ಶಬ್ದಗಳಿಂದ ಕೂಡಿದ ಈ ರಚನೆಗಳ ಮೇಲೆ ಕಬೀರನ ಹಾಗೂ ತುಳಸಿದಾಸರ ಪ್ರಭಾವವಿದ್ದಂತಿದೆ. ಪಂಜಾಬ್-ಸಿಂಧ್ ಪ್ರಾಂತ್ಯಗಳಲ್ಲಿ ಕಬೀರ ಜನಪ್ರಿಯನಾಗಿದ್ದುದೂ ಈ ಪ್ರಭಾವಕ್ಕೆ ಕಾರಣ. ‘ಜೋಪೀರ ಶಾಜೀಲಾನಿ ಮಾಶುಕ್ ಬಿ ಹಖಾನಿ’, ‘ಸೂರತ್ ಮೂರತ್ ಜಲಥಲ ಪೂಜಾ, ತನಕ ಪೂಜಾ ಕಿಯಾನಹಿ’ ಇವು ಮೀರಾಲಂ ಅವರ ಇತರ ಜನಪ್ರಿಯ ರಚನೆಗಳು. ‘ಅಜಬ ಜಮಾನ ಕೂಡ ಫಸಾನ, ದೀನತ ದುನಿಯಾದಾರ್ ಹುವೇ’ ಎಂಬ ಹಾಡು, ಬ್ರಿಟಿಷರ ವಿರುದ್ಧ ಬರೆದಿದ್ದೆಂದು ಗಾಯಕರು ಅಭಿಪ್ರಾಯಪಡುತ್ತಾರೆ.

1978ರಲ್ಲಿ ಮೀರಾಲಂ ಅವರ ಮಗ ಸೈಯದ್ ಶಾ ಹುಸೇನಲಿ ಶಾ, ತಮ್ಮ ತಂದೆಯ ವಸ್ತುಗಳನ್ನು ಕೊಂಡೊಯ್ಯಲು ಹೊಸಪೇಟೆಗೆ ಬಂದಿದ್ದರಂತೆ. ಮೀರಾಲಂ ಅವರ ಸಂದೂಕದಲ್ಲಿ ತುಳಸಿರಾಮಾಯಣ, ಗೀತೆ, ಕುರಾನ್ ಮುಂತಾದ ಗ್ರಂಥಗಳು, ಶೇರ್ವಾನಿ, ಪಟಗ ಹಾಗೂ ಕೆಲವು ವಜ್ರಗಳು ಇದ್ದವಂತೆ. ಈ ಗ್ರಂಥಗಳು ಸಂತನ ಬಹುಧರ್ಮಗಳಲ್ಲಿದ್ದ ಪ್ರವೇಶವನ್ನು ಸೂಚಿಸುತ್ತವೆ ಮತ್ತು ಬಹುಧಾರ್ಮಿಕ ಶಿಷ್ಯತ್ವವನ್ನು ಸಮರ್ಥಿಸುತ್ತವೆ.

ಮೂಲತಃ ಆಶುಕವಿಯಾಗಿದ್ದ ಮೀರಾಲಂ ಅವರಿಗೆ ‘ಶೀಘ್ರಕವಿ’, ‘ಪಂಡಿತ್’ ‘ಹಖೀಖತ್ ಕವಿ’ ಇತ್ಯಾದಿ ಬಿರುದುಗಳಿದ್ದವು; ಸೂಫಿಪಂಥದಲ್ಲಿ ಶರಣ ಷಟ್‌ಸ್ಥಲ ಪರಿಕಲ್ಪನೆ ಹೋಲುವ ಶರೀಯತ್, ತರೀಖತ್, ಹಖೀಕತ್, ಮಾರಿಫತ್ ಎಂಬ ನಾಲ್ಕು ಅವಸ್ಥೆಗಳಿವೆ. ಇವುಗಳಲ್ಲಿ ಸಾಧಕರು ಪಡೆಯುವ ಮೂರನೆಯ ಹಂತವೇ ಹಖೀಖತ್. ಮೀರಾಲಂ ಲಹರಿಯಲ್ಲಿ ಹೇಳುತ್ತಿದ್ದುದನ್ನು ಶಿಷ್ಯರು ಬರೆದುಕೊಳ್ಳುತ್ತಿದ್ದರಂತೆ. ಈ ತನಕ ಸಂತನ 704 ರಚನೆಗಳು ಸಿಕ್ಕಿವೆ. ಇವು ಉರ್ದು ಹಾಗೂ ದೇವನಾಗರಿ ಲಿಪಿಯಲ್ಲಿವೆ. ಇವನ್ನು ಮೀರಾಲಂ ಹಾಗೂ ದಾತಾಪೀರರ ಶಿಷ್ಯರು ನಿಂತ ನಿಲುವಿನಲ್ಲೇ ವಾಚಿಸುವ ಮತ್ತು ವ್ಯಾಖ್ಯಾನಿಸುವ ಪರಿಣತಿ ಪಡೆದಿರುವರು. ಹೀಗಾಗಿ ಮೀರಾಲಂ-ದಾತಾಪೀರರ ಹೊಸಪೇಟೆ-ಅಕ್ಕಲಕೋಟೆಯ ಉರುಸುಗಳು, ಕಾವ್ಯಗೋಷ್ಠಿಗಳೂ ಅಧ್ಯಾತ್ಮ ಜಿಜ್ಞಾಸೆಯ ಸತ್ಸಂಗಗಳೂ ಆಗಿವೆ. ನಾವು ‘ಕನ್ನಡ ತತ್ವಪದಗಳು’ ಬದಲಿಗೆ ‘ಕರ್ನಾಟಕ ತತ್ವಪದಗಳು’ ಎಂಬ ಪರಿಕಲ್ಪನೆ ಬಳಸಬೇಕು. ಆಗ ಕರ್ನಾಟಕದಲ್ಲಿದ್ದ ಸಂತರು ರಚಿಸಿದ ಮರಾಠಿ, ತೆಲುಗು, ದಖನಿ, ತಮಿಳು ತತ್ವಪದಗಳ ಧಾರೆಗಳೂ ಸೇರಿಬಿಡುತ್ತವೆ.

ನಾನು ಅಕ್ಕಲಕೋಟೆಯ ಉರುಸಿಗೆ ಹೋದೆ. ಅಕ್ಕಲಕೋಟೆಯ ಮಹಬೂಬ್ ಬಳೂರಗಿ ಮೀರಾಲಂ ಪರಂಪರೆಯ ಶ್ರೇಷ್ಠ ಗಾಯಕರೆಂದು ಅಲ್ಲಿನವರು ಹೇಳಿದರು. ಮಹಬೂಬ್ ಬಳೂರಗಿ ತೀರಿಕೊಂಡಿದ್ದರು. ಅಬ್ದುಲ್ ಸತ್ತಾರ್, ದಾತಾ ಬಳೂರಗಿ, ಅಬ್ದುಲ್ ಘನಿ, ಅಬ್ದುಲ್ ಸತ್ತಾರ್ ಪಟೇಲ್, ಫಾರೂಕ್, ರಿಯಾಜ್, ಸೈಯದ್‍ಭಾಯಿ ಮುಂತಾದವರ ಹಾಡಿಕೆ ಕೇಳಿದೆ. ದಾತಾಪೀರ್ ದರ್ಗಾಕ್ಕೆ ಜಮೀನು ಕೊಟ್ಟಿರುವ ಸಾಹುಕಾರ್ ಸಿದ್ಧರಾಮಪ್ಪನವರ ಮನೆಗೆ ಹೋದೆ. ಕೋಟೆಯಂತಹ ದೊಡ್ಡ ಮನೆ. ಈಗಲೂ ಸಿದ್ಧರಾಮಪ್ಪನವರ ಮೊಮ್ಮಗ ಚನ್ನಬಸಪ್ಪ ಕಲಬುರ್ಗಿಯವರಿಗೆ ದಾತಾಪೀರ್ ಉರುಸಿನಲ್ಲಿ ಮನ್ನಣೆ ಸಲ್ಲುತ್ತ ಬಂದಿದೆ. ಚನ್ನಬಸಪ್ಪನವರು ತಮ್ಮ ಅಜ್ಜನವರೂ ದಾತಾಪೀರರೂ ಮನೆಯಲ್ಲಿ ಒಟ್ಟಿಗೆ ಕೂರುತ್ತಿದ್ದ ಕಟ್ಟೆಯನ್ನು ತೋರಿಸುತ್ತ ಅಭಿಮಾನದಿಂದ ನುಡಿದರು: ‘ವಂಶಪರಂಪರಾ ನಮ್ಮ ಕಲಬುರ್ಗಿ ಮನೆತನವರಾ ದಾತಾಪೀರನಿಗೆ ಗಂಧ ಏರಿಸಬೇಕು.’

ಕರ್ನಾಟಕದ ಧಾರ್ಮಿಕ, ರಾಜಕೀಯ, ಸಾಹಿತ್ಯಕ, ಚರಿತ್ರೆಗಳಲ್ಲಿ ದಾಖಲಾಗದ ಎಷ್ಟೊಂದು ಅನಾಮಿಕ ಸ್ಥಳೀಯ ಪರಂಪರೆಗಳು ಹೀಗೆ ಅಜ್ಞಾತವಾಗಿ ಬದುಕಿವೆಯೊ? ಇವು ನಮ್ಮ ಸುತ್ತ ಸಂಭವಿಸುತ್ತಿರುವ ಮತಮತ್ಸರದ ಕೋಲಾಹಲಗಳಾಚೆ, ಅನುಭಾವದ ನೆಲೆಯ ಮೇಲೆ ಜನರನ್ನು ಬೆಸೆಯುವ, ಕೂಡುಸಂಸ್ಕೃತಿ ಕಟ್ಟುವ ಕೆಲಸವನ್ನು ತಮ್ಮ ಪಾಡಿಗೆ ನಿಭಾಯಿಸುತ್ತಿವೆ. ಈ ಪರಂಪರೆಗಳಲ್ಲಿ ಕೂಡುಬದುಕಿನ ಭಾರತದ ಪರಿಕಲ್ಪನೆ (ಐಡಿಯಾ ಆಫ್ ಇಂಡಿಯಾ) ಕೂಡ, ಕಾವ್ಯ, ಸಂಗೀತ, ದರ್ಶನ ಮತ್ತು ಆಚರಣೆ ರೂಪದಲ್ಲಿ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.