ADVERTISEMENT

ಮಮತಾ ಬರೆದ ಕವನ: ಕಾರ್ಯಕಾರಣ ಸಂಬಂಧ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:30 IST
Last Updated 16 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಟ್ಟೆ ಕಾರ್ಯ, ದಾರ ಕಾರಣ
ದಾರವೆ ಬಟ್ಟೆಯಾಕೃತಿಗೆ ಮೂಲ
ಬಟ್ಟೆಯೆ ದಾರದ ಅಸ್ತಿತ್ವ
ಬಟ್ಟೆಯಿದ್ದೆಡೆ ದಾರವಿರುವುದು
ದಾರವಿದ್ದೆಡೆ ಬಟ್ಟೆಯಾಗುವುದು
ದಾರ್ಶನಿಕ ಅನುಭವಸಿದ್ಧ ವಾದ

ಬಟ್ಟೆ ದಾರದ ಪರಿಣಾಮ
ದಾರ ಬಟ್ಟೆಯ ಅವಸ್ಥೆ
ಕಾರ್ಯದಲ್ಲಿನ ಗುಣ
ಕಾರಣದಲ್ಲಿನ ಕ್ರಿಯೆ

ಬಟ್ಟೆಯಾಗುವ ಮುನ್ನ
ದಾರ ಎಳೆಎಳೆಯ ಅವ್ಯಕ್ತ
ದಾರದ ಬಂಧನದ ಮಾದರಿ
ಬಟ್ಟೆಯ ಸಂರೂಪ ವ್ಯಕ್ತ

ADVERTISEMENT

ಉಡಬಹುದು ಬಟ್ಟೆಯನ್ನು
ದಾರವನ್ನಲ್ಲ
ಹೆಣೆಯಬಹುದು ದಾರವನ್ನು
ಬಟ್ಟೆಯನ್ನಲ್ಲ

ಕಾರಣವಾಗುವ ದಾರದಲ್ಲಿ
ಬಟ್ಟೆಯಾಗುವ ಶಕ್ತಿ
ಕಾರ್ಯವಾಗುವ ಬಟ್ಟೆಯಲ್ಲಿ
ಕಾರಣವೆಂಬ ಅಗತ್ಯ

ದಾರಕ್ಕೂ ಬಟ್ಟೆಗೂ ಭೇದವಿಲ್ಲ
ಕಾರ್ಯಕಾರಣವೂ ಬೇರೆಯಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.