ADVERTISEMENT

PV Web Exclusive | ಕೊರೊನಾ ನೀ ಯಾವಾಗ ಹೋಗುತ್ತೀ?

ಸ್ಮಿತಾ ಶಿರೂರ
Published 1 ಸೆಪ್ಟೆಂಬರ್ 2020, 3:59 IST
Last Updated 1 ಸೆಪ್ಟೆಂಬರ್ 2020, 3:59 IST
ಕೊರೊನಾ ಚಿತ್ರದೊಂದಿಗೆ ವಿದ್ಯಾರ್ಥಿ
ಕೊರೊನಾ ಚಿತ್ರದೊಂದಿಗೆ ವಿದ್ಯಾರ್ಥಿ    

ಗಣೇಶನ ಹಬ್ಬ ಆಗಷ್ಟೇ ಮುಗಿದಿತ್ತು. 1ನೇ ತರಗತಿಯ ಮಗಳ ಬಳಿ ಕೇಳಿದೆ. ‘ಗಣೇಶನ ಬಳಿ ಏನು ಬೇಡಿಕೊಂಡೆ’ ಎಂದು.
‘ಕೊರೊನಾ ಓಡಿಹೋಗಲಿ. ಇನ್ಯಾವಾಗಲೂ ಈ ಜಗತ್ತಿಗೇ ಬಾರದಿರಲಿ’ ಎಂದಳು.

ಬಹುಶಃ ಹಿರಿಯರಂತೂ ಈ ಬಾರಿ ದೇವರ ಬಳಿ ಇದೇ ಬೇಡಿಕೆಯನ್ನು ಇಟ್ಟಿರಬೇಕು. ಕೊರೊನಾ ಎನ್ನುವುದು ಪ್ರತಿಯೊಬ್ಬರನ್ನೂ ಎಷ್ಟು ಕಾಡಿದೆ ಎಂದರೆ, ಈಗ ದಿನಕ್ಕೊಮ್ಮೆಯಾದರೂ ಎಲ್ಲರ ಬಾಯಲ್ಲಿ ಈ ಶಬ್ದ ಬಾರದೇ ಹೋಗದು. ಜಗತ್ತನ್ನು ಕೋವಿಡ್‌ ವ್ಯಾಪಿಸಿರುವಂತೆಯೇ... ಮಕ್ಕಳ ನಲಿಕಲಿಯ ಲೋಕದಲ್ಲೂ ಕೊರೊನಾ ಮಂಕು ಕವಿಸಿದೆ. ಆದರೆ ಅವರಲ್ಲಿ ಹೊಸ ಚಿಂತನೆ, ತಂತ್ರಜ್ಞಾನದ ಅರಿವು ಮೂಡಿಸುತ್ತಿದೆ.

ಕುಂದಾಪುರ ಬಳಿಯ ನಮ್ಮೂರಲ್ಲಿ ಮಕ್ಕಳು ಆಡುವ ಆಟದ ಸಾಲಿಗೆ ಈಗ ಕೊರೊನಾ ಆಟವೂ ಹೊಸದಾಗಿ ಸೇರಿಕೊಂಡಿದೆ. ಕೂಡು ಕುಟುಂಬವಾದ ಕಾರಣ ಮನೆಯಲ್ಲೇ ಮಕ್ಕಳ ಸೈನ್ಯ. 5–6ನೇ ತರಗತಿಯ ಇಬ್ಬರು ಮಕ್ಕಳು ಡಾಕ್ಟರ್‌ ಮತ್ತು ನರ್ಸ್‌ ಆದರೆ, ನರ್ಸರಿಗೆ ಹೋಗುವ ಹುಡುಗ ಕೊರೊನಾ ಪೇಷಂಟ್‌. ಡಾಕ್ಟರ್‌ ಮತ್ತು ನರ್ಸ್‌ ಇಬ್ಬರೂ ಸೇರಿ ಕೊರೊನಾ ಪೇಷಂಟ್‌ ಅನ್ನು ಎತ್ತಿ ತಂದು ಒಂದು ಮೂಲೆಯಲ್ಲಿ ಕೂರಿಸುವುದು. ಅಲ್ಲಿ ಅವನಿಗೆ ಕ್ವಾರಂಟೈನ್‌! ಅಲ್ಲಿಂದ ಈಚೆ ಬಂದರೆ ಹುಷಾರ್‌... ಎಂದು ಎಚ್ಚರಿಸಿ ಹೋಗುವುದು. ಕಣ್ಣುತಪ್ಪಿಸಿ ಹುಡುಗ ಓಡಿ ಹೋದರೆ; ಡಾಕ್ಟರ್‌, ನರ್ಸ್‌ ಆಂಬುಲೆನ್ಸ್‌ ತೆಗೆದುಕೊಂಡು ಅವನನ್ನು ಹುಡುಕಲು ಹೋಗುವುದು. ಮತ್ತೆ ಅವನನ್ನು ಎತ್ತಿ ಹಾಕಿಕೊಂಡು ಬರುವುದು. ಇದು ಅವರ ಆಟ! ಇನ್ನೊಂದಿಷ್ಟು ಮಕ್ಕಳಿದ್ದರೆ ಪೊಲೀಸರಾಗಬಹುದು. ಹೇಗಿದೆ ಮಕ್ಕಳು ಹುಟ್ಟು ಹಾಕಿದ ಹೊಸ ಆಟ?

ADVERTISEMENT

ಕೊರೊನಾ ಹಾವಳಿಯಲ್ಲೂ ಆನ್‌ಲೈನ್‌ ತರಗತಿಗಳು ನಿಧಾನಕ್ಕೆ ಮಕ್ಕಳ ಮನಸ್ಸನ್ನು ಅಭ್ಯಾಸದತ್ತ ಒಲಿಸುತ್ತಿರುವಾಗಲೇ, ಕೆಲವು ಶಾಲೆ–ಕಾಲೇಜುಗಳು ಆನ್‌ಲೈನ್‌ನಲ್ಲೇ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಉತ್ಸಾಹ ತುಂಬುವ ಪ್ರಕ್ರಿಯೆಯನ್ನು ಮುಂದುವರಿಸಿವೆ. ಛದ್ಮವೇಷ ಹಾಕಿಸಿ ವಿಡಿಯೊ ಮಾಡಿ ಕಳಿಸಿ ಎಂದರೆ, ಇಲ್ಲೂ ಕೊರೊನಾ ಗುಮ್ಮನ ಕಾಸ್ಟ್ಯೂಮ್‌ ಹಾಕಿ ಗಹಗಹಿಸಿ ನಕ್ಕ ಮಕ್ಕಳು ಎಷ್ಟೋ?

ಕೋವಿಡ್‌ ಭಯ ದೊಡ್ಡವರನ್ನು ವ್ಯಾಪಿಸಿದಷ್ಟು ಮಕ್ಕಳನ್ನು ಕಾಡಿಲ್ಲ. ಮಕ್ಕಳನ್ನು ಮನೆಯೊಳಗಿಟ್ಟುಕೊಂಡು ತ್ರಾಸು ಪಡುತ್ತಿರುವವರು ಪೋಷಕರೇ ಹೊರತು, ಮಕ್ಕಳು ಮೊಬೈಲ್‌, ಟಿ.ವಿ. ಎಂದು ತಮ್ಮ ಚಟುವಟಿಕೆಗೆ ಬೇರೆಬೇರೆ ದಾರಿ ಕಂಡುಕೊಂಡಿರುವುದು ಕಂಡುಬರುತ್ತಿದೆ. ಹೊರಗೆ ಹೋಗಲು ಸಾಧ್ಯವಾಗದ ಬೇಸರ ಇದ್ದರೂ, ಮನೆಯೊಳಗಣ ಆಟದ ಗಮ್ಮತ್ತನ್ನು ಅರಿಯುತ್ತಿದ್ದಾರೆ. ಓದು–ಬರಹ ಇಷ್ಟಪಡದ ಮಕ್ಕಳಿಗಂತೂ ‘ಕೋವಿಡ್‌ ರಜೆ’ ಪಾಯಸ ಕುಡಿಸಿದಂತಾಗಿದೆ.

ಮನೋ ಚಿಕಿತ್ಸಕರನ್ನು ಮಾತನಾಡಿಸಿದಾಗಲೂ ಇದೇ ಅಂಶ ಗುರುತಿಸಿದ್ದಾರೆ. ‘ಮನೆಯೊಳಗೆ ಮಕ್ಕಳನ್ನು ಆಟ–ಪಾಠಗಳಲ್ಲಿ ತೊಡಗಿಸುವುದು ಹೇಗೆ? ಅವರನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆ ಹಲವು ಪೋಷಕರಿಂದ ಕೇಳಿಬಂತು. ಮಕ್ಕಳ ದೈಹಿಕ–ಮಾನಸಿಕ ಸಮಸ್ಯೆಗಳ ಬಗ್ಗೆ ಯಾವ ಪೋಷಕರೂ ದೂರಲಿಲ್ಲ. ಕೋವಿಡ್‌ ಪಾಸಿಟಿವ್‌ ಬಂದ ಮಕ್ಕಳಲ್ಲೂ ಅಷ್ಟಾಗಿ ಮಾನಸಿಕ ಸಮಸ್ಯೆಗಳು ಕಂಡುಬರಲಿಲ್ಲ. ದೊಡ್ಡವರೇ ತಮ್ಮ ಸಂಬಂಧಿಕರು, ಊರವರು ದೂರವಿಡುತ್ತಿದ್ದಾರೆ ಎಂದು ತಲ್ಲಣಿಸುತ್ತಿರುವುದನ್ನು ಕಾಣುತ್ತಿದ್ದೇವೆಯೇ ಹೊರತು ಮಕ್ಕಳಿಗೆ ಇಂಥ ಚಿಂತೆಗಳೆಲ್ಲ ತಟ್ಟಲಿಲ್ಲ. ಈಗಂತೂ ಹೋಂ ಕ್ವಾರಂಟೈನ್‌ಗೆ ಅವಕಾಶ ಇರುವುದರಿಂದ ಯಾರಿಗೂ ಖಿನ್ನತೆಯ ತೊಂದರೆ ಕಂಡುಬರುವ ಸಾಧ್ಯತೆಗಳೂ ಕಡಿಮೆಯಾಗಿವೆ’ ಎನ್ನುತ್ತಾರೆ ದಾವಣಗೆರೆಯ ಆರೋಗ್ಯ ಇಲಾಖೆಯ ಕ್ಲಿನಿಕಲ್‌ ಸೈಕಾಲಜಿಸ್ಟ್‌ ಸಕ್ಕರೆಗೌಡ್ರು ವಿಜಯ್‌ಕುಮಾರ್‌.

‘ಕೋವಿಡ್‌ ಸಂದರ್ಭ ಪೋಷಕರಲ್ಲಂತೂ ತೀವ್ರ ಒತ್ತಡ ಉಂಟುಮಾಡಿದೆ. ಮಕ್ಕಳಿಗೆ ಶಾಲೆ–ಕಾಲೇಜುಗಳಿಲ್ಲದಿರುವ ಚಿಂತೆ ಒಂದೆಡೆಯಾದರೆ, ಅಲ್ಲಿಂದ ಬಂದ ವಿಡಿಯೊ, ಆನ್‌ಲೈನ್‌ ತರಗತಿಗಳನ್ನು ಮಕ್ಕಳು ನೋಡುವಂತೆ ಮಾಡುವ ಜವಾಬ್ದಾರಿಯೂ ಅವರ ಮೇಲೆಯೇ ಇದೆ. ಚಿಕ್ಕಮಕ್ಕಳಿಗಂತೂ ಶಾಲೆಯಿಂದ ಬಂದ ಪಾಠಗಳನ್ನು ಹೇಳಿಕೊಟ್ಟು, ಬರಹ ತಿದ್ದಿ–ತೀಡಿ ಮಾಡಲೇಬೇಕು. ಇಬ್ಬರೂ ಉದ್ಯೋಗಸ್ಥರಾದವರ ಪಾಡಂತೂ ಕೇಳುವಂತೆಯೇ ಇಲ್ಲ. ಮಕ್ಕಳಿಗೆ ಶಕ್ತಿ ಜಾಸ್ತಿ. ಅವರು ಮನೆಯಿಂದ ಹೊರಗೆ ಹೋಗುವಂತಿಲ್ಲ. ಸ್ನೇಹಿತರ ಜೊತೆ ಆಡುವಂತಿಲ್ಲ. ಹೀಗಾಗಿ ಅವರು ಮನೆಯಲ್ಲಿರುವವರೊಂದಿಗೆ ಆಟವಾಡಲು ಅಪೇಕ್ಷಿಸುತ್ತಾರೆ. ಅವರ ಆಟ–ಓಟದ ಸಾಮರ್ಥ್ಯಕ್ಕೆ ಹಿರಿಯರು ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿಯೇ ಪೋಷಕರಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ. ಮಕ್ಕಳನ್ನು ಮನೆಯಿಂದ ಹೊರಹೋಗದಂತೆ ತಡೆಯುವುದು, ಅವರ ಸಮಯದ ಸದುಪಯೋಗವಾಗುವಂತೆ ನೋಡಿಕೊಳ್ಳುವುದು. ಮೊಬೈಲ್‌ ಗೀಳು ಅಂಟದಂತೆ ಮಾಡುವುದು... ಹೀಗೆ ಚಿಂತೆಗಳ ಭಾರದಿಂದ ಪೋಷಕರ ಕರೆಗಳು ಆಗಾಗ ಬರುತ್ತಲೇ ಇರುತ್ತವೆ. ಇದಕ್ಕೆ ನಾವು ಸಲಹೆ–ಸೂಚನೆಗಳನ್ನು ನೀಡಿದ್ದೇವೆ. ಕಥೆ ಆಲಿಕೆ– ಓದು, ಚಿತ್ರಕಲೆ ಹಾಗೂ ಸಾಂಸ್ಕೃತಿಕ–ಸಾಹಿತ್ಯಗಳ ಚಟುವಟಿಕೆಯನ್ನು ಮಾಡಿಸುವಂತೆ ತಿಳಿಸಿದ್ದೇವೆ’ ಎಂದು ಅವರು ವಿವರಿಸಿದರು.

‘ಕೊರೊನಾ ಓಡಿಹೋಗಲಿ ಎಂದು ಗಣೇಶನನ್ನು ನಾನು ಬೇಡಿ ಕೊಂಡಿದ್ದೆ. ಆದರೆ ಇನ್ನೂ ಹೋಗೇ ಇಲ್ಲವಲ್ಲ? ಏಕೆ?’ ಎಂದು ಮಗಳು ಕೇಳಿದರೆ ಏನು ಉತ್ತರ ಹೇಳಲಿ ಎಂದು ನಾನು ಯೋಚನೆ ಮಾಡುತ್ತಿದ್ದೆ. ನಿರೀಕ್ಷೆಯಂತೇ ಪ್ರಶ್ನೆ ಬಂತು ಪುತ್ರಿಯಿಂದ. ‘ನೀನು ಹೇಳಿದ್ದು ಗಣೇಶ ದೇವರಿಗೆ ಕೇಳಲಿಲ್ಲ ಅಂತ ಕಾಣುತ್ತದೆ’ ಎಂದೆ. ಒಂದು ಕ್ಷಣ ಯೋಚನೆ ಮಾಡಿದ ಅವಳು, ‘ಶಿವನ ಹಬ್ಬ ಯಾವಾಗ ಬರುತ್ತದೆ’ ಎಂದು ಕೇಳಿದಳು. ಇನ್ನೂ ತಡ ಎಂದೆ. ‘ಸರಿ, ನಾನು ಆ ದೇವರ ಬಳಿ ಕೇಳುತ್ತೇನೆ’ ಎಂದು ಓಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.