ADVERTISEMENT

ನಗರಕ್ಕೂ ಸೈ ‘ಸಿಬಿ 300ಆರ್‌’

ಉದಯ ಯು.
Published 21 ಆಗಸ್ಟ್ 2019, 19:45 IST
Last Updated 21 ಆಗಸ್ಟ್ 2019, 19:45 IST
   

ದಶಕದ ಹಿಂದಿನವರೆಗೂ ಕಡಿಮೆ ಬೆಲೆಯ, ಹೆಚ್ಚು ಇಂಧನ ಸಾಮರ್ಥ್ಯದ ಬೈಕ್‌ಗಳಿಗಷ್ಟೇ ಸೀಮಿತವಾಗಿದ್ದ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆ ಈಗ ಪ್ರೀಮಿಯಂ ಶ್ರೇಣಿಯ ಬೈಕ್‌ಗಳಿಗೂ ತೆರೆದುಕೊಳ್ಳುತ್ತಿದೆ. ಸ್ಟೈಲಿಷ್‌ ಆಗಿರುವ ಸ್ಪೋರ್ಟ್ಸ್ ಕೆಫೆ ಬೈಕ್‌ಪ್ರಿಯರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ. ಕೆಟಿಎಂನಂಥ ಬೈಕ್‌ಗಳು ಈಗ ಸಣ್ಣ ಪಟ್ಟಣಗಳಲ್ಲೂ ಕಾಣಿಸಲಾರಂಭಿಸಿವೆ. ಇದರಿಂದಾಗಿ ದ್ವಿಚಕ್ರ ವಾಹನ ತಯಾರಿಸುವ ಅನೇಕ ಸಂಸ್ಥೆಗಳು ಭಾರತದ ಮಾರುಕಟ್ಟೆಗಾಗಿಯೇ ಬೈಕ್‌ ತಯಾರಿಸಲು ಆರಂಭಿಸಿವೆ.

ಹೋಂಡಾ ಸಂಸ್ಥೆಗೆ ಭಾರತದ ಮಾರುಕಟ್ಟೆ ಹೊಸದಲ್ಲ. ಈ ಸಂಸ್ಥೆ ಮೇಲ್ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟು ‘ಹೋಂಡಾ ಸಿಬಿ 300ಆರ್‌’ ಬೈಕ್‌ ಅನ್ನು ಭಾರತದ ಮಾರುಕಟ್ಟೆಗೆ ಇಳಿಸಿದೆ. ಇದು ಸಂಸ್ಥೆಯ ಹೊಸ ಬೈಕ್‌ ಅಲ್ಲ. ಸುಮಾರು ಐದು ವರ್ಷಗಳ ಹಿಂದೆ ಜಾಗತಿಕ ಮಾರುಕಟ್ಟಗೆ ಪರಿಚಯಿಸಿದ್ದ ಈ ಬೈಕ್‌ನಲ್ಲಿ ಇಲ್ಲಿಯ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿ ಬಿಡುಗಡೆ ಮಾಡಲಾಗಿದೆ. ‘ಪ್ರಜಾವಾಣಿ’ ಇತ್ತೀಚೆಗೆ ಈ ಬೈಕ್‌ನ ಟೆಸ್ಟ್‌ ಡ್ರೈವ್‌ ಮಾಡಿದೆ.

ಭಾರತೀಯ ಗ್ರಾಹಕರ ಅಪೇಕ್ಷೆ, ನಿರೀಕ್ಷೆಗಳನ್ನು ಅರಿತಿರುವ ಕಂಪನಿಯವರು, ಸಿಬಿ 300ಆರ್‌ ಬೈಕ್‌ನ ವಿನ್ಯಾಸದ ಕಡೆಗೆ ಹೆಚ್ಚು ಗಮನ ಕೊಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ರೆಟ್ರೊ ಸ್ಟೈಲ್‌ ಜೊತೆಗೆ ಆಧುನಿಕತೆಯ ಹದವಾದ ಮಿಶ್ರಣ ಬೈಕ್‌ ಅನ್ನು ಆಕರ್ಷಕಗೊಳಿಸಿದೆ. ದಶಕಗಳ ಹಿಂದಿನ ಬೈಕ್‌ಗಳಲ್ಲಿ ಬಳಕೆಯಾಗುತ್ತಿದ್ದ ವೃತ್ತಾಕಾರದ ಹೆಡ್‌ಲೈಟ್‌ ಅನ್ನು ಮರು ಪರಿಚಯಿಸಿರುವ ಸಂಸ್ಥೆ ಎಲ್‌ಇಡಿಯ ಮೂಲಕ ಅದರ ಅಂದವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ, ಇಂಡಿಕೇಟರ್‌ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಎಲ್‌ಇಡಿ ಬಳಕೆಯಾಗಿದೆ.

ADVERTISEMENT

ಶಾಕ್‌ ಅಬ್ಸಾರ್ಬರ್‌ಗಳು ಈ ಬೈಕ್‌ನ ಹೈಲೈಟ್‌. ಮುಂದಿನ ಚಕ್ರಕ್ಕೆ ತಲೆಕೆಳಗಾದ ಸಸ್ಪೆನ್ಷನ್‌ ಬಳಸಿದ್ದು ಆಕರ್ಷಕವಾಗಿ ಕಾಣಿಸುತ್ತದೆ. ಸ್ಪ್ಲಿಟ್‌ ಸೀಟ್‌ನಲ್ಲಿ ಹಿಂಬದಿ ಸವಾರನ ಸೀಟ್‌ ಸ್ವಲ್ ಕಿರಿದು ಎನಿಸಿದರೂ ಆರಾಮದಾಯಕವಾಗಿದೆ. ಚಾಲಕನ ಸೀಟ್‌ನ ಎತ್ತರ ಸ್ವಲ್ಪ ಕಡಿಮೆ ಇರುವುದರಿಂದ ಐದೂವರೆ ಅಡಿ ಎತ್ತರದ ವ್ಯಕ್ತಿಗೂ ಬೈಕ್‌ ಓಡಿಸಲು ಸಮಸ್ಯೆ ಎನಿಸುವುದಿಲ್ಲ.

ಭಾರ ಕಡಿಮೆ

ಆರು ಗೇರ್‌ಗಳ ಈ ಬೈಕ್‌, ಮೂರು ಸೆಕೆಂಡ್‌ಗಳಲ್ಲಿ ಗಂಟೆಗೆ 60 ಕಿ.ಮೀ. ವೇಗವನ್ನು ಮತ್ತು 7 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗವನ್ನು ತಲುಪಬಲ್ಲಷ್ಟು ಶಕ್ತಿಶಾಲಿಯಾಗಿದೆ. ಗಂಟೆಗೆ ನೂರು ಕಿ.ಮೀ.ಗೂ ಹೆಚ್ಚಿನ ವೇಗದಲ್ಲಿದ್ದರೂ ಬೈಕ್‌ ಸ್ಥಿರವಾಗಿರುತ್ತದೆ. ಸಾಮಾನ್ಯವಾಗಿ ಇಂಥ ಬೈಕ್‌ಗಳ ಭಾರ ಹೆಚ್ಚಾಗಿರುವುದರಿಂದ ದೊಡ್ಡ ನಗರಗಳಲ್ಲಿ ಓಡಿಸಲು ಸೂಕ್ತವಾಗುವುದಿಲ್ಲ. ಆದರೆ, ಸಿಬಿ 300 ಆರ್‌ನ ಭಾರವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಈ ಬೈಕ್‌ ಸುಮಾರು 147 ಕೆ. ಜಿ. ತೂಕವಿರುವುದರಿಂದ ನಗರದೊಳಗೆ ಓಡಾಡಲೂ ಕಷ್ಟವೆನಿಸುವುದಿಲ್ಲ. ವಾಹನ ದಟ್ಟಣೆಯಲ್ಲೂ ಸುಲಭವಾಗಿ ಓಡಿಸಲು ತೊಂದರೆ ಇಲ್ಲ.

ಸಿಬಿ 300 ಆರ್‌ನ ಇಂಧನ ಕ್ಷಮತೆ ಲೀಟರ್‌ಗೆ ಸುಮಾರು 28 ಕಿ.ಮೀ. ಇದರ ಇಂಧನ ಟ್ಯಾಂಕ್‌ನ ವಿನ್ಯಾಸ ಆಕರ್ಷಕವಾಗಿದೆ. ಆದರೆ, ಸಾಮರ್ಥ್ಯ 10 ಲೀಟರ್‌ ಮಾತ್ರ. ಇದು ಬೈಕ್‌ಗೆ ಸಣ್ಣ ಕೊರತೆಯಾಗಿ ಕಾಣಿಸುತ್ತದೆ. ಡಿಜಿಟಲ್‌ ಸ್ಪೀಡೊ ಮೀಟರ್‌ ಆಕರ್ಷಕವಾಗಿದೆ. ಆದರೆ ಗೇರ್‌ ಇಂಡಿಕೇಟರ್‌ ಇಲ್ಲ. ಈಚೆಗೆ ಎಲ್ಲಾ ದ್ವಿಚಕ್ರ ವಾಹನ ತಯಾರಕರೂ ಮೀಟರ್‌ನಲ್ಲಿ ಸೈಡ್‌ ಸ್ಟ್ಯಾಂಡ್‌ ಇಂಡಿಕೇಟರ್‌ ನೀಡುತ್ತಿದ್ದಾರೆ. ಆದರೆ ಸಿಬಿ 300ಆರ್‌ನಲ್ಲಿ ಇದನ್ನು ನೀಡಿಲ್ಲ. ಸಾಮಾನ್ಯವಾಗಿ ಬೈಕ್‌ನ ಎಡಗೈ ಭಾಗದಲ್ಲಿ ಕೆಳಗಡೆ ಹಾರನ್‌ ಹಾಗೂ ಮೇಲೆ ಇಂಡಿಕೇಟರ್‌ ಸ್ವಿಚ್‌ ನೀಡಲಾಗುತ್ತದೆ. ಸಿಬಿ 300 ಆರ್‌ನಲ್ಲಿ ಈ ಜಾಗವನ್ನು ಅದಲುಬದಲು ಮಾಡಲಾಗಿದೆ. ಆದ್ದರಿಂದ ಹೊಸದಾಗಿ ಖರೀದಿಸುವವರಿಗೆ ಕೆಲವು ದಿನಗಳ ಕಾಲ ಸ್ವಲ್ಪ ಸಮಸ್ಯೆ ಎನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.