ADVERTISEMENT

ಪ್ರಯಾಣಿಕ ವಾಹನ ಮಾರಾಟ ಇಳಿಕೆ

ಪಿಟಿಐ
Published 1 ಮೇ 2021, 21:19 IST
Last Updated 1 ಮೇ 2021, 21:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿಮಾರುತಿ, ಹುಂಡೈ ಮೋಟರ್, ಟಾಟಾ ಮೋಟರ್ಸ್‌ ಮತ್ತು ಕಿಯಾ ಕಂಪನಿಗಳ ಪ್ರಯಾಣಿಕ ವಾಹನಗಳ ಮಾರಾಟವು ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ ತಿಂಗಳಿನಲ್ಲಿ ಇಳಿಕೆಯಾಗಿದೆ.

ಆದರೆ, ಮಹೀಂದ್ರ ಆ್ಯಂಡ್‌ ಮಹೀಂದ್ರ ಮತ್ತು ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಗಳ ಪ್ರಯಾಣಿಕ ವಾಹನ ಮಾರಾಟದಲ್ಲಿ ಬೆಳವಣಿಗೆ ಕಂಡುಬಂದಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಏಪ್ರಿಲ್‌ನಲ್ಲಿ ಒಟ್ಟಾರೆ 1.59 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಮಾರ್ಚ್‌ನಲ್ಲಿ ಮಾರಾಟ ಆಗಿದ್ದ 1.67 ಲಕ್ಷ ವಾಹನಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ 4ರಷ್ಟು ಇಳಿಕೆ ಆಗಿದೆ.

ADVERTISEMENT

ಹುಂಡೈ ಮೋಟರ್‌ ಇಂಡಿಯಾ ಕಂಪನಿಯ ಮಾರಾಟವು 64,621 ರಿಂದ 59,203ಕ್ಕೆ, ಶೇ 8ರಷ್ಟು ಕಡಿಮೆಯಾಗಿದೆ.

ಟಾಟಾ ಮೋಟರ್ಸ್‌ ಕಂಪನಿಯ ಪ್ರಯಾಣಿಕ ವಾಹನ ಮಾರಾಟವು 29,654 ರಿಂದ 25,095ಕ್ಕೆ, ಶೇ 15ರಷ್ಟು ಇಳಿಕೆ ಆಗಿದೆ. ಕಿಯಾ ಇಂಡಿಯಾದ ಮಾರಾಟವು ಶೇ 16ಷ್ಟು ಇಳಿಕೆಯಾಗಿದೆ.

ಮಾರಾಟ ಹೆಚ್ಚಳ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ಪ್ರಯಾಣಿಕ ವಾಹನ ಮಾರಾಟ ಶೇ 9ರಷ್ಟು ಏರಿಕೆ ಆಗಿದೆ. ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯ ದೇಶಿ ಮಾರಾಟ ಶೇ 28ರಷ್ಟು ಹೆಚ್ಚಾಗಿದೆ.

ಹಲವು ಭಾಗಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳು ಜಾರಿಯಾಗಿರುವುದರಿಂದ ಪೂರೈಕೆಗೆ ಸಂಬಂಧಿಸಿದ ಸವಾಲುಗಳು ಮುಂದುವರಿದಿವೆ ಎಂದು ಮಹೀಂದ್ರ ಕಂಪನಿಯ ಸಿಇಒ ವಿಜಯ್‌ ನಕ್ರಾ ಹೇಳಿದ್ದಾರೆ.

2020ರ ಏಪ್ರಿಲ್‌ನಲ್ಲಿ ಲಾಕ್‌ಡೌನ್‌ನಿಂದಾಗಿ ಕಂಪನಿಗಳು ಒಂದೇ ಒಂದು ವಾಹನವನ್ನೂ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ 2021ರ ಏಪ್ರಿಲ್‌ನಲ್ಲಿ ಆಗಿರುವ ಮಾರಾಟದ ಅಂಕಿ–ಅಂಶವನ್ನು 2020ರ ಏಪ್ರಿಲ್‌ ತಿಂಗಳಿನೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಕಂಪನಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.