ADVERTISEMENT

ಕಪಾಟಿನಲ್ಲಿರುವ ಉಡುಪಿಗೆ ಫಂಗಸ್‌ ಬಂದೀತು ಜೋಕೆ!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 19:30 IST
Last Updated 21 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್– 19 ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಕಚೇರಿಯ ಕಡೆ ಮುಖ ಮಾಡದೇ ಇದ್ದುದರಿಂದ ಕಚೇರಿಗೆ ಧರಿಸುತ್ತಿದ್ದ ಬಟ್ಟೆಗಳೆಲ್ಲಾ ವಾರ್ಡ್‌ರೋಬ್‌ ಸೇರಿವೆ. ಆ ಕಾರಣದಿಂದ ವಾರ್ಡ್‌ರೋಬ್‌ನಲ್ಲಿನ ಬಟ್ಟೆಗಳ ಮೇಲೆ ನಾವು ಗಮನ ಹರಿಸಿಲ್ಲ.ಅಲ್ಲದೇ ಎರಡು ಮೂರು ತಿಂಗಳುಗಳಿಂದ ಸುರಿಯುತ್ತಿದ್ದ ಮಳೆ ಹಾಗೂ ಶೀತ ವಾತಾವರಣದ ಕಾರಣದಿಂದ ಫಂಗಸ್ ಕೂಡ ಹಿಡಿದಿರಬಹುದು. ಇದರಿಂದ ಒಮ್ಮೆ ಅವುಗಳ ಸ್ವಚ್ಛತೆಯತ್ತ ಮುಖ ಮಾಡುವುದು ಉತ್ತಮ. ಇದರಿಂದ ಬಟ್ಟೆಗಳು ಕೆಡದಂತೆ ರಕ್ಷಿಸಬಹುದು. ಅಲ್ಲದೇ ಇನ್ನೇನು ಕೆಲವು ದಿನಗಳಲ್ಲಿ ಆರಂಭವಾಗಬಹುದಾದ ಕಚೇರಿಗೆ ಸಿದ್ಧತೆ ಮಾಡಿಕೊಂಡ ಹಾಗೂ ಆಗುತ್ತದೆ.

*ವಾರ್ಡ್‌ರೋಬ್‌ನಲ್ಲಿ ಜೋಡಿಸಿ ಇಟ್ಟಿರುವ ಬಟ್ಟೆಗಳನ್ನೆಲ್ಲಾ ಹೊರಗೆ ತೆಗೆದು ಕೊಡವಿ ಹಾಕಿ.

* ಕೊಡವಿದ ಬಟ್ಟೆಗಳನ್ನು ದಿನದ ಮಟ್ಟಿಗೆ ಹ್ಯಾಂಗರ್ ಅಥವಾ ತಂತಿಯ ಮೇಲೆ ನೇತು ಹಾಕಿ ಗಾಳಿಯಾಡಲು ಬಿಡಿ. (ನಿಮ್ಮ ಅದೃಷ್ಟಕ್ಕೆ ಚೆನ್ನಾಗಿ ಬಿಸಿಲು ಬಂದರೆ ಅರ್ಧದಿನದ ಮಟ್ಟಿಗಾದರೂ ಬಿಸಿಲಿನಲ್ಲಿ ಒಣಗಿಸಿದರೆ ಇನ್ನೂ ಉತ್ತಮ).

ADVERTISEMENT

*ವಾರ್ಡ್‌ರೋಬ್‌ನಲ್ಲಿದ್ದ ಬಟ್ಟೆಗಳಿಗೆ ಇಸ್ತ್ರಿ ಮಾಡಿ. ನೀಟಾಗಿರುವ ಬಟ್ಟೆಗೂ ಇಸ್ತ್ರಿಪೆಟ್ಟಿಗೆಯ ಶಾಖ ತಾಗಿಸಿ.

* ವಾರ್ಡ್‌ರೋಬ್‌ನಲ್ಲಿ ಪುನಃ ಬಟ್ಟೆ ಜೋಡಿಸುವ ಮೊದಲು ವಾರ್ಡ್‌ರೋಬ್‌ಗೆ ಹಾಸಿದ್ದ ಹಳೆ ಪೇಪರ್ ತೆಗೆದು ಒಮ್ಮೆ ಚೆನ್ನಾಗಿ ಒರೆಸಿ. ಹೊಸ ಪೇಪರ್ ಹಾಕಿ ನಂತರ ಬಟ್ಟೆ ಜೋಡಿಸಿ. ‌

* ಕಚೇರಿಗೆ ಹೋಗದೇ ಬಟ್ಟೆಯನ್ನು ಸಿಕ್ಕ ಸಿಕ್ಕ ಕಡೆ ಇಟ್ಟಿರುತ್ತೀರಿ. ಇದೇ ಸರಿಯಾದ ಸಮಯ ಎಂದುಕೊಂಡು ಪ್ಯಾಂಟ್‌–ಶರ್ಟ್‌, ಕುರ್ತಾ–ಲೆಗ್ಗಿಂಗ್ಸ್‌, ಸ್ಕರ್ಟ್‌–ಟಾಪ್ ಹೀಗೆ ಜೋಡಿ ಮಾಡಿ ಇಡಿ. ಇದರಿಂದ ಹುಡುಕುವುದು ಸುಲಭ, ಅಲ್ಲದೇ ಕಚೇರಿ ಆರಂಭವಾದಾಗ ಗಡಿಬಿಡಿ ಮಾಡುವುದು ತಪ್ಪುತ್ತದೆ.

*ಬಟ್ಟೆ ಹಾಳಾಗದಂತೆ ಹಾಗೂ ಸುವಾಸನೆ ಬರುವಂತೆ ಮಾಡಲು ವಾರ್ಡ್‌ರೋಬ್‌ನಲ್ಲಿ ನ್ಯಾಫ್ತಲಿನ್ ಬಾಲ್ಸ್ ಇಡುವುದು ರೂಢಿ. ಅದು ಹಳೆಯದಾಗಿದ್ದರೆ ಬದಲಿಸಿ ಹೊಸತನ್ನು ಇಡಿ.

* ಬಟ್ಟೆ ಕಡೆದಂತೆ ಹಾಗೂ ಶೀತ ವಾತಾವರಣದ ಕಾರಣದಿಂದ ಫಂಗಸ್ ಹಿಡಿಯದಂತೆ ಮಾಡಲು ಕರ್ಪೂರ ಹಾಗೂ ಒಣಗಿದ ಬೇವಿನ ಎಲೆಯನ್ನು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ಇಡಬಹುದು. ಉಪ್ಪು ಕೂಡ ಫಂಗಸ್ ಹಿಡಿಯದಂತೆ ತಡೆಯಲು ಸಹಕಾರಿ. ಉಪ್ಪನ್ನು ಕೂಡ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ ವಾರ್ಡ್‌ರೋಬ್‌ನಲ್ಲಿ ಇರಿಸಬಹುದು.

* ಚಾಕ್‌ಪೀಸ್‌ ಇರಿಸುವುದರಿಂದ ಜಿರಳೆ, ಇರುವೆಗಳು ವಾರ್ಡ್‌ರೋಬ್‌ನಲ್ಲಿ ಸುಳಿಯದಂತೆ ತಡೆಯಬಹುದು.

* ವಾರ್ಡ್‌ರೋಬ್‌ನಲ್ಲಿ ಕೊಂಚ ಗಾಳಿಯಾಡಲು ಅವಕಾಶ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.