ADVERTISEMENT

ಬೇಸಿಗೆಗೆ ಹಿತ ಕಾಟನ್ ಸೀರೆ

ನೀರೆಗೆ ಚೆಂದದ ಕಾಟನ್ ಸೀರೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 19:30 IST
Last Updated 8 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಸೀರೆ ಹೇಗಿರಬೇಕೆಂದರೆ ಹೂವಿನಷ್ಟು ಹಗುರವಾಗಿರಬೇಕು, ಉಟ್ಟರೆ ನಯವಾಗಿ ಮೈಗೆ ಒಪ್ಪುವಂತಿರಬೇಕು’...

ಮನೆಯಲ್ಲಿ ಯಾವಾಗ ಸೀರೆಯ ಬಗ್ಗೆ ಚರ್ಚೆ ಶುರುವಾದರೂ ಮೊದಲು ನನ್ನಜ್ಜಿ ಹೇಳುತ್ತಿದ್ದ ಮಾತುಗಳಿವು. ಜೀವಮಾನದುದ್ದಕ್ಕೂ ಬರಿಯ ಕಾಟನ್ ಸೀರೆಗಳನ್ನೆ ಉಟ್ಟ ಅಜ್ಜಿಯನ್ನು ನೋಡಿದಾಗಲೆಲ್ಲ , ನಾವು ‘ನಿನಗೊಂದು ದಿನ ಚಮಕಿ ಇರುವ ಮಿಣ ಮಿಣ ಸೀರೆ ಉಡಿಸ್ತೇವೆ ನೋಡು’ ಎಂದು ಆಕೆಯನ್ನು ತಮಾಷೆ ಮಾಡುತ್ತಿದ್ದವು. ಈಗ ನಾವೆಲ್ಲ ಸೀರೆ ಉಡುವ ಸಮಯಕ್ಕೆ ಅಜ್ಜಿಯ ಮಾತುಗಳು ಎಷ್ಟು ಸಹಜ ಎನಿಸುತ್ತಿದೆ.

ವಯಸ್ಸಾದವರಿಗಷ್ಟೇ ಕಾಟನ್ ಸೀರೆಗಳು ಮೀಸಲು ಎನ್ನುವ ಕಾಲವೊಂದಿತ್ತು. ಆದರೀಗ ಟ್ರೆಂಡ್ ಬದಲಾಗಿದೆ. ಉದ್ಯೋಗಸ್ಥ ಮಹಿಳೆಯರಿಂದ ಹಿಡಿದು ಕಾಲೇಜು ಹುಡುಗಿಯರವರೆಗೆ ಎಲ್ಲರೂ ಕಾಟನ್ ಸೀರೆಗಳ ಮೊರೆಹೋಗಿದ್ದಾರೆ. ತಾವೂ ಉಟ್ಟು ಇತರರಿಗೂ ಕೈಮಗ್ಗದ ಕಾಟನ್ ಸೀರೆಗಳನ್ನು ಬಳಸುವಂತೆ ಪ್ರೇರೇಪಿಸುವ ಯುವ ವರ್ಗವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ವಿವಿಧ ಬಗೆಯ ಸೀರೆಗಳನ್ನು ತೋರಿಸುವುದಷ್ಟೆ ಅಲ್ಲದೆ ವಿಭಿನ್ನವಾಗಿ ಅವುಗಳನ್ನು ಉಡುವ ವಿಡಿಯೊಗಳು ಈಗ ಜನಪ್ರಿಯವಾಗಿವೆ. ಆ ಟ್ರೆಂಡ್ ಹೇಗಿದೆ ಎಂದರೆ, ಜೀವಮಾನದಲ್ಲಿ ಒಮ್ಮೆಯೂ ಸೀರೆಯ ಕಡೆ ಮುಖ ಮಾಡದವರೂ ಅವುಗಳನ್ನು ಕೊಂಡು ಉಡುವಂತಾಗಿದೆ. ಎಲ್ಲ ಸರಿ, ಆದರೆ, ಕಾಟನ್ ಸೀರೆಗಳೇ ಯಾಕೆ ಈಗ ಟ್ರೆಂಡ್ ಆಗುತ್ತಿವೆ. ಜನರು ಇಷ್ಟಪಡುತ್ತಿದ್ದಾರೆ? ಇಲ್ಲಿದೆ ಒಂದಿಷ್ಟು ಮಾಹಿತಿ;

ADVERTISEMENT

ಈ ಕಾಟನ್‌ ಸೀರೆಗಳು ಎಲ್ಲ ಕಾಲಕ್ಕೂ ಉಡಬಹುದು. ಆದರೆ, ಬೇಸಿಗೆಯಲ್ಲಿ ಇವುಗಳ ಅನುಕೂಲ ಜಾಸ್ತಿ. ಮೃದುವಾದ ಕಾಟನ್ ಸೀರೆಗಳು ಬೇಸಿಗೆಯ ದಗೆಗೆ ಕೊಂಚ ತಣ್ಣಗಿನ ಅನುಭವವನ್ನು ನೀಡುವುದರ ಜೊತೆಗೆ ಆರಾಮದಾಯಕವಾಗಿರುತ್ತದೆ. ಇದು ಮೊದಲ ಕಾರಣ.

ತ್ವಚೆಗೆ ಹಾನಿಯಾಗದು

ಚರ್ಮದ ಅಲರ್ಜಿ, ತುರಿಕೆ, ರ‍್ಯಾಷಸ್‌ನಂತಹ ಯಾವುದೇ ತೊಂದರೆಗಳು ಕಾಟನ್‌ ಸೀರೆಗಳಲ್ಲಿ ಆಗುವುದಿಲ್ಲ. ಹಾಗಾಗಿ ಬೆವರಿನ ಸಮಸ್ಯೆಯಿರುವವರಿಗೆ ಹೆಚ್ಚು ಅನುಕೂಲ.

ಬಾಳಿಕೆ ಜಾಸ್ತಿ

ಉತ್ತಮ ಗುಣಮಟ್ಟದ ಸೀರೆಗಳು ಹತ್ತಾರು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಒಂದಿಷ್ಟು ನಿರ್ವಹಣೆ ಮತ್ತು ಆರೈಕೆ ಬೇಕಾಗಬಹುದು ಅಷ್ಟೆ.

ಕೈಗೆಟುಕುವ ಬೆಲೆ

ಮುನ್ನೂರು ರೂಪಾಯಿಯಿಂದ ಹಿಡಿದು ಮೂವತ್ತು ಸಾವಿರ ರೂಪಾಯಿಯವರೆಗೂ ಕಾಟನ್ ಸೀರೆಗಳು ಲಭ್ಯ. ಗುಣಮಟ್ಟ ಮತ್ತು ವಿನ್ಯಾಸದ ಆಧಾರದಲ್ಲಿ ಬೆಲೆ ನಿಗದಿಯಾಗಿರುತ್ತದೆ. ಕಾಟನ್ ಸೀರೆಗಳು ಆರಾಮದಾಕಯವಾಗಿರುವುದಷ್ಟೇ ಅಲ್ಲದೆ, ಉಟ್ಟಾಗ ಸೊಗಸಾಗಿ ಕಾಣುವಂತೆಯೂ ಮಾಡುತ್ತದೆ.

ವಿನ್ಯಾಸಗಳಲ್ಲಿ ವೈವಿದ್ಯ

ಇಕ್ಕತ್ ಹಾಗೂ ಅಜರಖ್‌ ವೆರೈಟಿಯ ಸೀರೆಗಳು ವಿವಿಧ ಪ್ರಿಂಟ್‌ಗಳಲ್ಲಿ ಲಭ್ಯ. ಒಂದು ಮತ್ತೊಂದಕ್ಕಿಂತ ವಿಭಿನ್ನ. ಸೀಮಿತ ಕಲೆಕ್ಷನ್ಸ್ ಇಷ್ಟಪಡುವವರಿಗೆ ಹೇಳಿ ಮಾಡಿಸಿದಂತಿವೆ.

ಟ್ರೆಂಡಿ ಕಾಟನ್ ಬ್ಲೌಸ್‌

ಕಾಟನ್ ಸೀರೆಗಳು ಇತ್ತೀಚೆಗೆ ಹೆಚ್ಚು ವಿದ್ಯಮಾನಕ್ಕೆ ಬರಲು ಮತ್ತೊಂದು ಕಾರಣ ರವಿಕೆಯ ವಿನ್ಯಾಸ. ಬ್ಲೌಸ್‌ಗಳನ್ನು ಸಾಧ್ಯವಾದಷ್ಟೂ ವಿಭಿನ್ನ ಶೈಲಿಗಳಲ್ಲಿ ಹೊಲಿಸಲು ಸಾಧ್ಯವಾಗುವುದು ಇದರಲ್ಲಿ ಮಾತ್ರ. ಯಾವುದೇ ಬಗೆಯಾದರೂ ಅಚ್ಚುಕಟ್ಟಾಗಿ ಕೂರುವಂತೆ ಮಾಡುವುದು ಬಟ್ಟೆಯ ಪ್ರಮುಖ ಗುಣಗಳಲ್ಲಿ ಒಂದು. ಹಾಗಾಗಿಯೇ ಹಾಳಾದರೆ ಎನ್ನುವ ಯಾವುದೇ ಭಯವಿಲ್ಲದೆ ಒಂದು ಕೈ ನೋಡಬಹುದು.

ಭಾರತೀಯ ಸಂಪ್ರದಾಯದ ಜೀವಾಳ ಸೀರೆ ಎನ್ನುವುದರಲ್ಲಿ ಸಂಶಯವಿಲ್ಲ. ಫ್ಯಾಶನ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕಾಟನ್ ಸೀರೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಂತರ ಮನಸ್ಸನ್ನು ಗೆದ್ದಿರುವುದು ವಿಶೇಷ.

ಹಲವು ಬಗೆಗಳೂ ಉಂಟು

ಬದಲಾವಣೆಯನ್ನು ಬಯಸುವವರಿಗಾಗಿಯೇ ಕಾಟನ್ ಸೀರೆಯಲ್ಲಿ ಹಲವು ವಿಧಗಳಿವೆ. ಉದಾಹರಣೆಗೆ ಇಕ್ಕತ್, ಅಜರಖ್‌, ಒಡಿಶಾದ ಸಂಬಾಲ್‌ಪುರಿ, ಕಂಚಿ ಕಾಟನ್, ಮಸ್ಲಿನ್, ಖಾದಿ ಕಾಟನ್ ಸಿಲ್ಕ್, ಗದ್ವಾಲ್, ಜಮ್ದಾನಿ ಮತ್ತು ಪಶ್ಚಿಮ ಬಂಗಾಳದ ಟಿಎಎನ್‌ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.