ADVERTISEMENT

Karnataka Budget 2021: ಬಜೆಟ್‌ನಲ್ಲಿ ಅವೈಜ್ಞಾನಿಕ ಲಾಕ್‌ಡೌನ್‌ನ ಕರಿನೆರಳು

ಮಕ್ಕಳ ಕುಪೋಷಣೆ ಏರಿಕೆಯಾಗಿದ್ದು, ಪರಿಹಾರ ಕಾಣದಾಗಿದೆ

ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ
Published 8 ಮಾರ್ಚ್ 2021, 19:31 IST
Last Updated 8 ಮಾರ್ಚ್ 2021, 19:31 IST
ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ
ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ   

ಕೊರೊನಾ ಸೋಂಕಿನ ನೆಪದಲ್ಲಿ ಮಾಡಲಾದ ಅತ್ಯಾತುರದ, ಅತಿ ದೀರ್ಘ, ಅತಿ ಕಠಿಣ, ಅವೈಜ್ಞಾನಿಕ ಲಾಕ್‌ಡೌನ್‌ನ ಕರಿನೆರಳು ಮುಂಗಡ ಪತ್ರವನ್ನು ಇಡಿಯಾಗಿ ವ್ಯಾಪಿಸಿದೆ. ಬಹಳ ವರ್ಷಗಳ ಬಳಿಕ ರಾಜ್ಯವು ₹15,000 ಕೋಟಿಗೂ ಹೆಚ್ಚು ತೆರಿಗೆ ವರಮಾನವನ್ನು ಕಳೆದುಕೊಂಡಿದೆ. ಕೇಂದ್ರದಿಂದ ಬರಬೇಕಾದ ಹಣವೂ ಬಾರದಾಗಿದೆ. ಅಭಿವೃದ್ಧಿಯು ಶೇ 2.6 ಕುಸಿದಿದೆ. ಸಾಲದ ಹೊರೆ ಇನ್ನಷ್ಟು ಏರಿದೆ. ಇವಕ್ಕೆಲ್ಲ ಕೊರೊನಾ ವೈರಸ್ ಯಾ ಕೋವಿಡ್ ರೋಗ ಕಾರಣವಲ್ಲ, ಬದಲಿಗೆ ಲಾಕ್‌ಡೌನ್ ಎಂಬ ತಪ್ಪು ನಿರ್ಧಾರವೇ ಕಾರಣ.

ಎಲ್ಲ ತೆರಿಗೆಗಳನ್ನು ಕೇಂದ್ರವೇ ಏರಿಸುತ್ತಿರುವುದರಿಂದ ರಾಜ್ಯಕ್ಕೆ ಇನ್ನಷ್ಟು ಏರಿಸಲು ಅವಕಾಶ ಇಲ್ಲವಾಗಿ, ಹಣವನ್ನು ಕ್ರೋಢೀಕರಿಸುವುದು ಕಷ್ಟವಾಗಿದೆ. ಹೊಸ ಯೋಜನೆಗಳಿಗೆ ಹಣ ಇಲ್ಲದಂತಾಗಿದೆ.

ಕೊರೊನಾ ಹೆಸರಿನಲ್ಲಿ ₹5,300 ಕೋಟಿ ವೆಚ್ಚವಾಗಿದೆ ಎಂದು ಹೇಳಲಾಗಿದ್ದರೂ, ಅತಿ ಗಂಭೀರವಾಗಿ ಸಮಸ್ಯೆಗೀಡಾಗಿದ್ದ ಹೆಚ್ಚಿನ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಸ್ವಂತ ಖರ್ಚಿನಲ್ಲೇ ಚಿಕಿತ್ಸೆ ಪಡೆದಿರುವುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಈ ಬಗ್ಗೆ ಶ್ವೇತಪತ್ರ ಬರಬೇಕಿದೆ.

ADVERTISEMENT

ಪ್ರತೀ ವರ್ಷದಂತೆ ಕೆಲವು ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಸೌಲಭ್ಯವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಬಜೆಟ್‌ನಲ್ಲಿ ಹೇಳಲಾಗಿರುವುದನ್ನು ಬಿಟ್ಟರೆ, ಆರೋಗ್ಯ ಇಲಾಖೆಗೆ ಯಾವುದೇ ಗಣನೀಯ ಏರಿಕೆಯು ಕಂಡುಬರುತ್ತಿಲ್ಲ. ಲಾಕ್‌ಡೌನ್, ಶಾಲೆಗಳ ಮುಚ್ಚುಗಡೆ, ಬಿಸಿಯೂಟ ನಿಲುಗಡೆಗಳಿಂದ ರಾಜ್ಯದ ಮಕ್ಕಳು ಬಹಳಷ್ಟು ನರಳಿದ್ದು, ಮಕ್ಕಳ ಕುಪೋಷಣೆಯಲ್ಲಿ ಬಹಳಷ್ಟು ಏರಿಕೆಯಾಗಿದೆ. ಆದರೆ, ಅವರಿಗೆ ಇನ್ನಷ್ಟು ಪೌಷ್ಟಿಕವಾದ ಆಹಾರವನ್ನು, ಬಿಸಿಯೂಟದಲ್ಲಿ ಮೊಟ್ಟೆಯನ್ನು ನೀಡುವುದಕ್ಕೆ ಯಾವ ಆಲೋಚನೆಯೂ ಈ ಮುಂಗಡ ಪತ್ರದಲ್ಲಿ ಕಾಣುವುದಿಲ್ಲ.

ಹಾಗೆಯೇ, ಲಾಕ್‌ಡೌನ್‌ನಿಂದ ಸಂಕಷ್ಠಕ್ಕೀಡಾಗಿರುವ ಕಾರ್ಮಿಕರು, ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರು, ಬಾಡಿಗೆ ವಾಹನ ಚಾಲಕರು, ಸಂಬಳ ಕಳೆದುಕೊಂಡ ಶಿಕ್ಷಕರು, ದಾದಿಯರು, ವೈದ್ಯರು ಮುಂತಾದ ಎಲ್ಲ ವರ್ಗಗಳಿಗೂ ಸಂಪೂರ್ಣ ಪರಿಹಾರವನ್ನು ಒದಗಿಸಬೇಕಾಗಿತ್ತಾದರೂ, ಈ ಬಾರಿಯ ಬಜೆಟ್‌ ಆ ಬಗ್ಗೆ ಮೌನವಾಗಿದೆ.

ಮೊದಲೆಲ್ಲ ಬಜೆಟ್‌ಗಳಲ್ಲಿ ಇಲಾಖಾವಾರು ಅನುದಾನವಿದ್ದದ್ದು, ಈಗ ಓಟು ಬ್ಯಾಂಕುವಾರು ಅನುದಾನವಿದ್ದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.