ADVERTISEMENT

ಷೇರುಪೇಟೆಯಲ್ಲಿ ಗೂಳಿ ಓಟ: ಮತ್ತೆ 50,000 ದಾಟಿದ ಸೆನ್ಸೆಕ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2021, 5:31 IST
Last Updated 2 ಫೆಬ್ರುವರಿ 2021, 5:31 IST
ಸೆನ್ಸೆಕ್ಸ್‌
ಸೆನ್ಸೆಕ್ಸ್‌   

ಬೆಂಗಳೂರು: ಆರ್ಥಿಕತೆ ಚೇತರಿಕೆಗೆ ಬಜೆಟ್‌ನಲ್ಲಿ ಒತ್ತು ಸಿಕ್ಕಿರುವ ಬೆನ್ನಲ್ಲೇ ಮಂಗಳವಾರ ವಹಿವಾಟು ಆರಂಭದಲ್ಲಿಯೇ ಷೇರುಪೇಟೆ ಸೆನ್ಸೆಕ್ಸ್ ದಾಖಲೆಯ ಮಟ್ಟ ತಲುಪಿದೆ. ಸೆನ್ಸೆಕ್ಸ್‌ನ ಬಹುತೇಕ ಎಲ್ಲ ಕಂಪನಿಗಳ ಷೇರುಗಳಲ್ಲಿ ಏರಿಕೆ ಕಂಡು ಬಂದಿದ್ದು, ಸೆನ್ಸೆಕ್ಸ್‌ ಮತ್ತೊಮ್ಮೆ 50,000 ಅಂಶಗಳ ಗಡಿ ದಾಟಿದೆ.

ಸೆನ್ಸೆಕ್ಸ್‌ 1,400 ಅಂಶಗಳಿಗೂ ಹೆಚ್ಚು ಏರಿಕೆಯಾಗಿ 50 ಸಾವಿರ ಅಂಶಗಳ ಗಡಿ ದಾಟಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 400 ಅಂಶಗಳಷ್ಟು ಹೆಚ್ಚಳವಾಗಿ 14,700 ಅಂಶ ದಾಟಿತು. ವಹಿವಾಟು ಆರಂಭದಲ್ಲಿಯೇ ಸೆನ್ಸೆಕ್ಸ್ 750 ಅಂಶ ಚೇತರಿಕೆಯಾದರೆ, ನಿಫ್ಟಿ 14,500 ಅಂಶಗಳನ್ನು ದಾಟಿತ್ತು.

ಸೋಮವಾರ ಬಜೆಟ್‌ ಘೋಷಣೆಯ ನಂತರ ಸೆನ್ಸೆಕ್ಸ್‌ 2,314.84 ಅಂಶ (ಶೇ 5ರಷ್ಟು) ಹೆಚ್ಚಳವಾಗಿ 48,600.61 ಅಂಶ ತಲುಪಿತ್ತು. ನಿಫ್ಟಿ ಶೇ 4.74ರಷ್ಟು ಹೆಚ್ಚಳದೊಂದಿಗೆ 14,281.20 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ಷೇರುಪೇಟೆ ಇತಿಹಾಸದಲ್ಲಿಯೇ ಒಂದೇ ದಿನಕ್ಕೆ ಅತಿ ಹೆಚ್ಚು ಗಳಿಕೆ ದಾಖಲಾಯಿತು.

ADVERTISEMENT

ಕೋವಿಡ್‌ ತೆರಿಗೆ, ಆದಾಯ ತೆರಿಗೆ ಮೇಲೆ ಸರ್ಚಾಜ್‌ನಂತಹ ಯಾವುದೇ ಹೊಸ ತೆರಿಗೆ ಹೇರಿಕೆ ಆಗದಿರುವುದು, ಎರಡು ರಾಷ್ಟ್ರೀಯ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದು ಹಾಗೂ ಸರ್ಕಾರದ ಪಾಲುದಾರಿಕೆ ಮಾರಾಟದಂತಹ ಬಜೆಟ್‌ ಪ್ರಸ್ತಾವನೆಗಳು ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿದೆ. ಸೋಮವಾರ ವಿದೇಶಿ ಷೇರು ಹೂಡಿಕೆದಾರರ ₹1,494.23 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಇಂಡಿಗೊ ಪೇಂಟ್ಸ್‌ ಷೇರು ಇಂದು ವಹಿವಾಟಿಗೆ ತೆರೆದುಕೊಂಡಿದ್ದು, ಐಪಿಒ ವಿತರಣೆ ಬೆಲೆಗಿಂತಲೂ ಶೇ 75ರಷ್ಟು ಹೆಚ್ಚಳದೊಂದಿಗೆ ಪ್ರತಿ ಷೇರು ಬೆಲೆ ₹2,607.50 ಆಗಿದೆ. ಐಪಿಒ ವಿತರಣೆ ಬೆಲೆ ಪ್ರತಿ ಷೇರಿಗೆ ₹1,488ರಿಂದ ₹1,490 ನಿಗದಿಯಾಗಿತ್ತು.

ಸೆನ್ಸೆಕ್ಸ್ ಕಂಪನಿಗಳ ಪೈಕಿ ಎಲ್‌ಆ್ಯಂಡ್‌ಟಿ ಅತಿ ಹೆಚ್ಚು ಶೇ 8ರಷ್ಟು ಗಳಿಕೆ ದಾಖಲಿಸಿದೆ. ಎಚ್‌ಡಿಎಫ್‌ಸಿ, ಬಜಾಜ್‌ ಫೈನಾನ್ಸ್ ಸಹ ಶೇ 4ರಿಂದ 5ರಷ್ಟು ಗಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.