ADVERTISEMENT

ದಿನದ ಸೂಕ್ತಿ| ಆತ್ಮಜ್ಞಾನ

ಎಸ್.ಸೂರ್ಯಪ್ರಕಾಶ ಪಂಡಿತ್
Published 12 ಮಾರ್ಚ್ 2021, 0:49 IST
Last Updated 12 ಮಾರ್ಚ್ 2021, 0:49 IST
ಆತ್ಮಜ್ಞಾನ
ಆತ್ಮಜ್ಞಾನ   

ಇತೋ ನ ಕಿಂಚಿತ್ಪರತೋ ನ ಕಿಂಚಿತ್‌

ಯತೋ ಯತೋ ಯಾಮಿ ತತೋ ನ ಕಿಂಚಿತ್‌ ।

ವಿಚಾರ್ಯ ಪಶ್ಯಾಮಿ ಜಗನ್ನ ಕಿಂಚಿತ್‌

ADVERTISEMENT

ಸ್ವಾತ್ಮಾವಬೋಧಾವಧಿಕಂ ನ ಕಿಂಚಿತ್‌ ।।

ಇದರ ತಾತ್ಪರ್ಯ ಹೀಗೆ:

‘ಇತ್ತ ಏನೂ ಇಲ್ಲ, ಅತ್ತಲೂ ಏನು ಇಲ್ಲ. ಎಲ್ಲೆಲ್ಲಿ ಹೋಗುವೆನೋ ಅಲ್ಲಲ್ಲೂ ಏನೂ ಇಲ್ಲ. ಚೆನ್ನಾಗಿ ಆಲೋಚಿಸಿ ನೋಡಿದರೂ ಈ ಜಗತ್ತಿನಲ್ಲಿ ಸ್ವಾರಸ್ಯ ಇಲ್ಲ ಎಂದು ತಿಳಿಯವುದು. ಆತ್ಮಜ್ಞಾನಕ್ಕಿಂತಲೂ ಹೆಚ್ಚಿನ ಇನ್ನೊಂದು ವಿವರ ಏನೂ ಇಲ್ಲ.’

ಮೋಕ್ಷದ ಹೆಚ್ಚುಗಾರಿಕೆಯನ್ನು ಈ ಸುಭಾಷಿತ ಹೇಳುತ್ತಿದೆ.

ಪುರುಷಾರ್ಥಗಳಲ್ಲಿ ಶ್ರೇಷ್ಠವಾದುದೇ ಮೋಕ್ಷ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಮೋಕ್ಷ ಎಂದರೆ ಆತ್ಮಜ್ಞಾನ, ನಮ್ಮತನದ ಅರಿವು.

ನಾವು ಜೀವನದಲ್ಲಿ ಏನೇನನ್ನೋ ಬಯಸುತ್ತೇವೆ; ಯಾವ್ಯಾವುದೋ ವಸ್ತು ಮತ್ತು ಸಂಗತಿಗಳನ್ನು ಬಯಸುತ್ತೇವೆ, ಅವುಗಳನ್ನು ಪಡೆಯಲು ಎಷ್ಟೋ ಶ್ರಮ ಪಡುತ್ತೇವೆ; ಮಾಡಬಾರದ ಕೆಲಸಗಳನ್ನೂ ಮಾಡುತ್ತೇವೆ. ಹಣ, ಅಧಿಕಾರ, ರೂಪ, ಶಕ್ತಿ – ಇಂಥವನ್ನೇ ನಿಜವಾದ ಜೀವನ ಎಂದು ಅಂದುಕೊಳ್ಳುತ್ತೇವೆ. ಆದರೆ ನಿಜವಾದ ತಿಳಿವಳಿಕೆಯಿಂದ ಜಗತ್ತಿನಲ್ಲಿರುವ ಸಾರ–ನಿಸ್ಸಾರಗಳ ಬಗ್ಗೆ ಯೋಚಿಸಿದರೆ ಆಗ ಸ್ಪಷ್ಟವಾಗುತ್ತದೆ – ಈ ಜಗತ್ತಿನಲ್ಲಿ ಸಾರವಾದುದು ಏನೂ ಇಲ್ಲ ಎಂಬುದು. ಇಂಥ ವೈರಾಗ್ಯವನ್ನು ಸಂಪಾದಿಸಿ, ಬಳಿಕ ನಮ್ಮತನದ ದಿಟವಾದ ಅರಿವನ್ನು ಸಂಪಾದಿಸುವುದೇ ಆತ್ಮಜ್ಞಾನ.

ಏನೆಲ್ಲ ತಿಳಿವಳಿಕೆ, ವಿದ್ಯೆಯನ್ನು ಪಡೆದರೂ ಪ್ರಯೋಜವಿಲ್ಲ, ಆತ್ಮಜ್ಞಾನವೇ ನಿಜವಾದ ತಿಳಿವಳಿಕೆ ಎಂಬುದನ್ನು ಈ ಸುಭಾಷಿತ ಹೀಗೆ ಹೇಳುತ್ತಿದೆ:

ಅಧೀತ್ಯ ಚತುರೋ ವೇದಾನ್‌ ವ್ಯಾಕೃತ್ಯಾಷ್ಟಾದಶಸ್ಮೃತೀಃ ।

ಅಹೋ ಶ್ರಮಸ್ಯ ವೈಫಲ್ಯಂ ಆತ್ಮಾಪಿ ಕಲಿತೋ ನ ಚೇತ್‌ ।।

ಅಂದರೆ ’ನಾಲ್ಕು ವೇದಗಳನ್ನು ಪಠಿಸಿಯೂ ಹದಿನೆಂಟು ಸ್ಮೃತಿಗಳನ್ನು ವ್ಯಾಖ್ಯಾನ ಮಾಡಿಯೂ, ಆತ್ಮಜ್ಞಾನವನ್ನು ಸಂಪಾದಿಸದಿದ್ದರೆ ಅಷ್ಟು ಶ್ರಮವೂ ವ್ಯರ್ಥವೇ ಹೌದು.’

ಇಂಥ ಅರಿವನ್ನು ಪಡೆಯಲು ಏನು ಮಾಡಬೇಕು ಎಂದರೆ ಅದಕ್ಕೆ ಉತ್ತರವಾಗಿ ಈ ಸುಭಾಷಿತ ಹೇಳುತ್ತಿದೆ:

ತತ್ತ್ವಂ ಚಿಂತಯ ಸತತಂ ಚಿತ್ತೇ

ಪರಿಹರ ಚಿಂತಾಂ ನಶ್ವರವಿತ್ತೇ ।

ಕ್ಷಣಮಿಹ ಸಜ್ಜನಸಂಗತಿರೇಕಾ

ಭವತಿ ಭವಾರ್ಣವತರಣೇ ನೌಕಾ ।।

ಅಂದರೆ ‘ಮನಸ್ಸಿನಲ್ಲಿ ಸದಾ ತತ್ತ್ವಚಿಂತನೆಯನ್ನು ಮಾಡು; ನಶ್ವರವಾದ ಸಂಪತ್ತಿನ ಚಿಂತೆಯನ್ನು ಬಿಡು; ಸಜ್ಜನರೊಂದಿಗೆ ಒದಗಿದ ಕ್ಷಣಕಾಲದಷ್ಟು ಸಾಮೀಪ್ಯ ಕೂಡ ಸಂಸಾರ ಎಂಬ ಸಾಗರವನ್ನು ದಾಟಿಸಬಲ್ಲ ನೌಕೆಯಾಗಬಹುದು‘.

ಜೀವನದಲ್ಲಿ ಯಾವುದು ಶಾಶ್ವತ, ಯಾವುದು ನಶ್ವರ ಎಂಬ ಅರಿವನ್ನು ಪಡೆಯವುದೇ ಆತ್ಮಜ್ಞಾನಕ್ಕೆ ಒದಗುವ ದಿಟವಾದ ಸಾಧನ. ಅದನ್ನು ಪಡೆಯಲು ನಾವು ಒಳಿತಿನ ಜೊತೆಗೆ ಸದಾ ಇರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.