ADVERTISEMENT

ಬೆಂಗಳೂರು ನಮ್ಮ ಹೆಮ್ಮೆ | ಶತಾಯುಷಿ ಹುಣಸೆ ಮರಗಳ ನೆಲೆವೀಡು ನಲ್ಲೂರು

ಭಾರತದ ಮೊದಲ ಜೀವವೈವಿಧ್ಯ ತಾಣ ಈ ಹುಣಸೆ ತೋಪು

ಮನೋಹರ್ ಎಂ.
Published 27 ನವೆಂಬರ್ 2021, 20:29 IST
Last Updated 27 ನವೆಂಬರ್ 2021, 20:29 IST
ನಲ್ಲೂರಿನ ತೋಪಿನಲ್ಲಿರುವ ದಢೂತಿ ಹುಣಸೆ ಮರ –ಪ್ರಜಾವಾಣಿ ಚಿತ್ರ
ನಲ್ಲೂರಿನ ತೋಪಿನಲ್ಲಿರುವ ದಢೂತಿ ಹುಣಸೆ ಮರ –ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ನಲ್ಲೂರಿನಲ್ಲೊಂದು ಹುಣಸೆ ತೋಪು ಇದೆ. ಭಾರತದ ಮೊದಲ ಜೀವವೈವಿಧ್ಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ತಾಣವು ಶತಮಾನ ಕಂಡ ನೂರಾರು ಹುಣಸೆ ಮರಗಳ ನೆಲೆವೀಡು.ಸುಮಾರು 410 ವರ್ಷಗಳಷ್ಟು ಹಳೆಯದಾದ ಭಾರಿ ಗಾತ್ರದ ಹುಣಸೆ ಮರಗಳೂ ಇಲ್ಲಿವೆ.

ಬೆಂಗಳೂರಿನಿಂದ 45 ಕಿ.ಮೀ ಹಾಗೂ ದೇವನಹಳ್ಳಿ ಪಟ್ಟಣದಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಈ ಹುಣಸೆ ತೋಪು ಐತಿಹಾಸಿಕ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಇಲ್ಲಿನ ಕೆಲವು ಹುಣಸೆ ಮರಗಳು ಬುಡದಲ್ಲೇ ಕವಲೊಡೆದು ವಿಶಿಷ್ಟ ಆಕಾರಗಳಲ್ಲಿ ಬೆಳೆದು ನಿಂತಿವೆ.ಗುಮ್ಮಟ, ಅಂಡಾಕಾರ, ಅರ್ಧ ವೃತ್ತಾಕಾರ, ಶಂಕಾಕಾರ, ಅಂಕುಡೊಂಕಾದ ಶಿರಭಾಗವನ್ನು ಹೊಂದಿರುವ ಹುಣಸೆ ಮರಗಳು ಜನರನ್ನು ಆಕರ್ಷಿಸುತ್ತವೆ.ಮರಗಳಲ್ಲಿ ಬಿಡುವ ಡೊಂಕಾದ ಹಾಗೂ ನೇರ ಆಕಾರದ ಟನ್‌ಗಟ್ಟಲೆ ಹುಣಸೆ ಫಸಲನ್ನು ಪ್ರತಿ ವರ್ಷ ಹರಾಜು ಹಾಕುವ ಮೂಲಕ ಮಾರಾಟ ಮಾಡಲಾಗುತ್ತಿದೆ.

ಹುಣಸೆ ತೋಪು ಸದ್ಯ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಇಲ್ಲಿನ ಪ್ರತಿ ಮರಕ್ಕೂ ಗುರುತಿನ ಸಂಖ್ಯೆಯ ಫಲಕಗಳನ್ನು ಅಳವಡಿಸಿದೆ. ಭದ್ರತೆಗಾಗಿ ತೋಪಿನಲ್ಲಿ ಮುನಿರಾಜು ಎಂಬ ಸಿಬ್ಬಂದಿಯನ್ನೂ ಇಲಾಖೆ ನಿಯೋಜಿಸಿದೆ. 10 ವರ್ಷಗಳಿಂದ ತೋಪನ್ನು ಕಾಯುತ್ತಿರುವ ಇವರು, ಇಲ್ಲಿಗೆ ಭೇಟಿ ನೀಡುವವರಿಗೆ ಮಾಹಿತಿ ನೀಡುವ ಮೂಲಕ, ಈ ಸ್ಥಳದ ಮಹಿಮೆ ವಿವರಿಸುವ ಮಾರ್ಗದರ್ಶಕರಾಗಿಯೂ ( ಗೈಡ್‌) ಕೆಲಸ ಮಾಡುತ್ತಿದ್ದಾರೆ.

ADVERTISEMENT

ಕೆಲವು ಮರಗಳು ಎಷ್ಟು ಹಳೆಯವು ಎಂಬುದನ್ನು ತಿಳಿಯಲು ಅವುಗಳ ಭಾಗಗಳನ್ನು ‘ಕಾರ್ಬನ್ ಡೇಟಿಂಗ್’ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. 155ನೇ ಕ್ರಮಾಂಕದ ಹುಣಸೆ ಮರವು ಸುಮಾರು 410 ವರ್ಷಗಳಷ್ಟು ಹಳೆಯದು ಹಾಗೂ ಇತರ ಕೆಲವು ಮರಗಳು 200 ವರ್ಷಗಳಷ್ಟು ಹಳೆಯವು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ದೃಢಪಡಿಸಿದೆ.

‘ನೂರಾರು ವರ್ಷಗಳ ಹಿಂದೆನಲ್ಲೂರು ಕೋಟೆಯನ್ನು ರಾಜರು ಆಳುತ್ತಿದ್ದರಂತೆ. ಅವರೊಮ್ಮೆ ಆಹಾರಕ್ಕಾಗಿ ಗೊಜ್ಜು ಸಿದ್ಧಪಡಿಸಲು ಬಳಸಿದ್ದ ಹುಣಸೆ ಬೀಜಗಳನ್ನು ಇಲ್ಲಿ ಬಿಸಾಡಿದ್ದರಂತೆ. ಆ ಬೀಜಗಳಿಂದ ಈ ಹುಣಸೆ ತೋಪು ಹುಟ್ಟಿಕೊಂಡಿದೆಯಂತೆ. ನಲ್ಲೂರು ಕೋಟೆ ಎಂದರೆ ಪ್ರತ್ಯೇಕ ಕೋಟೆ ಇಲ್ಲಿಲ್ಲ. ಹುಣಸೆ ಮರಗಳೇ ನಲ್ಲೂರಿಗೆ ಕೋಟೆಯಂತಿದ್ದವು’ ಎಂದು ತೋಪಿನ ಬಳಿ ಜಾನುವಾರುಗಳನ್ನು ಮೇಯಿಸುತ್ತಿದ್ದ ಕಮಲಮ್ಮ ಹುಣಸೆ ತೋ‍ಪಿನ ಐತಿಹ್ಯ ಬಿಚ್ಚಿಟ್ಟರು.

ಇತಿಹಾಸ ಏನು ಹೇಳುತ್ತದೆ: ನಲ್ಲೂರು ಹುಣಸೆ ತೋಪಿನ ಇತಿಹಾಸ ಕೆದಕುತ್ತಾ ಹೋದಂತೆ ಭಿನ್ನವಾದ ಕಥೆಗಳು ತೆರೆದುಕೊಳ್ಳುತ್ತವೆ. ಈ ತೋಪು ಸಾವಿರ ವರ್ಷಗಳಷ್ಟು ಹಳೆಯದು ಎಂದೂ ಕೆಲವರು ಹೇಳುತ್ತಾರೆ. ಆದರೆ, ‘ಈ ಪ್ರಾಂತ್ಯ 13ನೇ ಶತಮಾನದಲ್ಲಿ ಚೋಳ ವಂಶದ ರಾಜರ ಅಧೀನದಲ್ಲಿತ್ತು’ ಎಂದು ತೋಪಿನ ರಸ್ತೆಬದಿ ಅಳವಡಿಸಲಾಗಿರುವ ಬಣ್ಣ ಮಾಸಿದ ಮಾಹಿತಿ ಫಲಕ ಹೇಳುತ್ತಿದೆ.

‘ತೋಪಿನಲ್ಲಿ ಐತಿಹಾಸಿಕವಾದ ಚನ್ನಕೇಶವಸ್ವಾಮಿ ದೇವಾಲಯವಿದೆ. ಅದರ ಗೋಡೆಗಳ ಮೇಲೆ ಕೆತ್ತಲಾಗಿರುವ ವಾಸ್ತುಶಿಲ್ಪದ ಸೌಂದರ್ಯವನ್ನು ಇಲ್ಲಿಗೆ ಬರುವವರು ಸವಿಯುತ್ತಾರೆ. ಆದರೆ, ಇದು ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿದ್ದು, ದೇವಾಲಯದ ಕೆಲವು ಚಪ್ಪಡಿಗಳು ಧರೆಗುರುಳಿವೆ. ಹಾಗಾಗಿ, ದೇವಾಲಯದ ಒಳಭಾಗಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮುನಿರಾಜು ಹೇಳಿದರು.

ತೋಪಿನ ನಡುವೆ ನಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾದುಹೋಗಿದೆ. ಅಕ್ಕ‍‍ಪಕ್ಕದ ಗ್ರಾಮಸ್ಥರಿಂದ ಪೂಜಿಸಲ್ಪಡುವ ಗಂಗಮ್ಮ ದೇವಿಯ ದೇವಸ್ಥಾನವೂ ಇಲ್ಲಿದೆ. ಇಲ್ಲಿನ ಹತ್ತಾರು ಗ್ರಾಮಸ್ಥರೆಲ್ಲ ಸೇರಿ ಅದ್ದೂರಿಯಾಗಿ ಗಂಗಮ್ಮ ಜಾತ್ರೆಯನ್ನೂ ನಡೆಸುತ್ತಾರೆ.

ಫಲಕ ಸರಿಪಡಿಸಿ;ತಾಣ ಸಂರಕ್ಷಿಸಿ

‘ಐತಿಹಾಸಿಕ ಮಹತ್ವ ಒಳಗೊಂಡಿರುವ ನಲ್ಲೂರು ಹುಣಸೆ ತೋಪನ್ನು ಕಾಯಲು ಸಿಬ್ಬಂದಿ ನಿಯೋಜಿಸಿದರೆ ಸಾಲದು. ಕಾವಲು ಸಿಬ್ಬಂದಿ ಸಂಜೆವರೆಗೆ ಮಾತ್ರ ಇಲ್ಲಿರುತ್ತಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಈ ಪಾರಂಪರಿಕ ತಾಣ ನಶಿಸುತ್ತಿದೆ. ಹುಣಸೆ ತೋಪಿನ ಇತಿಹಾಸ, ವಿವರ ನೀಡಲು ಅಳವಡಿಸಿರುವ ಫಲಕ ಹಾಳಾಗಿ ವರ್ಷಗಳೇ ಕಳೆದಿವೆ. ಅಕ್ಷರಗಳೇ ಕಾಣದ ಫಲಕವನ್ನು ಈವರೆಗೆ ಬದಲಾಯಿಸಿಲ್ಲ’ ಎಂದು ಇಲ್ಲಿನ ಸ್ಥಳೀಯ ನಿವಾಸಿ ಎನ್.ಭಾಸ್ಕರ್‌ ದೂರಿದರು.

‘ವಾರಾಂತ್ಯದಲ್ಲಿ ತೋಪು ವೀಕ್ಷಿಸಲು ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ, ಸಮರ್ಪಕ ನಿರ್ವಹಣೆ ಇಲ್ಲದ ತೋಪಿನ ದುಃಸ್ಥಿತಿ ಅವರಲ್ಲಿ ನಿರಾಶೆ ಮೂಡಿಸುತ್ತಿದೆ. ತೋಪಿನಲ್ಲಿ ಅನವಶ್ಯಕ ಗಿಡ–ಗಂಟಿಗಳು ಬೆಳೆದುಕೊಂಡಿವೆ. ಅವುಗಳನ್ನು ತೆರವುಗೊಳಿಸುವುದಕ್ಕೆ ಅರಣ್ಯ ಇಲಾಖೆಯೂ ಮುಂದಾಗಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ಮೂಲಸೌಕರ್ಯಗಳಿಲ್ಲ. ಪುರಾತನ ದೇವಾಲಯವೂ ನಶಿಸುತ್ತಿದೆ. ಹುಣಸೆ ತೋಪಿನ ಸುತ್ತ ಗುಣಮಟ್ಟದ ಬೇಲಿ ನಿರ್ಮಿಸಬೇಕು. ತಾಣವನ್ನು ಸಂರಕ್ಷಿಸಲು ಸರ್ಕಾರ ವಿಶೇಷ ಗಮನ ಹರಿಸಬೇಕು’ ಎಂದೂ ಆಗ್ರಹಿಸಿದರು.

ಅಂಕಿ ಅಂಶ

ಹುಣಸೆ ತೋಪಿನ ವಿಸ್ತೀರ್ಣ: 53 ಎಕರೆ
ತೋಪಿನಲ್ಲಿರುವ ಹುಣಸೆ ಮರಗಳು: 300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.