ADVERTISEMENT

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: ಕಾಂಗ್ರೆಸ್‌ ಆಕ್ರೋಶ

ಯುವ ಕಾಂಗ್ರೆಸ್‌ ಹಾಗೂ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ, ಬಿಜೆಪಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 12:34 IST
Last Updated 19 ಆಗಸ್ಟ್ 2022, 12:34 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಚಾಮರಾಜನಗರದಲ್ಲಿ ಶುಕ್ರವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಚಾಮರಾಜನಗರದಲ್ಲಿ ಶುಕ್ರವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಮಡಿಕೇರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು, ಕಪ್ಪು ಬಾವುಟ ಪ್ರದರ್ಶಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ, ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಶುಕ್ರವಾರ ನಗರದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಯಿತು.

ಸತ್ಯಮಂಗಲ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯ ಬಳಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು, ಪ್ರತಿಭಟನೆ ನಡೆಸಿದರು. ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಸಿದ್ದರಾಮಯ್ಯ ಅವರು ಸಾರ್ವಜನಿಕರ ಕೆಲಸ ಕಾರ್ಯದ ಮೇಲೆ ಕೊಡುಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಕಪ್ಪುಬಾವುಟ ಪ್ರದರ್ಶಿಸಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಅಮಾನೀಯವಾಗಿ ನಡೆಸಿಕೊಂಡಿರುವ ಬಿಜೆಪಿ ಕಾರ್ಯಕರ್ತರು, ಇದಕ್ಕೆ ತಕ್ಕ ಬೆಲೆ ತೆರೆಯಬೇಕಾಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರಾದ ನಾವು ಬೀದಿಗಿಳಿದರೆ, ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಯಾವ ಸಚಿವರು ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ, ಶಿಕ್ಷೆ ವಿಧಿಸಬೇಕು. ಮುಂದೆ ಇಂತಹ ಘಟನೆಗಳು ಪುನಾವರ್ತನೆಯಾಗದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಪೊಲೀಸ್ ವೈಫಲ್ಯವೇ ಇದಕ್ಕೆ ಕಾರಣ’ ಎಂದರು.

ADVERTISEMENT

ಮೊಟ್ಟೆ ಎಸೆಯುವ ಚಳವಳಿ ಎಚ್ಚರಿಕೆ: ‘ಬಿಜೆಪಿ, ಆರ್‌ಎಸ್ಎಸ್ ಕಾರ್ಯಕರ್ತರು ಒಂದು ಮೊಟ್ಟೆ, ಕಲ್ಲು ಎಸೆದರೆ ಅದಕ್ಕಾಗಿ ಪ್ರತಿಯಾಗಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಬಿಜೆಪಿ ನಾಯಕರ ಮೇಲೆ ಸಾವಿರ ಮೊಟ್ಟೆ ಎಸೆಯುವ ಚಳವಳಿಯನ್ನು ನಾವು ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿ, ‘ವಿರೋಧ ಪಕ್ಷದ ನಾಯಕನ ಕಾರಿಗೆ ಮೊಟ್ಟೆ ಎಸೆಯುವ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರಜಾಪ್ರಭುತ್ವ ವಿರೋಧಿ ನೀತಿ ಪ್ರದರ್ಶಿಸಿದ್ದಾರೆ. ಬಿಜೆಪಿ ತನ್ನ ಸಣ್ಣತನವನ್ನು ಪ್ರದರ್ಶನ ಮಾಡಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಮಾತ್ರ ಇಂತಹ ಘಟನೆ ನೋಡಲು ಸಾಧ್ಯ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ, ಕಾಂಗ್ರೆಸ್ ಎಸ್‌ಟಿ ವಿಭಾಗದ ರಾಜ್ಯ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ.ಮಹದೇವಶೆಟ್ಟಿ, ಪ್ರಧಾನ ಕಾರ್ಯದರ್ಶಿ ಆರ್.ಮಹದೇವು,ವಕ್ತಾರ ಕೆರೆಹಳ್ಳಿ ನವೀನ್,ಮುಖಂಡ ಸೋಮಲಿಂಗಪ್ಪ, ಎಪಿಎಂಸಿ ನಿರ್ದೇಶಕ ಗುರುಸ್ವಾಮಿ, ಎಸ್‌ಪಿಕೆ ಉಮೇಶ್, ನಗರಸಭಾ ಸದಸ್ಯೆ ಭಾಗ್ಯಮ್ಮ ಇತರರು ಇದ್ದರು.

ಯುವ ಕಾಂಗ್ರೆಸ್‌ನಿಂದಲೂ ಪ್ರತಿಭಟನೆ

ಘಟನೆಯನ್ನು ಖಂಡಿಸಿಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳೂ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನ ಆವರಣದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿ ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ವಕ್ತಾರ ಕರೆಹಳ್ಳಿ ನವೀನ್ ಮಾತನಾಡಿ, ‘ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಕಪ್ಪುಬಾವುಟ ಪ್ರದರ್ಶಿಸಿರುವುದು ನೀಚಕೃತ್ಯ. ಬಿಜೆಪಿ, ಆರ್ ಎಸ್ಎಸ್ ಕಾರ್ಯಕರ್ತರು ಒಂದು ಮೊಟ್ಟೆ, ಕಲ್ಲು ಎಸೆದರೆ ಅದಕ್ಕಾಗಿ ಪ್ರತಿಯಾಗಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಬಿಜೆಪಿ ನಾಯಕರ ಮೇಲೆ ಸಾವಿರ ಮೊಟ್ಟೆ, ಕಲ್ಲು ಎಸೆಯುವ, ಮಸಿ ಹಚ್ಚುವ ಕೆಲಸ, ಮೊಟ್ಟೆಗಿಂದ ಕೆಳಮಟ್ಟದ ಸಗಣಿ, ಲದ್ದಿಯಿಂದ ಹೊಡೆಯುವ ಕೆಲಸ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್ ಮಾತನಾಡಿದರು. ಕಾರ್ಯಾಧ್ಯಕ್ಷರಾದ ಎಚ್.ಎಂ.ಮಧು, ಹೊಸಹಳ್ಳಿ ಮಧುಸೂದನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರನಾಯಕ, ಯೋಗೇಂದ್ರ, ಸೋಮೇಶ್, ಶ್ರೀನಿವಾಸ, ಟೌನ್ ಅಧ್ಯಕ್ಷ ತೌಶಿಫ್, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಎಂಸ್ವಾಮಿ, ಕೊಳ್ಳೆಗಾಲ ಬ್ಲಾಕ್ ಅಧ್ಯಕ್ಷ ವರುಣ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.