ADVERTISEMENT

ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಲು ಆಗ್ರಹ

ಅಜ್ಜಂಪುರದಲ್ಲಿ ರೈತರು, ಕನ್ನಡಪರ ಸಂಘಟನೆಗಳು, ವಿವಿಧ ಸಂಘ-, ಸಂಸ್ಥೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:05 IST
Last Updated 22 ಸೆಪ್ಟೆಂಬರ್ 2021, 3:05 IST
ಅಜ್ಜಂಪುರದ ಗಾಂಧಿ ವೃತ್ತದಲ್ಲಿ ರೈತರು ಈರುಳ್ಳಿಯನ್ನು ನೆಲಕ್ಕೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಅಜ್ಜಂಪುರದ ಗಾಂಧಿ ವೃತ್ತದಲ್ಲಿ ರೈತರು ಈರುಳ್ಳಿಯನ್ನು ನೆಲಕ್ಕೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.   

ಅಜ್ಜಂಪುರ: ‘ಸರ್ಕಾರ, ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ರಫ್ತಿಗೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿ ರೈತರು, ಕನ್ನಡಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆ ಹಾಗೂ ವಿವಿಧ ಪಕ್ಷ ಮುಖಂಡರು ಸಿದ್ದರಾಮೇಶ್ವರ ರೈತ ಉತ್ಪಾದಕರ ಕಂಪನಿ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಹುಣಸಘಟ್ಟ ಗುರುಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸರ್ಕಾರ, ಎಲ್ಲಾ ವರ್ಗದವರಿಗೂ ಸ್ಪಂದಿಸುತ್ತಿದೆ. ಬೆಲೆ ಕುಸಿತದಿಂದ ನೋವಿನಲ್ಲಿರುವ ರೈತರ ನೆರವಿಗೆ ಧಾವಿಸುತ್ತದೆ ಎಂಬ ಭರವಸೆಯಿದೆ. ಸರ್ಕಾರ, ಕೂಡಲೇ ಬೆಂಬಲ ಬೆಲೆ ನೀಡಬೇಕು’ ಎಂದು ಮನವಿ ಮಾಡಿದರು.

ಸಿದ್ದರಾಮೇಶ್ವರ ರೈತ ಉತ್ಪಾದಕರ ಕಂಪನಿಯ ಸಿದ್ದೇಗೌಡ ಮಾತನಾಡಿ, ‘ಎಕರೆಯಲ್ಲಿ ಈರುಳ್ಳಿ ಬೆಳೆಯಲು
₹ 50-60 ಸಾವಿರ ವೆಚ್ಚ ಮಾಡಲಾಗಿದೆ. ಬಂದಿರುವ ಬೆಳೆ ಮಾರಿದರೆ ಗರಿಷ್ಠ ₹ 10,000 ಲಭ್ಯವಾಗುತ್ತಿಲ್ಲ. ನಾವು ಬೀದಿಗೆ ಬೀಳುವಂತಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಾಮಾಜಿಕ ಕಾರ್ಯಕರ್ತ ರಾಜ್‌ ಕುಮಾರ್ ಮಾತನಾಡಿ, ‘ರೈತರ ಹೆಸರಲ್ಲಿ ಅಧಿಕಾರ ಸ್ವೀಕರಿಸುವ ರಾಜಕೀಯ ಮುಖಂಡರು, ಬಳಿಕ ನಮ್ಮನ್ನು ಮರೆಯುತ್ತಾರೆ. ಈರುಳ್ಳಿ ಬೆಲೆ ಕುಸಿತ ವಾಗಿ, ರೈತರ ಸ್ಥಿತಿ ಅಯೋಮಯ ವಾಗಿದೆ. ಆದರೂ ವಿಧಾನಸಭೆಯಲ್ಲಿ ಈ ಬಗ್ಗೆ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರು ಸಂಘಟಿತರಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸರ್ಕಾರ, ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬೆಲೆ ಕುಸಿತವಾದರೂ ಕ್ರಮ ಕೈಗೊಂಡಿಲ್ಲ’ ಎಂದು ಮುಖಂಡ ಎ.ಸಿ. ಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕಾನವಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಾನಂದಸ್ವಾಮಿ, ‘ತಾಲ್ಲೂಕಿನ 11.5 ಸಾವಿರ ಎಕರೆಯಲ್ಲಿ 4000ಕ್ಕೂ ಅಧಿಕ ರೈತರು ಈರುಳ್ಳಿ ಬೆಳೆ ಮಾಡಿದ್ದಾರೆ. ಕಟಾವಿಗೆ ಬಂದಿರುವ ಸಮಯದಲ್ಲಿ ಬೆಲೆ ಕುಸಿತವಾಗಿದೆ. ಇದು, ರೈತರನ್ನು ಕಂಗಾಲಾಗಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

ರೈತರು, ಕನ್ನಡ ಪರ ಸಂಘಟನೆಯವರು, ಸಂಘ-ಸಂಸ್ಥೆ ಮುಖಂಡರು ಪಾಲ್ಗೊಂಡಿದ್ದರು. ಗಾಂಧಿ ವೃತ್ತದಲ್ಲಿ ಈರುಳ್ಳಿ ಸುರಿದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣ ಬಳಿ ರಸ್ತೆಯಲ್ಲಿಯೇ ಮಲಗಿ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಕಾಲ ವರ್ತಕರು ಅಂಗಡಿ ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು.

ಪೊಲೀಸ್ ಇನ್‌ಸ್ಪೆಕ್ಟರ್ ಲಿಂಗರಾಜು, ಪಿಎಸ್‌ಐ ಬಸವರಾಜು, ಸಿಬ್ಬಂದಿ ಸ್ಥಳದಲ್ಲಿದ್ದರು.

ಸಿದ್ದರಾಮೇಶ್ವರ ರೈತ ಉತ್ಪಾದಕರ ಕಂಪನಿ ನಿರ್ದೇಶಕ ನಾಗಭೂಷಣೆ, ಸಿದ್ದೇಗೌಡ್ರು, ಚಿಣ್ಣಾಪುರ ಮಧು, ಬಸವರಾಜು, ಗಿರೀಶ್, ಎ.ಟಿ.ಶ್ರೀನಿವಾಸ್, ಗೌರಾಪುರ ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಸ್ವಾಮಿ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲ್ಲೇಶ್, ತಾಲ್ಲೂಕು ಅಧ್ಯಕ್ಷ ಮಧುಸೂಧನ್, ನವೀನ್ ಕುಮಾರ್, ಅಯಾಜ್ ಅಹಮದ್, ಪ್ರಸನ್ನಕುಮಾರ್, ಅರುಣ್ ಕುಮಾರ್, ವೀರಭದ್ರಪ್ಪ, ಪ್ರತಾಪ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಗುರುಮೂರ್ತಿ, ತಾಲ್ಲೂಕು ಅಧ್ಯಕ್ಷ ದೇವರಾಜ ಅರಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.