ADVERTISEMENT

ಕಾಡಾನೆ ಉಪಟಳ: ಸೌಕರ್ಯದಿಂದ ವಂಚಿತವಾದ ಬಸವನಹಳ್ಳಿ ಹಾಡಿ

ಕಾಡಾನೆ ಉಪಟಳ, ಮನೆಗಳಲ್ಲೂ ವಿದ್ಯುತ್ ಇಲ್ಲ...

ರೆಜಿತ್ ಕುಮಾರ್
Published 22 ಆಗಸ್ಟ್ 2021, 20:45 IST
Last Updated 22 ಆಗಸ್ಟ್ 2021, 20:45 IST
ಪ್ರತಿಭಟನೆಯ ಬಳಿಕ ಹಾಡಿಗೆ ವಿದ್ಯುತ್ ಸಂಪರ್ಕ ಒದಗಿಸಿರುವುದು
ಪ್ರತಿಭಟನೆಯ ಬಳಿಕ ಹಾಡಿಗೆ ವಿದ್ಯುತ್ ಸಂಪರ್ಕ ಒದಗಿಸಿರುವುದು   

ನಮ್ಮ ಜನ ನಮ್ಮ ಧ್ವನಿ

ಸಿದ್ದಾಪುರ: ಮೂಲ ಸೌಕರ್ಯದಿಂದ ವಂಚಿತವಾಗಿರುವ ದಿಡ್ಡಳ್ಳಿ ಬಸವನಹಳ್ಳಿ ಹಾಡಿಯ ನಿವಾಸಿಗಳು, ಆಧುನಿಕ ಯುಗದಲ್ಲೂ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಬಸವನಗಳ್ಳಿ ಹಾಡಿಯ ನಿವಾಸಿಗಳು, ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು, ಮತ್ತೊಂದೆಡೆ ಕಾಡಾನೆ ಹಾವಳಿಯಿಂದ ಭಯದಲ್ಲೇ ಜೀವನ ಸಾಗಿಸುವ ಸ್ಥತಿ ಎದುರಾಗಿದೆ. ಕಾಡಿನಲ್ಲೇ ಹುಟ್ಟಿ ಬೆಳೆದ ಆದಿವಾಸಿ ಕುಟುಂಬಗಳು ಅಗತ್ಯ ಮೂಲ ಸೌಕರ್ಯದ ನಿರೀಕ್ಷೆಯಲ್ಲಿದ್ದಾರೆ.

ಕಾಡಾನೆ ಉಪಟಳ: ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳು ಹಾಡಿಯ ಮನೆಗಳಿಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿನ್ನುತ್ತಿವೆ. ಹಾಡಿಯ ಮನೆಗಳ ಸಮೀಪಕ್ಕೆ ಬರುವ ಕಾಡಾನೆಗಳು ಮನೆಯ ಒಳಭಾಗದಲ್ಲಿರುವ ಸಾಮಗ್ರಿಗಳನ್ನು ಎಳೆದು, ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದು, ರಾತ್ರಿ ವೇಳೆ ನಿವಾಸಿಗಳು ಭಯದಿಂದ ಇರಬೇಕಾದ ಸ್ಥತಿಯಿದೆ.

ADVERTISEMENT

ಈ ಬಗ್ಗೆ ಅರಣ್ಯ ಇಲಾಖೆ ಸೇರಿದಂತೆ ಶಾಸಕರಿಗೆ ಮನವಿ ಸಲ್ಲಿಸಿದ್ದು, ಕೆಲವು ಕಾಲ ಹಾಡಿಯ ಬಳಿಯಲ್ಲಿ ಸಾಕಾನೆಗಳನ್ನು ನಿಲ್ಲಿಸಲಾಗಿತ್ತು. ಈ ಸಂದರ್ಭ ಕಾಡಾನೆ ಉಪಟಳ ಕಡಿಮೆಯಾಗಿದ್ದು, ಇದೀಗ ಮತ್ತೆ ಕಾಡಾನೆ ಹಾವಳಿ ಮುಂದುವರಿದಿದೆ.

ಅರಣ್ಯದಲ್ಲಿರುವ ಕಾಡಾನೆಗಳು ಹಾಡಿಗೆ ಬರದಂತೆ ಹಾಡಿಯ ಸುತ್ತಲೂ ಸೋಲಾರ್ ಬೇಲಿ ಅಳವಡಿಸಬೇಕು ಎಂದು ಆದಿವಾಸಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಕಾಡಾನೆಗಳು ಮನೆಗೆ ದಾಳಿ ಇಟ್ಟ ಸಂದರ್ಭ ಪರಿಶೀಲನೆಗೆ ಆಗಮಿಸಿದ್ದ ಶಾಸಕ ಕೆ.ಜಿ ಬೋಪಯ್ಯ, ಸೋಲಾರ್ ಬೇಲಿ ಅಳವಡಿಸಲು ಕ್ರಮ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.

ಕೃಷಿ ಪಂಪ್‍ಸೆಟ್‍ಗೆ ಸಿಗದ ವಿದ್ಯುತ್ ಸಂಪರ್ಕ: ಬಸವನಹಳ್ಳಿ ವ್ಯಾಪ್ತಿಯ ಆದಿವಾಸಿಗಳಿಗೆ ಕೃಷಿ ಮಾಡುವ ಉದ್ದೇಶಕ್ಕಾಗಿ ಆದಿವಾಸಿ ಅಭಿವೃದ್ಧಿ ನಿಗಮದ ಮೂಲಕ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ನಿರ್ಮಾಣ ಮಾಡಲಾಗಿದೆ. ಆದರೆ, ಈವರೆಗೂ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ. ಕೊಳವೆಬಾವಿಗೆ ಪಂಪ್ ಇಳಿಸಿ, ಮೀಟರ್ ಬೋರ್ಡ್ ಅಳವಡಿಸಿದರೇ ವಿದ್ಯುತ್ ಸಂಪರ್ಕ ನೀಡಬಹುದು. ಚಾಮುಂಡೇಶ್ವರಿ ವಿದ್ಯುತ್ ನಿಗಮದಿಂದ ವಿದ್ಯುತ್ ಸಂಪರ್ಕ ನೀಡುವ ಕಾಮಗಾರಿ ಆಗಿದೆ. ಇಲಾಖೆಯು ಮೀಟರ್ ಬೋರ್ಡ್ ಅಳವಡಿಸಿದರೆ ಮಾತ್ರ ಸಂಪರ್ಕ ನೀಡಲು ಸಾಧ್ಯ ಎಂದು ವಿರಾಜಪೇಟೆ ಮುಖ್ಯ ಎಂಜಿನಿಯರ್‌ ಸುರೇಶ್ ತಿಳಿಸಿದ್ದಾರೆ.

ಮನೆಗಳಲ್ಲಿ ಇಲ್ಲ ವಿದ್ಯುತ್:ಬಸವನಹಳ್ಳಿ ಹಾಡಿಯ ಸುಮಾರು 8 ಮನೆಗಳಿಗೆ ಈವರೆಗೂ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ. ಅರಣ್ಯ ಇಲಾಖೆಯ ಯಾವುದೇ ಆಕ್ಷೇಪ ಇಲ್ಲದಿದ್ದರೂ, ಹಾಡಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಆದಿವಾಸಿಗಳು ಪ್ರತಿಭಟನೆ ನಡೆಸಿದ ಪರಿಣಾಮ ಹಾಡಿಗೆ ವಿದ್ಯುತ್ ಕಂಬಗಳನ್ನು ಅಳವಡಿಸಿ, ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಆದರೇ ಮನೆಯ ಬಳಿಯಲ್ಲೇ ವಿದ್ಯುತ್ ಕಂಬಗಳು ಇದ್ದರೂ, ಮನೆಗಳಿಗೆ ಮಾತ್ರ ವಿದ್ಯುತ್ ಸಂಕರ್ಪ ಲಭಿಸಿಲ್ಲ. ಮನೆಗಳಿಗೆ ವಿದ್ಯುತ್ ಒದಗಿಸುವಂತೆ ಐ.ಟಿ.ಡಿ.ಪಿ ಇಲಾಖೆಗೆ ಮನವಿ ಸಲ್ಲಿಸಿದ್ದು, ಪ್ರಸ್ತುತ ಹಾಡಿಯ ನಿವಾಸಿಗಳು ರಾತ್ರಿ ವೇಳೆ ಮೇಣದ ದೀಪದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಂಗಿಯಿಂದ ಬಸವನಹಳ್ಳಿ ಹಾಡಿಗೆ ನೀರಿನ ಸಂಪರ್ಕ ಒದಗಿಸಲಾಗಿದ್ದು, ಸಮರ್ಪಕವಾಗಿ ನೀರು ಲಭ್ಯವಾಗುತ್ತಿಲ್ಲ ಎಂದು ಆದಿವಾಸಿಗಳು ಅಳಲನ್ನು ತೋಡಿಕೊಂಡಿದ್ದಾರೆ.

ಹಾಡಿಯ ಕೆಲವರಿಗೆ ಕೃಷಿ ಉಪಯೋಗಕ್ಕೆ ಕೊಳವೆಬಾವಿ ಕೊರೆಸಿದ್ದು, ಹಾಡಿಯ ನಿವಾಸಿಗಳು ಇದೀಗ ಒಬ್ಬರ ಕೊಳವೆಬಾವಿಯಿಂದ ನೀರನ್ನು ಉಪಯೋಗಿಸುತ್ತಿದ್ದಾರೆ. ಹಾಡಿಯ ವ್ಯಾಪ್ತಿಯಲ್ಲಿ ಯಾವುದೇ ತೆರೆದಬಾವಿ ಇಲ್ಲ. ಮನೆ ಮನೆಗಳಲ್ಲಿ ಕೊಳಬೆಬಾವಿ ನಿರ್ಮಾಣವಾಗಿದ್ದರೂ, ವಿದ್ಯುತ್ ಸಂಪರ್ಕ ಲಭಿಸದ ಕಾರಣ ಕುಡಿಯುವ ನೀರಿಗೆ ದೂರದ ಮನೆಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.