ADVERTISEMENT

ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಮಠಾಧೀಶರ ಹೋರಾಟ: ಪುಟ್ಟಸಿದ್ದಶೆಟ್ಟಿ ವಿರೋಧ

ಬಸವ ತತ್ವಗಳಿಗೆ ಮಾಡಿದ ಅಪಮಾನ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 2:05 IST
Last Updated 18 ಸೆಪ್ಟೆಂಬರ್ 2021, 2:05 IST
ಪುಟ್ಟಸಿದ್ದಶೆಟ್ಟಿ
ಪುಟ್ಟಸಿದ್ದಶೆಟ್ಟಿ   

ಹುಣಸೂರು: ‘ಪ್ರವರ್ಗ 2ಎ ಮೀಸಲಾತಿಗೆ ಪಂಚಮಸಾಲಿ ಮಠಾಧೀಶರು ಹೋರಾಟ ನಡೆಸುವ ಮುನ್ನ ಖಾವಿ ಬಟ್ಟೆ ಬಿಚ್ಚಿ ಸಾಮಾಜಿಕ ಕಾರ್ಯಕರ್ತರಾಗಿ ಬೀದಿಗಿಳಿದು ಹೋರಾಟ ನಡೆಸಲಿ’ ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಪುಟ್ಟಸಿದ್ದಶೆಟ್ಟಿ ಸಲಹೆ ನೀಡಿದರು.

‘ಪಂಚಮಸಾಲಿ ಲಿಂಗಾಯತ ಗೌಡ ಸಮುದಾಯವನ್ನು ‘ಪ್ರವರ್ಗ 3ಬಿ’ಯಿಂದ ‘ಪ್ರವರ್ಗ 2ಎ’ಗೆ ಸೇರಿಸ ಬೇಕು ಎಂದು ಧಾರ್ಮಿಕ ಮುಖಂಡರು ಹೋರಾಟ ನಡೆಸುತ್ತಿದ್ದಾರೆ. ಇದು ಬಸವ ತತ್ವಗಳಿಗೆ ಮಾಡಿದ ಅಪಮಾನ. ಅನುಭವ ಮಂಟಪದ ತಳಹದಿಯಲ್ಲಿ ಹುಟ್ಟಿದ ಕೂಡಲ ಸಂಗಮ ಪೀಠ ಮೀಸಲಾತಿ ಲಾಭಕ್ಕೆ ಬಸವಣ್ಣನವರ ಆದರ್ಶಕ್ಕೆ ತಿಲಾಂಜಲಿ ನೀಡಿದೆ. ಪೀಠಾಧೀಶರು ಎಲ್ಲಾ ಸಮಾಜವನ್ನು ಸಮನಾಗಿ ಕಾಣುವ ಬದಲಿಗೆ ಪಂಚಮಸಾಲಿಗೆ ಮೀಸಲಾಗಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಪಂಚಮಸಾಲಿ ಸಮುದಾಯಕ್ಕೆ ಶೇ 5ರಷ್ಟು ಮೀಸಲಾತಿಯನ್ನು ಈಗಾಗಲೇ ನೀಡಲಾಗಿದೆ. ಇದನ್ನು ಹೆಚ್ಚಿಸುವಂತೆ ಒತ್ತಡ ತರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಪ್ರವರ್ಗ 3ಬಿ’ಯಿಂದ ‘2ಎ’ಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಕಾಯಕ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ’ ಎಂದರು.

ADVERTISEMENT

‘ಕಾಯಕ ಸಮುದಾಯ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯವಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದೆ. ಅದಕ್ಕೂ ಕಲ್ಲು ಹಾಕಿ ನಮ್ಮ ಅನ್ನ ಕಿತ್ತುಕೊಳ್ಳುವ ಹುನ್ನಾರ ನಡೆಸಲಾ ಗುತ್ತಿದೆ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಯಕ ಸಮುದಾಯಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಹೊನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.