ADVERTISEMENT

ಇಂಧನ ದರ ಏರಿಕೆ: ಕೆಪಿಸಿಸಿ ಮಹಿಳಾ ಘಟಕದಿಂದ ಮೈಸೂರಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 9:21 IST
Last Updated 8 ಸೆಪ್ಟೆಂಬರ್ 2021, 9:21 IST
   

ಮೈಸೂರು: ಇಂಧನ ದರ ಏರಿಕೆ ಖಂಡಿಸಿ ಸೌದೆ ಹೊತ್ತ ಕೆಪಿಸಿಸಿ ಮಹಿಳಾ ಘಟಕದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಸೌದೆ ಒಲೆಯಲ್ಲಿ ಚಹ ತಯಾರಿಸಿ ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ತಲೆ ಮೇಲೆ ಸೌದೆ ಹೊತ್ತು ಘೋಷಣೆಗಳನ್ನು ಕೂಗಿದರು.

ನಿತ್ಯ ಬಳಕೆಯ ವಸ್ತುಗಳ ಬೆಲೆಗಳನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಸರ್ಕಾರ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಬೆಲೆ ಏರಿಕೆಯಿಂದ ಬಡವರ ಬದುಕು ಅಸಹನೀಯವಾಗಿದೆ ಎಂದು ಕಿಡಿಕಾರಿದರು.

ADVERTISEMENT

ಕೆಪಿಸಿಸಿ ಮಹಿಳಾ ಘಟಕದ ನಗರ ಘಟಕದ ಅಧ್ಯಕ್ಷೆ ಪುಷ್ಪಲತಾ ಮಾತನಾಡಿ, ‘ಕೋವಿಡ್‌ನಿಂದ ಜನರು ಕಷ್ಟಪಡುತ್ತಿರುವಾಗಲೇ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ನಿರ್ದಯವಾಗಿ ವರ್ತಿಸಿದೆ. ನಿತ್ಯ ಬಳಕೆಯ ವಸ್ತುಗಳ ಬೆಲೆಗಳನ್ನು ಏರಿಕೆಯಾಗುತ್ತಿರುವುದರಿಂದ ಬಡ ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಿದೆ’ ಎಂದು ಹೇಳಿದರು.

ಕೂಡಲೇ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಧ್ಯಪ್ರವೇಶಿಸಿ, ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ ಮಾತನಾಡಿ, ‘ಅಡುಗೆ ಅನಿಲದ ದರ ಏರಿಕೆ ಸ್ಥಿತಿ ನೋಡಿದರೆ ಇದು ಕೆಲವೇ ದಿನಗಳಲ್ಲಿ ₹ 1 ಸಾವಿರ ದಾಟುವ ನಿರೀಕ್ಷೆ ಇದೆ. ಈಗಾಗಲೇ ಪೆಟ್ರೋಲ್, ಡೀಸೆಲ್‌ ಬೆಲೆಗಳು ಶತಕ ದಾಟಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಕಾಂಗ್ರೆಸ್ ಮಹಿಳಾ ಉಪಾಧ್ಯಕ್ಷೆ ಪುಷ್ಪವಲ್ಲಿ, ಪಾಲಿಕೆ ಸದಸ್ಯೆರಾದ ಪುಷ್ಪಲತಾ ಜಗನ್ನಾಥ್, ರಜನಿ ಅಣ್ಣಯ್ಯ, ಬ್ಲಾಕ್ ಅಧ್ಯಕ್ಷರಾದ ಲೀಲಾ ಪಂಪಾವತಿ, ಚಂದ್ರಕಲಾ, ಕಮಲಾ, ದಿವ್ಯಾ, ನಾಗರತ್ನಮ್ಮ, ರಾಧಾಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.