ADVERTISEMENT

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಯ ವಿಚಾರ: ಭದ್ರತೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 19:31 IST
Last Updated 21 ಆಗಸ್ಟ್ 2022, 19:31 IST
   

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಪಟ್ಟು ಹಿಡಿದಿರುವ ಕೆಲ ಸಂಘಟನೆಯವರು, ಅನುಮತಿ ಕೋರಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪರಿಶೀಲನೆ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮೈದಾನಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

ಮೈದಾನದಲ್ಲಿ ಆಗಸ್ಟ್ 15ರಂದು ಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗಿದೆ. ಇದರ ಮರುದಿನದಿಂದಲೇ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಹಾಗೂ ಇತರೆ ಸಂಘಟನೆಗಳ ಸದಸ್ಯರು, ಗಣೇಶೋತ್ಸವ ಆಚರಿಸಲು ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದಾರೆ.

‘ಚಾಮರಾಜಪೇಟೆ ಮೈದಾನವನ್ನು ಸದ್ಯ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಮುಂಬರುವ ಗಣೇಶೋತ್ಸವ ವಿಚಾರವಾಗಿ ಗೊಂದಲಗಳು ಉಂಟಾಗುತ್ತಿವೆ. ಹೀಗಾಗಿ, ಮೈದಾನಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಮೈದಾನದ ಜಾಗ ಕಂದಾಯ ಇಲಾಖೆ
ಒಡೆತನದಲ್ಲಿದೆ. ಹೀಗಾಗಿ, ಗಣೇಶೋತ್ಸವ ಆಚರಣೆಗೆ ಕಂದಾಯ ಇಲಾಖೆಯೇ ಅನುಮತಿ ನೀಡಬೇಕು. ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಸೇರಿದಂತೆ ಮೂರು ಸಂಘಟನೆಗಳು, ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ನಗರ ಜಿಲ್ಲಾಧಿಕಾರಿ ಅವರಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿವೆ. ಅನುಮತಿ ನೀಡುವುದು ಅಥವಾ ನಿರಾಕರಿಸುವುದು ಕಂದಾಯ ಇಲಾಖೆಗೆ ಬಿಟ್ಟಿದ್ದು. ಪೊಲೀಸ್ ಇಲಾಖೆಯಿಂದ ಮೈದಾನದ ಭದ್ರತೆಗೆ ಒತ್ತು ನೀಡಲಾಗಿದೆ’ ಎಂದೂ ಹೇಳಿದರು.

40 ಸಿಬ್ಬಂದಿ ನಿಯೋಜನೆ: ‘ಮೈದಾನದಲ್ಲಿ ಈದ್ಗಾ (ಗೋಡೆ) ಇದ್ದು, ಇದರ ಸುತ್ತಮುತ್ತ 24 ಗಂಟೆಯೂ ಭದ್ರತೆ ಒದಗಿಸಲಾಗಿದೆ. ಕೆಎಸ್‌ಆರ್‌ಪಿ ಹಾಗೂ ಸ್ಥಳೀಯ ಪೊಲೀಸರು ಸೇರಿ 40 ಸಿಬ್ಬಂದಿಯನ್ನು ಮೈದಾನದ ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.