ADVERTISEMENT

ಅರ್ಹರು ಲಸಿಕೆ ಹಾಕಿಸಿಕೊಳ್ಳಿ; ಹಿರಿಯರಿಗೂ ಹಾಕಿಸಿ

45 ವರ್ಷ ಮೇಲ್ಪಟ್ಟ 4,00,386 ಮಂದಿಗೆ ಲಸಿಕೆ ಗುರಿ: ಜಿಲ್ಲಾಧಿಕಾರಿ ಜಿ.ಜಗದೀಶ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 13:45 IST
Last Updated 5 ಏಪ್ರಿಲ್ 2021, 13:45 IST
ಸೋಮವಾರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸೋಮವಾರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ಜಿಲ್ಲೆಯ 74 ಸರ್ಕಾರಿ ಆಸ್ಪತ್ರೆ, 19 ಖಾಸಗಿ ಆಸ್ಪತ್ರೆ ಹಾಗೂ 40 ಉಪ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.‌

ಸೋಮವಾರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, 45 ವರ್ಷ ಮೇಲ್ಪಟ್ಟವರಿಗೆ ಏ.1ರಿಂದ ಲಸಿಕೆ ಹಾಕಲಾಗುತ್ತಿದ್ದು, ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಣಿ ಮಾಡಿಸಿಯೂ ಲಸಿಕೆ ಪಡೆಯಬಹುದು. ಅಥವಾ ನೋಂದಣಿ ಮಾಡಿಸದೆಯೂ ನೇರವಾಗಿ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬಹುದು. ಲಸಿಕೆಗೆ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್‌ ಕಡ್ಡಾಯ ಎಂದರು.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 4,00,386 ಮಂದಿಗೆ ಲಸಿಕೆ ಗುರಿಯಿದ್ದು, ಇದುವರೆಗೂ ಶೇ 19ರಷ್ಟು ಗುರಿ ಸಾಧನೆಯಾಗಿದೆ. ಲಸಿಕೆಯ ಕೊರತೆ ಇಲ್ಲ, ಸಧ್ಯ 24 ಸಾವಿರ ಡೋಸ್‌ಗಳು ಲಭ್ಯವಿದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ADVERTISEMENT

ರೋಟರಿ, ಲಯನ್ಸ್‌, ಐಎಂಎ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಹಲವು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಲಸಿಕಾ ಕಾರ್ಯಕ್ರಮದ ಪ್ರಚಾರ ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಲಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಹಂತಹಂತವಾಗಿ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ ಎಂದರು.

ಕೋವಿಡ್‌ ಪರೀಕ್ಷೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು, ದೇಶದಲ್ಲಿ (10 ಲಕ್ಷ ಜನರಿಗೆ) 1.79 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದರೆ, ರಾಜ್ಯದಲ್ಲಿ 3.12 ಲಕ್ಷ, ಉಡುಪಿಯಲ್ಲಿ 3.29 ಲಕ್ಷ ಪರೀಕ್ಷೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಹೇಳಿದರು

ದೇಶದಲ್ಲಿ ಶೇ 5.04 ಸೋಂಕು ಪಾಸಿಟಿವಿಟಿ ದರ ಇದ್ದು, ರಾಜ್ಯದಲ್ಲಿ ಶೇ 4.66 ಇದ್ದು, ಉಡುಪಿಯಲ್ಲಿ ಶೇ 5.96 ಇದೆ. ಮರಣ ಪ್ರಮಾಣ ದರ ಅತಿ ಕಡಿಮೆಯಿದ್ದು, ದೇಶದಲ್ಲಿ ಶೇ 1.32, ರಾಜ್ಯದಲ್ಲಿ 1.24, ಉಡುಪಿಯಲ್ಲಿ 0.74 ಇದೆ. ದೇಶದಲ್ಲಿ ಅತಿ ಕಡಿಮೆ ಮರಣ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಉಡುಪಿಯೂ ಒಂದು ಎಂದರು.

ಮಾರ್ಚ್‌ನಲ್ಲಿ ಸೋಂಕು ಹೆಚ್ಚು:

ಜನವರಿ, ಫೆಬ್ರುವರಿಯಲ್ಲಿ ಜಿಲ್ಲೆಯಲ್ಲಿ ಶೇ .05ರಷ್ಟು ಪಾಸಿಟಿವಿಟಿ ದರವಿತ್ತು. ಎಂಐಟಿಯಲ್ಲಿ ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪಾಸಿಟಿವಿಟಿ ದರ ಶೇ 15ರವರೆಗೂ ತಲುಪಿತ್ತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಎಂಐಟಿಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಅಂಕಿ ಅಂಶಗಳನ್ನು ನೀಡಿದರು.

ಸಭೆಯಲ್ಲಿ ಡಿಎಚ್‌ಒ ಸುಧೀರ್ ಚಂದ್ರ ಸೂಡ, ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಇದ್ದರು.
‘ರಾಜಕಾರಣಿಗಳು ಪರೀಕ್ಷೆ ಮಾಡಿಸಿಕೊಂಡು ಬನ್ನಿ’

ಕೇರಳ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ರಾಜಕಾರಣಿಗಳು ಉಡುಪಿ ಜಿಲ್ಲೆಗೆ ಬರುವ ಮುನ್ನ ಕಡ್ಡಾಯ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬರಬೇಕು. ವೈಯಕ್ತಿಕ ಹಾಗೂ ಕುಟುಂಬದ ಹಿರಿಯರ ದೃಷ್ಟಿಯಿಂದಲೂ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.