ADVERTISEMENT

ಅನಾಥ ವೃದ್ಧೆಯ ಪಾಲನೆ ಹೊಣೆ ಯಾರದ್ದು ?

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 15:15 IST
Last Updated 6 ಏಪ್ರಿಲ್ 2021, 15:15 IST

ಉಡುಪಿ: ಸೊಂಟ ಮುರಿದುಕೊಂಡು ಶಸ್ತ್ರಚಿಕಿತ್ಸೆಗೊಳಗಾಗಿ ಅನಾಥ ಸ್ಥಿತಿಯಲ್ಲಿರುವ 75 ವರ್ಷದ ವೃದ್ಧೆಯ ಬದುಕಿಗೆ ಜಿಲ್ಲಾಡಳಿತವಾಗಲಿ, ಸಂಬಂಧಪ‍ಟ್ಟ ಇಲಾಖೆಯಾಗಲಿ ನೆರವಾಗಬೇಕು ಎಂದು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 8 ತಿಂಗಳ ಹಿಂದೆ ಸೊಂಟದ ಮೂಳೆ ಮುರಿದುಕೊಂಡು ಸ್ವಾಧೀನ ಕಳೆದುಕೊಂಡಿದ್ದ ಶಿರಿಯಾರ ಕಾಜರವಳ್ಳಿಯ ವೃದ್ಧೆ ನರ್ಸಿ ಮರಕಾಲ್ತಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯಗಲಿಲ್ಲದ ಕಾರಣ ಅಂಬಲಪಾಡಿಯ ಹೈಟೆಕ್‌ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು.

ಆಸ್ಪತ್ರೆಯ ವೆಚ್ಚ ₹ 1.5 ಲಕ್ಷವಾಗಿದ್ದು, ದಾನಿಗಳು ₹ 1 ಲಕ್ಷದಷ್ಟು ನೆರವು ನೀಡಿದ್ದಾರೆ. ವೃದ್ಧೆಗೆ ನಾಲ್ಕು ತಿಂಗಳು ಪಾಲನೆ ಪೋಷಣೆಯ ಅಗತ್ಯವಿದ್ದು ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಇಲಾಖೆಗಳು ವೃದ್ಧೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ನಿರ್ಗತಿಕರ, ಅಶಕ್ತರಿಗೆ ನೆಲೆ ಕಲ್ಪಿಸಬೇಕಾಗಿರುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ಆದರೆ, ಜಿಲ್ಲೆಯಲ್ಲಿ ನೂರಾರು ನಿರ್ಗತಿಕರು ಚಿಕಿತ್ಸೆ ಪಡೆಯಲಾಗದೆ ರಸ್ತೆಬದಿ, ನಿರ್ಜನ ಪ್ರದೇಶಗಳಲ್ಲಿ ಬಿದ್ದಿದ್ದರೂ ಅವರ ರಕ್ಷಣೆಗೆ ಯಾವ ಇಲಾಖೆ ಮುಂದಾಗುತ್ತಿಲ್ಲ. ಜಿಲ್ಲೆಯಲ್ಲಿ ನಿರ್ಗತಿಕರ ಪುನರ್ವಸತಿ ಕೇಂದ್ರ ಕೂಡ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.