ADVERTISEMENT

‘ಅನಂತು v/s ನುಸ್ರತ್’: ಪ್ರೀತಿಗಾಗಿ ‘ಅನಂತು...’ ವಾದ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 17:44 IST
Last Updated 28 ಡಿಸೆಂಬರ್ 2018, 17:44 IST
ಅನಂತು ವರ್ಸಸ್ ನುಸ್ರತ್‌ ಚಿತ್ರದಲ್ಲಿ ವಿನಯ್ ರಾಘವೇಂದ್ರ
ಅನಂತು ವರ್ಸಸ್ ನುಸ್ರತ್‌ ಚಿತ್ರದಲ್ಲಿ ವಿನಯ್ ರಾಘವೇಂದ್ರ   

‘ಅನಂತು v/s ನುಸ್ರತ್’ ಎಂಬ ಚಿತ್ರ ಶೀರ್ಷಿಕೆ ಎರಡೂ ಧರ್ಮಗಳಿಗೆ ಸೇರಿದ ಯುವಕ, ಯುವತಿ ಪ್ರೇಮಕಥೆಯೋನೊ ಎಂದು ಮೇಲ್ನೋಟಕ್ಕೆ ಅನಿಸಿದರೂ, ಚಿತ್ರ ಧ್ವನಿಸುವುದೇ ಬೇರೆಯದನ್ನು. ಪ್ರೀತಿಯೇ ಸಂಬಂಧಗಳಿಗೆ ಬುನಾದಿ. ಧರ್ಮ, ಶಾಸ್ತ್ರ, ರೀತಿ ರಿವಾಜು ಇತ್ಯಾದಿಗಳು ಸಂಬಂಧಗಳ ಜೋಡಣೆಗಾಗಿ ಮನುಷ್ಯ ಮಾಡಿಕೊಂಡ ಕಟ್ಟಳೆಗಳು ಎಂಬ ಸಂದೇಶವನ್ನು ಭಿನ್ನ ಧರ್ಮಗಳ ಎರಡು ಪಾತ್ರಗಳ ಮೂಲಕ ನಿರ್ದೇಶಕರು ಹೇಳಿದ್ದಾರೆ.

ಕೌಟುಂಬಿಕ ಕೋರ್ಟ್ ಮೆಟ್ಟಿಲೇರುವುದಿಲ್ಲ ಎಂದು ತಂದೆಗೆ ವಾಗ್ದಾನ ಕೊಟ್ಟು ವಕೀಲಿಕೆಯಲ್ಲಿ ಯಶಸ್ಸು ಕಾಣುತ್ತಿರುವ ಅನಂತಕೃಷ್ಣ ಕ್ರಮಧಾರಿತಾಯ (ವಿನಯ ರಾಘವೇಂದ್ರ ರಾಜಕುಮಾರ್). ಎಲ್‌ಎಲ್‌ಬಿ ಕ್ಯಾಂಪಿನಲ್ಲಿ ಸಂಧಿಸಿ ಇಷ್ಟಪಟ್ಟ ನುಸ್ರತ್ ಗುಂಗಿನಲ್ಲಿರುತ್ತಾನೆ. ಬೇರ್ಪಟ್ಟ ದಂಪತಿಯ ಪುತ್ರಿಯಾದರೂ, ಇಬ್ಬರ ಪ್ರೀತಿಯನ್ನೂ ಪ್ರತ್ಯೇಕವಾಗಿ ಸವಿದು ಬೆಳೆದಿರುವ ಜಡ್ಜ್‌ ನುಸ್ರತ್ ಫಾತೀಮಾ ಬೇಗಂ (ಲತಾ ಹೆಗ್ಡೆ). ತಾನು ಪ್ರಾಕ್ಟೀಸ್ ಮಾಡುತ್ತಿರುವ ಕೋರ್ಟ್‌ಗೆ ಜಡ್ಜ್ ಆಗಿ ಬರುವ ನುಸ್ರತ್‌ಳನ್ನು ಕಂಡು, ಆಕೆಯನ್ನು ಪಡೆಯುವ ಹಠಕ್ಕೆ ಬೀಳುವ ಅನಂತು, ಅದಕ್ಕಾಗಿ ತಂದೆಗೆ ಕೊಟ್ಟ ಮಾತು ಮರೆಯುತ್ತಾನೆ.

ನುಸ್ರತ್ ಒಲವಿಗಾಗಿ ವಿಚ್ಛೇದನ ಪ್ರಕರಣಗಳೊಂದಿಗೆ ಫ್ಯಾಮಿಲಿ ಕೋರ್ಟ್‌ ಪ್ರವೇಶಿಸುವ ಆತ, ವಿಚ್ಛೇದನಕ್ಕಾಗಿ ಕಟಕಟೆ ಏರುವ ಜೋಡಿಗಳನ್ನು ಒಂದಾಗಿಸುತ್ತಲೇ ತನ್ನ ಪ್ರೀತಿಯನ್ನು ಅಮೂರ್ತವಾಗಿ ನಿವೇದಿಸಿಕೊಳ್ಳುತ್ತಾನೆ. ಈ ಪಯಣದಲಿ ಆಧುನಿಕ ಬದುಕಿನ ಜಂಜಾಟ ಮತ್ತು ಮೌಲ್ಯಗಳ ಹುಸಿ ಮಾನದಂಡಗಳಿಂದ ಸಂಬಂಧಗಳು ಸಡಿಲಗೊಳ್ಳುತ್ತಿರುವುದರ ಮೇಲೆ ಬೆಳಕು ಚೆಲ್ಲುತ್ತಾನೆ. ಕಡೆಗೂ ತಾನು ಬಯಸಿದಾಕೆಯ ಒಲಿಸಿಕೊಳ್ಳುತ್ತಾನೆ.

ADVERTISEMENT

ಮೊದಲಾರ್ಧದಲ್ಲಿ ಪ್ರೀತಿಯ ಸುತ್ತ ಗಿರಕಿ ಹೊಡೆಯುವ ಚಿತ್ರ, ಎರಡನೇ ಭಾಗದಲ್ಲಿ ಗಂಭೀರವಾಗುತ್ತದೆ. ಇದೊಂದು ರೀತಿ ದಾರಿ ಮರೆತು ಮತ್ತೊಂದು ರಸ್ತೆಯಲ್ಲಿ ಸಾಗುವ ಪಯಣಿಗನಂತೆ ಭಾಸವಾದರೂ, ನಿರ್ದೇಶಕರು ಪ್ರಯಾಸಪಟ್ಟು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋರ್ಟ್‌ ಸಂಭಾಷಣೆಗಳು ಪರಿಣಾಮಕಾರಿಯಾಗಿಲ್ಲ. ನಿರೂಪಣೆಯಲ್ಲಿ ಮತ್ತಷ್ಟು ಬಿಗಿ ಇರಬೇಕಿತ್ತು ಎನಿಸುತ್ತದೆ. ಹಾಸ್ಯ ಪಾತ್ರಗಳು ನಗು ತರಿಸುವಲ್ಲಿ ಸೋತಿವೆ.

ತಮ್ಮ ಮೂರನೇ ಚಿತ್ರಕ್ಕೆ ಪ್ರೀತಿಯ ಎಳೆ ಜತೆಗೆ, ಗಂಭೀರ ವಿಷಯ ಆರಿಸಿಕೊಂಡಿರುವ ವಿನಯ್ ರಾಜಕುಮಾರ್‌ಗೆ ಉದ್ದವಾದ ಡೈಲಾಗ್‌ಗಳ ವಾಚನ ಕಷ್ಟ ಎಂಬುದಕ್ಕೆ ಕೆಲ ದೃಶ್ಯಗಳು ಕನ್ನಡಿ ಹಿಡಿಯುತ್ತವೆ. ಕೆಲವೊಮ್ಮೆ ಮಾತಿಗೂ ಮುಖಭಾವಕ್ಕೂ ತಾಳೆಯಾಗುವುದಿಲ್ಲ. ಲತಾ ಹೆಗ್ಡೆ ನಟನಾ ಕೌಶಲಕ್ಕೆ ಹೆಚ್ಚಿನ ಅವಕಾಶ ಇಲ್ಲ. ಅಪ್ಪನ ಪಾತ್ರದಲ್ಲಿ ಬಿ. ಸುರೇಶ್‌ ಅಚ್ಚೊತ್ತುತ್ತಾರೆ. ಮಧ್ಯಂತರದಲ್ಲಿ ಬರುವ ಪ್ರಜ್ವಲ್ ದೇವರಾಜ್ ಪಾತ್ರಕ್ಕೆ ತೂಕವಿದೆ.

ಸುನಾದ್ ಗೌತಮ್ ಸಂಯೋಜಿಸಿರುವ ಹಾಡುಗಳು ಗುನುಗುವಂತಿವೆ. ದೃಶ್ಯಗಳಿಗೆ ಮತ್ತಷ್ಟು ಮೆರುಗು ತುಂಬಿ, ಪರಿಣಾಮಕಾರಿಯಾಗಿಸುವ ಅವಕಾಶ ಅಭಿಷೇಕ್ ಕಾಸರಗೋಡು ಅವರ ಸಿನಿಮಾಟೊಗ್ರಫಿಗೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.