ADVERTISEMENT

ಗೀತಾ ಸಿನಿಮಾ ವಿಮರ್ಶೆ | ಕನ್ನಡ ಕಟ್ಟಾಳುವಿನ ಆಪ್ತ ಕಥೆ

ಕೆ.ಎಚ್.ಓಬಳೇಶ್
Published 27 ಸೆಪ್ಟೆಂಬರ್ 2019, 13:05 IST
Last Updated 27 ಸೆಪ್ಟೆಂಬರ್ 2019, 13:05 IST
‘ಗೀತಾ’ ಚಿತ್ರದಲ್ಲಿ ಗಣೇಶ್‌ ಮತ್ತು ಶಾನ್ವಿ ಶ್ರೀವಾಸ್ತವ
‘ಗೀತಾ’ ಚಿತ್ರದಲ್ಲಿ ಗಣೇಶ್‌ ಮತ್ತು ಶಾನ್ವಿ ಶ್ರೀವಾಸ್ತವ   

ಚಿತ್ರ: ಗೀತಾ

ನಿರ್ಮಾಪಕರು: ಸೈಯದ್‌ ಸಲಾಂ, ಶಿಲ್ಪಾ ಗಣೇಶ್‌

ನಿರ್ದೇಶನ: ವಿಜಯ್‌ ನಾಗೇಂದ್ರ

ADVERTISEMENT

ತಾರಾಗಣ: ಗಣೇಶ್, ಪಾರ್ವತಿ ಅರುಣ್, ಪ್ರಯಾಗ ಮಾರ್ಟಿನ್‌, ಶಾನ್ವಿ ಶ್ರೀವಾಸ್ತವ, ದೇವರಾಜ್, ಸುಧಾರಾಣಿ

ನಾಯಕನಿಗೆ (ಆಕಾಶ್‌) ಅಪ್ಪ– ಅಮ್ಮನ ಪ್ರೀತಿ, ವಾತ್ಸಲ್ಯ ಸಿಕ್ಕಿಲ್ಲ. ಅದಕ್ಕೇನು ಕಾರಣ ಎನ್ನುವ ಪ್ರಶ್ನೆಯೊಂದಿಗೆ ಗೋಕಾಕ್‌ ಚಳವಳಿಯ ಚಿತ್ರಣ ತೆರೆದುಕೊಳ್ಳುತ್ತದೆ. ಕಾಲೇಜಿನಲ್ಲಿ ಕೆಲವರು ಪರಭಾಷಿಕರ ಮೇಲೆ ಹಲ್ಲೆಗೆ ಯತ್ನಿಸುವ ಸಂದರ್ಭವದು. ಪರಭಾಷಿಕರನ್ನು ನಮ್ಮ ಅತಿಥಿಗಳಂತೆ ಕಾಣಬೇಕು ಎಂದು ಹಲ್ಲೆಗೆ ಯತ್ನಿಸಿದವರಿಗೆ ಬುದ್ಧಿ ಹೇಳುತ್ತಾನೆ ನಾಯಕನ ತಂದೆ(ಶಂಕರ್). ಈ ಎರಡೂ ಪಾತ್ರಗಳನ್ನು ಗಣೇಶ್ ಅವರೇ ನಿರ್ವಹಿಸಿದ್ದಾರೆ.

ಕನ್ನಡತನ ಹಾಗೂ ಪ್ರೀತಿಯ ಜೀವಂತಿಕೆಯನ್ನು ಒಟ್ಟಿಗೆ ಕಟ್ಟಿಕೊಡುವ ಸಿನಿಮಾ ‘ಗೀತಾ’. ಮಾತೃಭಾಷೆಯ ಉಳಿವು ಹಾಗೂ ಪ್ರೀತಿಯ ಸೌಂದರ್ಯ ಎರಡನ್ನೂ ಒಂದೇ ನಾಣ್ಯದ ಎರಡು ಮುಖಗಳಂತೆ ಚಿತ್ರಿಸಿದ್ದಾರೆ ನಿರ್ದೇಶಕ ವಿಜಯ್‌ ನಾಗೇಂದ್ರ. ಕನ್ನಡ ಭಾಷೆಯ ವಾಸ್ತವ ಸ್ಥಿತಿಗತಿಯನ್ನು ಪ್ರತಿಬಿಂಬಿಸುತ್ತಲೇ ಕಮರ್ಷಿಯಲ್‌ ಸೂತ್ರಗಳಿಗೆ ಬದ್ಧವಾಗಿ ಚಿತ್ರಕಥೆ ಹೆಣೆದಿದ್ದಾರೆ.

ಮೊದಲ ಬಾರಿಗೆ ತೆರೆಯ ಮೇಲೆ ಗೋಕಾಕ್‌ ಚಳವಳಿಯನ್ನು ತಂದಿರುವುದು ನಿರ್ದೇಶಕರ ಜಾಣ್ಮೆಯನ್ನು ತೋರುತ್ತದೆ. ಗಣೇಶ್‌ ನಿರ್ವಹಿಸಿದ ಅಪ್ಪ, ಮಗನ ಎರಡೂ ಪಾತ್ರಗಳಿಗೆ ನಾಯಕಿ ಗೀತಾ. ಈ ಪಾತ್ರಗಳನ್ನು ಪಾರ್ವತಿ ಅರುಣ್‌ ಮತ್ತು ಪ್ರಯಾಗ ಮಾರ್ಟಿನ್‌ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಾಲೇಜು ಹಾಗೂ ಹೋರಾಟದ ದಿನಗಳಲ್ಲಿ ಗೀತಾಳ ಪ್ರೇಮಕ್ಕೆ ನಾಯಕ ಸಿಲುಕುತ್ತಾನೆ. ಕೊನೆಗೆ, ಆಕೆ ಸಿಗುತ್ತಾಳೆಯೇ ಎನ್ನುವುದೇ ಚಿತ್ರದ ಹೂರಣ.

ಚಿತ್ರದ ಪ್ರಥಮಾರ್ಧ ಕನ್ನಡ ಹೋರಾಟಕ್ಕೆ ಮೀಸಲು. ಆ ಮೂಲಕ ಸಿನಿಮಾಕ್ಕೊಂದು ಸಾಮಾಜಿಕ ಆಯಾಮವೂ ದಕ್ಕಿದೆ. ದ್ವಿತೀಯಾರ್ಧದಲ್ಲಿ ಒಂದರ ಹಿಂದೊಂದು ನಾಟಕೀಯ ಸನ್ನಿವೇಶಗಳು ಘಟಿಸುತ್ತವೆ. ನಾಯಕ ಸ್ನೇಹ ಮತ್ತು ಪ್ರೀತಿಯ ಆಯ್ಕೆಯ ಗೊಂದಲಕ್ಕೆ ಸಿಲುಕುತ್ತಾನೆ. ಸಿನಿಮಾದುದ್ದಕ್ಕೂ ಏಕಮುಖವಾಗುವ ಅವನ ಪ್ರೀತಿ, ಕೊನೆಗೆ ಇಮ್ಮುಖವಾಗುವುದು ಅನುಕೂಲ ಸಿಂಧು ಅನಿಸುತ್ತದೆ.

ಕನ್ನಡದ ಹೆಸರು ಹೇಳಿಕೊಂಡು ಮಾತೃಭಾಷೆಗೆ ದ್ರೋಹ ಬಗೆಯುವವರ ಮುಖಗಳನ್ನು ಬಣ್ಣ, ರೇಖೆಗಳಲ್ಲಿ ಬಿಡಿಸುವ ಪ್ರಯತ್ನವೂ ಇಲ್ಲಿದೆ. ಕನ್ನಡದ ಕಟ್ಟಾಳು ಆಗಿ ಶಂಕರ್‌ ಹೇಳುವ ಮಾತುಗಳು ಸಹೃದಯರನ್ನು ತಲ್ಲಣಗೊಳಿಸುತ್ತವೆ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಲು ಹಿಂದೇಟು ಹಾಕುತ್ತಿರುವ ಉನ್ನತಮಟ್ಟದ ಅಧಿಕಾರಿಗಳ ಅಸಡ್ಡೆ ಬಗ್ಗೆಯೂ ಈ ಚಿತ್ರ ಮಾತನಾಡುತ್ತದೆ.

ದೃಶ್ಯಗಳ ಹೆಣಿಗೆ, ವರನಟ ರಾಜಕುಮಾರ್ ಅವರ‌ ಮುಂದಾಳತ್ವದಡಿ ನಡೆದ ಗೋಕಾಕ್ ಚಳವಳಿಯ ಹೋರಾಟದ ದೃಶ್ಯಗಳನ್ನು ಬಳಸಿಕೊಂಡಿರುವ ರೀತಿಯೂ ಚೆನ್ನಾಗಿದೆ.

ಗಣೇಶ್‌ ಲವಲವಿಕೆಯಿಂದ ನಟಿಸಿದ್ದಾರೆ. ಕನ್ನಡದ ಕಟ್ಟಾಳು ಆಗಿ ಅವರು ಇಷ್ಟವಾಗುತ್ತಾರೆ. ಆದರೆ, ಕಟ್ಟಾಳುವನ್ನು ಸಿನಿಮಾದುದ್ದಕ್ಕೂ ಸಿಗರೇಟ್‌, ಮದ್ಯವ್ಯಸನಿಯಾಗಿ ಚಿತ್ರಿಸಿರುವುದು ಏನನ್ನು ಸೂಚಿಸುತ್ತದೆ ಎನ್ನುವುದು ಗೊತ್ತಾಗುವುದಿಲ್ಲ.

ಸ್ನೇಹ ಮತ್ತು ಪ್ರೀತಿಯ ರೂಪಕಗಳನ್ನು ಪೋಷಿಸಿರುವ ಶಾನ್ವಿ ಇಷ್ಟವಾಗುತ್ತಾರೆ. ಕನ್ನಡ ಹೋರಾಟದ ಮೂಡ್ ಕಟ್ಟಿಕೊಡುವಲ್ಲಿ ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣ ಪರಿಣಾಮಕಾರಿಯಾಗಿದೆ. ಅನೂಪ್‌ ರುಬೆನ್ಸ್‌ ಸಂಗೀತ ಸಂಯೋಜನೆಯ ಎರಡು ಹಾಡು ಇಂಪಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.