ADVERTISEMENT

ವೈರಲ್‌ ಆಗುತ್ತಿದೆ ‘ಮುಖ ಮುಂಚ್ಕೊಂಡು ಬಾ, ಮುಖ ಮುಚ್ಕೊಂಡು ಹೋಗಲ್ಲೆ’

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 12:42 IST
Last Updated 22 ಜೂನ್ 2021, 12:42 IST
ಹಾಡಿನ ಚಿತ್ರ
ಹಾಡಿನ ಚಿತ್ರ   

ಬೆಂಗಳೂರು: ಕೋವಿಡ್‌–19 ಎರಡನೇ ಅಲೆಯನ್ನು ನಿಯಂತ್ರಿಸಲು ಹೇರಲಾಗಿದ್ದ ಲಾಕ್‌ಡೌನ್‌ ಅನ್ನು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಜನರ ಓಡಾಟವೂ ಹೆಚ್ಚಾಗುತ್ತಿದೆ. ಕಟ್ಟಿಹಾಕಿದಂತಾಗಿದ್ದ ಜನರಿಗೆ ಅನ್‌ಲಾಕ್‌ ಮನೆಯಿಂದ ಹೊರಗಡೆ ಹೋಗುವ ಅವಕಾಶ ನೀಡಿದೆ.

ಆದರೆ, ಮುಂದಿನ ದಿನಗಳಲ್ಲಿ ಕೋವಿಡ್‌ ಮೂರನೇ ಅಲೆಯ ಮುನ್ಸೂಚನೆಯೂ ಇರುವುದರಿಂದ ಈಗ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕ ಪಲ್ಮನೋಲಜಿಸ್ಟ್‌ (ಶ್ವಾಸಕೋಶ ಶಾಸ್ತ್ರಜ್ಞರ) ಸಂಘ (ಕೆಪಿಎ) ಜನರಿಗೆ ವಿಶೇಷವಾದ ಹಾಡಿನ ಮೂಲಕ ಕಿವಿಮಾತು ಹೇಳಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

‘ಮೈ ಡಿಯರ್‌ ಗೆಳೆಯರೇ ಗೆಳತಿಯರೇ ವೆರಿ ಸೂನ್‌ ಲಾಕ್‌ಡೌನ್‌ ಓಪನ್‌ ಆಗುತ್ತದೆ, ನಾವೆಲ್ಲ ಜೈಲಿಂದ ಬಿಟ್ಟ ಹಾಗೆ ಹುಚ್ಚರ ಥರ ಬೀದಿಲಿ ಓಡಾಡ್ತೇವೆ...ಏಯ್‌..ಸಿಗೋಣ ಗುರು ಎಂ.ಜಿ ರೋಡಲ್ಲಿ ವೀಲಿಂಗ್‌ ಶುರು...ಲಾಂಗ್‌ಟೈಂ ಮಚ್ಚಾ ಬಾಮ್ಮ ರೋಡ್‌ ಟ್ರಿಪ್‌ ಹೋಗೋಣ...’ ಹೀಗೆ ಲಾಕ್‌ಡೌನ್‌ ನಂತರದ ಜನರ ಯೋಚನೆಗಳನ್ನು ಹಾಡಿನಲ್ಲೇ ಕಟ್ಟಿಕೊಟ್ಟಿದ್ದಾರೆ.

ADVERTISEMENT

‘ಪ್ಲೀಸ್‌ ಡೋನ್ಟ್‌ ಮೈಂಡ್‌ ಮಗ..ಜಸ್ಟ್‌ ಬಿ ಕೈಂಡ್‌ ಮಗ’ ಎ‌ನ್ನುತ್ತಾ ನಟ ಸಾಯಿಕುಮಾರ್ ಆಗಾಗೇ ಕೈಯನ್ನು ಸ್ವಚ್ಛಗೊಳಿಸುವ ಕುರಿತು ಜಾಗೃತಿ ಮೂಡಿಸಿದ್ದಾರೆ. ಅಯ್ಯೊ ಶ್ರದ್ಧಾ, ಅಲೋಕ್‌ ಬಾಬು, ನಟಿಯರಾದ ಅಶ್ವಿತಿ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ, ಕ್ರಿಕೆಟಿಗ ಕೃಷ್ಣಪ್ಪ ಗೌತಮ್‌ ಕೂಡಾ ಇದರಲ್ಲಿ ನಟಿಸಿದ್ದು, ಮಾಸ್ಕ್‌ ಧರಿಸಿಕೊಂಡೇ, ಸೋಂಕು ಹರಡದಂತೆ ಪರಸ್ಪರ ಅಂತರವನ್ನು ಇಟ್ಟುಕೊಂಡೇ ಮುನ್ನೆಚ್ಚರಿಕೆಯಿಂದ ಹೊರಹೋಗೋಣ ಎಂದಿದ್ದಾರೆ. ವೈದ್ಯರಾದ ವಿವೇಕ್‌ ಪಡೇಗಲ್‌, ಸತೀಶ್‌ ಕೆ.ಎಸ್‌, ಸುಮ ಪಿ.ಕುಮಾರ್, ಗೋಪಾಲ್‌, ಸಮ್ಯ ಮುಜೀಬ್‌, ಚಂದನ ವಿ ಅವರೂ ಜನರಿಗೆ ಕಿವಿಮಾತು ಹೇಳಿದ್ದಾರೆ.

‘ದಿ ಸ್ಕ್ರಿಪ್ಟ್‌ ರೂಮ್‌’ನ ರಾಜೇಶ್‌ ರಾಮಸ್ವಾಮಿ ಅವರು ಇದಕ್ಕೆ ಈ ಹಾಡನ್ನು ಬರೆದಿದ್ದು, ದೀಪಕ್‌ ಅಲೆಕ್ಸಾಂಡರ್‌ ಸಂಗೀತ ನೀಡಿದ್ದಾರೆ. ರಾಜೇಶ್‌ ರಾಮಸ್ವಾಮಿ, ದೀಪಕ್‌ ಅಲೆಕ್ಸಾಂಡರ್‌, ರ್‍ಯಾಪರ್‌ ಸುಮುಖ್‌ ಇದನ್ನು ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.