ADVERTISEMENT

Bigg Boss 8: ಅಶ್ಲೀಲ ಸನ್ನೆ ಮಾಡಿದ್ದ ಚಕ್ರವರ್ತಿಗೆ ಸಿಗುತ್ತಾ ಗೇಟ್ ಪಾಸ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2021, 6:01 IST
Last Updated 27 ಜುಲೈ 2021, 6:01 IST
ಕಲರ್ಸ್ ಕನ್ನಡ ವಿಡಿಯೊ ಸ್ಕ್ರೀನ್ ಗ್ರ್ಯಾಬ್
ಕಲರ್ಸ್ ಕನ್ನಡ ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ಬೆಂಗಳೂರು: ಬಿಗ್ ಬಾಸ್ ಫಿನಾಲೆಗೆ ದಿನಗಳು ಸಮೀಪಿಸುತ್ತಿದ್ದಂತೆ ಮನೆಯ ಸದಸ್ಯರ ನಡುವಿನ ಪೈಪೋಟಿಯೂ ಹೆಚ್ಚಾಗುತ್ತಿದೆ. ಈ ಮಧ್ಯೆ, ವಾರಾಂತ್ಯಕ್ಕೆ ಮುಗಿಯುತ್ತಿದ್ದ ಎಲಿಮಿನೇಶನ್ ಟೆನ್ಷನ್ ವಾರದ ದಿನಗಳಿಗೆ ಶಿಫ್ಟ್ ಆಗಿರುವುದು ಸ್ಪರ್ಧಿಗಳನ್ನು ಚಡಪಡಿಸುವಂತೆ ಮಾಡಿದೆ.

ಹೌದು, ನಾಮಿನೇಟ್ ಆಗಿರುವ ಶಮಂತ್, ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರಗಿಯವರ ಪೈಕಿ ಒಬ್ಬರು ಭಾನುವಾರ ಮನೆಯಿಂದ ಹೋಗಬೇಕಿತ್ತು. ಆದರೆ, ಈ ಬಾರಿ ಎಲಿಮಿನೇಶನ್‌ಗೆ ಟ್ವಿಸ್ಟ್ ಕೊಟ್ಟ ಸುದೀಪ್ ಇವತ್ತು ಯಾರೂ ಹೋಗುವುದಿಲ್ಲ. ಆದರೆ, ಮುಂದಿನ ಶನಿವಾರ ನಾನು ಇಲ್ಲಿಗೆ ಬರುವ ಹೊತ್ತಿಗೆ ಒಬ್ಬರು ಮನೆಯಲ್ಲಿ ಇರುವುದಿಲ್ಲ ಎನ್ನುವ ಮೂಲಕ ಟೆನ್ಷನ್ ಕೊಟ್ಟಿದ್ದಾರೆ.

ಬೆಳಗ್ಗೆ, ರಾತ್ರಿ ಎಲ್ಲ ಸಮಯದಲ್ಲೂ ಯಾರು ಇರುತ್ತಾರೆ. ಯಾರು ಹೋಗುತ್ತಾರೆ ಎಂಬ ಬಗ್ಗೆಯೇ ಚಿಂತಿಸುತ್ತಿರುವರ ಸದಸ್ಯರು ನೆಮ್ಮದಿ ಕಳೆದುಕೊಂಡಿದ್ದಾರೆ. ಈ ಮಧ್ಯೆ, ಮನೆಗೆ ಟೆಲಿಫೋನ್ ಬೂತ್ ಸಹ ಬಂದಿದ್ದು, ಆಗಾಗ್ಗೆ ರಿಂಗ್ ಮಾಡಿ ಸ್ಪರ್ಧಿಗಳಿಗೆ ಚಟುವಟಿಕೆ ನೀಡಿ, ಪರಸ್ಪರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

ADVERTISEMENT

ಡೇಂಜರ್ ಝೋನ್‌ನಲ್ಲಿರುವ ಚಕ್ರವರ್ತಿ: ಪ್ರಿಯಾಂಕಾ ತಿಮ್ಮೇಶ್ ನಿರ್ಗಮನದ ಸಂದರ್ಭ ಮಧ್ಯದ ಬೆರಳು ತೋರಿಸಿದ್ದ ಚಕ್ರವರ್ತಿ ಚಂದ್ರಚೂಡ್ ಅವರು ಎಲ್ಲರಿಗಿಂತಲೂ ಹೆಚ್ಚು ಆತಂಕದಲ್ಲಿದ್ದಂತೆ ಕಾಣುತ್ತಿದೆ.

ಚಕ್ರವರ್ತಿ ಅವರ ಆ ವರ್ತನೆ ಬಗ್ಗೆ ಪ್ರೇಕ್ಷಕರು ಸಹ ತೀವ್ರ ಅಸಮಾಧಾನ ಹೊರ ಹಾಕಿದ್ದರು. ಸುದೀಪ್ ಸಹ ಬೈದು ಬುದ್ಧಿ ಹೇಳಿದ್ದರು. ಇದೀಗ, ಆತಂಕಗೊಂಡಂತೆ ಕಾಣುತ್ತಿರುವ ಚಂದ್ರಚೂಡ್ ಕ್ಯಾಮರಾ ಬಳಿಗೆ ಹೋಗಿ ಕ್ಷಮೆ ಕೇಳಿದ್ದಾರೆ. ನಾನು ಆ ರೀತಿಯ ವ್ಯಕ್ತಿಯಲ್ಲ. ಕೋಪದಲ್ಲಿ ಆ ರೀತಿ ತೋರಿಸಿದ್ದೇನೆ. ನನ್ನ ವರ್ತನೆಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈಗಾಗಲೇ ವೀಕ್ಷಕರ ಮತಗಳ ಆಧಾರದ ಮೇಲೆ ಹೊರ ಹೋಗುವ ಸದಸ್ಯನ ನಿರ್ಧಾರವಾಗಿರುವ ಸಾಧ್ಯತೆ ಇದ್ದು, ಚಂದ್ರಚೂಡ್ ಕ್ಷಮೆಯಾಚನೆಗೆ ಎಷ್ಟು ಮನ್ನಣೆ ಸಿಗಲಿದೆ ಎಂಬ ಪ್ರಶ್ನೆ ಎದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.