ADVERTISEMENT

PV Web Exclusive: ಕರಿ ಚಿರತೆಯ ಜಾಡಿನಲ್ಲಿ...

ಕೆ.ಎಚ್.ಓಬಳೇಶ್
Published 31 ಡಿಸೆಂಬರ್ 2020, 12:23 IST
Last Updated 31 ಡಿಸೆಂಬರ್ 2020, 12:23 IST
ಕಾಕನಕೋಟೆ ಸಫಾರಿಯಲ್ಲಿ ಗೋಚರಿಸಿದ ಕಪ್ಪು ಚಿರತೆ
ಕಾಕನಕೋಟೆ ಸಫಾರಿಯಲ್ಲಿ ಗೋಚರಿಸಿದ ಕಪ್ಪು ಚಿರತೆ   
""
""
""

ಸೂರ್ಯ ಮುಳುಗಿ ಆಗಷ್ಟೇ ಕತ್ತಲು ಆವರಿಸತೊಡಗಿತ್ತು. ಪಕ್ಷಿಗಳು ಗೂಡಿಗೆ ಮರಳುವ ಸಮಯ. ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಕೆ. ಗುಡಿಯಿಂದ ಮನೆಯತ್ತ ಸಾಗಿದ್ದೆವು. ಮನದಲ್ಲಿ ಬೇಗನೆ ಮನೆ ಸೇರುವ ತವಕ. ಕಾಡಿನ ನಿಶ್ಚಲ ಮೌನವನ್ನು ಭೇದಿಸಿಕೊಂಡು ಜೀಪು ಸಾಗುತ್ತಿತ್ತು.

ಅಲ್ಲೆಲ್ಲೋ ಅಡಗಿದ್ದ ಚಿರತೆ ಚುಕ್ಕಿ ಜಿಂಕೆಗಳ ಹಿಂಡಿನ ಮೇಲೆರಗಲು ಮಾಡಿದ ಪ್ರಯತ್ನ ವಿಫಲಗೊಂಡಿದ್ದರಿಂದ ಜಿಂಕೆಗಳು ಚೆಲ್ಲಾಪಿಲ್ಲಿಯಾಗಿ ಚದುರಿದ್ದವು. ದಿಗಿಲುಗೊಂಡು ಶತದಿಕ್ಕುಗಳತ್ತ ಓಡುತ್ತಿದ್ದ ಗೊರಸುಗಳ ಸಪ್ಪಳ ಕೇಳಿಸುತ್ತಿತ್ತು. ಆ ಗದ್ದಲದಿಂದ ಹುಲ್ಲಿನಲ್ಲಿ ಅಡಗಿದ್ದ ಪಕ್ಷಿಗಳು ಭಯಗೊಂಡು ಹೊರಬಂದಿದ್ದವು. ಮರದಿಂದ ಮರಕ್ಕೆ ಜಿಗಿಯುತ್ತಿದ್ದ ಮುಸುವಗಳ ಚೀತ್ಕಾರ; ಟಿಟ್ಟಭ ಹಕ್ಕಿಯ ಕೂಗು... ಒಮ್ಮೆಲೆ ಎದುರಿನಲ್ಲಿ ಗುರುಗುಟ್ಟಿದ ಸದ್ದು! ಅರಣ್ಯ ಸಿಬ್ಬಂದಿ ಬಳಸುವ ಗೇಮ್ ರೋಡ್‌ಗೆ ಹೊರಳಿದ ಚಿರತೆಯು ಚಂಗನೆ ಮರವೇರಿ ಜೀಪಿನಲ್ಲಿ ಕುಳಿತಿದ್ದವರಿಗೆ ತನ್ನ ದಂತಪಂಕ್ತಿಗಳನ್ನು ತೋರಿಸಿತ್ತು.

ದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿರುವ ಸುದ್ದಿ ಹೊರಬಿದ್ದಿದೆ. ಇದು ಆಶಾದಾಯಕ ಬೆಳವಣಿಗೆಯೂ ಹೌದು. ಈ ನಡುವೆಯೇ ಆಗಾಗ್ಗೆ ಕಪ್ಪು ಚಿರತೆಗಳೂ ಸುದ್ದಿಯಾಗುತ್ತಿವೆ. ವನ್ಯಜೀವಿ ಛಾಯಾಗ್ರಾಹಕರು, ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ಸೆರೆಯಾದ ಕಪ್ಪು ಚಿರತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಚಿರತೆಗಳೇಕೆ ಕಪ್ಪು ಬಣ್ಣದಿಂದ ಕೂಡಿರುತ್ತವೆ? ಇದು ಎಲ್ಲರಿಗೂ ಕಾಡುವ ಕುತೂಹಲದ ಪ್ರಶ್ನೆ.

ADVERTISEMENT
ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ಸೆರೆ ಸಿಕ್ಕಿದ ಕಪ್ಪು ಚಿರತೆ

ನಾಗರಹೊಳೆಯ ಕಬಿನಿ ಹಿನ್ನೀರು ಪ್ರದೇಶಕ್ಕೆ ಕಪ್ಪು ಚಿರತೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಹೋಗುವ ವನ್ಯಜೀವಿ ಛಾಯಾಗ್ರಾಹಕರಿಗೆ ಕೊರತೆ ಇಲ್ಲ. ಸಫಾರಿಗೆ ಹೋದವರಿಗೆ ಕರಿ ಚಿರತೆ ಒಮ್ಮೆಯಾದರೂ ಕಾಣಿಸಿಕೊಂಡರೆ ಸಾಕೆಂಬ ಆಸೆ. ಹಾಗೆಂದು ಈ ಚಿರತೆ ವಿಶೇಷ ಗುಂಪಿಗೆ ಸೇರಿದ್ದಲ್ಲ.

ಕಪ್ಪು ಚಿರತೆಯ ಹೆಸರು ಕೇಳಿದಾಕ್ಷಣ ಆಂಗ್ಲ ಸಾಹಿತಿ ರುಡ್ಯಾರ್ಡ್ ಕಿಪ್ಲಿಂಗ್ ಬರೆದ ‘ಜಂಗಲ್ ಬುಕ್’ ಕೃತಿ ನೆನಪಾಗದೆ ಇರದು. ಆತ ಈ ಕೃತಿ ಬರೆದದ್ದು 1892ರಲ್ಲಿ. ‘ಮೌಗ್ಲಿ’ ಎಂಬ ಕಾಡಿನ ಹುಡುಗನ ಕಥೆ ಇದು. ಮನುಷ್ಯ ಶಿಶುವೊಂದು ಎಳೆವರೆಯದಲ್ಲಿಯೇ ಕಾನನದ ಪಾಲಾಗುತ್ತದೆ. ಅದನ್ನು ತೋಳಗಳ ಗುಂಪೊಂದು ಸಾಕುತ್ತದೆ. ಮೌಗ್ಲಿಗೆ ಮಾತ್ರ ಮಾನವರಂತೆ ಮಾತನಾಡಲು ಬರುವುದಿಲ್ಲ. ತೋಳಗಳಂತೆ ಹೂಳಿಟ್ಟು ಸಂಭಾಷಿಸುವ ಈತನಿಗೆ ‘ಭಗೀರಾ’ ಎಂಬ ಕಪ್ಪು ಚಿರತೆ ಹಾಗೂ ಬಾಲೂ ಎಂಬ ಕರಡಿ ಸ್ನೇಹಿತರು. ಅಂದಹಾಗೆ ಶೇರ್‌ಖಾನ್‌ ಎಂಬ ಹೆಬ್ಬುಲಿ, ಕಾ ಎಂಬ ಹೆಬ್ಬಾವು ಹಾಗೂ ಕಿಂಗ್‌ಲೂಯಿ ಎಂಬ ಉರಾಂಗುಟಾನ್ ಕೋತಿಗಳೇ ಮೌಗ್ಲಿಯ ಶತ್ರುಗಳು. ಹಾಗಾಗಿ, ಕಪ್ಪು ಚಿರತೆ ಬಗ್ಗೆ ಮಕ್ಕಳಿಗೂ ಕುತೂಹಲ.

ನಾಲ್ಕು ವರ್ಷಗಳ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ನುಗು ಮತ್ತು ಮೊಳೆಯೂರು ಅರಣ್ಯ ವಲಯದಲ್ಲಿ ಮೊದಲ ಬಾರಿಗೆ ಕಪ್ಪು ಚಿರತೆ ಪತ್ತೆಯಾಗಿತ್ತು. ಇತ್ತೀಚೆಗೆ ಅರಣ್ಯ ಇಲಾಖೆಯು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ಕಪ್ಪು ಚಿರತೆ ಸೆರೆ ಸಿಕ್ಕಿದೆ.

ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ಸೆರೆಯಾಗಿದ್ದ ಕರಿ ಚಿರತೆ

ಚಿರತೆಯ ಬಣ್ಣದ ವ್ಯತ್ಯಾಸ ಏಕೆ?

ಮೈಬಣ್ಣ ಹಾಗೂ ಕೂದಲಿನ ಬಣ್ಣದ ಗಾಢತೆಯು ಮೆಲಾನಿನ್‌ ಅಂಶವನ್ನು ಅವಲಂಬಿಸಿರುತ್ತದೆ. ದೇಹದಲ್ಲಿ ಮೆಲಾನಿನ್‌ ವರ್ಣದ್ರವ್ಯವು ಹೆಚ್ಚಾದರೆ ಚಿರತೆಗಳು ಸಾಮಾನ್ಯ ಬಣ್ಣವನ್ನು ಕಳೆದುಕೊಳ್ಳುತ್ತವೆ. ಆಗ ಅವುಗಳ ದೇಹದ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವುದು ಸಹಜ. ಈ ಬಣ್ಣ ಹೊರತುಪಡಿಸಿದರೆ ಉಳಿದ ಎಲ್ಲ ಲಕ್ಷಣಗಳು ಸಾಮಾನ್ಯ ಚಿರತೆಯಂತೆಯೇ ಇರುತ್ತದೆ. ಹತ್ತಿರದಿಂದ ಕರಿ ಚಿರತೆಗಳನ್ನು ವೀಕ್ಷಿಸಿದರೆ ಕಪ್ಪು ಚುಕ್ಕೆಗಳು ಕಂಡುಬರುತ್ತವೆ.

ಕರಿ ಚಿರತೆಗಳು ಹೆಚ್ಚಾಗಿ ಕಂಡುಬರುವುದು ಪಶ್ಚಿಮ ಘಟ್ಟದ ತೀವ್ರ ಆರ್ದ್ರತೆಯಿಂದ ಕೂಡಿದ ಅರಣ್ಯ ಪ್ರದೇಶ ಮತ್ತು ಶೋಲಾ ಕಾಡುಗಳಲ್ಲಿ. ಆದರೆ, ಬಂಡೀಪುರದ ನುಗು ವಲಯ, ಮಲೆಮಹದೇಶ್ವರ ವನ್ಯಜೀವಿಧಾಮದ ಕುರುಚಲು ಕಾಡುಗಳಲ್ಲೂ ಇವುಗಳು ಆವಾಸ ಕಂಡುಕೊಂಡಿರುವುದು ವಿಶೇಷ.

ಮೆಲಾನಿನ್‌ ಅನುವಂಶಿಕವಾಗಿದ್ದರೂ ಅದು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ರವಾನೆಯಾಗುತ್ತದೆ ಎಂದು ತರ್ಕಿಸುವಂತಿಲ್ಲ. ಸಾಮಾನ್ಯ ಬಣ್ಣದ ಚಿರತೆಯೂ ಮೆಲನಿಸ್ಟಿಕ್‌ ಜೀನ್‌ ಹೊಂದಿರಬಹುದು. ಗಂಡು ಮತ್ತು ಹೆಣ್ಣು ಚಿರತೆಗಳು ಮೆಲನಿಸ್ಟಿಕ್‌ ಜೀನ್‌ಗಳನ್ನು ಹೊಂದಿದ್ದರೆ ಅವುಗಳಿಗೆ ಜನಿಸುವ ಮರಿಗಳು ಕಪ್ಪಾಗಿ ಹುಟ್ಟುತ್ತವೆ. ಮೆಲನಿಸ್ಟಿಕ್‌ ಜೀನ್‌ ಹೊಂದಿದ ಎಲ್ಲ ಚಿರತೆಗಳು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಕೂಡಿರುವುದಿಲ್ಲ. ಕಪ್ಪು ರೋಸೆಟ್‌ಗಳು ಡಾರ್ಕ್‌ಕೋಟ್‌ಗಳಾಗಿ ಗೋಚರಿಸುತ್ತವೆ. ಹತ್ತಿರದಿಂದ ನೋಡಿದಾಗಲಷ್ಟೇ ಇದು ಕಂಡುಬರುತ್ತದೆ ಎನ್ನುತ್ತಾರೆ ವನ್ಯಜೀವಿ ವಿಜ್ಞಾನಿಗಳು.

ಸಾಮಾನ್ಯ ಚಿರತೆಗಳು ಕಂಡುಬರುವ ಅರಣ್ಯ ಪ್ರದೇಶಗಳಲ್ಲಿಯೇ ಇವುಗಳೂ ಕಂಡುಬರುತ್ತವೆ. ಅವುಗಳ ಕಪ್ಪು ಬಣ್ಣವು ದಟ್ಟವಾದ ಕಾಡುಗಳಲ್ಲಿ ಅವು ಬದುಕಲು ಸಹಕಾರಿಯಾಗಿದೆ. ಜೊತೆಗೆ, ಬಲಿಪ್ರಾಣಿಗಳ ಬೇಟೆಗೂ ಪೂರಕವಾಗಿದೆ. ಹಾಗಾಗಿಯೇ, ಅವು ಹೆಚ್ಚಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುತ್ತವೆ.

ಎಲ್ಲೆಲ್ಲಿ ಕಂಡು ಬರುತ್ತವೆ?

ಕರ್ನಾಟಕದ ಅಣಶಿ–ದಾಂಡೇಲಿ, ಭದ್ರಾ, ಬಂಡೀಪುರ, ಕಬಿನಿ, ಬಿಆರ್‌ಟಿ, ಮಲೆಮಹದೇಶ್ವರ ವನ್ಯಜೀವಿಧಾಮ, ಕೇರಳದ ಪೆರಿಯಾರ್‌, ವಯನಾಡಿನ ಭಾಗದಲ್ಲಿ ಕರಿ ಚಿರತೆಗಳು ಕಂಡುಬರುತ್ತವೆ. ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಇರುವ ಚಿರತೆಗಳ ಪೈಕಿ ಶೇಕಡ 14ರಷ್ಟು ಚಿರತೆಗಳು ಕಪ್ಪು ಚಿರತೆಗಳಾಗಿವೆ ಎಂದು ವನ್ಯಜೀವಿ ವಿಜ್ಞಾನಿಗಳ ಸಂಶೋಧನೆ ಮತ್ತು ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮೆರಾ ಟ್ರಾಪಿಂಗ್‌ನಿಂದ ಬೆಳಕಿಗೆ ಬಂದಿದೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ಸೆರೆಯಾದ ಕಪ್ಪು ಚಿರತೆ

ಮೆಲಾನಿನ್‌ ಅಂಶದ ಬದಲಾವಣೆ ಚಿರತೆಗಳಿಗಷ್ಟೇ ಸೀಮಿತಗೊಂಡಿಲ್ಲ. ಬೆಕ್ಕಿನ ಕುಟುಂಬಕ್ಕೆ ಸೇರಿದ ವಿಶ್ವದ 40 ಪ್ರಭೇದದ ಪ್ರಾಣಿಗಳ ಪೈಕಿ 15 ಪ್ರಭೇದಕ್ಕೆ ಸೇರಿದ ಪ್ರಾಣಿಗಳಲ್ಲಿ ಮೆಲಾನಿನ್‌ ಅಂಶದ ವ್ಯತ್ಯಾಸ ಇರುವುದು ಕಂಡುಬಂದಿದೆ. ಈ ಪ್ರಭೇದಗಳಲ್ಲೂ ಕಪ್ಪು ಬಣ್ಣದ ಮರಿಗಳು ಜನಿಸುತ್ತವೆ. ಜಾಗ್ವರ್, ದಂಶಕ ಪ್ರಾಣಿಗಳು, ಪಕ್ಷಿಗಳು, ಹಾವುಗಳಲ್ಲೂ ಮೆಲನಿಸ್ಟಿಕ್‌ ಜೀನ್‌ ಇರುವುದನ್ನು ವನ್ಯಜೀವಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಹಾಗಾಗಿ, ಈ ಪ್ರಭೇದದಲ್ಲೂ ಕಪ್ಪು ಬಣ್ಣದ ಪ್ರಾಣಿ–ಪಕ್ಷಿಗಳನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.