ADVERTISEMENT

ತುಂಟ ಬೆಕ್ಕನ್ನು ಕಾಡದಿರಲಿ ಭಯ

ಮನಸ್ವಿ
Published 20 ಜನವರಿ 2021, 19:30 IST
Last Updated 20 ಜನವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮನೆಯಲ್ಲಿ ಮಿಯ್ಯಾಂವ್‌ ಮಿಯ್ಯಾಂವ್ ಎಂದುಕೊಂಡು ಹೋದಲ್ಲಿ ಬಂದಲ್ಲಿ ಕೈ– ಕಾಲಿಗೆ ತೊಡರುವ ಬೆಕ್ಕಿನ ಮರಿ ಇದ್ದರೆ ಎಷ್ಟು ಚೆನ್ನ. ಬೆಕ್ಕನ್ನು ಸಾಕುವುದು ಸುಲಭ, ಅದರ ತುಂಟಾಟ ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಮನೆಯಲ್ಲಾಗುವ ಸಣ್ಣಪುಟ್ಟ ಬದಲಾವಣೆಯೂ ಬೆಕ್ಕಿನ ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ, ಅಲ್ಲದೇ ಭಯ ಹುಟ್ಟು ಹಾಕುತ್ತದೆ. ಬೆಕ್ಕುಗಳು ಬಲವಾದ ವಾಸನೆ ಗ್ರಹಿಸುವ ಶಕ್ತಿ ಹಾಗೂ ಶ್ರವಣಶಕ್ತಿಯನ್ನು ಹೊಂದಿರುವ ಕಾರಣಕ್ಕೆ ಕೆಲವು ಪ್ರಚೋದಕಗಳಿಗೆ ಅವು ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಅಂತಹ ಪ್ರಚೋದಕಗಳು ಯಾವುವು ಎಂದು ತಿಳಿದುಕೊಂಡು ಅಂತಹವುಗಳಿಂದ ಬೆಕ್ಕನ್ನು ದೂರ ಇರಿಸುವುದು ಅಗತ್ಯ.

ಜೋರಾದ ಸದ್ದು–ಗದ್ದಲ: ಮನೆಯ ಒಳಗೆ ಅಥವಾ ಹೊರಗೆ ಉಂಟಾಗುವ ಅತಿಯಾದ ಶಬ್ದ, ಸದ್ದು–ಗದ್ದಲಗಳಿಂದ ಬೆಕ್ಕುಗಳು ಹೆದರುತ್ತವೆ. ಅಲ್ಲದೇ ತಕ್ಷಣಕ್ಕೆ ಅವು ಸೋಫಾ ಅಥವಾ ಬೆಡ್‌ನ ಕೆಳಗೆ ಅವಿತು ಕುಳಿತುಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಶಬ್ದ, ಗದ್ದಲಗಳಿಂದ ಬೆಕ್ಕನ್ನು ದೂರ ಇರಿಸಿ. ಗುಡುಗು, ಸಿಡಿಲಿನ ಶಬ್ದ ಹೆಚ್ಚಿದ್ದರೆ ಆ ಸಂದರ್ಭದಲ್ಲಿ ಅವುಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಪಶುವೈದ್ಯರಿಂದ ಕೇಳಿ ತಿಳಿದುಕೊಳ್ಳಿ.

ಗಾಢ ವಾಸನೆ: ಬೆಕ್ಕುಗಳು ವಾಸನೆಯನ್ನು ಮನುಷ್ಯರಿಗಿಂತ 14 ಪಟ್ಟು ವೇಗವಾಗಿ ಗ್ರಹಿಸುತ್ತವೆ. ಅವು ಗಾಢ ವಾಸನೆಯನ್ನು ಸಹಿಸುವುದಿಲ್ಲ. ಅತಿಯಾದ ಸುಗಂಧದ್ರವ್ಯದ ಪರಿಮಳವು ಬೆಕ್ಕನ್ನು ಗಲಿಬಿಲಿ ಮಾಡುತ್ತದೆ. ಆ ಕಾರಣಕ್ಕೆ ಅವು ಮಲಗುವ ಜಾಗದಲ್ಲಿ, ಊಟದ ತಟ್ಟೆಯಲ್ಲಿ ಸುಗಂಧದ್ರವ್ಯ ಚೆಲ್ಲದಂತೆ ನೋಡಿಕೊಳ್ಳಿ. ಪೇಂಟ್‌, ಕೀಟನಾಶಕಗಳ ವಾಸನೆಗೂ ಅವು ಹೆದರುತ್ತವೆ. ಮನೆಗೆ ಪೇಂಟ್ ಮಾಡುವುದು, ಕೀಟನಾಶಕಗಳನ್ನು ಸಿಂಪಡಿಸುವುದಿದ್ದರೆ ಮೊದಲೇ ಅವುಗಳನ್ನು ಬೇರೆಡೆಗೆ ಸಾಗಿಸಿ.

ADVERTISEMENT

ರಾಸಾಯನಿಕಗಳಿಂದ ಸ್ವಚ್ಛಗೊಳಿಸುವುದು: ಮನೆ ಸ್ವಚ್ಛಗೊಳಿಸುವ ರಾಸಾಯನಿಕಗಳ ವಾಸನೆ ಬೆಕ್ಕುಗಳಿಗೆ ಆಗುವುದಿಲ್ಲ. ಮನೆಯಲ್ಲಿ ಬೆಕ್ಕನ್ನು ಸಾಕಿದ್ದರೆ ಅದರ ಅತಿಯಾದ ಬಳಕೆ ಸಲ್ಲ. ಅವುಗಳ ವಾಸನೆ ಉಸಿರಾಟಕ್ಕೆ ತೊಂದರೆ ಮಾಡಬಹುದು. ಜೊತೆಗೆ ಶ್ವಾಸನಾಳದಲ್ಲಿ ಸೋಂಕು ಉಂಟಾಗುವ ಸಾಧ್ಯತೆಯೂ ಹೆಚ್ಚು. ಅತಿಯಾದ ರಾಸಾಯನಿಕ ಅಂಶ ಇರುವ ವಸ್ತುಗಳಿಂದ ಬೆಕ್ಕಿನ ಗೂಡು ಅಥವಾ ಮಲಗುವ ಜಾಗವನ್ನು ಸ್ವಚ್ಛ ಮಾಡಬೇಡಿ. ಹೆಚ್ಚು ವಾಸನೆ ಬೀರದ, ಪ್ರಾಣಿಗಳಿಗೆ ಆಪ್ತ ಎನ್ನಿಸುವ ನೈಸರ್ಗಿಕ ಸ್ವಚ್ಛತಾ ಸಾಮಗ್ರಿಗಳನ್ನು ಬಳಸಿ.

ಬೇರೆ ಬೆಕ್ಕು ಅಥವಾ ನಾಯಿ: ಬೆಕ್ಕುಗಳಿಗೆ ತಮ್ಮ ಮನೆಯಲ್ಲಿ ಬೇರೆ ನಾಯಿ ಅಥವಾ ಬೆಕ್ಕು ಕಾಣಿಸಿಕೊಂಡರೆ ಬೇಗನೆ ಸಿಟ್ಟು ಬರುತ್ತದೆ. ಅವುಗಳೊಂದಿಗೆ ಜಗಳವಾಡಲು ಹೋಗುತ್ತವೆ. ಬೇರೆ ಬೆಕ್ಕು ಅಥವಾ ಇತರ ಪ್ರಾಣಿಯೊಂದಿಗೆ ಜಗಳಕ್ಕೆ ಇಳಿದಾಗ ಅವುಗಳ ಮನಸ್ಸಿಗೆ ಹೆಚ್ಚು ಒತ್ತಡ ಉಂಟಾಗುತ್ತದೆ. ಆ ಕಾರಣಕ್ಕೆ ಬೆಕ್ಕಿನ ಬಳಿ ಬೇರೆ ಪ್ರಾಣಿ ಬಾರದಂತೆ ನೋಡಿಕೊಳ್ಳಿ. ಸುರಕ್ಷತೆಯಿಂದ ಹಾಗೂ ಭಯವಿಲ್ಲದೇ ಓಡಾಡಿಕೊಂಡಿರಲು ಅವಕಾಶ ಮಾಡಿಕೊಡಿ.

ಬದಲಾದ ಪರಿಸರ: ತಕ್ಷಣಕ್ಕೆ ಬದಲಾದ ಪರಿಸರವೂ ಬೆಕ್ಕಿಗೆ ಮಾನಸಿಕವಾಗಿ ಒತ್ತಡ ತರಬಹುದು. ಅದರೊಂದಿಗೆ ಮನೆಗೆ ಬಂದ ಹೊಸ ಅಥವಾ ಅಪರಿಚಿತ ಸಾಕುಪ್ರಾಣಿ, ಮನುಷ್ಯರನ್ನು ನೋಡಿ ಕೂಡ ಬೆಕ್ಕು ಭಯಭೀತವಾಗುತ್ತದೆ. ಅಂತಹ ಸಂದರ್ಭದಲ್ಲಿ ಅವು ಎಲ್ಲಿಯೋ ಅವಿತು ಕೂರಬಹುದು, ಊಟ–ತಿಂಡಿಗೂ ಬರದೇ ಇರಬಹುದು. ಇದರೊಂದಿಗೆ ಮನೆಗೆ ತಂದ ಹೊಸ ಪೀಠೋಪಕರಣಗಳೂ ಬೆಕ್ಕಿನ ಮನಸ್ಸಿಗೆ ಭಯ ಹಾಗೂ ಒತ್ತಡ ತರಬಹುದು. ಈ ಒತ್ತಡ ಹೆಚ್ಚಾಗಿ ವಾಂತಿ, ಅತಿಸಾರ, ಆತಂಕ ಹಾಗೂ ಹೊಟ್ಟೆಗೆ ಹಸಿವಾಗದೇ ಇರುವುದು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಎಚ್ಚರವಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.