ADVERTISEMENT

PV Web Exclusive | 'ಇಂಗಾಲ ಮುಕ್ತ ಚೀನಾ' ಘೋಷಣೆ ಸುತ್ತ ಅನುಮಾನಗಳ ಹುತ್ತ

ಚೀನಾ ಹೇಳುತ್ತಿರುವುದು ನಿಜವೇ? ಸಾಧ್ಯವೇ?

ಇ.ಎಸ್.ಸುಧೀಂದ್ರ ಪ್ರಸಾದ್
Published 21 ಅಕ್ಟೋಬರ್ 2020, 10:46 IST
Last Updated 21 ಅಕ್ಟೋಬರ್ 2020, 10:46 IST
ಚೀನಾದಲ್ಲಿನ ಶಾಖೊತ್ಪನ್ನ ಕೇಂದ್ರಗಳಿಂದ ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಇಂಗಾಲ
ಚೀನಾದಲ್ಲಿನ ಶಾಖೊತ್ಪನ್ನ ಕೇಂದ್ರಗಳಿಂದ ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಇಂಗಾಲ   

ಹಲವು ಅಚ್ಚರಿಯ ಹೇಳಿಕೆ ಮೂಲಕ ಇತರ ರಾಷ್ಟ್ರಗಳ ನಾಯಕರು ಗಲ್ಲದ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಿರುವ ಚೀನಾ, ಕೊರೊನಾ ಮುಕ್ತ ಎಂದು ಕೆಲ ತಿಂಗಳ ಹಿಂದೆ ಘೋಷಿಸಿ ಅಚ್ಚರಿ ಮೂಡಿಸಿತ್ತು. ಈಗ 2060ರ ಹೊತ್ತಿಗೆ ಚೀನಾವನ್ನು ಇಂಗಾಲ ಮುಕ್ತ ರಾಷ್ಟ್ರವನ್ನಾಗಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಅವರ ಹೇಳಿಕೆ ಇಂಥ ಅಚ್ಚರಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ಕುರಿತು ಇಡೀ ಜಗತ್ತಿನೆಲ್ಲೆಡೆ ವ್ಯಾಪಕ ಚರ್ಚೆ ನಡೆದಿದೆ.

ಕಳೆದ ತಿಂಗಳು ವಿಶ್ವಸಂಸ್ಥೆಯ ಸಭೆಯಲ್ಲಿ ಷಿ ಅವರ ಇಂಥದ್ದೊಂದು ಘೋಷಣೆ ಹೊರಬೀಳುತ್ತಿದ್ದಂತೆ, ವಿಶ್ವದೆಲ್ಲೆಡೆ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ತಜ್ಞರು ಚರ್ಚೆಗಳನ್ನು ಆರಂಭಿಸಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಇಂಗಾಲ ಡೈಆಕ್ಸೈಡ್ ಹೊರಬಿಡುವ ರಾಷ್ಟ್ರ, ಇನ್ನು ಕೇವಲ 40 ವರ್ಷದೊಳಗೆ ಇಂಗಾಲ ತಟಸ್ಥ ರಾಷ್ಟ್ರವಾಗುವುದು ಹೇಗೆ? ಎಂಬ ಚರ್ಚೆ ವಿಜ್ಞಾನ ಕ್ಷೇತ್ರದಲ್ಲಿ ವ್ಯಾಪಕವಾಗಿದೆ. ಅಧ್ಯಕ್ಷರ ಈ ಮಾತು ಸ್ವತಃ ಚೀನಾದವರಲ್ಲೂ ಅಚ್ಚರಿ ಮೂಡಿಸಿದೆಯಂತೆ. ಏಕೆಂದರೆ ಇಂಥ ದಿಟ್ಟ ಗುರಿಯೊಂದನ್ನು ಚೀನಾದವರೂ ನಿರೀಕ್ಷಿಸಿರಲಿಲ್ಲ ಎಂದು ವರದಿಯಾಗಿದೆ.

ಹವಾಮಾನ ಬದಲಾವಣೆ ಕುರಿತಂತೆ ಮೊದಲ ಬಾರಿಗೆ ಚೀನಾ ಇಂಥದ್ದೊಂದು ದೀರ್ಘಕಾಲಿಕ ಗುರಿಯನ್ನು ಘೋಷಿಸಿದೆ. ಇದರ ಪರಿಣಾಮವಾಗಿ ಇಂಗಾಲ ಡೈಆಕ್ಸೈಡ್ ನಿಯಂತ್ರಣ ಮಾತ್ರವಲ್ಲ, ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಇತರ ಎಲ್ಲಾ ಬಗೆಯ ಹಾನಿಕಾರಕ ಅನಿಲಗಳ ಹೊರಸೂಸುವಿಕೆಯನ್ನೂ ಚೀನಾ ತಗ್ಗಿಸಬೇಕಾಗಲಿದೆ. ಇಷ್ಟಾದರೆ ಸಾಲದು, ಸಾಕಷ್ಟು ಗಿಡಮರಗಳನ್ನ ಬೆಳೆಸಿ ಹಸಿರು ಹೆಚ್ಚಿಸಬೇಕು. ಹೊರಬರುವ ಇಂಗಾಲವನ್ನು ಹಿಡಿದು ಭೂಗರ್ಭಕ್ಕೆ ಕಳುಹಿಸಬೇಕು. ಇವಿಷ್ಟಕ್ಕೂ ಇರುವುದು ನಾಲ್ಕು ದಶಕಗಳ ಕಾಲಾವಕಾಶ ಮಾತ್ರ.

ADVERTISEMENT

2060ರ ತನ್ನ ಗುರಿ ಮುಟ್ಟಬೇಕೆಂದರೆ ನಿಸರ್ಗದತ್ತವಾಗಿ ನವೀಕರಿಸಬಹುದಾದ ಇಂಧನ ಪ್ರಮಾಣವನ್ನು ಹೆಚ್ಚಿಸಬೇಕು. ಇದಕ್ಕಾಗಿ ಸೌರ, ಪವನ ವಿದ್ಯುತ್ ಉತ್ಪಾದನೆಯನ್ನೇ ಮುಂದುವರಿಸುವುದು, ವಿದ್ಯುತ್ ಚಾಲಿತ ಕಾರುಗಳನ್ನು ಕಡ್ಡಾಯಗೊಳಿಸುವುದು, ಇಂಗಾಲ ಡೈಆಕ್ಸೈಡ್ ಹೊರಸೂಸುವ ವಸ್ತುಗಳನ್ನು ಸುಡುವುದು ನಿಷೇಧಿಸುವುದರ ಜತೆಗೆ, ಪಳಿಯುಳಿಕೆ ಇಂಧನಗಳ ಅಥವಾ ಜೈವಿಕರಾಶಿಯನ್ನು ಭೂಗರ್ಭಕ್ಕೆ ಸೇರಿಸುವ ಪ್ರಕ್ರಿಯೆಯಾದ ಇಂಗಾಲ ಸೆರೆಹಿಡಿಯುವುದು ಮತ್ತು ಶೇಖರಿಸುವುದನ್ನು (ಸಿಸಿಎಸ್) ಜಾರಿಗೊಳಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾಗೆ ಬೇಕಿದೆ 15 ಸಾವಿರ ಟೆರಾವ್ಯಾಟ್ ವಿದ್ಯುತ್

ಚೀನಾದ ಗುರಿ ಸಾಧಿಸುವುದರ ಜತೆಗೆ, 2060ರ ಹೊತ್ತಿಗೆ ಚೀನಾದ ವಿದ್ಯುತ್ ಬೇಡಿಕೆಯೂ ಗಣನೀಯವಾಗಿ ಹೆಚ್ಚಾಗಲಿದೆ. ಅಂದರೆ 2060ಕ್ಕೆ 15ಸಾವಿರ ಟೆರಾವ್ಯಾಟ್ ಗಂಟೆಗಳಷ್ಟು ವಿದ್ಯುತ್‌ ಬೇಡಿಕೆ ಚೀನಾದಲ್ಲಿರಲಿದೆ ಎಂದು ಬೀಜಿಂಗ್‌ನ ಸಿಂಗುವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದರಲ್ಲಿ ಸೌರ ವಿದ್ಯುತ್‌ ಪ್ರಮಾಣ ಈಗಿರುವುದಿಕ್ಕಿಂತ 16 ಪಟ್ಟು ಹೆಚ್ಚು, ಪವನ ವಿದ್ಯುತ್ 9 ಪಟ್ಟು ಹೆಚ್ಚಿಸಬೇಕಿದೆ ಎಂದು ಅವರ ವರದಿಯಲ್ಲಿ ಹೇಳಲಾಗಿದೆ.

ಕಲ್ಲಿದ್ದಲ್ಲು ಸುಟ್ಟು ಅದರ ಶಾಖದಿಂದ ವಿದ್ಯುತ್ ಉತ್ಪಾದಿಸುವುದನ್ನು ಸ್ಥಗಿತಗೊಳಿಸಿ ಪರಮಾಣು ಇಂಧನ ಪ್ರಮಾಣವನ್ನು ಆರು ಪಟ್ಟು ಹೆಚ್ಚಿಸುವುದು ಮತ್ತು ಜಲವಿದ್ಯುತ್ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಪ್ರಸ್ತಾವನೆಯನ್ನೂ ವರದಿಯಲ್ಲಿ ಹೇಳಿದ್ದಾರೆ. ಸಿಂಗುವಾ ವಿಶ್ವವಿದ್ಯಾಲಯದ ಈ ಅಧ್ಯಯನದಲ್ಲಿ ಕೇಂಬ್ರಿಜ್‌ನ ಮೆಸ್ಸಚುಸೆಟ್ಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ತಜ್ಞರೂ ಕೈಜೋಡಿಸಿದ್ದಾರೆ.

ಚೀನಾದ ಈ ಯೋಜನೆ ಮುಂದಿನ ಹತ್ತು ವರ್ಷಗಳಲ್ಲಿ ಹಂತಹಂತವಾಗಿ ಆರಂಭವಾಗಲಿದೆ ಎಂದೆನ್ನಲಾಗಿದೆ. 2025ರ ಹೊತ್ತಿಗೆ ಚೀನಾದಿಂದ ವಾತಾವರಣಕ್ಕೆ ಹೊರಸೂಸುವ ಇಂಗಾಲಯದ ಪ್ರಮಾಣ 10.3 ಗಿಗಾ ಟನ್‌ಗಳಿಗೆ ಹೆಚ್ಚಳವಾಗಲಿದೆ (2020ರಲ್ಲಿ 9.8 ಗಿಗಾಟನ್‌ ಇದೆ). ಆದರೆ ಈ ಪ್ರಮಾಣವನ್ನು ಶೂನ್ಯಕ್ಕೆ ತಗ್ಗಿಸುವ ಪ್ರಕ್ರಿಯೆ 2035ರ ನಂತರ ಕ್ಷಿಪ್ರಗತಿಯಲ್ಲಿ ಸಾಗಿದರೆ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಅಧ್ಯಯನ ತಂಡ ಹೇಳಿದೆ.

ಸದ್ಯದ ಪರಿಸ್ಥಿತಿಯಲ್ಲಿ ಚೀನಾದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲ್ಲಿನ ಪ್ರಮಾಣ ಶೇ 65ರಷ್ಟಿದೆ. 2050ರ ಹೊತ್ತಿಗೆ ಅಲ್ಲಿ ಪರಮಾಣು ವಿದ್ಯುತ್ ಉತ್ಪಾದನೆಯನ್ನು ಶೇ 28ರಷ್ಟು, ಪವನ ವಿದ್ಯುತ್ ಶೇ 21ರಷ್ಟು, ಸೌರಶಕ್ತಿ ಶೇ 17, ಜಲವಿದ್ಯುತ್ ಶೇ 14, ಜೈವಿಕ ಇಂಧನ ಶೇ 8ಕ್ಕೆ ಏರಲಿದೆ. ಈ ಹೊತ್ತಿಗೆ ಕಲ್ಲಿದ್ದಲ್ಲು ಬಳಸುವ ಶಾಖೋತ್ಪನ್ನ ಕೇಂದ್ರಗಳಿಂದ ಶೇ 12ರಷ್ಟು ಇಂಧನವನ್ನು ಮಾತ್ರ ಉತ್ಪಾದಿಸಬೇಕು ಎಂದು ಅಂದಾಜಿಸಲಾಗಿದೆ.

ಸದ್ಯ ಪ್ರಗತಿಯಲ್ಲಿದೆ 200 ಶಾಖೋತ್ಪನ್ನ ಸ್ಥಾವರ ನಿರ್ಮಾಣ

ಇದಕ್ಕೆ ತದ್ವಿರದ್ದವಾಗಿ 200 ಹೊಸ ಶಾಖೋತ್ಪನ್ನ ಸ್ಥಾವರಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇಂಥ ಸ್ಥಿತಿ ಇರುವಾಗಲೂ ಚೀನಾದ ಇಂಗಾಲ ತಟಸ್ಥ ನೀತಿ ಜಾರಿಯಾಗುವುದೇ? ಎಂದು ಇಡೀ ಜಗತ್ತೇ ಅನುಮಾನ ವ್ಯಕ್ತಪಡಿಸುತ್ತಿದೆ.

ಷಿ ಅವರ ಈ ಘೋಷಣೆ ನಂತರ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ತಜ್ಞರು ಈ ಸಾಧ್ಯತೆ ಕುರಿತು ತಮ್ಮ ಅಧ್ಯಯನವನ್ನು ಆರಂಭಿಸಿದ್ದಾರೆ. ಚೀನಾದ ಈ ಯೋಜನೆ ಕುರಿತ ಅಧ್ಯಯನವನ್ನು ‘ಜಿಂಗಾಸ್‌ ಅನಾಲಿಸಿಸ್‌’ ಎಂದೇ ಕರೆಯಲಾಗುತ್ತಿದೆ.

ಚೀನಾದಲ್ಲಿ ಸದ್ಯ 50 ಪರಮಾಣು ಇಂಧನ ಸ್ಥಾವರಗಳಿದ್ದು, ಇವುಗಳಿಂದ 49 ಗಿಗಾವ್ಯಾಟ್ ಉತ್ಪಾದಿಸಲಾಗುತ್ತಿದೆ. ಇದೇ ಮೂಲದಿಂದ 2050ರ ಹೊತ್ತಿಗೆ 554 ಗಿಗಾವ್ಯಾಟ್‌ಗೆ ಹೆಚ್ಚಿಸಬೇಕೆಂದರೆ ಸ್ಥಾವರಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬೇಕು. ಆದರೆ ಇದರ ಸಾಧ್ಯತೆ ಕುರಿತೇ ಬಹಳಷ್ಟು ತಜ್ಞರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಇವುಗಳ ಜತೆಯೇ ಇಂಗಾಲ ತಟಸ್ಥ ರಾಷ್ಟ್ರವಾಗಲು ಇಂಗಾಲ ಸೆರೆಹಿಡಿಯುವುದು ಮತ್ತು ಶೇಖರಿಸುವುದಕ್ಕಾಗಿ (ಸಿಸಿಎಸ್) ಚೀನಾದಲ್ಲಿ ಸದ್ಯ ಒಂದು ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. 2050ರ ಹೊತ್ತಿಗೆ ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಬೇಕಿದೆ. ತಕ್ಷಣವೇ ಇಂಥ ಇನ್ನೂ ಏಳು ಸಿಸಿಎಸ್‌ಗಳು ಚೀನಾಕ್ಕೆ ಬೇಕಿವೆ. ಇಷ್ಟೆಲ್ಲದಕ್ಕೂ ಚೀನಾ ಹಣ ಹೂಡಲು ಸಿದ್ಧವಿದೆಯೇ? ಸದ್ಯ ಕಲ್ಲಿದ್ದಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿರುವ 35ಲಕ್ಷ ಕಾರ್ಮಿಕರ ಆರ್ಥಿಕ ಭದ್ರತೆಗೆ ಯಾವ ಯೋಜನೆ ಹೊಂದಿದೆ? ಎಂಬಿತ್ಯಾದಿ ಪ್ರಶ್ನೆಗಳೂ ಎದ್ದಿವೆ.

2015ರ ಪ್ಯಾರಿಸ್ ಒಪ್ಪಂದದ ಅನ್ವಯ 2020ರ ಅಂತ್ಯದೊಳಗೆ ಇಂಗಾಲ ಹೊರಸೂಸುವುದನ್ನು ತಕ್ಷಣದಲ್ಲೇ ತಗ್ಗಿಸುವ ನಿಟ್ಟಿನಲ್ಲಿ ಸಹಿ ಹಾಕಿದ ರಾಷ್ಟ್ರಗಳಲ್ಲಿ ಚೀನಾ ಕೂಡಾ ಒಂದು. ಇದರ ಜತೆಯಲ್ಲೇ ಷಿ ಅವರ ಇಂಗಾಲ ತಟಸ್ಥ ರಾಷ್ಟ್ರವಾಗುವ ಹೇಳಿಕೆಗೆ ಪೂರಕವಾಗಿ ಬರುವ ಮಾರ್ಚ್‌ನಲ್ಲಿ ತನ್ನ ಐದು ವರ್ಷಗಳ ಯೋಜನೆಗಳನ್ನು ಚೀನಾ ಪ್ರಕಟಿಸಲಿದ್ದು, ಈ ಕುರಿತು ಇಡೀ ಜಗತ್ತೇ ನಿರೀಕ್ಷೆಯ ಕಣ್ಣುಗಳನ್ನು ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.