ADVERTISEMENT

ಕ್ರಿಯಾಶೀಲವಾಗಿದ್ದುಕೊಂಡೂ ಮನಸ್ಸನ್ನು ಶಾಂತಗೊಳಿಸುವುದು ಹೇಗೆ?

ಪ್ರಜ್ಞಾ ಮತ್ತಿಹಳ್ಳಿ
Published 30 ಆಗಸ್ಟ್ 2021, 19:30 IST
Last Updated 30 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮನಸ್ಸು ಸೂಕ್ಷ್ಮವಾದ ಹೂವಿನಂತಿದೆಯೆಂದು ಮನೋವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಈ ಹೃದಯಕಮಲವು ಅರಳಿದಾಗ ಸರ್ವಸಿದ್ಧಿಯು ಸಾಧ್ಯವಾಗಿ ಮನುಷ್ಯನು ಭೂಮಿಯನ್ನೇ ನಂದನವನ್ನಾಗಿಸಬಲ್ಲ. ಮನಸ್ಸು ಶಾಂತವೂ ಜಾಗೃತವೂ ಮತ್ತು ಪೂರ್ಣತೃಪ್ತವೂ ಆಗಿದ್ದಾಗ ಅದು ಲೇಸರ್ ಕಿರಣವಾಗುತ್ತದೆ ಎಂಬುದು ಜ್ಞಾನಿಗಳ ನುಡಿ. ಹಾಗಾದರೆ ಈ ಮನಸ್ಸನ್ನು ಕ್ರಿಯಾಶೀಲವಾಗಿದ್ದುಕೊಂಡೂ ಶಾಂತಗೊಳಿಸುವುದು ಹೇಗೆ?

ಲಾಕ್‌ಡೌನ್ ಕಾಲದಲ್ಲಿ ಅನೇಕ ಜನರು ತಮ್ಮ ಮನಸ್ಸುಗಳು ಜಡವಾದ ಕಾರಣದಿಂದ ಬೇರೆ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಯಿತು. ಮನಸ್ಸನ್ನು ಧನಾತ್ಮಕ ಆಲೋಚನೆಗಳ ಕಡೆಗೆ ಕ್ರಿಯಾಶೀಲಗೊಳಿಸುವ ಅತ್ಯಂತ ಸರಳ ಉಪಾಯವೆಂದರೆ ಧ್ಯಾನ. ಮನುಷ್ಯ ತನ್ನ ಸುತ್ತಲಿನ ಪರಿಸರಕ್ಕೆ ತಕ್ಕಂತೆ ಸ್ವರೂಪ ಮತ್ತು ಕ್ರಿಯೆಗಳಲ್ಲಿ ಬದಲಾವಣೆ ತರಬಲ್ಲ ಶಕ್ತಿಯನ್ನು ‘ನ್ಯೂರೊಪ್ಲಾಸ್ಟಿಸಿಟಿ’ ಎಂದು ಕರೆಯುತ್ತಾರೆ. ವಿಸ್ಕೊನಸಿನ್ ವಿಶ್ವವಿದ್ಯಾಲಯದ ರಿಚರ್ಡ್‌ ಡೆವಿಡ್ ಸನ್ ಎನ್ನುವ ತಜ್ಞ ನಡೆಸಿದ ಅಧ್ಯಯನ ದೃಢಪಡಿಸುವುದೇನೆಂದರೆ ಧ್ಯಾನದಿಂದ ಗಾಮಾ ತರಂಗಗಳ ಚಟುವಟಿಕೆ ಉಂಟಾಗುತ್ತದೆ ಮತ್ತು ಇದು ಆಲೋಚನೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನ್ಯೂರೊಪ್ಲಾಸ್ಟಿಸಿಟಿಯನ್ನು ಹೆಚ್ಚಿಸುತ್ತದೆ.

ಮನುಷ್ಯನ ಮೆದುಳಿನಲ್ಲಿ ಹಿಪ್ಪೊಕ್ಯಾಂಪಸ್ ಎನ್ನುವ ಭಾಗವಿದೆ. ನಮ್ಮ ಕ್ಷಣಕ್ಷಣದ ಅನುಭವಗಳನ್ನು ಅಲ್ಪಾವಧಿಯ ನೆನಪುಗಳಿಂದ ದಿರ್ಘಾವಧಿ ನೆನಪುಗಳನ್ನಾಗಿ ಪರಿವರ್ತಿಸುವುದು ಇದರ ಪ್ರಮುಖ ಕೆಲಸ. ಧ್ಯಾನದಿಂದ ಈ ಹಿಪ್ಪೊಕ್ಯಾಂಪಸ್ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಆದ್ದರಿಂದ ಬಹುಕಾಲ ಧ್ಯಾನ ಮಾಡಿದವರು ಅಪರಿಮಿತವಾದ ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಹೊಂದಬಲ್ಲರು. ನೆನಪಿಗೆ ಸಂಬಂಧಿಸಿದ ಕಾಯಿಲೆಯಾಗಿರುವ ಡಿಮೆನ್ಶಿಯಾ ಮತ್ತು ಅಲ್ಜೈಮರ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬೊಸ್ಟನ್‌ನಲ್ಲಿರುವ ಬೆತ್ ಇಸ್ರೇಲ್ ಡಿಯಾಕೊನೆಸ್ ವೈದ್ಯಕೀಯ ಕೇಂದ್ರವು ನಡೆಸಿದ ಅಧ್ಯಯನದ ಫಲಿತಾಂಶವೇನೆಂದರೆ, ಧ್ಯಾನದಿಂದ ಎಂಟು ವಾರಗಳಲ್ಲಿ ಈ ಕಾಯಿಲೆಯಲ್ಲಿ ಇಳಿಕೆ ಕಂಡುಬಂದಿರುವುದು.

ADVERTISEMENT

ಕೊರೊನಾ ವೈರಾಣುವಿನಿಂದ ರೋಗ-ಸಾವಿನ ಭೀತಿ ಹಾಗೂ ಪದೇಪದೇ ಲಾಕ್‌ಡೌನ್ ಪರಿಣಾಮದ ಆರ್ಥಿಕ ಮುಗ್ಗಟ್ಟು – ಇವುಗಳಿಂದ ಬಹುತೇಕ ಜನರು ಒತ್ತಡಕ್ಕೆ ಒಳಗಾಗಿದ್ದಾರೆ. ನಮ್ಮ ಮೆದುಳಿನಲ್ಲಿ ಕಾರ್ಟಿಸೊಲ ಎಂಬ ಹಾರ್ಮೊನ್ ಉತ್ಪತ್ತಿಯಾದಾಗ ಸೈಟೊಕೆನ್ ಎನ್ನವ ರಾಸಾಯನಿಕ ಸೃಜಿಸಿ ಒತ್ತಡ ಉಂಟಾಗುತ್ತದೆ. ಇದರ ಪರಿಣಾಮವಾಗಿ ನಿದ್ರಾಹೀನತೆ, ಖಿನ್ನತೆ, ಉದ್ವೇಗ, ರಕ್ತದೊತ್ತಡ ಏರಿಕೆ, ಸುಸ್ತು ಇವೆಲ್ಲ ಕಾಣಿಸಿಕೊಳ್ಳುತ್ತವೆ. ಕ್ರಮಬದ್ಧವಾದ ಧ್ಯಾನವನ್ನು ನಿಯಮಿತವಾಗಿ ಮಾಡಿದಾಗ ಸೈಟೊಕೆನ್ ರಾಸಾಯನಿಕದ ಉತ್ಪಾದನೆ ತಗ್ಗುತ್ತ ಹೋಗುತ್ತದೆ. ಮೆಸಾಚುಸೆಟ್ಸ್‌ ಆಸ್ಪತ್ರೆಯಲ್ಲಿ ಕೈಗೊಂಡ ಅಧ್ಯಯನವೊಂದರಲ್ಲಿ, ರೋಗಿಗಳಿಗೆ ಮೂರು ತಿಂಗಳು ಧ್ಯಾನ ಮಾಡಿಸಿದಾಗ ಶೇ.64 ಜನರಲ್ಲಿ ರಕ್ತದೊತ್ತಡದಲ್ಲಿ ಇಳಿಕೆ ಕಂಡು ಬಂದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಧ್ಯಾನದಿಂದ ಮೆದುಳಿನಲ್ಲಿ ನೈಟ್ರಿಕ್ ಆಸಿಡ್ ಉತ್ಪನ್ನವಾಗುತ್ತದೆ ಹಾಗೂ ಇದು ರಕ್ತದೊತ್ತಡವನ್ನು ತಗ್ಗಿಸುತ್ತದೆ.

ವೇಕ್ ಫಾರೆಸ್ಟ್‌ ಬ್ಯಾಪ್ಟಿಸ್ಟ್‌ ವಿಶ್ವವಿದ್ಯಾಲಯದ ಪ್ರಯೋಗವು ಬಹಳ ಆಸಕ್ತಿದಾಯಕ ಅಂಶವನ್ನು ದೃಢಪಡಿಸಿದೆ. ಧ್ಯಾನದಿಂದ ಮೆದುಳಿನಲ್ಲಿರುವ ಸೊಮಾಟೊ ಸೆನ್ಸರಿ ಕಾರ್ಟಿಕ್ಸ್‌ ಶಾಂತಗೊಳ್ಳುತ್ತದೆ. ಇದರ ಪರಿಣಾಮವಾಗಿ ಶೇ.40ರಷ್ಟು ನೋವಿನ ತೀಕ್ಷ್ಣತೆಯು ಶಮನಗೊಳ್ಳುತ್ತದೆ. ನೋವು ನಿವಾರಣೆಯಲ್ಲಿ ಬಹುತೇಕವಾಗಿ ಬಳಕೆಯಾಗುವ ಮಾರ್ಫಿನ್ ನೋವಿನ ತೀವ್ರತೆಯನ್ನು ಶೇ. 25ರಷ್ಟು ಮಾತ್ರ ಇಳಿಸಬಲ್ಲುದು. ಹೀಗೆ ಬಾಹ್ಯ ಔಷಧಿಗಳು ಮಾಡುವ ಪರಿಣಾಮಕ್ಕಿಂತಲೂ ಅಧಿಕವಾದ ಉಪಶಮನವನ್ನು ಧ್ಯಾನದಿಂದ ಪಡೆಯಬಹುದು.

ಧ್ಯಾನದ ಸಕಾರಾತ್ಮಕ ಪರಿಣಾಮಗಳಲ್ಲಿ ಅತಿಮುಖ್ಯ ಎನಿಸುವಂತಹುದು ಧನಾತ್ಮಕ ಭಾವದ ಹೆಚ್ಚಳ. ಧ್ಯಾನವು ಮೆದುಳಿನಲ್ಲಿರುವ ವೇಗಸ್ ನರವನ್ನು ಪ್ರಚೋದಿಸುತ್ತದೆ. ಇದು ಸೆರೊಟೊನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆಗ ಆಕ್ಸಿಟೊಸಿನ್ ಎಂಬ ಹಾರ್ಮೊನ್ ಸ್ರವಿಸುತ್ತದೆ. ಇದರಿಂದ ಪ್ರೀತಿ, ಕರುಣೆ, ಕ್ಷಮೆ, ಅನುಬಂಧ ಮುಂತಾದ ಭಾವಗಳು ಮೂಡುತ್ತವೆ. ಪ್ರಸ್ತುತ ಜಗತ್ತಿನಲ್ಲಿ ನಾವು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಮುಖ್ಯ ಕಾರಣವೇ ಈ ಅನುಬಂಧದ ಕೊರತೆ. ಜಾತಿ-ಧರ್ಮ-ಗಡಿ-ಜಲ ಇವೆಲ್ಲವುಗಳನ್ನು ನೆಪವಾಗಿಟ್ಟುಕೊಂಡು ಹಿಂಸೆಗೆ ಇಳಿದಿರುವ ಮನುಕುಲವು ತನ್ನ ಧನಾತ್ಮಕ ಭಾವಕೋಶವನ್ನು ತುಂಬಿಕೊಂಡಾಗ ದೇಹದ ಪ್ರತಿ ಅಣುವೂ ಪ್ರಾಣವನ್ನು ತುಂಬಿಕೊಳ್ಳುತ್ತದೆ; ಸಂತೋಷ, ಶಾಂತಿ ತುಂಬಿಕೊಂಡು ಉತ್ಸಾಹ ಮೂಡುತ್ತದೆ. ಇದರಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚುತ್ತದೆ.

ಮನುಷ್ಯ ನಾನು ಯಾರು, ನನ್ನ ಯೋಗ್ಯತೆಯೇನು, ನನ್ನ ಸಾಮರ್ಥ್ಯವೇನು, ನನ್ನ ಮಿತಿಗಳೇನು – ಎಂದು ತಿಳಿದುಕೊಂಡರೆ ಸ್ವ-ಕಲ್ಯಾಣ ಹಾಗೂ ವಿಶ್ವಪ್ರಗತಿ ಎರಡನ್ನೂ ಸಾಧಿಸಬಲ್ಲ. ಈ ನಿಟ್ಟಿನಲ್ಲಿ ಅಂರ್ತವೀಕ್ಷಣೆಯ ಧ್ಯಾನವು ಅಪಾರವಾದ ಸ್ವ-ಅರಿವನ್ನು ಸಾಧ್ಯವಾಗಿಸುತ್ತದೆ. ನಮ್ಮ ದೇಹದ ಕ್ರೊಮೊಸೊಮುಗಳ ತುದಿಗೆ ಟೋಪಿಯಂತಹ ರಕ್ಷಣಾ ಭಾಗವಿದೆ. ಅದಕ್ಕೆ ಟೆಲೆಮೆರ್ಸ್‌ ಎನ್ನುತ್ತಾರೆ. ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯ ತನ್ನ ಅಧ್ಯಯನದಲ್ಲಿ ಗಮನಿಸಿರುವಂತೆ, ಧ್ಯಾನದಿಂದ ಎಂಜೈಮ್ ಹೆಚ್ಚಳ ಉಂಟಾಗಿ ಟೆಲೆಮರ್ಸ್‌ಗಳು ಹೆಚ್ಚುತ್ತವೆ. ಇದರಿಂದ ವಯೋಹೆಚ್ಚಳದ ಪರಿಣಾಮಗಳು (ಆ್ಯಂಟಿ ಏಜಿಂಗ್) ನಿಯಂತ್ರಣಗೊಳ್ಳುತ್ತವೆ. ಧ್ಯಾನವು ಕೇವಲ ಮೆದುಳಿಗಷ್ಟೇ ಅಲ್ಲ, ಹೃದಯಕ್ಕೂ ಕೂಡ ಲಾಭದಾಯಕವೆಂದು ಸಾಬೀತಾಗಿದೆ. ನವೆಂಬರ್ 2012ರಲ್ಲಿ 201 ಹೃದಯರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಧ್ಯಾನವು ಕಾರ್ಡಿಯೊವಾಸ್ಕ್ಯುಲರ್ ಗುಣಮಟ್ಟವನ್ನು ಹೆಚ್ಚಿಸಿದೆಯೆಂದು ತಿಳಿದು ಬಂದಿದೆ. ಚಟಮುಕ್ತರಾಗುವ ನಿಟ್ಟಿನಲ್ಲಿ ಕೂಡ ಧ್ಯಾನವು ಪರಿಣಾಮಕಾರಿಯೆಂದು ಸಾಬೀತಾಗಿದೆ. ಮನಸ್ಸನ್ನು ಥಳಥಳ ಬೆಳಗಿಸಿ ಚೈತನ್ಯಪೂರ್ಣವಾದ ಜೀವಪ್ರಣತಿ ಹೊತ್ತಿಸಲು ಧ್ಯಾನವೆಂಬುದು ಸಂಜೀವಿನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.