ADVERTISEMENT

ರಾಷ್ಟ್ರೀಯ ಡೆಂಗ್ಯೂ ದಿನ: ಜಾಗೃತಿ ಮೂಡಿಸಲು ಸರ್ಕಾರದ ಕ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2022, 11:09 IST
Last Updated 16 ಮೇ 2022, 11:09 IST
   

ಬೆಂಗಳೂರು: ಡೆಂಗ್ಯೂ ಜ್ವರದ ಅಪಾಯಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗ ಲಕ್ಷಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶದಲ್ಲಿ ಪ್ರತಿ ವರ್ಷ ‘ಮೇ 16ರಂದು ರಾಷ್ಟ್ರೀಯ ಡೆಂಗ್ಯೂ ದಿನ‘ ಎಂದು ಆಚರಿಸಲಾಗುತ್ತದೆ.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ದೇಶದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸುತ್ತದೆ.

ಈ ಸಂದರ್ಭದಲ್ಲಿ, ವಿವಿಧ ಕಾರ್ಯಕ್ರಮ, ಮಾಹಿತಿ ಯೋಜನೆ ಮತ್ತು ಆರೋಗ್ಯ ಇಲಾಖೆ, ಎನ್‌ಜಿಒಗಳ ಮೂಲಕ ಡೆಂಗ್ಯೂ ರೋಗ, ಅದರ ಲಕ್ಷಣಗಳು, ಚಿಕಿತ್ಸಾ ವಿಧಾನ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತದೆ.

ADVERTISEMENT

ಬೇಸಿಗೆಯ ಕೊನೆಯಲ್ಲಿ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತವೆ. ಹೀಗಾಗಿ ಈ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗುತ್ತದೆ.

ಡೆಂಗ್ಯೂ ರೋಗ ಬರುವುದು ಹೇಗೆ?
ಸೊಳ್ಳೆ ಕಡಿತದಿಂದ ಡೆಂಗ್ಯೂ ರೋಗ ಬರುತ್ತದೆ. ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗ್ಯೂ ವೈರಸ್ ಸೋಂಕು ಹರಡುತ್ತದೆ. ರಕ್ತನಾಳಗಳಿಗೆ ಈ ವೈರಸ್ ಹಾನಿಯುಂಟುಮಾಡುತ್ತದೆ, ಜತೆಗೆ ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಇಳಿಕೆಯಾಗಿ ಅಂಗಾಂಗ ವೈಫಲ್ಯ ಮತ್ತು ಕೆಲವೊಮ್ಮೆ ಜೀವಕ್ಕೂ ಸಂಚಕಾರ ತರಬಹುದು.

ಲಕ್ಷಣಗಳು
ಜ್ವರ, ತಲೆನೋವು, ವಾಂತಿ, ಕಣ್ಣು ಊದಿಕೊಂಡು ನೋವು ಉಂಟಾಗುವುದು, ಕೈ–ಕಾಲುಗಳಲ್ಲಿ ಸೆಳೆತ, ನೋವು, ಆಯಾಸ ಉಂಟಾಗಬಹುದು.

ತಡೆಯುವುದು ಹೇಗೆ?
ಪ್ರಮುಖವಾಗಿ ಡೆಂಗ್ಯೂ ಜ್ವರ ಸೊಳ್ಳೆ ಕಡಿತದಿಂದ ಉಂಟಾಗುತ್ತದೆ ಮತ್ತು ಹರಡುತ್ತದೆ. ಹೀಗಾಗಿ ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನೀರು ಶೇಖರಣೆಯಾಗುವ ಯಾವುದೇ ಪ್ರದೇಶವಿದ್ದರೂ, ಶುಚಿಗೊಳಿಸುವುದು ಅಗತ್ಯ. ಜತೆಗೆ, ಮನೆ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸೊಳ್ಳೆ ನಿವಾರಕ ಬಳಕೆಯೂ ಸೂಕ್ತವಾಗಿದೆ.

ಚಿಕಿತ್ಸಾ ಕ್ರಮ
ಆರಂಭಿಕ ಹಂತದಲ್ಲೇ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲ ಆಸ್ಪತ್ರೆಗಳಲ್ಲೂ ಡೆಂಗ್ಯೂ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ. ಡೆಂಗ್ಯೂ ಜ್ವರ ತೀವ್ರಮಟ್ಟದಲ್ಲಿದ್ದರೆ, ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ವೈದ್ಯರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.