ADVERTISEMENT

ಕೋವಿಡ್ ಲಸಿಕೆಗಳು 99.99%ಕ್ಕಿಂತ ಹೆಚ್ಚು ಪರಿಣಾಮಕಾರಿ: ಡಾ.ಶೇಖರ್ ಸಲ್ಕರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 13:00 IST
Last Updated 26 ಏಪ್ರಿಲ್ 2021, 13:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗೋವಾ: ‘ಕೋವಿಡ್ ಲಸಿಕೆಗಳು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಬಲ್ಲ ಆಯುಧವಾಗಿವೆ ಎಂದು ಗೋವಾದ ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿಸ್ಟ್ ಕನ್ಸಲ್ಟೆಂಟ್ ಡಾ.ಶೇಖರ್ ಸಲ್ಕರ್ ಹೇಳಿದ್ದಾರೆ.

‘ಇಂದಿನವರೆಗೆ, ಜನರಿಗೆ ನೀಡಿದ ಲಸಿಕೆಗಳ ಪರಿಣಾಮಗಳ ಕುರಿತಾದ ಸಾಕಷ್ಟು ಡೇಟಾವನ್ನು ನಾವು ಹೊಂದಿದ್ದೇವೆ.ಇವುಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವ ವೈಜ್ಞಾನಿಕ ದತ್ತಾಂಶ ನಮ್ಮ ಬಳಿ ಇವೆ. ಅಷ್ಟೇ ಅಲ್ಲ, ಇವುಗಳಿಂದ ಅಡ್ಡಪರಿಣಾಮಗಳು ಕನಿಷ್ಠ, 0.1% ಕ್ಕಿಂತಲೂ ಕಡಿಮೆ ಎಂದು ಕಂಡುಬಂದಿದೆ. ಲಸಿಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುವುದಲ್ಲದೆ, ಜನರು ಎರಡನೇ ಬಾರಿಗೆ ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಲಸಿಕೆಯು ಕೋವಿಡ್ 19 ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಬಹು ಮುಖ್ಯವಾಗಿ, ಇದು ಕೋವಿಡ್ 19ನಿಂದ ಉಂಟಾಗುವ ಸಾವಿನ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸುತ್ತದೆ ’ಎಂದು ಅವರು ಹೇಳಿದ್ದಾರೆ.

‘ಕೋವಿಡ್-19: ಲಸಿಕೆ ಏಕೆ ಪಡೆಯಬೇಕು?’ ಎಂಬ ಬಗ್ಗೆ ರೀಜನಲ್ ಔಟ್ ರೀಚ್ ಬ್ಯೂರೋ ಮತ್ತು ಗೋವಾದ ಡೆಂಪೊ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ಸಹಯೋಗದೊಂದಿಗೆ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ(ಪಿಐಬಿ) ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ADVERTISEMENT

‘ಅಮೆರಿಕದಲ್ಲಿ , ಸುಮಾರು 7 ಕೋಟಿ ಜನರಿಗೆ ಇಲ್ಲಿಯವರೆಗೆ ಲಸಿಕೆ ನೀಡಲಾಗಿದೆ. ಅದರಲ್ಲಿ 5,000 ಜನರು ಮಾತ್ರ ಲಸಿಕೆ ಪಡೆದ ನಂತರವೂ ಸೋಂಕಿಗೆ ಒಳಗಾಗಿದ್ದಾರೆ ಮತ್ತು 78 ರೋಗಿಗಳು ವೈರಸ್‌ಗೆ ಬಲಿಯಾಗಿದ್ದಾರೆ. ಇದರರ್ಥ ಲಸಿಕೆಗಳು 99.99%ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿವೆ ’ ಎಂದರು. ವೈದ್ಯಕೀಯ ಸಮುದಾಯದ ಪರವಾಗಿ ಮಾತನಾಡಿದ ಡಾ. ಸಲ್ಕರ್, ‘78 ಸಾವು ನಮಗೆ ಕೇವಲ ಒಂದು ಸಂಖ್ಯೆಯಾಗಿದ್ದರೂ, ನಾವು ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನನ್ನು ಉಳಿಸಲು ಬಯಸುತ್ತೇವೆ’ ಎಂದು ಹೇಳಿದರು. ಆದರೆ, ಕೆಲವೊಮ್ಮೆ ಅದು ಕೇವಲ ಔಷಧಿಗಳಿಂದ ಸಾಧ್ಯವಿಲ್ಲ. ‘ಲಸಿಕೆ ನಮಗೆ ರಕ್ಷಕ ಎಂದು ಈಗ ನಿಸ್ಸಂದೇಹವಾಗಿ ಸಾಬೀತಾಗಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಲಸಿಕೆ ಪಡೆಯಲು ಹಿಂಜರಿಕೆ ಕಡಿಮೆಯಾಗುತ್ತಿದೆ

‘ಮೊದಲ ಎರಡು ತಿಂಗಳಲ್ಲಿ, ಲಸಿಕೆಗಳನ್ನು ತೆಗೆದುಕೊಳ್ಳುವವವರ ಸಂಖ್ಯೆ ಹೆಚ್ಚಾಗಿರಲಿಲ್ಲ. ಆದರೆ, ಈಗ ಎರಡನೇ ಅಲೆ ಆರಂಭದ ಸಮಯದಲ್ಲಿ, ಲಸಿಕೆ ಪಡೆಯಲು ಮುಂದೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಮತ್ತು ಲಸಿಕೆ ತಯಾರಕರು ಉತ್ಪಾದನೆಯನ್ನು ಹೆಚ್ಚಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರಿಂದ ಜನರೆಲ್ಲರೂ ವೇಗವಾಗಿ ಲಸಿಕೆ ತೆಗೆದುಕೊಳ್ಳಬಹುದು ’ ಎಂದು ಡಾ.ಸಲ್ಕರ್ ಹೇಳಿದರು.

ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಅಲರ್ಜಿ ಇರುವವರು ಲಸಿಕೆ ಹಾಕಿಸಿಕೊಳ್ಳಲು ಹೋಗಬಾರದು ಎಂದು ವೈದ್ಯರು ನೆನಪಿಸಿದರು ಮತ್ತು ಇದನ್ನು ಸರ್ಕಾರದ ಮಾರ್ಗಸೂಚಿಗಳಲ್ಲಿಯೂ ತಿಳಿಸಲಾಗಿದೆ. ಕೆಲವು ಗಮನಾರ್ಹವಾದ ಅಲರ್ಜಿಯನ್ನು ಹೊಂದಿರುವವರು ವ್ಯಾಕ್ಸಿನೇಷನ್‌ಗೆ ಹೋಗುವಾಗ ಅದರ ಬಗ್ಗೆ ವೈದ್ಯರಿಗೆ ತಿಳಿಸಬೇಕು. 5-6 ಸಾವಿರ ವ್ಯಕ್ತಿಗಳ ವ್ಯಾಕ್ಸಿನೇಷನ್ ಮೇಲ್ವಿಚಾರಣೆಯ ವೈಯಕ್ತಿಕ ಅನುಭವವನ್ನು ತಿಳಿಸಿದ ಡಾ. ಸಲ್ಕರ್ ಅವರು, ಅಲರ್ಜಿಯ ಯಾವುದೇ ಗಂಭೀರ ವಿದ್ಯಮಾನವನ್ನು ನಾನು ಕಂಡಿಲ್ಲ ಎಂದು ಹೇಳಿದರು. ಒಬ್ಬ ವ್ಯಕ್ತಿಯು ಪೆನ್ಸಿಲಿನ್ ಅಥವಾ ಕೆಲವು ನಿರ್ದಿಷ್ಟ ಔಷಧಿಗಳಿಗೆ ಅಲರ್ಜಿಯನ್ನು ಹೊಂದಿದ್ದಾನೆಂದು ತಿಳಿದಿದ್ದರೆ, ಈ ಬಗ್ಗೆ ಮೊದಲೇ ತಿಳಿಸಿದರೆ, ಸ್ಟಿರಾಯ್ಡ್‌ಗಳು ಮತ್ತು ಕೆಲವು ಔಷಧಿಗಳನ್ನು ವೈದ್ಯಕೀಯ ಸಿಬ್ಬಂದಿ ಸಿದ್ಧಪಡಿಸಿಕೊಂಡು ತಯಾರಿರುತ್ತಾರೆ. ‘ಲಸಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಸುರಕ್ಷಿತವಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಸಾಧ್ಯವಾದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಖಲು ಪ್ರಯತ್ನಿಸಬೇಕು’ಎಂದು ಅವರು ಹೇಳಿದ್ದಾರೆ.

ಲಸಿಕೆಗಳ ಪ್ರತಿರಕ್ಷೆಯ ಅವಧಿ

ಲಸಿಕೆ ಪಡೆದ ಬಳಿಕ ದೇಹದಲ್ಲಿ ಎಷ್ಟು ಅವಧಿವರೆಗೆ ರೋಗನಿರೋಧಕ ಶಕ್ತಿ ಇರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಸಲ್ಕರ್, ‘ಕಳೆದ ಡಿಸೆಂಬರ್‌ನಿಂದ ಲಸಿಕೆ ಅಭಿಯಾನ ಪ್ರಾರಂಭವಾಗಿರುವುದರಿಂದ ಈ ಪ್ರಶ್ನೆಗೆ ಉತ್ತರಿಸುವುದು ತೀರಾ ಕಷ್ಟ. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಕನಿಷ್ಠ 6-8 ತಿಂಗಳುಗಳವರೆಗೆ ರೋಗ ನಿರೋಧಕ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ ’. ಆದ್ದರಿಂದ, ದೊಡ್ಡ ಜನಸಮುದಾಯಕ್ಕೆ 6-8 ತಿಂಗಳೊಳಗೆ ಲಸಿಕೆ ಹಾಕಿಸಿದರೆ, ಪ್ರತಿಯೊಬ್ಬರ ದೇಹದಲ್ಲೂ ರೋಗ ನಿರೋಧಕ ಶಕ್ತಿ ಬಂದುಬಿಡುತ್ತದೆ ಎಂದು ವೈದ್ಯರು ಹೇಳಿದರು. ‘ಅದರ ನಂತರ, ದೇಹದಲ್ಲಿನ ಪ್ರತಿಕಾಯಗಳ ಸಂಖ್ಯೆ ಕಡಿಮೆಯಾದರೂ, ದೇಹದಿಂದ ವೈರಸ್ ಗುರುತಿಸುವುದು ಸುಲಭವಾಗುತ್ತದೆ’ ಎಂದು ಅವರು ಹೇಳಿದರು.

ಇದಲ್ಲದೆ, ಗಮನಾರ್ಹ ಜನಸಂಖ್ಯೆಯ ಜನರಿಗೆ ಲಸಿಕೆ ನೀಡುವವರೆಗೂ, ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ಅಂದರೆ, ನಾವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸಬೇಕು, ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.

ಮೊದಲ ಡೋಸ್ ಲಸಿಕೆ ಪಡೆದ ನಂತರ ಕೋವಿಡ್ ಪಾಸಿಟಿವ್ ಬಂದರೆ, 6 ವಾರಗಳ ಬಳಿಕ ಎರಡನೇ ಡೋಸ್ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ಸಣ್ಣ ಅಸ್ವಸ್ಥತೆ ಮತ್ತು ಐಸೋಲೇಟ್ ರೋಗಿಗಳು ಕೋವಿಡ್ ಪಾಸಿಟಿವ್ ಕಂಡು ಬಂದ ದಿನಾಂಕದಿಂದ 6 ವಾರಗಳ ನಂತರ ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳಬೇಕು. ಗಂಭೀರ ಮತ್ತು ಆಸ್ಪತ್ರೆಗೆ ದಾಖಲಾದ ರೋಗಿಗಳು ಲಸಿಕೆ ಪಡೆಯಲು ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ ಆರು ವಾರಗಳವರೆಗೆ ಕಾಯಬೇಕು ಎಂದು ಡಾ. ಸಲ್ಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.