ADVERTISEMENT

ಹಾರ್ಮೋನ್‌ ಸಮಸ್ಯೆಯೇ? ತರಕಾರಿ ಬೀಜ ಸೇವಿಸಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 19:31 IST
Last Updated 20 ಆಗಸ್ಟ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇತ್ತೀಚೆಗೆ ಹಾರ್ಮೋನ್‌ ಸಮಸ್ಯೆಯಿಂದ ಬಳಲುವ ಯುವತಿಯರ ಸಂಖ್ಯೆ ಜಾಸ್ತಿಯಾಗಿದೆ. ಬಹುತೇಕರಲ್ಲಿ ಇದಕ್ಕೆ ಕಾರಣ ಜೀವನಶೈಲಿ ಮತ್ತು ಪರಿಸರ ಮಾಲಿನ್ಯ. ಕೆಲವರಲ್ಲಿ ವಿವಿಧ ವೈದ್ಯಕೀಯ ಸಮಸ್ಯೆಗಳಿಂದ ಹಾರ್ಮೋನ್‌ ಏರುಪೇರು ಉಂಟಾಗಬಹುದು. ಮಹಿಳೆಯರಲ್ಲಿ ಈ ಹಾರ್ಮೋನ್‌ ವ್ಯವಸ್ಥೆ ಸ್ವಲ್ಪ ಸಂಕೀರ್ಣ ಎಂದೇ ಹೇಳಬಹುದು. ಆಹಾರದಲ್ಲಿ ಬದಲಾವಣೆ, ಚಟುವಟಿಕೆ, ನಿದ್ರೆ, ಒತ್ತಡ ಕೂಡ ಈ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮುಟ್ಟಿನಲ್ಲಿ ಏರುಪೇರು, ಪಿಸಿಓಡಿ, ಥೈರಾಯ್ಡ್‌ ಸಮಸ್ಯೆಗಳು ಕಾಣಿಸಬಹುದು.

ಇಂತಹ ಸಮಸ್ಯೆಗಳನ್ನು ನಿವಾರಿಸಲು ಸಾಕಷ್ಟು ಔಷಧಗಳು, ಚಿಕಿತ್ಸೆಗಳು ಈಗ ಲಭ್ಯ. ಇವುಗಳ ಜೊತೆಗೆ ನಮ್ಮ ಆಹಾರದಲ್ಲಿ ಹೆಚ್ಚುವರಿಯಾಗಿ ಒಂದಿಷ್ಟು ಪೌಷ್ಟಿಕಾಂಶಗಳನ್ನು ಸೇರಿಸಿಕೊಂಡರೆ ಅನುಕೂಲ. ಈ ನಿಟ್ಟಿನಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವುದು ಬೀಜ ಚಕ್ರ ಅಥವಾ ‘ಸೀಡ್‌ ಸೈಕ್ಲಿಂಗ್‌’. ಈ ವಿಧಾನದಿಂದ ದೇಹದಲ್ಲಿನ ಹಾರ್ಮೋನ್‌ಗಳ ಉತ್ಪಾದನೆ ಮತ್ತು ಅವುಗಳ ಕಾರ್ಯ ಸರಿಯಾಗಿ ಆಗುವಂತೆ ನೋಡಿಕೊಳ್ಳಬಹುದು. ಜೊತೆಗೆ ಋತುಚಕ್ರ ನಿಯಮಿತವಾಗಿ, ಫಲವಂತಿಕೆ ಮಟ್ಟ ಸುಧಾರಿಸುವುದಲ್ಲದೇ, ಮುಟ್ಟಿನ ಪೂರ್ವದ ಖಿನ್ನತೆ (ಪಿಎಂಎಸ್‌) ಕಡಿಮೆಯಾಗುತ್ತದೆ.

ಈ ವಿಧಾನದಲ್ಲಿ ಪೌಷ್ಟಿಕಾಂಶವುಳ್ಳ ಬೀಜಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕಾಗುತ್ತದೆ. ಮುಟ್ಟು ಶುರುವಾದ ನಂತರ ಅಂಡಾಣು ಫಲಿತವಾಗುವವರೆಗೆ ಹಾಗೂ ನಂತರ ಮುಟ್ಟು ಶುರುವಾಗುವವರೆಗೆ.. ಹೀಗೆ ಎರಡು ಅವಧಿಗಳಾಗಿ ವಿಭಾಗಿಸಿಕೊಳ್ಳಬೇಕು. ಇದಕ್ಕೆ ಕಾರಣವೂ ಇದೆ. ಮೊದಲ ಅವಧಿಯಲ್ಲಿ ಈಸ್ಟ್ರೋಜೆನ್‌ ಪ್ರಮಾಣ ಹೆಚ್ಚಾದರೆ, ನಂತರ ಪ್ರಾಜೆಸ್ಟರಾನ್‌ ಹಾರ್ಮೋನ್‌ ಉತ್ಪಾದನೆ ಜಾಸ್ತಿಯಾಗುತ್ತದೆ.

ADVERTISEMENT

28 ದಿನಗಳ ಋತುಚಕ್ರವಾದರೆ ಮುಟ್ಟು ಶುರುವಾದಾಗಿನಿಂದ ಹಿಡಿದು 14 ದಿನಗಳವರೆಗೆ ನಿತ್ಯ 1–2 ಚಮಚ ಅಗಸೆ ಬೀಜ ಹಾಗೂ ಎರಡು ಚಮಚ ಸಿಹಿಗುಂಬಳದ ಬೀಜಗಳನ್ನು ಪುಡಿ ಮಾಡಿ ಸೇವಿಸಬಹುದು. ನಂತರ 14 ದಿನಗಳ ಕಾಲ ತಲಾ ಎರಡು ಚಮಚ ಸೂರ್ಯಕಾಂತಿ ಬೀಜದ ಪುಡಿ ಹಾಗೂ ಎಳ್ಳಿನ ಪುಡಿ ಸೇವಿಸಿ.

ನಿಮ್ಮ ಋತುಚಕ್ರ ಎಷ್ಟು ದಿನಗಳದ್ದು ಎಂಬುದರ ಮೇಲೆ ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರು 15 ದಿನಗಳ ಕಾಲ ವಿಭಾಗಿಸಿಕೊಂಡು ತೆಗೆದುಕೊಳ್ಳಬಹುದು. ನಿತ್ಯ ಸೇವಿಸುತ್ತ ಹೋದರೆ ಈ ಏರುಪೇರು ಕ್ರಮೇಣ ಸರಿಯಾಗುತ್ತದೆ.

ಈ ಬೀಜ ಸೇವನೆ ಅದು ಹೇಗೆ ಹಾರ್ಮೋನ್‌ ಏರುಪೇರನ್ನು ಸುಧಾರಿಸುತ್ತದೆ ಎಂಬ ಪ್ರಶ್ನೆ ಏಳುವುದು ಸಹಜ. ಬೀಜಗಳಲ್ಲಿರುವ ಪೌಷ್ಟಿಕಾಂಶಗಳೇ ಇದಕ್ಕೆ ಕಾರಣ. ಅಗಸೆ ಬೀಜದಲ್ಲಿರುವ ಲಿಗ್ನಾನ್‌ ಎಂಬ ಅಂಶವು ಈಸ್ಟ್ರೋಜೆನ್‌ ಸ್ರಾವವನ್ನು ಸುಧಾರಿಸಿದರೆ ಕುಂಬಳದ ಬೀಜದಲ್ಲಿರುವ ಹೆಚ್ಚಿನ ಪ್ರಮಾಣದ ಝಿಂಕ್‌ ಅಂಶ ಪ್ರಾಜೆಸ್ಟರಾನ್‌ ಹಾರ್ಮೋನ್‌ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹಾಗೆಯೇ ಎಳ್ಳಿನಲ್ಲಿರುವ ಅಧಿಕ ಪ್ರಮಾಣದ ಝಿಂಕ್‌ ಹಾಗೂ ಸೂರ್ಯಕಾಂತಿ ಬೀಜದಲ್ಲಿರುವ ವಿಟಮಿನ್‌ ಇ ಮತ್ತು ಸೆಲೆನಿಯಮ್‌ ಪ್ರಾಜೆಸ್ಟರಾನ್‌ ಹಾರ್ಮೋನ್‌ ಉತ್ಪಾದನೆ ಹೆಚ್ಚಿಸುತ್ತವೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಒಳ್ಳೆಯ ಫಲಿತಾಂಶ ಬರಬೇಕಾದರೆ ಕನಿಷ್ಠ 3–6 ತಿಂಗಳ ಕಾಲ ಇವುಗಳನ್ನು ಸೇವಿಸಬೇಕು. ಹಾಗೆಯೇ ಗಂಭೀರವಾದ ವೈದ್ಯಕೀಯ ತೊಂದರೆಗಳಿಂದ ಹಾರ್ಮೋನ್‌ ಸಮಸ್ಯೆಯಿದ್ದರೆ ವೈದ್ಯರ ಬಳಿ ಸಮಾಲೋಚನೆ ನಡೆಸಿ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ. ಆದರೆ ಈ ಬೀಜಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.